ದೇಶಾದ್ಯಂತ ಹೆಚ್ಚುತ್ತಿರುವ ‘ಡಿಜಿಟಲ್ ಅರೆಸ್ಟ್’ (Digital Arrest) ಪ್ರಕರಣಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಸಾರ್ವಜನಿಕ ಜಾಗೃತಿ ಅಭಿಯಾನಗಳು, ವರದಿಗಳು ಹಾಗೂ ನ್ಯಾಯಾಲಯದ ಆದೇಶಗಳ ನಡುವೆಯೂ ಸುಶಿಕ್ಷಿತರೇ ಇಂತಹ ವಂಚನೆಗೆ ಬಲಿಯಾಗುತ್ತಿರುವುದಕ್ಕೆ ತೀವ್ರ ಆಘಾತ ವ್ಯಕ್ತಪಡಿಸಿದೆ.
ಡಿಜಿಟಲ್ ಅರೆಸ್ಟ್ ಕುರಿತ ಸ್ವಯಂ ಪ್ರೇರಿತ (Suo Motu) ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಅವರ ನೇತೃತ್ವದ ನ್ಯಾಯಪೀಠವು ಸಾರ್ವಜನಿಕರ ಮೌಢ್ಯದ ಬಗ್ಗೆ ಅಸಮಾಧಾನ ಹೊರಹಾಕಿತು. “ಈ ಜನರಿಗೆ ಏನಾಗಿದೆ? ಇಂತಹ ವಂಚನೆಗಳ ಬಲೆಗೆ ಅವರು ಹೇಗೆ ಬೀಳುತ್ತಿದ್ದಾರೆ? ಮೊಬೈಲ್ ಮೂಲಕ ಬಂಧಿಸುವ ಈ ಕಾಲ್ಪನಿಕ ಬಂಧನದ ಬಗ್ಗೆ ಯಾಕಿಷ್ಟು ಭಯ? ಮೊಬೈಲ್ ಅನ್ನು ಗೋಡೆಗೆ ಎಸೆದು ಒಡೆದರೆ ನಿಮ್ಮ ಬಂಧನವೂ ಅಲ್ಲಿಗೇ ತಪ್ಪುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮೊಬೈಲ್‌ನಲ್ಲಿ ಬಂಧಿಸುತ್ತಾರೆ ಎಂದು ನಂಬುವ ನೀವು ಎಂಥವರು?” ಎಂದು ಸಿಜೆಐ ಮೌಖಿಕವಾಗಿ ತರಾಟೆಗೆ ತೆಗೆದುಕೊಂಡರು.
“ನಿಮ್ಮನ್ನು ನೀವೇ ಬಲಿಪಶುಗಳನ್ನಾಗಿ ಮಾಡಿಕೊಳ್ಳುತ್ತಿದ್ದೀರಿ. ಸುಶಿಕ್ಷಿತರೇ ಈ ರೀತಿ ವಂಚನೆಗೆ ಒಳಗಾಗುತ್ತಿರುವುದು ನಮಗೆ ತೀವ್ರ ಹತಾಶೆ ತರಿಸಿದೆ. ಈ ವಯಸ್ಸಿನಲ್ಲಿ ಡಿಜಿಟಲ್ ಅರೆಸ್ಟ್‌ಗೆ ಒಳಗಾದರೆ ಮುಂದಿನ ಪೀಳಿಗೆಗೆ ನೀವು ಯಾವ ಸಂದೇಶ ನೀಡುತ್ತೀರಿ? ನಿಮ್ಮ ವಿರುದ್ಧ ಏನಾದರೂ ಆದೇಶಗಳಿದ್ದರೆ, ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಬಹುದು” ಎಂದು ಸಿಜೆಐ ಸಲಹೆ ನೀಡಿದರು.
ಪ್ರಕರಣದ ಅಮಿಕಸ್ ಕ್ಯೂರಿ (ನ್ಯಾಯಾಲಯದ ಮಿತ್ರ) ಆಗಿರುವ ಎನ್.ಎಸ್. ನಪ್ಪಿನೈ ಅವರು ನ್ಯಾಯಪೀಠಕ್ಕೆ ಮಾಹಿತಿ ನೀಡಿ, “ಡಿಜಿಟಲ್ ಅರೆಸ್ಟ್ ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಸಮಸ್ಯೆ ಎಗ್ಗಿಲ್ಲದೆ ಮುಂದುವರಿದಿದೆ. ಕಳೆದ ವಾರವಷ್ಟೇ ಮಹಿಳೆಯೊಬ್ಬರು ಈ ಡಿಜಿಟಲ್ ಅರೆಸ್ಟ್ ವಂಚನೆಗೆ ಬರೋಬ್ಬರಿ 2.5 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ” ಎಂದು ವಿವರಿಸಿದರು.
ಸಿಜೆಐ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರಿದ್ದ ತ್ರಿಸದಸ್ಯ ಪೀಠವು ಈ ವಿಚಾರದಲ್ಲಿ ಬ್ಯಾಂಕ್‌ಗಳ ಹೊಣೆಗಾರಿಕೆಯನ್ನು ತೀವ್ರವಾಗಿ ಪ್ರಶ್ನಿಸಿತು. ವಂಚನೆಗೊಳಗಾಗುವ ಗ್ರಾಹಕರಿಗೆ ಬ್ಯಾಂಕ್‌ಗಳು ‘ರಕ್ಷಣಾ ಛತ್ರಿ’ಯಂತೆ (Protective umbrella) ಕಾರ್ಯನಿರ್ವಹಿಸಬೇಕು ಎಂದು ಒತ್ತಿ ಹೇಳಿತು.
“ನಿವೃತ್ತ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಅಸಾಮಾನ್ಯ ರೀತಿಯಲ್ಲಿ, ಏಕಾಏಕಿ ದೊಡ್ಡ ಮೊತ್ತದ ಹಣ ಡ್ರಾ ಆಗುತ್ತಿರುವಾಗ ಬ್ಯಾಂಕ್‌ಗಳು ಮಧ್ಯಪ್ರವೇಶಿಸಿ ತಡೆಯದಿರುವುದು ಏಕೆ?” ಎಂದು ನ್ಯಾಯಾಲಯ ಪ್ರಶ್ನಿಸಿದೆ. “ಬ್ಯಾಂಕ್‌ಗಳ ನಿರ್ಲಕ್ಷ್ಯದಿಂದ ಇಂತಹ ಡಿಜಿಟಲ್ ವಂಚನೆಗಳು ನಡೆದರೆ, ಆ ಬ್ಯಾಂಕ್‌ಗಳೇ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಮತ್ತು ಕಾನೂನು ಕ್ರಮ ಎದುರಿಸಬೇಕು. ಹಣಕಾಸು ಸಂಸ್ಥೆಗಳ ಎಚ್ಚರಿಕೆಯ ಕೊರತೆಯಿಂದ ಗ್ರಾಹಕರು ಹಣ ಕಳೆದುಕೊಂಡರೆ, ಕಳೆದುಕೊಂಡ ಕನಿಷ್ಠ ಮೊತ್ತವನ್ನಾದರೂ ಬ್ಯಾಂಕ್‌ಗಳು ಪರಿಹಾರವಾಗಿ ಭರಿಸುವಂತೆ ಕಡ್ಡಾಯ ನಿರ್ದೇಶನ ನೀಡಲು ನಾವು ಚಿಂತಿಸುತ್ತಿದ್ದೇವೆ” ಎಂದು ಸಿಜೆಐ ಸ್ಪಷ್ಟಪಡಿಸಿದರು.





