2023ರಲ್ಲಿ ನಡೆದ ಶೃಂಗೇರಿ ವಿಧಾನಸಭೆ ಕ್ಷೇತ್ರದ ಚುನಾವಣೆಯ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ ಎನ್ ಜೀವರಾಜ್ ಶಾಸಕರಾಗಿ ಆಯ್ಕೆಯಾದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿದ್ದು, ಜಿಲ್ಲಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ಶೃಂಗೇರಿ ಕ್ಷೇತ್ರದಲ್ಲಿ ಮತ ಎಣಿಕೆ ಸಂದರ್ಭ ಏಜೆಂಟ್‍ಗಳಾಗಿದ್ದವರು ದೇವಾಲಯದ ಮುಂದೆ ಆಣೆ ಪ್ರಮಾಣಗಳನ್ನು ಮಾಡುತ್ತಿದ್ದು, ಇಂದು ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಏಜೆಂಟ್ ಆಗಿದ್ದ ಸುಧೀರ್ ಕುಮಾರ್ ಮುರೊಳ್ಳಿಯವರು ದೇವಾಲಯದಲ್ಲಿ ಪ್ರಮಾಣ ಮಾಡಿದ್ದಾರೆ.
ಸುಧೀರ್ ಕುಮಾರ್ ಮುರೊಳ್ಳಿ ಅವರು ಶನಿವಾರ ಇದೇ ವೀರಭದ್ರಸ್ವಾಮಿ ದೇವಾಲಯದ ಮುಂದೆ ಪ್ರಮಾಣ ಮಾಡಿದ್ದು, “ನಾನು 2023ರ ಮೇ 13ರಂದು ನಡೆದ ಮತ ಎಣಿಕೆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಪರ ಚುನಾವಣಾ ಏಜೆಂಟ್ ಆಗಿದ್ದು, ಈ ವೇಳೆ ಮತ ಎಣಿಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ನಾನಲ್ಲದೇ ಬಿಜೆಪಿ, ಜೆಡಿಎಸ್, ಬಿಎಸ್‌ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳ ಚುನಾವಣಾ ಏಜೆಂಟ್‍ಗಳೂ ಕೂಡ ಮತ ಎಣಿಕೆ ಕೇಂದ್ರದಲ್ಲಿದ್ದು, ಪ್ರತಿ ಮತ ಎಣಿಕೆಯನ್ನೂ ಕಣ್ಣಾರೆ ಕಂಡಿದ್ದಾರೆ. ಅಂಚೆ ಮತಗಳ ಎಣಿಕೆ ಸಂದರ್ಭ ತಿರಸ್ಕೃತ ಮತಗಳು ಹಾಗೂ ಜೀವರಾಜ್, ರಾಜೇಗೌಡ ಅವರ ಪರ ಬಂದಿದ್ದ ಸಿಂಧು ಮತಗಳನ್ನೂ ವೀಕ್ಷಿಸಿದ್ದಾರೆ. ಮತ ಎಣಿಕೆ ಬಳಿಕ ಎಲ್ಲ ಏಜೆಂಟರು ಮತ ಎಣಿಕೆ ಪಾರದರ್ಶಕವಾಗಿ ನಡೆದಿರುವ ಬಗ್ಗೆ ಸಹಿಯನ್ನೂ ಮಾಡಿದ್ದಾರೆ” ಎಂದು ಪ್ರಮಾಣ ಮಾಡಿದರು.
“ಕಳೆದ ಮೇ 2ರಂದು ನಡೆದ ಮರು ಮತ ಎಣಿಕೆ ವೇಳೆ ರಾಜೇಗೌಡ ಪರ ಬಂದಿದ್ದ ಸಿಂಧು ಮತಗಳು ಅಸಿಂಧು ಆಗಿದ್ದವು, ಸಿಂಧುವಾಗಿದ್ದ 257 ಮತಗಳಿಗೆ ಡಬಲ್ ರೈಟ್ ಮಾರ್ಕ್ ಹಾಕಿ ಅಸಿಂಧುಗೊಳಿಸಲಾಗಿತ್ತು. ಅಲ್ಲದೆ ಮತ ಪತ್ರಗಳಿದ್ದ ಕವರರ್‌ಗಳ ಸೀಲ್‍ಗಳು ಒಡೆದಿದ್ದು, ಇದು ಬಿಜೆಪಿ ಅಭ್ಯರ್ಥಿ ಜೀವರಾಜ್ ಹಾಗೂ ಅವರ ಸಹಚರರು ಮಾಡಿದ ಅಕ್ರಮವಾಗಿದೆ. ಈ ಸಂಬಂಧ ತಾನು ಚಿಕ್ಕಮಗಳೂರು ಪೊಲೀಸರಿಗೆ ದೂರು ನೀಡಿದ್ದೇನೆ. ಪಕ್ಷದಿಂದ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿದೆ. ರಾಜೇಗೌಡ ಪರ ಸಿಂಧುವಾಗಿದ್ದ ಅಂಚೆ ಮತಗಳಿಗೆ ಡಬಲ್ ರೈಟ್ ಮಾರ್ಕ್ ಟಿಕ್ ಹಾಕಿ ಅಸಿಂಧುಗೊಳಿಸಲಾಗಿದ್ದು, ಇದು ಜೀವರಾಜ್ ಹಾಗೂ ಅವರ ಸಹಚರರ ಕೃತ್ಯವಾಗಿದೆ” ಎಂದು ಹೇಳಿದರು.
“2023ರ ಚುನಾವಣೆ ಫಲಿತಾಂಶದಲ್ಲಿ ತಾನು ಜಯಶೀಲನಾಗಿದ್ದು, ಮರು ಮತ ಎಣಿಕೆ ವೇಳೆ ನನಗೆ ಬಂದಿದ್ದ ಸಿಂಧುವಾಗಿದ್ದ 257 ಮತಗಳನ್ನು ಅಸಿಂಧುಗೊಳಿಸುವ ಮೂಲಕ ನನ್ನನ್ನು ಸೋಲಿಸಲಾಗಿದೆ. ಇದು ಸಂವಿಧಾನದ ಕಗ್ಗೊಲೆಯಾಗಿದೆ. ತನಗೆ ಮರು ಮತ ಎಣಿಕೆ ವೇಳೆ ಅನ್ಯಾಯವಾಗಿದೆ. ಮತ ತಿರುಚಿ ಮೋಸ ಮಾಡಿರುವವರಿಗೆ ಶಿಕ್ಷೆಯಾಗಬೇಕು, ತಲೆ ದಂಡಯಾಗಬೇಕು. ನಾವೇ ತಪ್ಪು ಮಾಡಿದ್ದರೂ ದಂಡನೆಯಾಗಬೇಕು, ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನಿಂದ ತಪ್ಪಾಗಿದ್ದರೆ ರಾಜಕಾರಣದಿಂದ ನಿವೃತ್ತಿಯಾಗುತ್ತೇನೆ” ಎಂದು ಇದೇ ವೇಳೆ ಮಾಜಿ ಶಾಸಕ ಟಿ ಡಿ ರಾಜೇಗೌಡ ಪ್ರಮಾಣ ಮಾಡಿದರು.
ಸದ್ಯ ಮರು ಮತ ಎಣಿಕೆ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಅಭ್ಯರ್ಥಿ ಚುನಾವಣಾ ಆಯೋಗ ಹಾಗೂ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಶೀಘ್ರದಲ್ಲೇ ವಿಚಾರಣೆ ನಡೆಸುವುದಾಗಿ ಸುಪ್ರೀ ಕೋರ್ಟ್ ಒಪ್ಪಿಗೆ ನೀಡಿದೆ.
ಇದನ್ನೂ ಓದಿದ್ದೀರಾ? ಶೃಂಗೇರಿ ಅಂಚೆ ಮತ ಮರು ಎಣಿಕೆ: ರಾಜೇಗೌಡ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು
ಬಿಜೆಪಿ ಅಭ್ಯರ್ಥಿ ಜೀವರಾಜ್ ಪರ ಚುನಾವಣಾ ಏಜೆಂಟ್‍ಗಳಾಗಿದ್ದ ರಾಮಸ್ವಾಮಿ ಮತ್ತು ಅದ್ದಡ ಸತೀಶ್ ಎಂಬವರು ಶುಕ್ರವಾರ ಕೊಪ್ಪ ಪಟ್ಟಣದ ವೀರಭದ್ರಸ್ವಾಮಿ ದೇವಾಲಯದ ಮುಂದೆ ಪ್ರಮಾಣ ಮಾಡಿ, “2023ರಲ್ಲಿ ಶೃಂಗೇರಿ ವಿಧಾನಸಭೆ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಸಂದರ್ಭ ಮತ ಎಣಿಕೆ ವೇಳೆ ಯಾವುದೇ ಲೋಪವಾಗಿಲ್ಲ. ಎಣಿಕೆ ಪ್ರಕ್ರಿಯೆ ಪಾರರ್ದಕವಾಗಿ ನಡೆದಿದೆ. ನಾವು ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಪಡೆದು ಅಕ್ರಮ ಎಸಗಿದ್ದೇವೆಂಬ ಆರೋಪ ಕೇಳಿ ಬಂದಿದ್ದು, ಈ ಆರೋಪ ಸುಳ್ಳು, ನಾವು ತಪ್ಪು ಮಾಡಿದ್ದರೆ ದೇವರು ನಮಗೆ ಶಿಕ್ಷೆ ನೀಡಬೇಕು. ತಪ್ಪು ಮಾಡದಿದ್ದಲ್ಲಿ ಆರೋಪ ಮಾಡಿದವರನ್ನು ಆ ದೇವರೇ ನೋಡಿಕೊಳ್ಳಲಿ” ಎಂದು ಪ್ರಮಾಣ ಮಾಡಿದ್ದರು.




