ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಮತ ಎಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಚೆ ಮತಗಳಲ್ಲಿ ಅಕ್ರಮ ಆರೋಪದನ್ವಯ ಬಿಜೆಪಿ ಶಾಸಕ ಜೀವರಾಜ್ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅಂಚೆ ಮತ ಎಣಿಕೆ ಟೇಬಲ್‌ನ ಏಜೆಂಟ್ ಆಗಿರುವ ಸುಧೀರ್ ಕುಮಾರ್ ಮುರೋಳ್ಳಿ ಅವರು ಚಿಕ್ಕಮಗಳೂರು ನಗರ ಠಾಣೆಗೆ ನೀಡಿದ ದೂರಿನನ್ವಯ ಶಾಸಕ ಡಿ ಎನ್ ಜೀವರಾಜ್, ಅಂದಿನ ಚುನಾವಣಾಧಿಕಾರಿ ವೇದಾಮೂರ್ತಿ ಹಾಗೂ ಅಂದಿನ ಜಿಲ್ಲಾಧಿಕಾರಿ ರಮೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
“ಸ್ಟ್ರಾಂಗ್ ರೂಂ ಸೀಲ್ ಆಗಿರಲಿಲ್ಲ, ಮತಪತ್ರಗಳಿದ್ದ ಟ್ರಂಕಿನ ಸೀಲ್ ಓಪನ್ ಆಗಿದ್ದು, ಲಾಕ್ ಕಟ್ ಆಗಿತ್ತು. ಹೀಗಾಗಿ ಮತ ಟ್ಯಾಂಪರಿಂಗ್ ಆಗಿರುವ ಅನುಮಾನವಿದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಇದರ ಅನ್ವಯ ಮೂವರ ವಿರುದ್ಧ ವಂಚನೆ, ಕ್ರಿಮಿನಲ್ ಹಾಗೂ ಫೋರ್ಜರಿ ಪ್ರಕರಣ ದಾಖಲಾಗಿದೆ.
2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜೇಗೌಡ 59,171 ಮತ ಪಡೆದು ವಿಜಯ ಗಳಿಸಿದ್ದರು. ಬಿಜೆಪಿಯ ಜೀವರಾಜ್ 58,970 ಮತಗಳ ಗಳಿಸಿದ್ದು, 201 ಮತಗಳ ಅಂತರದಲ್ಲಿ ಪರಾಜಯಗೊಂಡಿದ್ದರು. ಆಗ ಚಲಾವಣೆಯಾದ ಅಂಚೆ ಮತಗಳು 1822. ಇದರಲ್ಲಿ ಜೀವರಾಜ್ 692 ಮತ ಪಡೆದರೆ, ರಾಜೇಗೌಡ 569 ಮತ ಗಳಿಸಿದ್ದರು. ಆಗ 279 ಮತಗಳು ತಿರಸ್ಕೃತವಾಗಿದ್ದವು.
ಅಂದಿನ ಚುನಾವಣಾಧಿಕಾರಿ ರಾಜೇಗೌಡ ವಿಜೇತ ಅಭ್ಯರ್ಥಿ ಎಂದು ಘೋಷಿಸಿದ್ದರು. ಇದರ ವಿರುದ್ಧ ಪರಾಜಿತ ಅಭ್ಯರ್ಥಿ ಜೀವರಾಜ್ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸದೇ ವಜಾ ಮಾಡಬೇಕು ಎಂದು ರಾಜೇಗೌಡರು ನ್ಯಾಯಾಲಯವನ್ನು ಕೋರಿದರು. ವಾದ ವಿವಾದ ನಡೆದ ಬಳಿಕ ನ್ಯಾಯಾಲಯ ವಿಚಾರಣೆ ನಡೆಸಲು ತೀರ್ಮಾನಿಸಿತು.
ಈಗ ಎರಡು ದಿನಗಳ ಹಿಂದೆ ನಡೆದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯಲ್ಲಿ ಜೀವರಾಜ್ ಅವರು 52 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದು, ಇಂದಿನ ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿಯವರು, ಡಿ ಎನ್ ಜೀವರಾಜ್ ಜಯಗೊಂಡಿರುವುದಾಗಿ ಘೋಷಿಸಿ ಅವರಿಗೆ ಪ್ರಮಾಣ ಪತ್ರ ವಿತರಣೆ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಕೂದಲೆಳೆ ಅಂತರದ ಗೆಲುವು : ಸಮರ್ಥ ಮತಗಳಿಲ್ಲದೆಯೂ ಗೆದ್ದ ʼಸಮರ್ಥ ಶಾಮನೂರುʼ
ಇದೀಗ, ಮರು ಮತ ಎಣಿಕೆಯಲ್ಲಿ ಅಕ್ರಮ ನಡೆದಿರುವುದಾಗಿ ಅಂಚೆ ಮತ ಎಣಿಕೆ ಟೇಬಲ್‌ನ ಏಜೆಂಟ್ ನೀಡಿರುವ ದೂರಿನನ್ವಯ ಜೀವರಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.




