ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ತೀವ್ರ ಹಿನ್ನಡೆಯ ಬೆನ್ನಲ್ಲೇ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಸೋಮವಾರ ತಡರಾತ್ರಿ ಚುನಾವಣಾ ಫಲಿತಾಂಶ ಸ್ಪಷ್ಟವಾಗುತ್ತಿದ್ದಂತೆ, ಸ್ಟಾಲಿನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ತಮಿಳುನಾಡು ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ರವಾನಿಸಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಸುಮಾರು ಐದು ದಶಕಗಳಿಂದ ಸಾಗಿದ್ದ ಸಾಂಪ್ರದಾಯಿಕ ದ್ರಾವಿಡ ಪಕ್ಷಗಳ ಪಾರುಪತ್ಯದ ಶಕೆಯೊಂದು ಅಂತ್ಯಗೊಂಡಂತಾಗಿದೆ.
ಚುನಾವಣಾ ಸೋಲಿನ ನಂತರ ಪ್ರತಿಕ್ರಿಯಿಸಿರುವ ಎಂ.ಕೆ. ಸ್ಟಾಲಿನ್, “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ತೀರ್ಪೇ ಅಂತಿಮ. ನಾಡಿನ ಜನರ ಈ ಜನಾದೇಶವನ್ನು ನಾನು ಅತ್ಯಂತ ವಿನಮ್ರತೆಯಿಂದ ಒಪ್ಪಿಕೊಳ್ಳುತ್ತೇನೆ ಮತ್ತು ಹೊಸ ಸರ್ಕಾರಕ್ಕೆ ಶುಭಾಶಯ ಕೋರುತ್ತೇನೆ. ಮುಂಬರುವ ದಿನಗಳಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ಪಕ್ಷವು ಅತ್ಯುತ್ತಮ ಹಾಗೂ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲಿದೆ. ತಮಿಳುನಾಡಿನ ಜನರ ಪರವಾದ ಧ್ವನಿಯಾಗಿ, ಅವರ ಹಕ್ಕುಗಳ ರಕ್ಷಣೆಗಾಗಿ ನಾವು ನಿರಂತರವಾಗಿ ಹೋರಾಡುತ್ತೇವೆ” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಗಲ್ಲಾಪೆಟ್ಟಿಗೆಯಿಂದ ಮತಪೆಟ್ಟಿಗೆ; ಜೋಸೆಫ್ ವಿಜಯ್ ಎಂಬ ಹೀರೋವಿನ ಸೂಪರ್ ಡ್ಯೂಪರ್ ಹಿಟ್ ರಾಜಕೀಯ ಪ್ರವೇಶ!
ಈ ಬಾರಿಯ ಚುನಾವಣೆಯಲ್ಲಿ ಡಿಎಂಕೆ ಪಕ್ಷಕ್ಕೆ ಮಾತ್ರವಲ್ಲದೆ, ಖುದ್ದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೂ ತೀವ್ರ ಮುಖಭಂಗವಾಗಿದೆ. ತಮ್ಮ ರಾಜಕೀಯ ಭದ್ರಕೋಟೆ ಎನಿಸಿಕೊಂಡಿದ್ದ ಹಾಗೂ ತಾವು ಪ್ರತಿನಿಧಿಸುತ್ತಿದ್ದ ‘ಕೊಳತ್ತೂರು’ ವಿಧಾನಸಭಾ ಕ್ಷೇತ್ರದಲ್ಲಿ ಸ್ಟಾಲಿನ್ ಅವರು ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಭ್ಯರ್ಥಿ ಎದುರು ಅನಿರೀಕ್ಷಿತ ಸೋಲು ಅನುಭವಿಸಿದ್ದಾರೆ. ಆಡಳಿತಾರೂಢ ಮುಖ್ಯಮಂತ್ರಿಯೊಬ್ಬರು ತಮ್ಮದೇ ಭದ್ರಕೋಟೆಯಲ್ಲಿ ಸೋತಿರುವುದು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ತಮಿಳುನಾಡಿನ ಒಟ್ಟು 234 ಕ್ಷೇತ್ರಗಳ ಪೈಕಿ ಟಿವಿಕೆ ಪಕ್ಷವು 108 ಸ್ಥಾನಗಳಲ್ಲಿ ಜಯ ದಾಖಲಿಸಿ ಎಲ್ಲರ ಗಮನ ಸೆಳೆದಿದೆ. ಅಧಿಕಾರರೂಢ ಡಿಎಂಕೆ 59 ಸ್ಥಾನಗಳಿಗೆ ಕುಸಿದಿದ್ದರೆ, ಎಐಎಡಿಎಂಕೆ 47 ಸ್ಥಾನಗಳನ್ನು ಗಳಿಸಿದೆ. ಕಾಂಗ್ರೆಸ್ 5 ಮತ್ತು ಪಿಎಂಕೆ 4 ಸ್ಥಾನಗಳಲ್ಲಿ ಜಯ ಗಳಿಸಿವೆ.




