ಚಿಂತಾಮಣಿ ನಗರದ ವಿಶೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಘಟಕ ಕಾಲೇಜಿನ ನಾಲ್ಕನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಂಗಳೂರು-ಕಡಪಾ ರಸ್ತೆಯಲ್ಲಿರುವ ವಿದ್ಯಾರ್ಥಿ ನಿಲಯದ ಹಿಂಭಾಗದಲ್ಲಿ ನಡೆದಿದೆ.
ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ನ ನಾಲ್ಕನೇ ಸೆಮಿಸ್ಟರ್ ನ ರಾಕೇಶ್(20)ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ.ಮೈಸೂರು ನಗರದ ಹೆಬ್ಬಾಳದ ನಿವಾಸಿಯಾಗಿದ್ದಾನೆ. ನಗರದ ಹೊರವಲಯದ ಬೆಂಗಳೂರು-ಕಡಪಾ ಹೆದ್ದಾರಿಯಲ್ಲಿರುವ ಶ್ರೀದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ವಾಸವಿದ್ದನು.
ಶನಿವಾರ ರಾತ್ರಿ ಊಟ ಮಾಡಿ ಮಲಗಿದ ನಂತರ ವಿದ್ಯಾರ್ಥಿನಿಲಯದಿಂದ ಹೊರಗಡೆ ಹೋಗಿ ಹಿಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಭಾನುವಾರ ಬೆಳಿಗ್ಗೆ ತಿಂಡಿ ತಿಂದ ವಿದ್ಯಾರ್ಥಿಗಳು ಕಾಲೇಜಿಗೆ ರಜೆ ದಿನವಾಗಿದ್ದರಿಂದ ಕ್ರಿಕೆಟ್ ಆಟವಾಡಲು ವಿದ್ಯಾರ್ಥಿನಿಲಯದ ಹಿಂಭಾಗಕ್ಕೆ ಹೋದಾಗ ಶವ ಮರದಲ್ಲಿ ನೇತಾಡುತ್ತಿರುವುದನ್ನು ಕಂಡು ವಾರ್ಡನ್ ಮೆಹಬೂಬ್ ಪಾಷಾಗೆ ಮಾಹಿತಿ ನೀಡಿದ್ದಾರೆ.ವಾರ್ಡನ್ ಕೂಡಲೇ ಪೊಲೀಸ್‌ರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಗ್ರಾಮಾಂತರ ಪೋಲೀಸ್ ಠಾಣೆಯ ಇನ್ಸ್ ಸ್ಪೆಕ್ಟರ್ ಶಿವರಾಜ್ ಮತ್ತು ತಂಡ ಭೇಟಿ ನೀಡಿ ಪರಿಶೀಲಿಸಿ, ಮೃತದೇಹ ವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂದು ಇನ್ನು ತಿಳಿದುಬಂದಿಲ್ಲ. ಪರೀಕ್ಷೆಯ ಒತ್ತಡ,ವೈಯಕ್ತಿಕ ಸಮಸ್ಯೆ ಅಥವಾ ಬೇರೆನಾದರೂ ಕಾರಣ ವಿದೆಯೇ ಎಂಬ ಕೋನದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನು ಓದಿದ್ದೀರಾ..? ಕೋಲಾರ | ವಿದ್ಯಾಸಂಸ್ಥೆಗಳು ವ್ಯಾಪಾರ ದೃಷ್ಟಿಯಲ್ಲಿ ಶಿಕ್ಷಣ ನೀಡಬಾರದು: ಶಾಸಕ ಕೊತ್ತೂರು ಮಂಜುನಾಥ್
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿದ್ಯಾರ್ಥಿಯ ಸ್ನೇಹಿತರು ಮತ್ತು ಕಾಲೇಜು ಕಡೆಯಿಂದಲೂ ವಿಚಾರಣೆಗೆ ಮಾಡಲಾಗುತ್ತಿದ್ದು ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿ, ಇದೊಂದು ದುರದೃಷ್ಟಕರ ನೋವಿನ ಸಂಗತಿಯಾಗಿದೆ.ಜೀವನದಲ್ಲಿ ಒತ್ತಡಗಳು, ಕಷ್ಟಗಳು ಸಹಜ. ಅಂತಹ ಸಂದರ್ಭಗಳಲ್ಲಿ ಸಹಪಾಠಿಗಳು, ಪೋಷಕರ ಜತೆ ಮಾತನಾಡಿ ಮನಸ್ಸನ್ನು ಹಗುರಮಾಡಿಕೊಳ್ಳಬೇಕು.ದುಡುಕಿ ಆತುರದ ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ಮನವಿ ಮಾಡಿದರು. ಪೋಷಕರಿಗೆ ಮಗನ ಸಾವಿನ ದು:ಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.




