ಬಸವಾದಿ ಶರಣರು ಕಾಯಕತತ್ವಕ್ಕೆ ಹೆಚ್ಚು ಮನ್ನಣೆ ನೀಡಿದ್ದರು. ಎಲ್ಲಾ ಜಾತಿ, ಸಮುದಾಯಗಳ ಶರಣರು ತಮ್ಮ ವೃತ್ತಿ ಪರಿಭಾಷೆಯನ್ನು ಬಳಸಿ ವಚನಗಳನ್ನು ರಚಿಸಿದ್ದಾರೆ ಎಂದು ಸಂಪನ್ಮೂಲ ಶಿಕ್ಷಕ ಪ್ರಕಾಶ ದೇಶಮುಖ ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೀದರ ಇವರ ಸಹಯೋಗದಲ್ಲಿ ಭಾಲ್ಕಿ ಪಟ್ಟಣದ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ʼಬಸವಾದಿ ಶರಣರ ವಚನಗಳಲ್ಲಿ ಕಾರ್ಮಿಕರ ಹೋರಾಟಗಳುʼ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಅವರು ವಿಶೇಷ ಉಪನ್ಯಾಸ ನೀಡಿದರು.
ಶರಣರ ಕಾಯಕ ತತ್ವ ಪ್ರಸ್ತುತ ಸಮಾಜಕ್ಕೆ ಮಾದರಿಯಾಗಿದೆ. ಶ್ರಮಕ್ಕೆ ಅತ್ಯಂತ ಗೌರವ ನೀಡಿದ ಶರಣರು ಅದರಿಂದ ಬಂದ ಗಳಿಕೆಯಲ್ಲಿ ಸಮಾಜಕ್ಕೆ ದಾಸೋಹಗೈಯುವ ಪರಂಪರೆ ಬಿತ್ತಿದ್ದರು. ಬಸವಣ್ಣ ಹಾಗೂ ಸಮಕಾಲೀನ ವಚನಕಾರರು ರಚಿಸಿದ ವಚನಗಳಿಂದ ಕನ್ನಡ ಭಾಷೆಯ ಮೌಲ್ಯ ಹೆಚ್ಚಿಸಿದೆʼ ಎಂದು ನುಡಿದರು.
ಕಾರ್ಯಕ್ರಮ ಉದ್ಘಾಟಿಸಿ ಬಾಜಿರಾವ್ ಮೇತ್ರೆ ಅವರು ಮಾತನಾಡಿ, ʼನಮ್ಮ ಕನ್ನಡ ನಾಡು-ನುಡಿ, ಸಂಸ್ಕೃತಿ ಎಲ್ಲವೂ ಸಮೃದ್ಧಿಯಾಗಿದೆ. ಕನ್ನಡ ಹೆಚ್ಚು ಬಳಸಿದರೆ ತಂತಾನೇ ಭಾಷೆ ಬೆಳೆಯುತ್ತದೆ. ಬಸವಣ್ಣನವರು ಕೇವಲ ವ್ಯಕ್ತಿಯಲ್ಲ, ಅವರು ಕನ್ನಡದ ಆಸ್ತಿ. ಅವರ ಆಶಯಗಳು ಜಗತ್ತಿಗೆ ದಾರಿದೀಪವಾಗಿವೆʼ ಎಂದರು.
ಡಾ.ಪುಷ್ಪವತಿ ಎಸ್. ಅವರು ಮಾತನಾಡಿ, ʼಗಡಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ ಕನ್ನಡ ಭಾಷೆ, ಸಂಸ್ಕೃತಿ ಬೆಳೆಸುವ ಕಾರ್ಯ ಆಗಬೇಕಿದೆ. ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ಜನಮಾನಸಕ್ಕೆ ತಲುಪಿಸುವ ಕಾರ್ಯ ಹೆಚ್ಚು ನಡೆದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ನೆಮ್ಮದಿ ನೆಲೆಗೊಳ್ಳಲು ಸಾಧ್ಯʼ ಎಂದರು.
ಪ್ರಾಚಾರ್ಯ ದೇವರಾಜ ಕುಂಬಾರ ಮಾತನಾಡಿ, ʼವಿದ್ಯಾರ್ಥಿ ಜೀವನದಲ್ಲಿ ಕಲಿಯುತ್ತಲೆ ಇರಬೇಕು. ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿದರೆ ಗುರಿ ತಲುಪಬಹುದು. ಶ್ರದ್ಧೆ, ಭಕ್ತಿ, ಸೃಜನಶೀಲತೆ ನಮ್ಮನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಗರಿಗೆದರಿದ ಕೃಷಿ ಚಟುವಟಿಕೆ: 4.13 ಲಕ್ಷ ಹೆಕ್ಟೇರ್ ಬಿತ್ತನೆಗೆ ಸಜ್ಜು!
ಅಧ್ಯಕ್ಷತೆ ವಹಿಸಿದ ಪ್ರವೀಣ ಹಿರೇಮಠ ಹಾಗೂ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಜಿಲ್ಲಾ ಸಂಚಾಲಕಿ ಡಾ.ಮಕ್ತುಂಬಿ ಎಂ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಜೇಶ್ರೀ, ರಾಜಕುಮಾರ, ಸಂತೋಷ ಸೇರಿದಂತೆ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದರು.




