ನವೆಂಬರ್ 14ರ ಮಕ್ಕಳ ದಿನಾಚರಣೆ ಹಾಗೂ ಜವಾಹರಲಾಲ್ ನೆಹರು ಅವರ ಜನ್ಮದಿನದ ಅಂಗವಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೆಳಗೆರೆ ಪಂಚಾಯಿತಿ ವ್ಯಾಪ್ತಿಯ ಕಲಮರಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಶಾಲೆಯ ಶಿಕ್ಷಕರು, ವಿದ್ಯಾರ್ಥಿ ಸಂಘದ ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಪಂಚಾಯಿತಿ ಸದಸ್ಯರು, ಪತ್ರಕರ್ತರಾದ ರವಿಶಂಕರ್ ಆರ್., ಗ್ರಾಮದ ಹಿರಿಯರು ಹಾಗೂ ಸಮಾಜಸೇವಕ ಮುದುಕುಮಾರ್ ಕಲಮರಹಳ್ಳಿ ಅವರ ಸಂಯೋಜನೆಯಲ್ಲಿ ಕಾರ್ಯಕ್ರಮ ರೂಪುಗೊಂಡಿತ್ತು.
ಬೆಂಗಳೂರಿನಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅಮೃತ ಹಸ್ತ ತಂಡದ ಸದಸ್ಯರು ಹಾಗೂ ವಿವಿಧ ದಾನಿಗಳ ಸಹಕಾರದೊಂದಿಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ವಿದ್ಯಾ ಯೋಜನೆಯಡಿ ಶಾಲಾ ಬ್ಯಾಗ್, ಪಠ್ಯಪುಸ್ತಕಗಳು, ನೀರಿನ ಬಾಟಲಿಗಳು, ನೋಟ್‌ಬುಕ್‌ಗಳು ಸೇರಿದಂತೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ವಿತರಿಸಲಾಯಿತು.
ಬೆಂಗಳೂರಿನಿಂದ ಆಗಮಿಸಿದ್ದ ಅಮೃತ ಹಸ್ತ ತಂಡದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ವಿವಿಧ ಇಲಾಖೆಗಳ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರಿದ್ದಾರೆ. ಇವರು ಮಕ್ಕಳ ದಿನಾಚರಣೆ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತಿದ್ದಾರೆ.
ಅಮೃತ ಹಸ್ತ ತಂಡದ ಅಧ್ಯಕ್ಷರಾದ ತಿಪಟೂರಿನ ಆನಂದ್ ಯಾದವ್, ಬೆಂಗಳೂರಿನ ಮಂಜುಳಮ್ಮ, ಕವಯಿತ್ರಿ ವಿಜಯಮ್ಮ, ತುಮಕೂರಿನ ಶ್ರೀನಿವಾಸ ರಾವ್, ಉತ್ತರ ಕರ್ನಾಟಕದ ಚಿನ್ನಪ್ಪ, ಬೆಂಗಳೂರಿನ ಉಮಾ ಹಾಗೂ ನಾಗಮಂಗಲದ ಅಭಿ ಗೌಡ, ತುಮಕೂರಿನ ಶಾರದಮ್ಮ ಸೇರಿದಂತೆ ತಂಡದ ಸದಸ್ಯರು ಈ ಸೇವಾ ಕಾರ್ಯದಲ್ಲಿ ಭಾಗವಹಿಸಿದ್ದರು.
ಗ್ರಾಮದ ಹಿರಿಯರಾದ ಪಟೇಲ್ ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ, ಶಿವಾನಂದಪ್ಪ ಅವರ ಸಹಕಾರದೊಂದಿಗೆ ಮಕ್ಕಳ ದಿನಾಚರಣೆ ಹಾಗೂ ಶೈಕ್ಷಣಿಕ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ಅರ್ಥಪೂರ್ಣವಾಗಿ ನೆರವೇರಿತು.



