ಬ್ರಿಟನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿ ಬಿಲಾಲ್ ಕಾಜಿಗೆ ಅಲ್ಲಿನ ನ್ಯಾಯಾಲಯವು 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಆನ್‌ಲೈನ್ ಮೂಲಕ ಪುಸಲಾಯಿಸಿ, ಅವರಿಂದ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ತರಿಸಿಕೊಂಡು ಲೈಂಗಿಕವಾಗಿ ಶೋಷಿಸಿದ ಗಂಭೀರ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಲಾಗಿದೆ.
ಮೂಲತಃ ಮುಂಬೈನವರಾದ ಬಿಲಾಲ್ ಕಾಜಿ (27), ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್ ವಿಶ್ವವಿದ್ಯಾಲಯದಲ್ಲಿ ರಸಾಯನಶಾಸ್ತ್ರ ಅಧ್ಯಯನ ಮಾಡುತ್ತಿದ್ದಾನೆ. ಈತ, 2021ರ ಆಗಸ್ಟ್‌ನಿಂದ 2025ರ ಆಗಸ್ಟ್ ನಡುವಿನ ಅವಧಿಯಲ್ಲಿ ಬ್ರಿಟನ್‌ನಾದ್ಯಂತ 70ಕ್ಕೂ ಹೆಚ್ಚು ಬಾಲಕಿಯರನ್ನು ಆನ್‌ಲೈನ್ ಮೂಲಕ ಪುಸಲಾಯಿಸಿ, ಶೋಷಣೆ ನಡೆಸಿದ್ದಾನೆ. ಇದಕ್ಕಾಗಿ ಈತ ‘ರೀಸ್’ ಎಂಬ ಹೆಸರಿನ ಬಿಳಿಯ ಬ್ರಿಟಿಷ್ ಹದಿಹರೆಯದ ಬಾಲಕನಂತೆ ನಟಿಸುತ್ತಿದ್ದ ಮತ್ತು ಅನಾಮಧೇಯ ಅಪ್ರಾಪ್ತ ಬಾಲಕನೊಬ್ಬನ ಫೋಟೋಗಳನ್ನು ಬಳಸಿಕೊಂಡು ಸ್ನ್ಯಾಪ್‌ಚಾಟ್, ರೋಬ್ಲಾಕ್ಸ್, ವಿಂಕ್ ಹಾಗೂ ವಿಜ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಚಿಕ್ಕ ವಯಸ್ಸಿನ ಬಾಲಕಿಯರೊಂದಿಗೆ ಸ್ನೇಹ ಬೆಳೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
10 ರಿಂದ 17 ವರ್ಷದೊಳಗಿನ ಬಾಲಕಿಯರೊಂದಿಗೆ ನಕಲಿ ಪ್ರೇಮ ಸಂಬಂಧವನ್ನು ಬೆಳೆಸಿಕೊಳ್ಳುತ್ತಿದ್ದ ಕಾಜಿ, ಬಾಲಕಿಯರ ವಿಶ್ವಾಸ ಗಳಿಸಿದ ನಂತರ ಅವರ ಖಾಸಗಿ ಫೋಟೋ, ವಿಡಿಯೋಗಳನ್ನು ಕಳುಹಿಸುವಂತೆ ಪ್ರಚೋದಿಸುತ್ತಿದ್ದ. ಒಂದು ವೇಳೆ ಸಂತ್ರಸ್ತ ಬಾಲಕಿಯರು ಮುಜುಗರಪಟ್ಟು ನಿರಾಕರಿಸಿದರೆ, ತಕ್ಷಣವೇ ಈತನ ವರ್ತನೆ ಕ್ರೂರವಾಗುತ್ತಿತ್ತು. ತನಗೆ ಕಳುಹಿಸಿದ ಖಾಸಗಿ ಫೋಟೋಗಳನ್ನು ಅವರ ಸ್ನೇಹಿತರು ಮತ್ತು ಕುಟುಂಬಸ್ಥರಿಗೆ ಕಳಿಸುವುದಾಗಿ ಬೆದರಿಕೆ ಹಾಕುತ್ತಿದ್ದ. ಕೆಲವು ಪ್ರಕರಣಗಳಲ್ಲಿ, ಸಂತ್ರಸ್ತೆಯರ ಸಾಮಾಜಿಕ ಜಾಲತಾಣದ ಖಾತೆಗಳನ್ನೇ ಹ್ಯಾಕ್ ಮಾಡಿ, ಆ ಅಶ್ಲೀಲ ದೃಶ್ಯಗಳನ್ನು ನೇರವಾಗಿ ಅವರ ಸಹಪಾಠಿಗಳು ಮತ್ತು ಸ್ನೇಹಿತರಿಗೆ ರವಾನಿಸಿ ವಿಕೃತಿ ಮೆರೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
2021ರ ನವೆಂಬರ್‌ನಲ್ಲಿ ಸಂತ್ರಸ್ತ ಬಾಲಕಿಯೊಬ್ಬಳು ತನಗಾದ ಈ ದೌರ್ಜನ್ಯದ ಕುರಿತು ಡರ್ಬಿಶೈರ್ ಪೊಲೀಸರಿಗೆ ದೂರು ನೀಡಿದಾಗ ಆತನ ಕ್ರೌರ್ಯ ಬೆಳಕಿಗೆ ಬಂದಿತ್ತು. ತನ್ನ ಸ್ನ್ಯಾಪ್‌ಚಾಟ್ ಖಾತೆಯನ್ನು ಹ್ಯಾಕ್ ಮಾಡಿ, ಕಾಜಿಯೊಂದಿಗೆ ಹಂಚಿಕೊಂಡಿದ್ದ ಖಾಸಗಿ ವಿಷಯಗಳನ್ನು ತನ್ನ ಸ್ನೇಹಿತರಿಗೆ ಕಳುಹಿಸಲಾಗಿದೆ ಎಂದು ಸಂತ್ರಸ್ತ ಬಾಲಕಿ ದೂರಿದ್ದರು.
ಈ ಲೇಖನ ಓದಿದ್ದೀರಾ?: ಒಬಿಸಿ ಮೀಸಲಾತಿ ಮತ್ತು ಕೆನೆಪದರ: ಸುಪ್ರೀಂನ ಮಾರ್ಚ್ ತೀರ್ಪಿನ ಹಿನ್ನೆಲೆಯೇನು? ಪ್ರಸ್ತುತ ಮಹತ್ವವೇನು?
ದೂರು ದಾಖಲಾದ ಬೆನ್ನಲ್ಲೇ, ಬ್ರಿಟನ್‌ನ 28 ಪೊಲೀಸ್ ಪಡೆಗಳು ಜಂಟಿಯಾಗಿ ಸುದೀರ್ಘ ತನಿಖೆ ನಡೆಸಿದ್ದವು. ತನಿಖೆಯ ವೇಳೆ ಸುಮಾರು 70 ಸಂತ್ರಸ್ತ ಬಾಲಕಿಯರನ್ನು ಗುರುತಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಡುವೆ ದೇಶ ಬಿಟ್ಟು ಪರಾರಿಯಾಗಿದ್ದ ಬಿಲಾಲ್ ಕಾಜಿ, 2023ರ ಜುಲೈನಲ್ಲಿ ಮರಳಿ ಬ್ರಿಟನ್‌ಗೆ ಬಂದಾಗ ಹೀಥ್ರೂ ವಿಮಾನ ನಿಲ್ದಾಣದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದರು.
ಆತನ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಸ್ಟೀಫನ್ ಎವೆರೆಟ್, “ಅಪರಾಧಿ ಬಿಲಾಲ್ ಕಾಜಿ ಅತ್ಯಂತ ಅಪಾಯಕಾರಿ ವ್ಯಕ್ತಿ. ಆತನ ಕೃತ್ಯಗಳು ಎಳೆಯ ಜೀವಗಳ ಮೇಲೆ ತೀವ್ರವಾದ ಮಾನಸಿಕ ಆಘಾತವನ್ನುಂಟುಮಾಡಿವೆ. ಆ ಪುಟ್ಟ ಬಾಲಕಿಯರ ಮೇಲೆ ಇಂತಹ ಕತ್ಯಗಳನ್ನು ಕಾಜಿಯಂತಹ ವ್ಯಕ್ತಿಗಳು ಏಕೆ ಎಸಗುತ್ತಾರೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆತನ ವಿಕೃತ ಲೈಂಗಿಕ ಆಸೆಗಳಿಗಾಗಿ ಬಾಲಕಿಯರ ಖಾಸಗಿತನವನ್ನು ಹರಣ ಮಾಡಿದ್ದಾನೆ. ತಮ್ಮ ಸ್ವಂತ ಮನೆಗಳಲ್ಲಿ ತಾವು ಸುರಕ್ಷಿತವಾಗಿದ್ದೇವೆ ಎಂದು ನಂಬಿದ್ದ ಮಕ್ಕಳ ಎಲ್ಲ ಸುರಕ್ಷತೆ ಮತ್ತು ನೆಮ್ಮದಿಯನ್ನು ಆತ ಕಸಿದುಕೊಂಡಿದ್ದಾನೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯಾಯಾಧೀಶ ಸ್ಟೀಫನ್ ಎವೆರೆಟ್ ಅವರು ಬಿಲಾಲ್ ಕಾಜಿಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಆತ ಪೆರೋಲ್‌ಗೆ ಅರ್ಹನಾಗಬೇಕೆಂದರೆ, ಕನಿಷ್ಠ 20 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಲೇಬೇಕು ಎಂದೂ ತಾಕೀತು ಮಾಡಿದ್ದಾರೆ.


