ರಾಜ್ಯದಲ್ಲಿ ಸಂಪೂರ್ಣ ಮದ್ಯನಿಷೇಧವನ್ನು ಹಂತ ಹಂತವಾಗಿ ಜಾರಿಗೊಳಿಸಬೇಕು, ಮದ್ಯಪಾನದಿಂದ ಸಂಕಷ್ಟಕ್ಕೆ ಸಿಲುಕುವ ಕುಟುಂಬಗಳ ರಕ್ಷಣೆಗೆ ಸರ್ಕಾರ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂಬ ಪ್ರಮುಖ ನಿರ್ಣಯಗಳೊಂದಿಗೆ ನಾಡಿನ ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ಸಾಮಾಜಿಕ ಚಿಂತಕರು ಮದ್ಯಮುಕ್ತ ಕರ್ನಾಟಕ ನಿರ್ಮಾಣಕ್ಕೆ ಒಕ್ಕೊರಲ ಆಗ್ರಹ ವ್ಯಕ್ತಪಡಿಸಿದರು.
ನಗರದ ಮುರುಘಾ ರಾಜೇಂದ್ರ ಬೃಹನ್ಮಠದಲ್ಲಿ ಭಾನುವಾರ ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ಮಠದ ಸಹಯೋಗದಲ್ಲಿ ಆಯೋಜಿಸಿದ್ದ ‘ಸರ್ವೋದಯಕ್ಕಾಗಿ ಮದ್ಯಪಾನ ನಿಯಂತ್ರಣ ಸಮಾಲೋಚನಾ ದುಂಡುಮೇಜಿನ ಪರಿಷತ್’ನಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.
ಮದ್ಯಪಾನ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸುವುದು, ವ್ಯಸನಮುಕ್ತ ಗ್ರಾಮಗಳ ನಿರ್ಮಾಣ, ವ್ಯಸನದಿಂದ ಹೊರಬರುವವರಿಗೆ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಸಭೆ ಕೈಗೊಂಡಿತು.
ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿ ಹೆಚ್ಚುತ್ತಿರುವ ಮದ್ಯಪಾನದ ಪಿಡುಗನ್ನು ನಿಯಂತ್ರಿಸಿ ಮದ್ಯಮುಕ್ತ ಕರ್ನಾಟಕ ನಿರ್ಮಿಸುವುದು ಪ್ರತಿಯೊಬ್ಬರ ಆಶಯವಾಗಬೇಕು. ಮದ್ಯಪಾನ ಮುಕ್ತ ಸಮಾಜದಿಂದ ಮಾತ್ರ ಸರ್ವೋದಯ ಸಾಧ್ಯ ಎಂದರು.

ಮಕ್ಕಳಿಂದ ವಯೋವೃದ್ಧರವರೆಗೆ ಮದ್ಯಪಾನದ ದುಷ್ಪರಿಣಾಮಗಳನ್ನು ಸಮಾಜ ಎದುರಿಸುತ್ತಿದೆ. ಈ ಅನಾಹುತದಿಂದ ಜನರನ್ನು ಮುಕ್ತಗೊಳಿಸದಿದ್ದರೆ ಕಲ್ಯಾಣ ನಾಡು ಕುಡುಕರ ನಾಡಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧೀಜಿಯವರ ಸುಖಿ ಸಮಾಜದ ಕನಸು ನನಸಾಗಬೇಕಾದರೆ ಕರ್ನಾಟಕವನ್ನು ಮದ್ಯಮುಕ್ತ ರಾಜ್ಯವನ್ನಾಗಿ ಮಾಡಬೇಕು. ಈ ಸಂಬಂಧ ಮಠಾಧೀಶರು ಮತ್ತು ಸಾರ್ವಜನಿಕರ ನಿಯೋಗವು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದೆ ಎಂದು ತಿಳಿಸಿದರು.
ಗದಗದ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳು ಮಾತನಾಡಿ, ಮದ್ಯವ್ಯಸನದಿಂದ ಗ್ರಾಮೀಣ ಪ್ರದೇಶಗಳಲ್ಲಿನ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿವೆ. ಹಳ್ಳಿಗಳಲ್ಲಿ ಮದ್ಯದಂಗಡಿಗಳ ನಿಯಂತ್ರಣಕ್ಕೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮದ್ಯಪಾನದ ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮಠಾಧೀಶರು ಪ್ರಮುಖ ಪಾತ್ರ ವಹಿಸಬೇಕು. ನೈತಿಕ ಮೌಲ್ಯಗಳನ್ನು ಬೆಳೆಸುವ ಮೂಲಕ ಜನರ ಮನಪರಿವರ್ತನೆಗೆ ಮುಂದಾಗಬೇಕು ಎಂದರು.
ಇಳಕಲ್ಲಿನ ವಿಜಯ ಮಹಾಂತೇಶ್ವರ ಸಂಸ್ಥಾನದ ಗುರು ಮಹಾಂತ ಮಹಾಸ್ವಾಮಿಗಳು ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನು ತೆರೆಯಬಾರದು ಎಂಬ ನಿರ್ಣಯವನ್ನು ಗ್ರಾಮ ಪಂಚಾಯಿತಿ ಅಂಗೀಕರಿಸಿದರೆ ಅದಕ್ಕೆ ಕಾನೂನುಬದ್ಧ ಮಾನ್ಯತೆ ದೊರೆಯಬೇಕು. ಸ್ಥಳೀಯ ಸಂಸ್ಥೆಗಳಿಗೆ ಈ ಅಧಿಕಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಶಾಲಾ-ಕಾಲೇಜುಗಳು ಮತ್ತು ಜನವಸತಿ ಪ್ರದೇಶಗಳ ಸಮೀಪವಿರುವ ಮದ್ಯದಂಗಡಿಗಳನ್ನು ಸ್ಥಳಾಂತರಿಸಬೇಕು. ಕುಟುಂಬಗಳ ನೆಮ್ಮದಿ ಮತ್ತು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಎಲ್ಲ ವರ್ಗದ ಜನರು ಮದ್ಯನಿಷೇಧದ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.
ಭೋವಿ ಗುರುಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, ಮದ್ಯಪಾನ ನಿಯಂತ್ರಣ ಮತ್ತು ನಿಷೇಧದ ವಿಚಾರದಲ್ಲಿ ಸರ್ಕಾರದ ದ್ವಂದ್ವ ನೀತಿ ಹಾಗೂ ಮದ್ಯದ ಆದಾಯದ ಮೇಲಿನ ಅವಲಂಬನೆ ಕಡಿಮೆಯಾಗಬೇಕು ಎಂದರು.
ಒಂದೆಡೆ ಮದ್ಯಪಾನದ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮತ್ತೊಂದೆಡೆ ಅಬಕಾರಿ ಇಲಾಖೆಗೆ ಮದ್ಯ ಮಾರಾಟದ ಗುರಿ ನಿಗದಿಪಡಿಸಲಾಗುತ್ತಿದೆ. ಈ ನಡೆ ಪರಸ್ಪರ ವಿರೋಧಾಭಾಸದಿಂದ ಕೂಡಿದೆ ಎಂದು ಟೀಕಿಸಿದರು.
ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಡಾ. ನಿಶ್ಚಲಾನಂದನಾಥ ಮಹಾಸ್ವಾಮಿಗಳು ಮಾತನಾಡಿ, ಮದ್ಯನಿಷೇಧದಿಂದ ಸರ್ಕಾರದ ಆದಾಯ ಕಡಿಮೆಯಾಗಬಹುದು ಎಂಬ ಕಾರಣಕ್ಕೆ ನಿಷೇಧದ ನಿರ್ಧಾರ ಕೈಗೊಳ್ಳಲು ಹಿಂಜರಿಯಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮಹಿಳೆಯರು, ಧಾರ್ಮಿಕ ಮುಖಂಡರು ಮತ್ತು ಸಂಘ-ಸಂಸ್ಥೆಗಳು ಒಗ್ಗೂಡಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು.
ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲದಾಪುರ ಮಾತನಾಡಿ, ಮದ್ಯವ್ಯಸನದಿಂದ ಹೊರಬರಲು ಮನಪರಿವರ್ತನೆ ದೀರ್ಘಕಾಲೀನ ಪರಿಹಾರವಾಗಿದೆ. ಜನರು ಮದ್ಯ ಖರೀದಿಸುವುದನ್ನು ತಪ್ಪಿಸುವಂತೆ ಜಾಗೃತಿ ಮೂಡಿಸಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದರು.
ಕೊಪ್ಪಳ ಜಿಲ್ಲೆಯಲ್ಲಿ ಗ್ರಾಮಸ್ಥರ ಪ್ರಯತ್ನದಿಂದ 13ಕ್ಕೂ ಹೆಚ್ಚು ಗ್ರಾಮಗಳು ಮದ್ಯಮುಕ್ತ ಹಾಗೂ ವ್ಯಸನಮುಕ್ತ ಗ್ರಾಮಗಳಾಗಿ ರೂಪುಗೊಂಡಿರುವುದು ಶ್ಲಾಘನೀಯ. ಇದೇ ಮಾದರಿಯನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್. ಪಾಟೀಲ್ ಮಾತನಾಡಿ, ಮದ್ಯಪಾನ ನಿಷೇಧದ ಪ್ರಯತ್ನಕ್ಕೆ ಎಲ್ಲ ಧರ್ಮಗಳ ಮುಖಂಡರು ಮತ್ತು ಸರ್ಕಾರ ಕೈಜೋಡಿಸಬೇಕು ಎಂದರು.
ಮದ್ಯನಿಷೇಧ ಆಂದೋಲನದ ಕಾರ್ಯಕರ್ತೆ ಸ್ವರ್ಣಭಟ್ ಮಾತನಾಡಿ, ಮದ್ಯಪಾನದ ದುಷ್ಪರಿಣಾಮಗಳ ಕುರಿತು ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ಕಾನೂನಾತ್ಮಕವಾಗಿ ನಿಷೇಧ ಜಾರಿಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ವೂಡೇ ಪಿ. ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಅಸ್ಪೃಶ್ಯತೆ, ಕೋಮುಗಲಭೆ ಮತ್ತು ಮದ್ಯಪಾನ ಸಮಾಜಕ್ಕೆ ಕಂಟಕಗಳಾಗಿವೆ. ಮದ್ಯವ್ಯಸನದಿಂದ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಗಾಂಧೀಜಿಯವರ ಆಶಯಗಳನ್ನು ಅನುಸರಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ದಾವಣಗೆರೆಯ ಬ್ರಹ್ಮಕುಮಾರಿ ಆಶ್ರಮದ ಲೀಲಕ್ಕ ಮಾತನಾಡಿ, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದಾಗುವ ಅನಾಹುತಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಸಭೆಯ ಪ್ರಮುಖ ನಿರ್ಣಯಗಳೇನು?
ಮದ್ಯಪಾನ ಮತ್ತು ಮಾದಕ ವಸ್ತುಗಳ ವಿರುದ್ಧದ ಹೋರಾಟವನ್ನು ಸಂಘಟಿತವಾಗಿ ಮುಂದುವರಿಸಲು ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.
– ರಾಜ್ಯದಲ್ಲಿ ಸಂಪೂರ್ಣ ಮದ್ಯನಿಷೇಧವನ್ನು ಹಂತ ಹಂತವಾಗಿ ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವುದು.
– ಪ್ರಸ್ತುತ ಜಾರಿಯಲ್ಲಿರುವ ಅಬಕಾರಿ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಆಗ್ರಹಿಸುವುದು.
– ಮಠಗಳ ಪ್ರವಚನ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮದ್ಯಪಾನ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು.
– ಶಾಲಾ-ಕಾಲೇಜುಗಳ ಪಠ್ಯಪುಸ್ತಕಗಳಲ್ಲಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತ ಪಾಠಗಳನ್ನು ಅಳವಡಿಸಲು ಸರ್ಕಾರಕ್ಕೆ ಶಿಫಾರಸು ಮಾಡುವುದು.
– ಆರ್ಥಿಕವಾಗಿ ಸಬಲವಾಗಿರುವ ಮಠಗಳ ಸಹಯೋಗದಲ್ಲಿ ಉಚಿತ ಅಥವಾ ಕೈಗೆಟುಕುವ ದರದಲ್ಲಿ ವ್ಯಸನಮುಕ್ತ ಕೇಂದ್ರಗಳನ್ನು ಸ್ಥಾಪಿಸುವುದು ಹಾಗೂ ನುರಿತ ವೈದ್ಯರಿಂದ ಸಮಾಲೋಚನೆ ವ್ಯವಸ್ಥೆ ಕಲ್ಪಿಸುವುದು.
– ವ್ಯಸನದಿಂದ ಹೊರಬಂದ ಯುವಕರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ ಸಮಾಜದ ಮುಖ್ಯವಾಹಿನಿಗೆ ಮರಳಲು ನೆರವಾಗುವುದು.
– ಮದುವೆ, ಜಾತ್ರೆ ಹಾಗೂ ಇತರ ಶುಭ ಸಮಾರಂಭಗಳಲ್ಲಿ ಮದ್ಯದ ಬಳಕೆಯನ್ನು ವಿರೋಧಿಸುವುದು.
– ಗ್ರಾಮಗಳಲ್ಲಿ ಮಠಗಳ ಭಕ್ತರು ಮತ್ತು ಸ್ಥಳೀಯ ಮುಖಂಡರ ನೇತೃತ್ವದಲ್ಲಿ ದುಶ್ಚಟಮುಕ್ತ ಗ್ರಾಮ ಸಮಿತಿಗಳನ್ನು ರಚಿಸಿ, ಅಕ್ರಮ ಮದ್ಯ ಮಾರಾಟ ತಡೆಯಲು ಜಾಗೃತಿ ಮೂಡಿಸುವುದು.
– ಚುನಾವಣೆಗಳಲ್ಲಿ ಮತದಾರರಿಗೆ ಮದ್ಯ ಹಂಚುವ ರಾಜಕೀಯ ನಾಯಕರನ್ನು ಬಹಿಷ್ಕರಿಸುವಂತೆ ಜನರಿಗೆ ಕರೆ ನೀಡುವುದು.
– ಯುವಜನರನ್ನು ತಲುಪಲು ಸಾಮಾಜಿಕ ಜಾಲತಾಣಗಳಲ್ಲಿ ಮಠಾಧೀಶರ ಸಂದೇಶಗಳ ಮೂಲಕ ಡಿಜಿಟಲ್ ಜಾಗೃತಿ ಅಭಿಯಾನ ಆರಂಭಿಸುವುದು.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಸಭೆಯ ನಿರ್ಣಯಗಳನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಬಾಲ್ಕಿಯ ಹಿರೇಮಠ ಸಂಸ್ಥಾನದ ಡಾ. ಬಸವಲಿಂಗ ಪಟ್ಟದ್ದೇವರು, ಹುಣಸೂರಿನ ಗುರುಬಸವೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ವಚನಾನಂದ ಮಹಾಸ್ವಾಮಿಗಳು, ಗುರುಮಠಕಲ್ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ, ವಕೀಲ ಎಚ್.ಬಿ. ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ ಆರ್. ಸಿದ್ದೇಗೌಡ ಚಿಕ್ಕಾಡೆ, ಕೆ. ನರಸಿಂಹಮೂರ್ತಿ, ಜಿ.ಎಸ್. ಜಯದೇವ್, ಕವಯತ್ರಿ ಸವಿತಾ ನಾಗಭೂಷಣ್, ನಟ ಅಶೋಕ್, ರಂಗಕರ್ಮಿ ಪ್ರಸನ್ನ ಚರಕ, ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ, ಸಾಹಿತಿಗಳಾದ ಡಾ. ಲೋಕೇಶ್ ಅಗಸನಕಟ್ಟೆ, ಚಂದ್ರಶೇಖರ್ ತಾಳ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.





