ಓವರ್‌ಟೇಕ್ ಮಾಡಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ ಪಕ್ಕದ ಜಮೀನಿಗೆ ನುಗ್ಗಿ ಪಲ್ಟಿಯಾದ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಗಿಲಕೇನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಗಿಲಕೇನಹಳ್ಳಿ ಗ್ರಾಮದಿಂದ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೊಳಲ್ಕೆರೆ ಪಟ್ಟಣದ ಡ್ರೀಮ್ ವರ್ಲ್ಡ್ ಶಾಲೆಯತ್ತ ತೆರಳುತ್ತಿದ್ದ ಶಾಲಾ ಬಸ್ ಹಾಗೂ ಶಿವಗಂಗಾ ಗ್ರಾಮದ ವಿದ್ಯಾರತ್ನ ಶಾಲೆಯ ಬಸ್ ನಡುವೆ ಪೈಪೋಟಿ ನಡೆದಿದೆ ಎನ್ನಲಾಗಿದೆ. ಈ ವೇಳೆ ಓವರ್‌ಟೇಕ್ ಮಾಡಲು ಮುಂದಾದ ಡ್ರೀಮ್ ವರ್ಲ್ಡ್ ಶಾಲೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಜಮೀನಿಗೆ ನುಗ್ಗಿ ಪಲ್ಟಿಯಾಗಿದೆ.
ಘಟನೆಯಲ್ಲಿ ಬಸ್‌ನಲ್ಲಿದ್ದ ಕೆಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಡ್ರೀಮ್ ವರ್ಲ್ಡ್ ಶಾಲೆಯ ವ್ಯವಸ್ಥಾಪಕರು ಹಾಗೂ ಶಿಕ್ಷಕರು ಆಗಮಿಸಿದರು. ಈ ವೇಳೆ ಆಕ್ರೋಶಗೊಂಡ ಗ್ರಾಮಸ್ಥರು ಶಾಲಾ ವ್ಯವಸ್ಥಾಪಕರು ಹಾಗೂ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಬಸ್ ಚಾಲಕನನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದು ಗ್ರಾಮಸ್ಥರು ಹಾಗೂ ಶಾಲಾ ಸಿಬ್ಬಂದಿ ನಡುವೆ ಕೆಲಕಾಲ ವಾಗ್ವಾದ ನಡೆಯಿತು.
ಘಟನೆಯು ಗಿಲಕೇನಹಳ್ಳಿ ಹಾಗೂ ರಾಷ್ಟ್ರೀಯ ಹೆದ್ದಾರಿ-50ರ ಮಧ್ಯಭಾಗದಲ್ಲಿ ನಡೆದಿದ್ದು, ಹೊಳಲ್ಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





