ಕಾರ್ಮಿಕರ ಕನಿಷ್ಠ ವೇತನವನ್ನು ₹36,000ಕ್ಕೆ ಹೆಚ್ಚಿಸುವುದು ಸೇರಿದಂತೆ ವಿವಿಧ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30ರಂದು ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಗೆ ಬೃಹತ್ ಮುತ್ತಿಗೆ ಹಾಕಲಾಗುವುದು ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಧರ್ಮೇಶ್ ತಿಳಿಸಿದ್ದಾರೆ.
ಕೊಡಗು ಜಿಲ್ಲಾ ಸಿಐಟಿಯು ವತಿಯಿಂದ ಮಡಿಕೇರಿಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶವು ತೀವ್ರ ಸಾಮಾಜಿಕ ಹಾಗೂ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಕೇಂದ್ರ ಸರ್ಕಾರದ ತಪ್ಪು ನೀತಿಗಳಿಂದ ಉತ್ಪಾದನಾ ವಲಯ ಕುಸಿದಿದೆ ಮತ್ತು ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ಅವರು ಆರೋಪಿಸಿದರು. ದೇಶದ ಆರ್ಥಿಕತೆ ಮುನ್ನಡೆಯುತ್ತಿದೆ ಎಂಬ ಸರ್ಕಾರದ ವಾದ ಸತ್ಯಕ್ಕೆ ದೂರವಾಗಿದ್ದು, ಅಂತರರಾಷ್ಟ್ರೀಯ ಸಂಸ್ಥೆಗಳೇ ಭಾರತದ ಜಿಡಿಪಿ ಲೆಕ್ಕಾಚಾರಗಳ ಬಗ್ಗೆ ಪ್ರಶ್ನೆ ಎತ್ತುತ್ತಿವೆ ಎಂದರು.
ದೇಶದ ಒಟ್ಟು ಸಂಪತ್ತಿನ ಬಹುಪಾಲು ಕೆಲವೇ ಶ್ರೀಮಂತರ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ ಎಂದು ಧರ್ಮೇಶ್ ಟೀಕಿಸಿದರು. 2013ರಲ್ಲಿ ₹26,000 ಕೋಟಿ ಆಸ್ತಿ ಹೊಂದಿದ್ದ ಗೌತಮ್ ಅದಾನಿ ಅವರ ಆಸ್ತಿ ಇಂದು ₹16 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅದೇ ರೀತಿ ಮುಕೇಶ್ ಅಂಬಾನಿ ಅವರ ಆಸ್ತಿ ₹12 ಲಕ್ಷ ಕೋಟಿಗೆ ತಲುಪಿದೆ ಎಂದು ಅವರು ಹೇಳಿದರು. ಇನ್ನೊಂದೆಡೆ, ಉನ್ನತ ಶಿಕ್ಷಣ ಪಡೆದ ಇಂಜಿನಿಯರ್‌ಗಳಿಗೆ ಸಮರ್ಪಕ ಸಂಬಳ ಸಿಗುತ್ತಿಲ್ಲ ಹಾಗೂ ‘ನೀಟ್’ ಪರೀಕ್ಷೆಯಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್‌ನ ‘ರೆಪ್ಟಕೋಸ್ ಬ್ರೆಟ್’ ಪ್ರಕರಣದ ಮಾರ್ಗಸೂಚಿಗಳು ಹಾಗೂ ವೈದ್ಯಕೀಯ ವಿಜ್ಞಾನದ ಆಧಾರದ ಮೇಲೆ ಒಬ್ಬ ಕಾರ್ಮಿಕನ ಕುಟುಂಬ ನಿರ್ವಹಣೆಗೆ ಇಂದಿನ ಮಾರುಕಟ್ಟೆ ಬೆಲೆಯನ್ವಯ ಕನಿಷ್ಠ ₹36,000 ವೇತನ ಅಗತ್ಯವಿದೆ ಎಂದು ಧರ್ಮೇಶ್ ಹೇಳಿದರು. ಕೇಂದ್ರ ಸರ್ಕಾರದ 8ನೇ ವೇತನ ಆಯೋಗವೇ ತನ್ನ ನೌಕರರಿಗೆ ಕನಿಷ್ಠ ₹69,000 ವೇತನ ಶಿಫಾರಸು ಮಾಡಿರುವ ಸಂದರ್ಭದಲ್ಲಿ ಕಾರ್ಮಿಕರಿಗೆ ₹36,000 ಕೇಳುವುದು ನ್ಯಾಯಸಮ್ಮತ ಬೇಡಿಕೆಯಾಗಿದೆ ಎಂದು ತಿಳಿಸಿದರು.
ಸರ್ಕಾರ ಜಾರಿಗೆ ತರಲು ಮುಂದಾಗಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವಂತಿವೆ. ಮುಷ್ಕರ ಹಕ್ಕನ್ನೇ ಕಿತ್ತುಕೊಂಡು ಕಾರ್ಮಿಕರನ್ನು ಮಾಲೀಕರ ಅಧೀನಕ್ಕೆ ತಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಜನರ ಗಮನವನ್ನು ನೈಜ ಆರ್ಥಿಕ ಸಮಸ್ಯೆಗಳಿಂದ ಬೇರೆಡೆ ಸೆಳೆಯಲು ಧರ್ಮ, ಜಾತಿ ಹಾಗೂ ಕೋಮು ರಾಜಕಾರಣವನ್ನು ಬಳಸಲಾಗುತ್ತಿದೆ ಎಂದು ಅವರು ಟೀಕಿಸಿದರು.
ಈ ಸುದ್ದಿ ಓದಿದ್ದೀರಾ?ಕೊಡಗು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಅಂಗಾಂಗ ದಾನ ಪ್ರಕ್ರಿಯೆ
ಕಾರ್ಯಾಗಾರದ ಅಧ್ಯಕ್ಷತೆಯನ್ನು ಸಿಐಟಿಯು ಜಿಲ್ಲಾ ಅಧ್ಯಕ್ಷ ಎ.ಸಿ. ಸಾಬು ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಭರತ್ ಜಿಲ್ಲೆಯ ಸಂಘಟನಾ ಯೋಜನೆಯನ್ನು ಮಂಡಿಸಿದರು. ವೇದಿಕೆಯಲ್ಲಿ ಅಂಗನವಾಡಿ ನೌಕರರ ಸಂಘದ ಮುಖಂಡರಾದ ಸುಮಿತ್ರಾ, ಹಮಾಲಿ ಕಾರ್ಮಿಕರ ಮುಖಂಡ ಶಾಜಿ ರಮೇಶ್ ಹಾಗೂ ಪ್ಲಾಂಟೇಷನ್ ಕಾರ್ಮಿಕರ ಮುಖಂಡ ಎನ್.ಡಿ. ಕುಟ್ಟಪ್ಪ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ತೋಟ ಕೆಲಸಗಾರರು, ಹಮಾಲಿ, ಕಟ್ಟಡ ಕಾರ್ಮಿಕರು, ಕಾಫಿ ಕ್ಯೂರಿಂಗ್ ವರ್ಕ್ಸ್ ಕಾರ್ಮಿಕರು, ಸರ್ಕಾರಿ ಆಸ್ಪತ್ರೆ, ಗ್ರಾಮ ಪಂಚಾಯತ್ ನೌಕರರು, ವಾಹನ ಚಾಲಕರ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.




