ಕೊಡಗು ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಯಶಸ್ವಿಯಾಗಿ ಅಂಗಾಂಗ ದಾನ ಪ್ರಕ್ರಿಯೆ ನಡೆಯುವ ಮೂಲಕ ಹಲವು ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣ ದೊರೆತಿದೆ.
ಪೊನ್ನಂಪೇಟೆ ತಾಲೂಕಿನ ಅರವತೋಕ್ಲು ಗ್ರಾಮದ 46 ವರ್ಷದ ಪಿ.ಜಿ. ಡಾಲು ಅವರ ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆಯಲ್ಲಿ, ಅವರ ಕುಟುಂಬದವರು ಮಾನವೀಯ ನಿರ್ಧಾರ ತೆಗೆದುಕೊಂಡು ಅಂಗಾಂಗ ದಾನಕ್ಕೆ ಸಹಕರಿಸಿದರು. ಕುಟುಂಬದ ಈ ನಿರ್ಧಾರದಿಂದ ಅನೇಕ ರೋಗಿಗಳಿಗೆ ಜೀವದಾನ ಸಿಗಲಿರುವುದು ವಿಶೇಷವಾಗಿದೆ.
ದಾನಿಯಾದ ಡಾಲು ಅವರ ಮೂತ್ರಪಿಂಡಗಳು, ಕಣ್ಣುಗಳು ಹಾಗೂ ಹೃದಯ ಕವಾಟಗಳನ್ನು ವೈದ್ಯಕೀಯ ನಿಯಮಾನುಸಾರ ಮೈಸೂರಿನ ವೈದ್ಯಕೀಯ ತಂಡವು ಮರುಪಡೆದುಕೊಂಡಿತು. ಬಳಿಕ ಈ ಅಂಗಾಂಗಗಳನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಹಾಗೂ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸಾಗಿಸಿ ಅಗತ್ಯವಿರುವ ರೋಗಿಗಳಿಗೆ ಪ್ರತಿರೋಪಣೆಗೆ ಕ್ರಮ ಕೈಗೊಳ್ಳಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ. ಲೋಕೇಶ್, ಶಸ್ತ್ರಚಿಕಿತ್ಸಕ ಡಾ. ಸೋಮಶೇಖರ್ ಹಾಗೂ ಡಾ. ನಂಜುಂಡಸ್ವಾಮಿ ಅವರು, “ಅಂಗಾಂಗ ದಾನದಿಂದ ಹಲವು ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಡಾಲು ಕುಟುಂಬದ ಮಾನವೀಯ ಮನೋಭಾವ ಸಮಾಜಕ್ಕೆ ಮಾದರಿಯಾಗಿದೆ” ಎಂದು ಹೇಳಿದರು.
ಆರೋಗ್ಯ ಇಲಾಖೆ ಹಾಗೂ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆಯ ವೈದ್ಯಕೀಯ ತಂಡವು ದಾನಿದಾರರ ಕುಟುಂಬದ ಸೇವಾಭಾವವನ್ನು ಶ್ಲಾಘಿಸಿದೆ.
ಈ ಸುದ್ದಿ ಓದಿದ್ದೀರಾ?ಮೈಸೂರು | ಶಿಕ್ಷಣ ಕ್ಷೇತ್ರದ ಬದಲಾವಣೆಗಳ ಕುರಿತು ದೇವನೂರು ಮಹದೇವರ ಸಲಹೆ ಕೇಳಿದ ಸಚಿವ ಮಧು ಬಂಗಾರಪ್ಪ
ಇದು ಕೊಡಗು ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಮೊದಲ ಅಂಗಾಂಗ ದಾನ ಪ್ರಕ್ರಿಯೆಯಾಗಿದ್ದು, ಸಾರ್ವಜನಿಕರು ಅಂಗಾಂಗ ದಾನದ ಮಹತ್ವವನ್ನು ಅರಿತು ತಮ್ಮ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ದಾನಕ್ಕೆ ಮುಂದಾಗಬೇಕು. ಇದರಿಂದ ಅನೇಕ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ವೈದ್ಯರು ಮನವಿ ಮಾಡಿದ್ದಾರೆ.




