ಮಂಗಳೂರು | ದಸರಾ ರಜೆಯಲ್ಲೇ ಸೆಮಿಸ್ಟರ್ ಪರೀಕ್ಷೆ: ಸಂತ ಆಗ್ನೆಸ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

Date:

ದಸರಾ ಹಬ್ಬದ ರಜೆ ಹಾಗೂ ಪದವಿ ಸೆಮಿಸ್ಟರ್ ಪರೀಕ್ಷೆಗಳ ವೇಳಾಪಟ್ಟಿ ವಿಚಾರವಾಗಿ ಮಂಗಳೂರಿನ ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ ಎದುರು ಸೋಮವಾರ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಇದೀಗ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಗುಂಪೊಂದು ನಡೆಸಿದ ಪ್ರತಿಭಟನೆ, ಎಬಿವಿಪಿ ಕಾರ್ಯಕರ್ತರ ಉಪಸ್ಥಿತಿ, ಪೊಲೀಸರ ಮಧ್ಯಪ್ರವೇಶ, ಕಾರ್ಯಕರ್ತರ ವಶ ಹಾಗೂ ಬಳಿಕ ಕಾಲೇಜು ಆಡಳಿತ ಮಂಡಳಿ ಎರಡು ಪರೀಕ್ಷೆಗಳನ್ನು ಮುಂದೂಡಿರುವ ಬೆಳವಣಿಗೆಗಳು ವಿವಾದಕ್ಕೆ ಹೊಸ ತಿರುವು ನೀಡಿವೆ. ಈ ನಡುವೆ ಕಾಲೇಜಿನ ಪ್ರಾಂಶುಪಾಲರು ಪರೀಕ್ಷಾ ವೇಳಾಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದರೆ, ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ ಅವರು ಪ್ರತಿಭಟನೆಯ ಹಿಂದೆ ಕೋಮು ಪ್ರಚೋದನೆಯಿದೆ ಎಂದು ಆರೋಪಿಸಿದ್ದಾರೆ.

- Advertisement -

ಪರೀಕ್ಷೆ ಮುಂದೂಡಲು ಆಗ್ರಹಿಸಿ ಪ್ರತಿಭಟನೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

ಮಣಿಪುರ | ಜನಾಂಗೀಯ ಕಿಚ್ಚಿಗೆ ದ್ವೇಷ ರಾಜಕಾರಣದ ತುಪ್ಪ;...

ಮಣಿಪುರದಲ್ಲಿ ಕಳೆದ ಮೂರು ವರ್ಷಗಳಿಂದ ಮುಗಿಯದ ಜನಾಂಗೀಯ ರಕ್ತಪಾತಕ್ಕೆ, ಸಮುದಾಯಗಳ ನಡುವಿನ ಹಳೆಯ ವೈರತ್ವವನ್ನು ಮೀರಿ, ಸರ್ಕಾರದ ಪಕ್ಷಪಾತದ ರಾಜಕಾರಣ, ಆಡಳಿತಾತ್ಮಕ ವೈಫಲ್ಯ ಮತ್ತು ವಿಭಜನಾತ್ಮಕ ನೀತಿಗಳೂ ಕಾರಣವಾಗಿವೆ. ಉರಿಯುವ ಬೆಂಕಿಗೆ ತುಪ್ಪ...

ಖಾಸಗಿ ಹಾಗೂ ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿರುವ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಸೋಮವಾರದಿಂದ ಪದವಿ ಸೆಮಿಸ್ಟರ್ ಅಂತಿಮ ಪರೀಕ್ಷೆಗಳು ಆರಂಭವಾಗಿದ್ದವು. ದಸರಾ ಹಬ್ಬದ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಆಗ್ರಹಿಸಿದ ವಿದ್ಯಾರ್ಥಿಗಳ ಗುಂಪೊಂದು ಪರೀಕ್ಷೆ ಬಹಿಷ್ಕರಿಸಿ ಕಾಲೇಜಿನ ಗೇಟ್ ಎದುರು ಪ್ರತಿಭಟನೆ ನಡೆಸಿತು. ಎಬಿವಿಪಿ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನೆ ಕುರಿತು ಮಾಹಿತಿ ಪಡೆದ ಡಿಸಿಪಿ ಸ್ಯಾಮ್ ವರ್ಗೀಸ್ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು. ಆದರೆ, ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿದ ವಿದ್ಯಾರ್ಥಿಗಳು ತಮ್ಮ ಪಟ್ಟು ಸಡಿಲಿಸಲಿಲ್ಲ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ತಳ್ಳಾಟ-ನೂಕಾಟವೂ ಸಂಭವಿಸಿತು.

ಪರಿಸ್ಥಿತಿ ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿದರು. ಕಾಲೇಜಿನ ಪ್ರಾಂಶುಪಾಲರು ಸ್ಥಳಕ್ಕೆ ಆಗಮಿಸಿ ತಮ್ಮ ಮನವಿಯನ್ನು ಆಲಿಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟರು.

ಪರೊತೆಸತ

ಎರಡು ಪರೀಕ್ಷೆಗಳನ್ನು ಮುಂದೂಡಿದ ಕಾಲೇಜು ಆಡಳಿತ

ಪರೀಕ್ಷಾ ಅವಧಿ ಮುಗಿದ ಬಳಿಕ ಮಧ್ಯಾಹ್ನ ಸುಮಾರು 12.30ರ ವೇಳೆಗೆ ಕಾಲೇಜಿನ ರಿಜಿಸ್ಟ್ರಾರ್ ಹಾಗೂ ಪರೀಕ್ಷಾ ನಿಯಂತ್ರಕಿ ಶುಭರೇಖಾ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಅಕ್ಟೋಬರ್ 19 ಮತ್ತು 22ರಂದು ನಿಗದಿಯಾಗಿದ್ದ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು. ಇದರಿಂದ ವಿದ್ಯಾರ್ಥಿಗಳಿಗೆ ಐದು ದಿನಗಳ ರಜೆ ದೊರೆಯಲಿದೆ ಎಂಬ ಮಾಹಿತಿಯನ್ನೂ ನೀಡಿದರು.

ಆದರೆ, ಈ ನಿರ್ಧಾರಕ್ಕೆ ತಕ್ಷಣ ಒಪ್ಪದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ತಮ್ಮ ಬೇಡಿಕೆಯನ್ನು ಮುಂದುವರಿಸಿದರು. ಬಳಿಕ ಕಾಲೇಜು ಆಡಳಿತದ ಮನವೊಲಿಕೆ ಹಾಗೂ ಮಾತುಕತೆಯ ನಂತರ ಪ್ರಾಂಶುಪಾಲರನ್ನು ಭೇಟಿಯಾದ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಕೈಬಿಟ್ಟರು.

ಇನ್ನೊಂದೆಡೆ, ವಶಕ್ಕೆ ಪಡೆದಿದ್ದ ಎಬಿವಿಪಿ ಕಾರ್ಯಕರ್ತರನ್ನು ಕದ್ರಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಬಳಿಕ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಹಾಗೂ ಕಿಶೋರ್ ಕುಮಾರ್ ಅವರು ಠಾಣೆಗೆ ಭೇಟಿ ನೀಡಿ ಪೊಲೀಸರೊಂದಿಗೆ ಮಾತುಕತೆ ನಡೆಸಿದರು. ನಂತರ ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಯಿತು.

ರರರರರ

ವೇಳಾಪಟ್ಟಿ ಮೊದಲೇ ಪ್ರಕಟವಾಗಿತ್ತು: ಕಾಲೇಜಿನ ಸ್ಪಷ್ಟನೆ

ಪ್ರತಿಭಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾಲೇಜಿನ ಪರೀಕ್ಷಾ ನಿಯಂತ್ರಕಿ ಶುಭರೇಖಾ, ಪದವಿ ಸೆಮಿಸ್ಟರ್ ಪರೀಕ್ಷೆಗಳು ಪ್ರತಿವರ್ಷ ಅಕ್ಟೋಬರ್‌ನಲ್ಲಿ ನಡೆಯುತ್ತವೆ. 2026ರ ಪರೀಕ್ಷೆಗಳ ಕರಡು ವೇಳಾಪಟ್ಟಿಯನ್ನು ಸೆಪ್ಟೆಂಬರ್ 11ರಂದು ಪ್ರಕಟಿಸಿ, ವಿದ್ಯಾರ್ಥಿಗಳಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಯಾವುದೇ ಆಕ್ಷೇಪಣೆಗಳು ಸಲ್ಲಿಕೆಯಾಗಿರಲಿಲ್ಲ ಎಂದು ತಿಳಿಸಿದ್ದಾರೆ.

ಪರೀಕ್ಷೆಗಳ ನಡುವೆ ಹೆಚ್ಚಿನ ಅಂತರ ಇರಬೇಕು ಎಂಬ ವಿದ್ಯಾರ್ಥಿಗಳ ಕೋರಿಕೆಯಂತೆ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿತ್ತು. ನವೆಂಬರ್ 2ರಿಂದ ಇಂಟರ್ನ್‌ಶಿಪ್ ಹಾಗೂ ಹತ್ತು ದಿನಗಳ ಎನ್‌ಎಸ್‌ಎಸ್ ಶಿಬಿರಗಳು ನಡೆಯಲಿರುವುದರಿಂದ ಪರೀಕ್ಷಾ ದಿನಾಂಕಗಳನ್ನು ಬದಲಾಯಿಸುವುದು ಕಷ್ಟವಾಗುತ್ತಿದೆ. ಆದರೂ ವಿದ್ಯಾರ್ಥಿಗಳ ಕಳವಳವನ್ನು ಪರಿಗಣಿಸಿ ಅಕ್ಟೋಬರ್ 19 ಮತ್ತು 22ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕ ರಜಾದಿನಗಳಲ್ಲಿ ಪರೀಕ್ಷೆ ನಿಗದಿಪಡಿಸಿಲ್ಲ: ಪ್ರಾಂಶುಪಾಲರು

ಇದೇ ವಿಚಾರವಾಗಿ ಸೈಂಟ್ ಆಗ್ನೆಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಡಾ. ಎಂ. ವೆನಿಸ್ಸಾ ಅವರು ಪ್ರತ್ಯೇಕ ಪ್ರಕಟಣೆ ಹೊರಡಿಸಿ ಕಾಲೇಜಿನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಕಾಲೇಜಿನ ಅನುಮೋದಿತ ಶೈಕ್ಷಣಿಕ ಕ್ಯಾಲೆಂಡರ್‌ಗೆ ಅನುಗುಣವಾಗಿ ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಸರ್ಕಾರ ಘೋಷಿಸಿರುವ ಯಾವುದೇ ಸಾರ್ವಜನಿಕ ರಜಾದಿನಗಳಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಿಲ್ಲ ಎಂದು ಅವರು ತಿಳಿಸಿದ್ದಾರೆ.

2026ರ ಸೆಮಿಸ್ಟರ್ ಅಂತಿಮ ಪರೀಕ್ಷೆಗಳ ಕರಡು ವೇಳಾಪಟ್ಟಿಯನ್ನು ಸೆಪ್ಟೆಂಬರ್ 11ರಂದು ಪ್ರಕಟಿಸಲಾಗಿತ್ತು. ವೇಳಾಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಸಲ್ಲಿಸಲು, ಸ್ಪಷ್ಟೀಕರಣ ಪಡೆಯಲು ಅಥವಾ ಅಗತ್ಯ ಬದಲಾವಣೆಗಳನ್ನು ಸೂಚಿಸಲು ವಿದ್ಯಾರ್ಥಿಗಳಿಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಈ ಅವಧಿಯಲ್ಲಿ ಪರೀಕ್ಷಾ ದಿನಾಂಕಗಳ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆ ಅಥವಾ ಮನವಿ ಸಲ್ಲಿಕೆಯಾಗಿರಲಿಲ್ಲ. ಹೀಗಾಗಿ ಸೆಪ್ಟೆಂಬರ್ 26ರಂದು ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಪಠ್ಯಕ್ರಮದ ಭಾಗವಾಗಿ ಈಗಾಗಲೇ ಯೋಜಿಸಲಾಗಿರುವ ಇಂಟರ್ನ್‌ಶಿಪ್ ಮತ್ತು ಪ್ರಾಜೆಕ್ಟ್‌ಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕಿರುವ ಶೈಕ್ಷಣಿಕ ಬದ್ಧತೆಗಳನ್ನೂ ಪರಿಗಣಿಸಿ ವೇಳಾಪಟ್ಟಿಯನ್ನು ರೂಪಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಪ್ರತಿಭಟನೆಯ ಮಾಹಿತಿ ಸಾಮಾಜಿಕ ಜಾಲತಾಣಗಳಿಂದ ಲಭ್ಯ

ಪ್ರತಿಭಟನೆಯ ಕುರಿತು ಕಾಲೇಜಿಗೆ ಮೊದಲ ಬಾರಿಗೆ ಅಕ್ಟೋಬರ್ 11ರಂದು ಬೆಳಿಗ್ಗೆ 11.36ಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಲಭಿಸಿತ್ತು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸುವ ಮುನ್ನೆಚ್ಚರಿಕಾ ಕ್ರಮವಾಗಿ ಕಾಲೇಜು ಆಡಳಿತವು ಪೊಲೀಸ್ ಆಯುಕ್ತರ ಕಚೇರಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿತ್ತು ಎಂದು ಹೇಳಿದ್ದಾರೆ.

ಅಕ್ಟೋಬರ್ 12ರಂದು ಕಾಲೇಜು ಆಡಳಿತಕ್ಕೆ ಯಾವುದೇ ಪೂರ್ವ ಮಾಹಿತಿ ನೀಡದೆ ಅಥವಾ ಲಿಖಿತ ಮನವಿ ಸಲ್ಲಿಸದೆ ಕೆಲವು ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ಸಂಘದ ಮುಖಂಡರು ಪ್ರತಿಭಟನೆ ನಡೆಸಿ ಸಂಸ್ಥೆಯ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಆದಾಗ್ಯೂ, ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಕಳವಳವನ್ನು ಪರಿಗಣಿಸಿ ಸೌಹಾರ್ದಯುತ ಶೈಕ್ಷಣಿಕ ವಾತಾವರಣ ಕಾಪಾಡುವ ಉದ್ದೇಶದಿಂದ ಅಕ್ಟೋಬರ್ 19 ಮತ್ತು 22ರಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ಅಧಿಕೃತ ಮಾಧ್ಯಮಗಳ ಮೂಲಕ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕಾಲೇಜಿನ ಎಲ್ಲ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ನಿರ್ಧಾರಗಳು ಶೈಕ್ಷಣಿಕ ಅಗತ್ಯತೆಗಳು, ಸಂಸ್ಥೆಯ ನಿಯಮಾವಳಿಗಳು ಮತ್ತು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳ ನಿರ್ದೇಶನಗಳಿಗೆ ಅನುಗುಣವಾಗಿ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸೈಂಟ್ ಆಗ್ನೆಸ್ ಕಾಲೇಜು ಜಾತ್ಯತೀತತೆ, ಸಮಾನತೆ, ಎಲ್ಲರನ್ನೂ ಒಳಗೊಳ್ಳುವ ಮನೋಭಾವ, ಧಾರ್ಮಿಕ ಸಾಮರಸ್ಯ ಹಾಗೂ ಪರಸ್ಪರ ಗೌರವದ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ. ವಿದ್ಯಾರ್ಥಿಗಳು ಸಂಸ್ಥೆಯ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಗೌರವಿಸಿ ಶಿಸ್ತು ಹಾಗೂ ಘನತೆಯನ್ನು ಕಾಪಾಡಿಕೊಳ್ಳಬೇಕು. ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಅಥವಾ ಕಾಲೇಜು ಆವರಣದ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಎಂ. ವೆನಿಸ್ಸಾ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯ ಹಿಂದೆ ಪ್ರಚೋದನೆ ಇದೆ: ಪ್ರಶಾಂತ್ ಜತ್ತನ್ನ ಆರೋಪ

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನಿರ್ದೇಶಕ ಪ್ರಶಾಂತ್ ಜತ್ತನ್ನ, ಸೈಂಟ್ ಆಗ್ನೆಸ್ ಕಾಲೇಜಿನ ಎದುರು ಎಬಿವಿಪಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ಹಿಂದೆ ಹಿಂದೂ ಮುಖಂಡ ಪ್ರಮೋದ್ ಮುತಾಲಿಕ್ ಅವರ ಪ್ರಚೋದನೆ ಇದೆ ಎಂದು ಆರೋಪಿಸಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಇಂತಹ ಪ್ರತಿಭಟನೆ ನಡೆಸಿರುವುದು ಖಂಡನೀಯ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂ ಬಾಂಧವರ ನವರಾತ್ರಿ ಸಂಭ್ರಮದಲ್ಲಿ ಜಾತಿ-ಮತ ಭೇದವಿಲ್ಲದೆ ಭಾಗವಹಿಸುವುದಕ್ಕೆ ಯಾರ ವಿರೋಧವೂ ಇಲ್ಲ. ಎಲ್ಲ ಧರ್ಮಗಳ ಹಬ್ಬಗಳಿಗೂ ಪರಸ್ಪರ ಗೌರವ ನೀಡಬೇಕು ಎಂಬುದು ಮುಖ್ಯ. ಆದರೆ, ಮಂಗಳೂರು ವಿಶ್ವವಿದ್ಯಾನಿಲಯದ ವ್ಯವಸ್ಥೆಯಲ್ಲಿ ಆಯುಧಪೂಜೆ ಮತ್ತು ವಿಜಯದಶಮಿ ಹೊರತುಪಡಿಸಿ ದಸರಾ ಸಂದರ್ಭದಲ್ಲಿ ಹೆಚ್ಚುವರಿ ರಜೆ ನೀಡುವ ಪರಿಪಾಠವಿಲ್ಲ ಎಂದು ಅವರು ಹೇಳಿದ್ದಾರೆ.

ಸೈಂಟ್ ಆಗ್ನೆಸ್ ಕಾಲೇಜು ಸ್ವಾಯತ್ತ ಶಿಕ್ಷಣ ಸಂಸ್ಥೆಯಾಗಿದ್ದು, ಪರೀಕ್ಷೆಗಳ ದಿನಾಂಕಗಳನ್ನು ನಿಗದಿಪಡಿಸುವ ಅಧಿಕಾರವನ್ನು ಸರ್ಕಾರವೇ ನೀಡಿದೆ. ಕಾಲೇಜು ಸರ್ಕಾರ ಘೋಷಿಸಿರುವ ಸಾರ್ವಜನಿಕ ರಜಾದಿನಗಳಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಿಲ್ಲ ಎಂಬ ಆಡಳಿತ ಮಂಡಳಿಯ ಸ್ಪಷ್ಟನೆಯನ್ನು ಉಲ್ಲೇಖಿಸಿದ ಅವರು, ಈ ವಿಚಾರವನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆಯಲ್ಲಿ ಭಾಗವಹಿಸಿ ಅಶಾಂತಿ ಸೃಷ್ಟಿಸಿದ ಎಬಿವಿಪಿ ಮುಖಂಡರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಅವರು, ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದೂ ಒತ್ತಾಯಿಸಿದ್ದಾರೆ.

ಮುತಾಲಿಕ್ ವಿರುದ್ಧವೂ ಕ್ರಮಕ್ಕೆ ಆಗ್ರಹ

ಕೆಲವು ದಿನಗಳ ಹಿಂದೆ ದಸರಾ ರಜೆಯ ವಿಚಾರವಾಗಿ ಪ್ರಮೋದ್ ಮುತಾಲಿಕ್ ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ವಿರುದ್ಧ ಬೆದರಿಕೆ ಹಾಕಿದ್ದರು ಎಂದು ಪ್ರಶಾಂತ್ ಜತ್ತನ್ನ ಆರೋಪಿಸಿದ್ದಾರೆ. ಆ ಸಂದರ್ಭದಲ್ಲೇ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದರೆ ಸೈಂಟ್ ಆಗ್ನೆಸ್ ಕಾಲೇಜಿನ ಎದುರು ಇಂತಹ ಪ್ರತಿಭಟನೆ ನಡೆಯುತ್ತಿರಲಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

ಕೋಮು ಪ್ರಚೋದನೆಯ ಮೂಲಕ ಸಮಾಜದ ಶಾಂತಿಗೆ ಭಂಗ ತರುವ ಪ್ರಯತ್ನಗಳನ್ನು ತಡೆಯಬೇಕು ಎಂದು ಆಗ್ರಹಿಸಿರುವ ಅವರು, ಕ್ರೈಸ್ತ ಶಿಕ್ಷಣ ಸಂಸ್ಥೆಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸುತ್ತಿವೆ. ಇಂತಹ ಸಂಸ್ಥೆಗಳು ಇತರ ಧರ್ಮಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುತ್ತಿಲ್ಲ. ಬದಲಾಗಿ ವಿವಿಧ ಧರ್ಮಗಳ ಹಬ್ಬಗಳನ್ನು ಒಟ್ಟಾಗಿ ಆಚರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯದ ಭಾವನೆ ಬೆಳೆಸುತ್ತಿವೆ ಎಂದು ಹೇಳಿದ್ದಾರೆ.

ಶಿಕ್ಷಣದ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ದ್ವೇಷದ ಭಾವನೆ ಮೂಡಿಸುವ ಸಂಘಟನೆಗಳು ಹಾಗೂ ವ್ಯಕ್ತಿಗಳ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತರೀಕೆರೆ | ಅ. 15ರ ವರೆಗೆ ಕೈಗಾರಿಕಾ ತರಬೇತಿಗೆ ಅವಕಾಶ 

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಪಟ್ಟಣದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ...

ಮಂಗಳೂರು | ಬರದ ಸಂಕಷ್ಟದ ನಡುವೆ ಕಂಬಳ ಬೇಡ: ಕೋಣಗಳ ಮಾಲೀಕರಿಗೆ ಎ.ಟಿ. ರಾಮಸ್ವಾಮಿ ಮನವಿ

ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರ ಪರಿಸ್ಥಿತಿಯಿಂದ ತತ್ತರಿಸುತ್ತಿದ್ದು, ರೈತರು ಹಾಗೂ...

ಚಿಕ್ಕಮಗಳೂರು | ಮಹಿಳೆಗೆ ದೌರ್ಜನ್ಯ ಆರೋಪದಡಿ ಅರ್ಚಕ ಬಂಧನ 

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಮೂಲದ ಅರ್ಚಕ ಸತೀಶ್ ಪಾತ್ರಿ ಎಂಬಾತ ದೆವ್ವ...

ಚಿಕ್ಕಮಗಳೂರು | SIR ವಿರೋಧ: ಫಾರಂ 7 ಮತ ವಂಚನೆ ಖಂಡಿಸಿ; SIR ವಿರೋಧಿ ಕರ್ನಾಟಕ ಪ್ರತಿಭಟನೆ 

SIR ವಿರೋಧಿಸಿ, ಚುನಾವಣಾ ಆಯುಕ್ತರಾದ ಜ್ಞಾನೇಶ್‌ಕುಮಾರ್‌ರವರನ್ನು ವಜಾಗೊಳಿಸಲು ಮತ್ತು ಫಾರಂ ನಂ.7...