ಮೆಣಸಿನಕಾಯಿ ವ್ಯಾಪಾರದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಸರಕು ಖರೀದಿಸಿ, ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ನಗರದ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2024ರ ಮೇ 5ರಿಂದ 2026ರ ಫೆಬ್ರುವರಿ 25ರವರೆಗೆ ₹68.77 ಲಕ್ಷ ಮೌಲ್ಯದ ಮೆಣಸಿನಕಾಯಿಯನ್ನು ಸಾಲದ ರೂಪದಲ್ಲಿ ಪಡೆಯಲಾಗಿತ್ತು. ಆದರೆ, ಒಟ್ಟು ಮೊತ್ತದಲ್ಲಿ ಕೇವಲ ₹5.60 ಲಕ್ಷ ಪಾವತಿಸಿ, ಉಳಿದ ₹62.77 ಲಕ್ಷವನ್ನು ಪಾವತಿಸದೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹೈದರಾಬಾದ್‌ನ ಕಂಪನಿಯ ಹೆಸರಿನಲ್ಲಿ ಮೆಣಸಿನಕಾಯಿ ಖರೀದಿಸಿ, ಅದನ್ನು ಯಾದಗಿರಿ ಜಿಲ್ಲೆಯ ಶಹಾಪುರದ ಶೀತಲೀಕರಣ ಘಟಕದಲ್ಲಿ ಸಂಗ್ರಹಿಸಿಡಲಾಗಿತ್ತು. ಬಳಿಕ ಸರಕಿನ ಹಣ ಪಾವತಿಸದೆ ವಂಚಿಸಲಾಗಿದೆ ಎಂದು ನಗರದ ಹುಸೇನ್ ಸ್ಪೇಸಿಸ್ ಕಂಪನಿಯ ಮ್ಯಾನೇಜರ್ ಮೊಹಮ್ಮದ್ ಇಸ್ಮಾಯಿಲ್ ಇನಾಮ್‌ದಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನು ಓದಿದ್ದೀರಾ? ಕಲಬುರಗಿ | ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ವ್ಯಾಪಾರದ ಉದ್ದೇಶದಿಂದ ಸರಕುಗಳನ್ನು ಪಡೆದುಕೊಂಡು ಬಾಕಿ ಹಣ ಪಾವತಿಸದಿರುವುದರಿಂದ ಕಂಪನಿಗೆ ₹62.77 ಲಕ್ಷ ನಷ್ಟವಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ದೂರಿನ ಮೇರೆಗೆ ರಾಘವೇಂದ್ರ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.





