ಮಂಗಳೂರು ವಿಶ್ವವಿದ್ಯಾಲಯ 44ನೇ ಘಟಿಕೋತ್ಸವದ ಅಂಗವಾಗಿ ಅಕ್ಷರ ಸಂತ ಹಾಗೂ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಸೇರಿದಂತೆ ಯಕ್ಷಗಾನ ದಿಗ್ಗಜ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ) ಮತ್ತು ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಘೋಷಿಸಿದೆ.
ಮಾ.28ರಂದು ಬೆಳಿಗ್ಗೆ 11ಕ್ಕೆ ಮಂಗಳ ಸಭಾಂಗಣದಲ್ಲಿ ನಡೆಯುವ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹೋಟ್ ಅವರು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಭಾಗವಹಿಸಲಿದ್ದು, ಸಂಸದ ಕ್ಯಾ. ಬ್ರಿಜೇಶ್ ಚೌಟಿ ಘಟಿಕೋತ್ಸವ ಭಾಷಣ ಮಾಡುವರು ಎಂದು ಕುಲಪತಿ ಪ್ರೊ. ಪಿ.ಎಲ್. ಧರ್ಮ ತಿಳಿಸಿದ್ದಾರೆ.
ಈ ಘಟಿಕೋತ್ಸವದಲ್ಲಿ ಒಟ್ಟು 162 ಸಂಶೋಧನಾ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ ಪಡೆಯಲಿದ್ದಾರೆ. ಇದರಲ್ಲಿ 74 ಮಹಿಳೆಯರು (45.67%) ಮತ್ತು 88 ಪುರುಷರು (54.32%) ಇದ್ದು, 11 ಅಂತಾರಾಷ್ಟ್ರೀಯ ವಿದ್ಯಾರ್ಥಿಗಳೂ ಸೇರಿದ್ದಾರೆ.
ಇದಲ್ಲದೆ 56 ಚಿನ್ನದ ಪದಕಗಳು ಹಾಗೂ 57 ನಗದು ಬಹುಮಾನಗಳನ್ನು ನೀಡಲಾಗುತ್ತದೆ. ವಿವಿಧ ಪದವಿ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ಪ್ರಥಮ ರ್ಯಾಂಕ್ ಪಡೆದ 69 ವಿದ್ಯಾರ್ಥಿಗಳಿಗೆ ಬ್ಯಾಂಕ್ ಪ್ರಮಾಣ ಪತ್ರ ನೀಡಲಾಗುವುದು.
ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ. ದೇವೇಂದ್ರಪ್ಪ, ಗಣೇಶ್ ಸಂಜೀವ (ಪ್ರಭಾರ), ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.





