ಕರಾವಳಿ ನಿಯಂತ್ರಣ ವಲಯ (CRZ) ನಿಯಮಗಳನ್ನು ಪಾಲಿಸುವಂತೆ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು (NGT) ನಿರ್ದೇಶನ ನೀಡಿದೆ. ನೇತ್ರಾವತಿ ನದಿ ತೀರದ ಅಭಿವೃದ್ಧಿ ಯೋಜನೆಯನ್ನು ನಿಯಮಗಳ ಅಡಿಯಲ್ಲಿ ಮುಂದುವರೆಸಲು ಅವಕಾಶ ನೀಡಿದೆ. ಯೋಜನೆಯ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣವನ್ನು ವಜಾಗೊಳಿಸಿದೆ. ಇದರಿಂದ ಮಂಗಳೂರಿನ ನೇತ್ರಾವತಿ ನದಿ ತೀರದ ಅಭಿವೃದ್ಧಿ ಯೋಜನೆಗೆ ತ್ವರಿತವಾಗಿ ಮುಂದುವರೆಯುವ ಸಾಧ್ಯತೆ ಇದೆ.
ಯೋಜನೆಯ ಕೆಲವು ಕಾಮಗಾರಿಗಳು ನಿಯಮಗಳನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿ ಎನ್‌ಜಿಟಿಗೆ ದೂರು ದಾಖಲಿಸಲಾಗಿತ್ತು. ಪ್ರಕರಣವನ್ನು ನ್ಯಾಯಮೂರ್ತಿ ಪುಷ್ಪಾ ಸತ್ಯನಾರಾಯಣ ಮತ್ತು ತಜ್ಞ ಸದಸ್ಯ ಪ್ರಶಾಂತ್ ಗಾರ್ಗವ ಅವರಿದ್ದ ಎನ್‌ಜಿಟಿ ದಕ್ಷಿಣ ವಲಯ ಪೀಠವು ವಿಚಾರಣೆ ನಡೆಸಿದೆ.
ಯೋಜನೆಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಯೋಜನೆ ಕುರಿತು ಪರಿಶೀಲನೆ ನಡೆಸಿದ್ದ ಜಂಟಿ ಸಮಿತಿಯ ವರದಿಯನ್ನು ಪೀಠವು ಅವಲೋಕಿಸಿದೆ. ಆದಾಗ್ಯೂ, “ಕಂಡ್ಲಾ ಸಸ್ಯಗಳಿಗೆ ಹಾನಿಯಾಗಿದೆ, ಮರಗಳನ್ನು ತೆರವುಗೊಳಿಸಲಾಗಿದೆ ಹಾಗೂ ಹಳ್ಳಗಳುಳ್ಳ ಪ್ರದೇಶದಲ್ಲಿ ಮಣ್ಣನ್ನು ಸುರಿಯಲಾಗಿದೆ. ಇದೆಲ್ಲವನ್ನೂ ವರದಿಯು ಒಳಗೊಂಡಿಲ್ಲ” ಎಂದು ಅರ್ಜಿದಾರರೊಬ್ಬರು ಸಮಿತಿಯ ವರದಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೂ, ವರದಿಯನ್ನು ಗಮನಿಸಿದ ಪೀಠವು, “ಜಂಟಿ ಸಮಿತಿಯು ಪರಿಸರ ಹಾನಿಯ ಯಾವುದೇ ಅಂಶಗಳನ್ನು ತನ್ನ ವರದಿಯಲ್ಲಿ ದಾಖಲಿಸಿಲ್ಲ” ಎಂದು ಹೇಳಿದೆ. ಅಷ್ಟೇ ಅಲ್ಲದೆ, ಕೆಲವು ಸಣ್ಣ ಭಾಗಗಳಲ್ಲಿ ಮಾತ್ರ ‘ಅಲ್ಲಲ್ಲಿ ಕೆಲವು ಕಂಡ್ಲಾ ಸಸ್ಯಗಳಿವೆ’ ಮತ್ತು ಯಾವುದೇ ಗಮನಾರ್ಹ ಬದಲಾವಣೆಗಳು ಕಂಡುಬಂದಿಲ್ಲ ಎಂಬ ಜಿಲ್ಲಾಧಿಕಾರಿಗಳ ಮತ್ತೊಂದು ವರದಿಯನ್ನು ಪೀಠವು ಉಲ್ಲೇಖಿಸಿ, ಪ್ರಕರಣವನ್ನು ವಜಾಗೊಳಿಸಿದೆ.



