ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಭಾರೀ ಅಂತರದಲ್ಲಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಗ್ಯಾರೆಂಟಿ ಯೋಜನೆಗಳು ಪಕ್ಷಕ್ಕೆ ಪ್ರಮುಖ ಶಕ್ತಿಯಾಗಿದ್ದು, ಪಕ್ಷಕ್ಕೆ ಮತ ತರಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾವಣಗೆರೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, “ಬಿಜೆಪಿಯವರು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ. ಸರ್ಕಾರ ಸುಮಾರು ₹1.31 ಲಕ್ಷ ಕೋಟಿ ವೆಚ್ಚ ಮಾಡಿ ಜನರ ಖಾತೆಗೆ ನೇರ ಲಾಭ ನೀಡುತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೇ ₹535 ಕೋಟಿ ವೆಚ್ಚ ಮಾಡಲಾಗಿದೆ” ಎಂದು ವಿವರಿಸಿದರು.
“ಕಾಂಗ್ರೆಸ್ ಸರ್ಕಾರ ಯೂನಿವರ್ಸಲ್ ಬೇಸಿಕ್ ಇಂಕಮ್ ತತ್ವದಡಿ ತಳಸಮುದಾಯದವರಿಗೆ ಸಹಾಯ ಮಾಡುತ್ತಿದ್ದು, ಗ್ಯಾರೆಂಟಿಗಳ ಮೂಲಕ ಮಧ್ಯವರ್ತಿಗಳಿಲ್ಲದೆ ನೇರವಾಗಿ ಆರ್ಥಿಕ ನೆರವು ನೀಡಲಾಗುತ್ತಿದೆ” ಎಂದರು.
“ನಮ್ಮ ಸರ್ಕಾರ ಕಡಿಮೆ ಸಾಲ ಮಾಡಿಕೊಂಡು ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ದೇಶದ ಸಾಲವು ಗಣನೀಯವಾಗಿ ಹೆಚ್ಚಾಗಿದೆ. ಕೇಂದ್ರ ಹಾಗೂ ಬಿಜೆಪಿ ಅವಧಿಯಲ್ಲಿ ಹೆಚ್ಚು ಸಾಲ ಮಾಡಲಾಗಿದೆ” ಎಂದು ಟೀಕಿಸಿದರು.
“ರಾಜ್ಯದ ಜಿಡಿಪಿ ಮತ್ತು ಜಿಎಸ್ಟಿ ಸಂಗ್ರಹಣೆ ಉತ್ತಮವಾಗಿದ್ದು, ಕರ್ನಾಟಕದ ಬಜೆಟ್ ಕೇಂದ್ರ ಬಜೆಟ್ಗಿಂತ ಉತ್ತಮವಾಗಿದೆ. ರಾಜ್ಯದ ಆರ್ಥಿಕ ಸ್ಥಿತಿ ಸುಭದ್ರವಾಗಿದ್ದು, ಬೆಲೆ ಏರಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವೇ ಕಾರಣ. ಬಿಜೆಪಿಯ ಅಪಪ್ರಚಾರದ ನಡುವೆಯೂ ಹಿಂದಿನ ಉಪಚುನಾವಣೆಗಳಲ್ಲಿ ಜನ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಈ ಬಾರಿಯೂ ಜನರ ಬೆಂಬಲ ಸಿಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿದ್ದೀರಾ? ಅಂಬೇಡ್ಕರ್ ‘ಸಂವಿಧಾನ ಶಿಲ್ಪಿ’ಯಷ್ಟೇ ಅಲ್ಲ; RBIಗೆ ಅಡಿಪಾಯ ಹಾಕಿದ ಆರ್ಥಿಕತೆಯ ಬಲಭೀಮ
“ಕುಟುಂಬ ರಾಜಕಾರಣ ಎಲ್ಲ ಕಡೆಯೂ ಇದೆ. ಬಿಜೆಪಿಯ ಯಡಿಯೂರಪ್ಪ ಹಾಗೂ ದೇವೇಗೌಡರ ಜೆಡಿಎಸ್ ನಾಯಕರ ಕುಟುಂಬಗಳಲ್ಲಿ ಇದೆ. ನಾವು ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದೇವೆ” ಎಂದು ಹೇಳಿ ಸಮರ್ಥಿಸಿಕೊಂಡರು.





