ಅಂಬೇಡ್ಕರ್ ಅವರ ದೃಷ್ಟಿಕೋನ ಪ್ರಸ್ತುತ ಭಾರತಕ್ಕೆ ಹಣದುಬ್ಬರ ನಿಯಂತ್ರಣ, ಆರ್ಥಿಕ ಸೇರ್ಪಡೆ, ಸಮಾನ ವಿತರಣೆ ಮತ್ತು ಯೋಜಿತ ಅಭಿವೃದ್ಧಿಗೆ ಮತ್ತಷ್ಟು ಬಲವನ್ನು ನೀಡುತ್ತದೆ. ಬಾಬಾಸಾಹೇಬರ ಆರ್ಥಿಕ ದರ್ಶನವನ್ನು ಹೆಚ್ಚು ಪ್ರಚಾರ ಮಾಡುವುದು ಭಾರತದ ಸಮಗ್ರ ಅಭಿವೃದ್ಧಿಗೆ ಅಗತ್ಯವಾಗಿದೆ.
ಸ್ವಾತಂತ್ರ್ಯೋತ್ತರ ಭಾರತದ ನವನಿರ್ಮಾಣಕ್ಕೆ ಅಂಬೇಡ್ಕರ್ ಕೊಡುಗೆ ಅಗಾಧವಾಗಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಎಂಬ ಬಣ್ಣನೆಯ ಹೊರತಾಗಿಯೂ ಅಂಬೇಡ್ಕರ್ ಹಾಗೂ ಅವರ ವಿಚಾರಗಳ ಬಗ್ಗೆ ತಿಳಿಯಬೇಕಾದ್ದು ಅಪಾರವಾಗಿದೆ. ಬ್ರಿಟಿಷರ ಕಾಲದಲ್ಲಿ ಆರಂಭಗೊಂಡ ಭಾರತೀಯ ರಿಸರ್ವ್ ಬ್ಯಾಂಕ್(RBI) ಜತೆಗೆ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಇರುವ ಸಂಬಂಧದ ಕುರಿತು ಹೆಚ್ಚು ಬೆಳಕು ಬಿದ್ದಿಲ್ಲ.
ಅರ್ಥಶಾಸ್ತ್ರ ಅವರ ನೆಚ್ಚಿನ ವಿಷಯವಾಗಿತ್ತು ಮತ್ತು ಅವರು ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ್ದರು. ಆದರೆ, ಅರ್ಥಶಾಸ್ತ್ರ ಕ್ಷೇತ್ರದಲ್ಲಿನ ಅವರ ಸಾಧನೆಗಳನ್ನು ಕಡೆಗಣಿಸಿರುವುದು ವಿಷಾದನೀಯ. ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮಾರ್ತ್ಯ ಸೇನ್ ಅವರು ಅಂಬೇಡ್ಕರ್ ಅವರನ್ನು ‘ನನ್ನ ಅರ್ಥಶಾಸ್ತ್ರದ ಪಿತಾಮಹ’ ಎಂದು ಕರೆದಿರುವುದು ಶ್ಲಾಘನೀಯ.
‘ದಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್’ನಲ್ಲಿ ಅಂಬೇಡ್ಕರ್ ಓದಿರುವುದರ ನೆನಪಿಗಾಗಿ ಲಂಡನ್‌ನ ಕಿಂಗ್ ಹೆನ್ರಿ ರಸ್ತೆಯಲ್ಲಿ ನಾಲ್ಕು ಅಂತಸ್ತಿನ ಅಂಬೇಡ್ಕರ್ ಹೌಸ್ ಇದೆ. ಈ ಕಟ್ಟಡವು ನೆಲಮಾಳಿಗೆ, ಸಭಾಂಗಣ, ಅಧ್ಯಯನ ಕೊಠಡಿ ಮತ್ತು ಹಿಂಭಾಗದಲ್ಲಿ ಉದ್ಯಾನ, ವಾಚನಾಲಯ ಹೊಂದಿದೆ. ಕಂಚಿನ ಅಂಬೇಡ್ಕರ್ ಪ್ರತಿಮೆ ಮತ್ತು ಹೂದೋಟಗಳಿಂದ ಕೂಡಿದೆ. ಜತೆಗೆ ಬಾಬಾಸಾಹೇಬರ ಭಾವಚಿತ್ರಗಳು ಮತ್ತು ಅವರ ಜೀವನದ ವಿವಿಧ ಘಟನೆಗಳ ಚಿತ್ರಗಳನ್ನು ಹಾಕಲಾಗಿದೆ.
1935ರ ಏಪ್ರಿಲ್ 1ರಂದು ಆರಂಭಗೊಂಡ ಆರ್‌ಬಿಐಗೆ ಅಂಬೇಡ್ಕರ್ ಅವರ ಆರ್ಥಿಕ ಪರಿಕಲ್ಪನೆಯೇ ಅಡಿಪಾಯ. ಭಾರತಕ್ಕೆ ಸ್ವಾತಂತ್ರ್ಯ ಬರುವ 12 ವರ್ಷಗಳ ಹಿಂದೆಯೇ ಅಂಬೇಡ್ಕರ್ ಅವರ ದೃಷ್ಟಿಕೋನವನ್ನು ಆಧರಿಸಿ ಆರ್‌ಬಿಐಯನ್ನು ‘ಬ್ರಿಟಿಷ್ ರಾಜ್’ ಸ್ಥಾಪಿಸಿತ್ತು. ಭಾರತದಲ್ಲಿ ರಿಸರ್ವ್ ಬ್ಯಾಂಕ್ ಸ್ಥಾಪನೆಯ ನೀಲನಕ್ಷೆಯನ್ನು ಸಿದ್ಧಪಡಿಸಿದರು. ಅಂಬೇಡ್ಕರ್ ಅವರ ಪ್ರಭಾವಶಾಲಿ ಪುಸ್ತಕ The Problem of the Rupee: Its Origin and Its Solution(1923) ಹಿಲ್ಟನ್ ಯಂಗ್ ಕಮಿಷನ್(ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್)ನನ್ನು ಬಲವಾಗಿ ಪ್ರಭಾವಿಸಿತು. 1926ರಲ್ಲಿ ಕಮಿಷನ್‌ಗೆ ಅವರು ಮಂಡಿಸಿದ ಮಾರ್ಗಸೂಚಿಗಳು, ಕಾರ್ಯಶೈಲಿ ಮತ್ತು ದೃಷ್ಟಿಕೋನದ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕನ್ನು ರೂಪಿಸಲಾಗಿದೆ. ಹೀಗಾಗಿ ಅಂಬೇಡ್ಕರ್ ಅವರ ಆರ್ಥಿಕ ವಿಚಾರಗಳನ್ನು ಆಧರಿಸಿಯೇ ಆರ್‌ಬಿಐ ರೂಪಿತಗೊಂಡಿದೆ ಎಂಬುದು ನಿಚ್ಚಳ.
ಆರಂಭದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕೇಂದ್ರ ಕಚೇರಿಯನ್ನು ಕೋಲ್ಕತ್ತಾದಲ್ಲಿ ಹೊಂದಿತ್ತು ಮತ್ತು ನಂತರ 1937ರಲ್ಲಿ ಮುಂಬೈಗೆ ಸ್ಥಳಾಂತರಿಸಲಾಯಿತು. 1949ರಲ್ಲಿ ಸಾರ್ವಜನಿಕ ವಲಯದ ಘಟಕವಾಗುವ ಮೊದಲು ಇದು ಖಾಸಗಿ ವಲಯದಲ್ಲಿತ್ತು.
1923ರಲ್ಲಿ ಭಾರತಕ್ಕೆ ಮರಳಿದ ನಂತರ ಡಾ. ಅಂಬೇಡ್ಕರ್ ಅವರ ಸಾಮಾಜಿಕ ಮತ್ತು ರಾಜಕೀಯ ಕೆಲಸಗಳಿಂದಾಗಿ ಅರ್ಥಶಾಸ್ತ್ರಕ್ಕೆ ಅವರ ಕೊಡುಗೆಯನ್ನು ಕಡೆಗಣಿಸಲಾಗುತ್ತದೆ. ಆದರೆ ಅವರ ಆರ್ಥಿಕ ಉನ್ನತಿ, ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಭಾಗವಹಿಸುವಿಕೆಯ ನಡುವಿನ ಸಂಬಂಧದ ಬಗ್ಗೆಯ ನಂಬಿಕೆ ಇಂದಿಗೂ ಪ್ರಸ್ತುತ. ಅವರು ಕೃಷಿ-ಕೈಗಾರಿಕಾ ಸಮತೋಲನ, ರಾಜ್ಯ ಮಾಲೀಕತ್ವ, ಬಡತನ ನಿರ್ಮೂಲನೆ, ಕನಿಷ್ಠ ವೇತನ, 8 ಗಂಟೆ ಕೆಲಸದ ಸಮಯ ಮುಂತಾದವುಗಳನ್ನು ಪ್ರತಿಪಾದಿಸಿದರು. ಇವುಗಳು ಪ್ರಸ್ತುತ ಲೇಬರ್ ಕೋಡ್‌ಗಳಲ್ಲಿ ಪ್ರತಿಫಲಿತವಾಗಿವೆ.
ಆರ್ಥಿಕ ಸಮಸ್ಯೆಗಳ ಬಗ್ಗೆ ಡಾ. ಅಂಬೇಡ್ಕರ್ ಅವರ ವಿಧಾನವು ಪ್ರಾಯೋಗಿಕವಾಗಿತ್ತು. ಭಾರತ ಹಿಂದುಳಿಯಲು ಭೂ ವ್ಯವಸ್ಥೆಯಲ್ಲಿನ ಅಸಮಾನ ಹಂಚಿಕೆ, ಸುಧಾರಣೆಗಳ ವಿಳಂಬವೇ ಕಾರಣವೆಂದು ಹೇಳಿದರು. ಆರ್ಥಿಕ ದಕ್ಷತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಪ್ರಜಾಪ್ರಭುತ್ವ ಸಮಾಜವಾದವು ಪರಿಹಾರವಾಗಿದೆ ಎಂಬುದನ್ನು ಪ್ರತಿಪಾದಿಸಿದರು. ಅವರು ಲೈಸೆಜ್-ಫೇರ್ ಮತ್ತು ವೈಜ್ಞಾನಿಕ ಸಮಾಜವಾದವನ್ನು ವಿರೋಧಿಸಿದರು. ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಗ್ರಾಮೀಣ ಆರ್ಥಿಕತೆಯ ಪರಿವರ್ತನೆಯಿಂದ ಸಾಧ್ಯವೆಂದು ನಂಬಿದ್ದರು.
ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಸೃಷ್ಟಿಸಿದ ಬಂಡವಾಳಶಾಹಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಬೇಕೆಂದು ಡಾ. ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದರು. ಅವರ ಪ್ರಬಂಧವು ಆ ಕಾಲದ ಅತ್ಯಂತ ನಿರ್ಣಾಯಕ ಆರ್ಥಿಕ ಸಮಸ್ಯೆಯಾಗಿದ್ದ ರೂಪಾಯಿಯ ಅಪಮೌಲ್ಯೀಕರಣ ಕುರಿತದ್ದಾಗಿತ್ತು. ಹಣಕಾಸು ಆಯೋಗದ ವರದಿಯನ್ನು ಪ್ರತಿ 5 ವರ್ಷಗಳ ಅಂತರದಲ್ಲಿ ಮಂಡಿಸಬೇಕೆಂಬುದು ಅವರೇ ನೀಡಿದ ಮಾರ್ಗಸೂಚಿ.
ಬಾಬಾ ಸಾಹೇಬರು ದೊಡ್ಡ ಕೈಗಾರಿಕೆಗಳ ಸ್ಥಾಪನೆಯನ್ನು ಪ್ರತಿಪಾದಿಸಿದರು. ಜೊತೆ ಜೊತೆಗೆ ʼಕೃಷಿʼ ಸಮಾಜದ ಬೆನ್ನೆಲುಬು ಎಂದು ಗುರುತಿಸಿದರು. ದೇಶದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರವನ್ನು ಒದಗಿಸುವುದರಿಂದ ಕೃಷಿಯನ್ನು ನಿರ್ಲಕ್ಷಿಸಬಾರದು. ಕೈಗಾರಿಕೆಗಳು ಕಚ್ಚಾ ವಸ್ತುಗಳಿಗಾಗಿ ಕೃಷಿಯನ್ನೇ ಅವಲಂಬಿಸಿವೆ ಎಂಬುದನ್ನು ಒತ್ತಿ ಹೇಳಿದರು.
ಕೃಷಿಯ ಆಧಾರದ ಮೇಲೆ ಆಧುನಿಕ ಭಾರತದ ಅಡಿಪಾಯ ಹಾಕಲಾಗುವುದು ಎಂದ ಅಂಬೇಡ್ಕರ್ ಅವರು, ಕೃಷಿ ಕ್ಷೇತ್ರದ ಮರುಸಂಘಟನೆ ಮತ್ತು ಕೃಷಿ ಭೂಮಿಯ ರಾಷ್ಟ್ರೀಕರಣಕ್ಕಾಗಿ ಕ್ರಾಂತಿಕಾರಿ ಕ್ರಮಗಳನ್ನು ಪ್ರತಿಪಾದಿಸಿದರು. ಅಲ್ಲದೆ, ‘ಅತ್ಯುನ್ನತ ಉತ್ಪಾದಕತೆಯನ್ನು ಸಾಧಿಸುವ ಮತ್ತು ಖಾಸಗಿ ಉದ್ಯಮಕ್ಕೆ ಯಾವುದೇ ಬೇಡಿಕೆಯಿಲ್ಲದೆ ಸಂಪತ್ತನ್ನು ಸಮಾನವಾಗಿ ವಿತರಿಸುವಂತೆ ಜನತೆಯ ಆರ್ಥಿಕ ಬದುಕನ್ನು ಸರ್ಕಾರವು ಯೋಜಿಸಬೇಕು’ ಎಂದು ಶಿಫಾರಸು ಮಾಡಿದರು.
ಡಾ. ಅಂಬೇಡ್ಕರ್ ಅವರು ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಯೋಜಿತ ರೀತಿಯಲ್ಲಿ ಪ್ರಭುತ್ವದ ಮಾಲೀಕತ್ವವನ್ನು ಪ್ರಸ್ತಾಪಿಸಿದರು. ಕೃಷಿಯಲ್ಲಿ ಸಾಮೂಹಿಕ ಕೃಷಿ ಮತ್ತು ಕೈಗಾರಿಕಾ ವಲಯದಲ್ಲಿ ಪ್ರಭುತ್ವ ಸಮಾಜವಾದವನ್ನು ಶಿಫಾರಸು ಮಾಡಿದರು. ಕೃಷಿ ಮತ್ತು ಕೈಗಾರಿಕೆಗೆ ಅಗತ್ಯವಾದ ಬಂಡವಾಳವನ್ನು ಒದಗಿಸುವ ಜವಾಬ್ದಾರಿಯನ್ನು ರಾಜ್ಯವು ಹೊಂದಿತ್ತು. ಬಡತನ, ನಿರುದ್ಯೋಗ, ಹಣದುಬ್ಬರ, ಹಿಂದುಳಿದಿರುವಿಕೆ, ಅಸಮಾನತೆ ಮತ್ತು ವಿದೇಶಿ ಕರೆನ್ಸಿಗೆ ಸಂಬಂಧಿಸಿದಂತೆ ಭಾರತೀಯ ರೂಪಾಯಿಯ ಅಪಮೌಲ್ಯದಂತಹ ರಾಷ್ಟ್ರವನ್ನು ಬಾಧಿಸುತ್ತಿರುವ ಸಮಸ್ಯೆಗಳಿಗೆ ಸಂಭಾವ್ಯ ಪರಿಹಾರಗಳನ್ನು ಒದಗಿಸುವುದರಿಂದ ಡಾ. ಅಂಬೇಡ್ಕರ್ ಅವರ ಸಂಶೋಧನೆ ಇಂದಿಗೂ ಪ್ರಸ್ತುತವಾಗಿದೆ.
ಪ್ರಸ್ತುತ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಕೊಡುಗೆಗಳು ಇನ್ನಷ್ಟು ಪ್ರಸ್ತುತವಾಗಿವೆ. ಆರ್‌ಬಿಐ ತನ್ನ 90 ವರ್ಷಗಳ ಹೆಚ್ಚಿನ ಇತಿಹಾಸದಲ್ಲಿ ಹಣದುಬ್ಬರ ನಿಯಂತ್ರಣ(Inflation Targeting) ನೀತಿಯನ್ನು ಅನುಸರಿಸುತ್ತಿದೆ. ಇದು ಅಂಬೇಡ್ಕರ್ ಅವರ ರೂಪಾಯಿ ಸ್ಥಿರತೆ ಮತ್ತು ಕರೆನ್ಸಿ ನಿರ್ವಹಣೆಯ ಚಿಂತನೆಗೆ ನೇರ ಸಂಬಂಧ ಹೊಂದಿದೆ. ಡಿಜಿಟಲ್ ಭಾರತದಲ್ಲಿ UPI, ಡಿಜಿಟಲ್ ರೂಪಾಯಿ(CBDC) ಮತ್ತು ಆರ್ಥಿಕ ಸೇರ್ಪಡೆ ಯೋಜನೆಗಳು(ಜನ್ ಧನ್ ಯೋಜನೆ, DBT) ಅವರ ಸ್ಥಿರ ಹಣಕಾಸು ವ್ಯವಸ್ಥೆಯ ಆಧುನಿಕ ರೂಪಗಳಾಗಿವೆ.
ಆರ್‌ಬಿಐ ಡಾ. ಅಂಬೇಡ್ಕರ್ ಅವರ ಕೊಡುಗೆಯನ್ನು ಗುರುತಿಸಿ, ಅವರ 125ನೇ ಜಯಂತಿ ಸಂದರ್ಭದಲ್ಲಿ(2015-16) ಅವರ ಸ್ಮರಣಾರ್ಥವಾಗಿ ₹10 ನಾಣ್ಯಗಳನ್ನು ಬಿಡುಗಡೆ ಮಾಡಿತು. ಇದು ಅವರ ಆರ್ಥಿಕ ದರ್ಶನಕ್ಕೆ ಸಲ್ಲುವ ಗೌರವವಾಗಿದೆ. ಅಲ್ಲದೆ ನೋಟುಗಳ ಮೇಲೆ ಅಂಬೇಡ್ಕರ್ ಅವರ ಭಾವಚಿತ್ರ ಮುದ್ರಿಸುವ ಆಗ್ರಹವೂ ನ್ಯಾಯೋಚಿತವಾಗಿದೆ.
ಇದನ್ನೂ ಓದಿದ್ದೀರಾ? ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಮರಣೋತ್ತರ ಭಾರತರತ್ನ: ಆ ಐತಿಹಾಸಿಕ ಕ್ಷಣದ ಮಹತ್ವವೇನು?
2022ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿತವಾದ ಡಾ. ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್(BASE) ಅವರ ಆರ್ಥಶಾಸ್ತ್ರ ಪರಂಪರೆಯನ್ನು ಮುಂದುವರಿಸುತ್ತಿದೆ. ಅಂಬೇಡ್ಕರ್ ಜಯಂತಿ ಸಂದರ್ಭಗಳಲ್ಲಿ ಆರ್‌ಬಿಐ ಮತ್ತು ನೀತಿ ಆಯೋಗಗಳು ಅವರ ಆರ್ಥಿಕ ಚಿಂತನೆಗಳಾದ ಕೃಷಿ ರಾಷ್ಟ್ರೀಕರಣ, ಸಮಾಜವಾದಿ ಯೋಜನೆ, ಕಾರ್ಮಿಕ ಹಕ್ಕುಗಳ ಕುರಿತ ಚರ್ಚೆಗಳು ಮುನ್ನಲೆಗೆ ಬರುತ್ತವೆ.
ಪ್ರಚಾರ ಪಡೆಯದ ಅಂಬೇಡ್ಕರ್ ಅರ್ಥಜ್ಞಾನ
ಪ್ರಧಾನವಾಗಿ ಅಂಬೇಡ್ಕರ್ ಅವರನ್ನು ಸಾಮಾಜಿಕ ನಾಯಕ ಮತ್ತು ಸಂವಿಧಾನ ಶಿಲ್ಪಿಯಾಗಿ ಕಾಣುವುದರಿಂದ ಆರ್ಥಿಕ ಕೊಡುಗೆಗಳು ಹಿನ್ನೆಲೆಗೆ ತಳ್ಳಲ್ಪಟ್ಟಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವಿದ್ವಾಂಸರು, ಸರ್ಕಾರ ಮತ್ತು ಆರ್‌ಬಿಐ ಸೇರಿದಂತೆ ಇತರೆ ಸಂಸ್ಥೆಗಳು ಅವರ ಆರ್ಥಿಕ ಚಿಂತನೆಗಳನ್ನು ಹೆಚ್ಚೆಚ್ಚು ಚರ್ಚಿಸುತ್ತಿವೆ. ಇದು ಭಾರತದ ಆರ್ಥಿಕ ನೀತಿಗಳಲ್ಲಿ ಸಾಮಾಜಿಕ ನ್ಯಾಯವನ್ನು ಒಳಗೊಳ್ಳುವಲ್ಲಿ ಸಹಾಯಕವಾಗುತ್ತದೆ. ಅಂಬೇಡ್ಕರ್ ಅವರ ದೃಷ್ಟಿಕೋನ ಪ್ರಸ್ತುತ ಭಾರತಕ್ಕೆ ಹಣದುಬ್ಬರ ನಿಯಂತ್ರಣ, ಆರ್ಥಿಕ ಸೇರ್ಪಡೆ, ಸಮಾನ ವಿತರಣೆ ಮತ್ತು ಯೋಜಿತ ಅಭಿವೃದ್ಧಿಗೆ ಮತ್ತಷ್ಟು ಬಲವನ್ನು ನೀಡುತ್ತದೆ. ಬಾಬಾಸಾಹೇಬರ ಆರ್ಥಿಕ ದರ್ಶನವನ್ನು ಹೆಚ್ಚು ಪ್ರಚಾರ ಮಾಡುವುದು ಭಾರತದ ಸಮಗ್ರ ಅಭಿವೃದ್ಧಿಗೆ ಅಗತ್ಯವಾಗಿದೆ.




