ಹುಬ್ಬಳ್ಳಿ ಧಾರವಾಡ ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ನಡೆಯುವ ಸಂಘಟಿತ ಅಪರಾಧ ಕೃತ್ಯಗಳನ್ನು ತಡೆಗಟ್ಟಲು, ಕೃತ್ಯದಲ್ಲಿ ಭಾಗಿಯಾಗವ ಮತ್ತು ಕೃತ್ಯಕ್ಕೆ ಪ್ರೇರೇಪಿಸುವವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದ್ದಾರೆ.
ಮಂಗಳವಾರ ಧಾರವಾಡದಲ್ಲಿ ಪೊಲೀಸ್, ಅಬಕಾರಿ, ರಾಷ್ಟ್ರೀಯ ಹೆದ್ದಾರಿ, ಲೋಕೋಪೋಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರು ಮಾತನಾಡಿದರು. “ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು. ಸಂಘಟಿತ ಅಪರಾಧಗಳ ನಿಯಂತ್ರಣಕ್ಕೆ ಸಮನ್ವಯತೆಯಿಂದ ಕೆಲಸ ಮಾಡಬೇಕು. ಪ್ರತಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಜನ ಸ್ನೇಹಿಯಾಗಿ ವರ್ತಿಸಬೇಕು” ಎಂದು ಹೇಳಿದರು.
“ಯುವ ಸಮೂಹವನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಕುರಿತು ಪೊಲೀಸ್ ಇಲಾಖೆ ಗಮನ ಹರಿಸಿ ಇಂತಹ ಕೃತ್ಯಗಳಲ್ಲಿ ಭಾಗವಹಿಸುವವರನ್ನು ಬಂಧಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಮಾದಕ ವಸ್ತುಗಳ ಬಳಕೆಯಿಂದ ಆಗುವ ಹಾನಿ ಹಾಗೂ ಅಪರಾಧ ಕೃತ್ಯದ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಉ” ಎಂದು ತಿಳಿಸಿದರು.
“ಅವಳಿ ನಗರದಲ್ಲಿ ನೂರಾರಕ್ಕೂ ಹೆಚ್ಚು ಕಾಲೇಜುಗಳಿವೆ. ಇಂಜಿನಿಯರಿಂಗ್, ಡೆಂಟಲ್, ವೈದ್ಯಕೀಯ, ಕಾಲೇಜುಗಳ ಸುತ್ತಮುತ್ತ ಹಾಗೂ ಹಾಸ್ಟೆಲ್‍ಗಳಲ್ಲಿ ಮಫ್ತಿಯಲ್ಲಿ ಹಾಗೂ ಅನಿರೀಕ್ಷಿತ ಬೇಟಿ ಕೈಗೊಂಡು ಅಪರಾಧ ಕೃತ್ಯಗಳ ಬಗ್ಗೆ ತೀವ್ರನಿಗಾ ವಹಿಸಬೇಕು. ಯುವ ಪೀಳಿಗೆ ದಾರಿ ತಪ್ಪದಂತೆ ಪೊಲೀಸ್ ಇಲಾಖೆ ಪ್ರಬಲ ಅಸ್ತ್ರವಾಗಬೇಕು” ಎಂದು ತಿಳಿಸಿದರು.
“ಅಬಕಾರಿ ಇಲಾಖೆ ಇನ್ನಷ್ಟು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು. ಮಕ್ಕಳು ಮದ್ಯ ಸೇವನೆ ಮಾಡದಂತೆ ಎಚ್ಚರಿಕೆ ವಹಿಸಬೇಕು. ಮದ್ಯ ಮಾರಾಟ ಪರವಾನಗಿದಾರರು ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುವುದು ಬೇಡ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಅಬಕಾರಿ ಅಧಿಕಾರಿಗಳು ತಕ್ಷಣ ಸೂಕ್ತ ಕಾನೂನು ಕ್ರಮ ಜರುಗಿಸಬೇಕು” ಎಂದು ಸಚಿವರು ಸೂಚಿಸಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, “ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಕ್ರಮವಾಗಿ ಮತ್ತು ಕಾನೂನು ಬಾಹಿರವಾಗಿ ಮದ್ಯ ಮಾರಾಟ ಮಾಡುವುದನ್ನು ನಿಯಂತ್ರಿಸಿ, ಹಲವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸ್ ಹಾಗೂ ಮಹಾನಗರ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, ಗಸ್ತು ಹೆಚ್ಚಿಸಲಾಗಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಸಂಚಾರಿ ವ್ಯವಸ್ಥೆ ಸುಧಾರಣೆಗೆ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ” ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಮಾತನಾಡಿ, “ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪೊಲೀಸ್ ಸಂಚಾರ ತೀವ್ರಗೊಳಿಸಲಾಗಿದೆ. ಅಪರಾಧ ಘಟಿಸಿದ ತಕ್ಷಣ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿದ ತಕ್ಷಣ ಸ್ಪಂಧಿಸಲಾಗುತ್ತಿದೆ. ಅಕ್ರಮವಾಗಿ ಮಧ್ಯ ಮಾರಾಟ ಮಾಡುವುದನ್ನು ತಡೆಯಲು ಅಬಕಾರಿ ಇಲಾಖೆಯೊಂದಿಗೆ ಜಂಟಿ ದಾಳಿ ಮಾಡಿ, ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಹೆದ್ದಾರಿ ವಿಸ್ತೀರ್ಣ, ಕೆಳ ಸೇತುವೆಗಳ ನಿರ್ಮಾಣ ಮತ್ತು ಹೆದ್ದಾರಿ ಪಕ್ಕದ ಗ್ರಾಮಗಳ ಸಂಪರ್ಕ ರಸ್ತೆ ನಿರ್ಮಿಸುವ ಮೂಲಕ ಅಪಘಾತಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದರು.
ಸಭೆಯಲ್ಲಿ ಉಪ ಪೊಲೀಸ್ ಆಯುಕ್ತ ಡಾ.ಗೊಪಾಲ ಬ್ಯಾಕೋಡ್, ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ್ ಉಳ್ಳಾಗಡ್ಡಿ, ಅಬಕಾರಿ ಇಲಾಖೆ ಉಪ ಆಯುಕ್ತ ಕೆ.ಪ್ರಶಾಂತಕುಮಾರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಶಶಿಧರ ಚನ್ನಪ್ಪ ಗೌಡರ, ವಿಶ್ವಜ್ಞ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಪೊಲೀಸ್, ಅಬಕಾರಿ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.