ಸಮುದಾಯಕ್ಕೆ 2600 ವರ್ಷಗಳ ಇತಿಹಾಸವಿದೆ. ಬುದ್ದನ ಸಂಘ, ಬಸವಣ್ಣ ಸಂಕುಲದ ಪ್ರಜ್ಞೆ ಇದೆ. ಅಂದು ಇವತ್ತಿನ ಮೇಲು-ಕೀಳು, ಹೆಣ್ಣು-ಗಂಡು ಬೇಧಭಾವವಿಲ್ಲದ ಪ್ರಜ್ಞೆ ಇತ್ತು. ಮೊಟ್ಟಮೊದಲು ಸಮುದಾಯ ಪ್ರಜ್ಞೆಯನ್ನು ಹುಟ್ಟುಹಾಕಿದವರು ಬಸವಣ್ಣ. ಎಲ್ಲಿ ಜಾತಿ-ಬೇಧ ಬಡವ-ಬಲ್ಲಿದ, ಇರುವುದಿಲ್ಲವೋ ಅಲ್ಲಿ ಸಮುದಾಯ ಇರುತ್ತದೆ. ಇಂಥ ಸಮುದಾಯದ ಪ್ರಜ್ಞೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ರಂಜಾನ್ ದರ್ಗಾ ಅಭಿಪ್ರಾಯ ವ್ಯಕ್ತಪಡಿಸಿದರು.
ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾ ವರ್ದಕ ಸಂಘದ ಡಾ. ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಇಂದು ಮನುಷ್ಯತ್ವದೆಡೆಗೆ ಸಮುದಾಯ ಜಾಥಾ, ಸಮುದಾಯ -50 ಸಮಾರೋಪ ಸಮಾರಂಭದ ಮೊದಲ ಗೋಷ್ಠಿ: ಶರಣರ ನಿಜ ದರ್ಶನ ಭಾಷಣವಾಗಿ ಮಾತನಾಡಿದರು.
“ಸಮುದಾಯದ ಆಶಯಕ್ಕೆ 1100 ವರ್ಷಗಳ ಇತಿಹಾಸವಿದೆ. ಕವಿರಾಜ ಮಾರ್ಗ ಸಾಹಿತ್ಯದಲ್ಲಿ ಅನನ್ಯವಾಗಿದೆ. ಬೇರೆಯವರ ವಿಚಾರ, ಧರ್ಮವನ್ನು ಗೌರವಿಸುವವನು ಬಂಗಾರದಂತೆ ಇದ್ದವನು. ಮನುಷ್ಯ ಜಾತಿಯೊಂದೇ ಸತ್ಯ ಎಂದು ಪಂಪ ಹೇಳಿದ್ದನು. ಪಂಪನು ಧರ್ಮದ ವ್ಯಾಖ್ಯಾನದ ಕುರಿತು ಅದ್ಬುತ ಮಾತನ್ನು ಹೇಳಿದ್ದರೆ, ಈ ಆಶಯಗಳನ್ನು ಜಾರಿಗೆ ತಂದು, ಅರಿವನ್ನು ಪಸರಿಸುವಂತೆ ಮಾಡಿದವರು ಶರಣರು” ಎಂದರು.
“ಬಸವಾದಿ ಶರಣರ ಆಶಯಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ. ಸಮಾಜವನ್ನು ಪರಿವರ್ತನೆ ಮಾಡುವ ಪರ್ಯಾಯ ಸಮಾಜವನ್ನು ತರುವ ಅದ್ಭುದ ಕಾರ್ಯ ಶರಣರದಾಗಿತ್ತು. ಆದರೆ ಬಸವಾದಿ ಶರಣರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ತರಲೇ ಇಲ್ಲ. ಕನ್ನಡ ಸಾಹಿತ್ಯದಲ್ಲಿ ಬಹುದೊಡ್ಡ ಜೈನ ಸಾಹಿತ್ಯ ಆಗಿದೆ. ಅದು ಪಂಪನಿಂದ ಕುವೆಂಪುವರೆಗೆ ನಡೆದು ಬಂದಿದೆ. ಇದನ್ನು ನಾವೆಲ್ಲರೂ ಆಲೋಚನೆ ಮಾಡಬೇಕು. ಭಾರತದ ಇತಿಹಾಸದಲ್ಲಿ ಕೋಮವಾದಿ, ಜಾತಿವಾದಿ, ಮುನುವಾದಿಯನ್ನು ಭಾರತದಲ್ಲಿಯೇ ವಿರೋಧಿಸಿದ ಏಕೈಕ ಚಳವಳಿ ಎಂದರೆ ವಚನ ಚಳವಳಿ. ವಚನ ಚಳುವಳಿಯಲ್ಲಿ ವೈದಿಕತೆ ಇಲ್ಲ. ಹಾಗಾಗಿಯೇ ಬಸವಣ್ಣ 21ನೇ ಶತಮಾನಕ್ಕೂ ಸ್ಪೂರ್ತಿಯಾಗುತ್ತಾರೆ” ಎಂದು ತಿಳಿಸಿದರು.
“ಬಸವ ಧರ್ಮದಲ್ಲಿ ಪುಣ್ಯ, ಪಾಪ, ಮೋಕ್ಷ ಇಲ್ಲ. ಎಡ ಪಂಥೀಯ ವಾದಗಳು ಶರಣರ ವಚನಗಳಲ್ಲಿವೆ. ವಚನ ಸಾಹಿತ್ಯ ಅಷ್ಟು ಸರಳವಾದವುಗಳಲ್ಲ. ವಚನಗಳ ತತ್ವಾರ್ಥ, ಧ್ವನ್ಯಾರ್ಥ ವ್ಯಂಜನಾರ್ಥಗಳನ್ನು ನೋಡಿದಾಗ, ಗಮನಿಸಿದಾಗ ಹೊಸ ಹೊಸ ಅರ್ಥಗಳನ್ನು ಕೊಡುತ್ತವೆ” ಎಂದು ಹೇಳಿದರು.

“ದುಡಿಯುವ ವರ್ಗದಲ್ಲಿ ತತ್ವಜ್ಞಾ ಎಂದರೆ ಅನುಭವ ತತ್ವಜ್ಞಾನ. ವಚನಗಳಲ್ಲಿ ಯಾವುದು ಚಲನಶೀಲವಾಗಿವೆ ಎಂದರೆ ಒಂದು ವಚನದಲ್ಲಿ ಬಳಕೆಯಾದ ಪದ, ಅದೇ ಪದ ಇನ್ನೊಂದು ವಚನದಲ್ಲಿ ಬಂದರೆ ಆ ಅರ್ಥವೇ ಬೇರೆ ಆಗಿರುತ್ತದೆ” ಎಂದರು.
ಡಾ. ಜಿ.ಎಸ್.ಪಾಟೀಲ್ ವಿಷಯ ಮಂಡನೆ: “ವಚನಗಳನ್ನು ಗೌಣಗೊಳಿಸುವ ಕಾರ್ಯ ಇತ್ತಿಚೇಗೆ ದೊಡ್ಡ ಮಟ್ಟದಲ್ಲಿ ನೋಡಿದ್ದೇವೆ. ಬಸವ ಯುಗದಲ್ಲಿ 22ಸಾವಿರ ವಚನ ಬರೆದವರು, ಮೂರು ಸಾಲಿನಲ್ಲಿ ಬರೆದವರು, ಒಂದು ಎರಡು, ಒಂದು ಪುಟ ಇರುವ ವಚನಗಳೂ ಇವೆ. ಬಹುತೇಕ ಐದು ಆರು ಸಾಲುಗಳಲ್ಲಿವೆ. ಇವುಗಳಲ್ಲಿ ಮನುವಾದಿ ಪ್ರಶ್ನೆಗಳನ್ನು ಎತ್ತುತ್ತವೆ. ಪರ್ಯಾಯವಾಗಿ ಉತ್ತರಿಸುತ್ತವೆ. ʼವೇದಗಳಲ್ಲಿರುವುದನ್ನು ವಚನಗಳಲ್ಲಿ ಬರೆಯಲಾಗಿದೆ. ಕನ್ನಡದಲ್ಲಿ ಚಳವಳಿ ನಡೆದಿಲ್ಲʼವೆಂದು ಹೇಳುತ್ತ, ಮೂರೂವರೆ ವರ್ಷಗಳಿಂದ ಸಂಘರ್ಷ ಚಳವಳಿ ನಡೆಯುತ್ತ ಬಂದಿದೆ. ಅಲ್ಲದೆ ಮನುವಾದಿಗಳು ಇದನ್ನು ಗೌಣಗೊಳಿಸುವ ಕೆಲಸ ಮಾಡುತ್ತ ಬಂದಿದ್ದಾರೆ” ಎಂದು ಹೇಳಿದರು.
“ಭಾರತದಲ್ಲಿ ವೈದಿಕವು ಸಾಮ, ದಾನ, ಭೇದ, ದಂಡಗಳ ಮೂಲಕ ಎಲ್ಲ ಸಂಘರ್ಷ ಚಳವಳಿಗಳನ್ನು ಸದೆ ಬಡಿಯುತ್ತ ಬಂದಿದೆ. ಆದರೆ ಕಲ್ಯಾಣದ ಶರಣರಲ್ಲಿ ಇವುಗಳನ್ನು ಮಾಡಲಾಗಲಿಲ್ಲ. ಉದಾಹರಣೆ ಸಿಗಲಿಲ್ಲ. ಈ ಬದ್ಧತೆಯನ್ನು ಎಲ್ಲರೂ ಯೋಚಸಿಸಬೇಕು” ಎಂದರು.
“ಕಲ್ಯಾಣಕ್ಕೆ ಬರುವ ಎಲ್ಲ ಶರಣರನ್ನು ನೇರವಾಗಿ ಅನುಭವ ಮಂಟಪಕ್ಕೆ ಬಿಡುತ್ತಿರಲಿಲ್ಲ. ಬರುವ ಶರಣರನ್ನು ಕೂಲಂಕುಶವಾಗಿ, ಅವರ ವ್ಯಕ್ತಿತ್ವನ್ನು ಅರ್ಥ ಮಾಡಿಕೊಂಡು ಅವರಿಗೆ ತರಬೇತಿ ಕೊಟ್ಟು, ಶರಣ ಚಳವಳಿಗೆ ಸಿದ್ದಪಡಿಸಿ, ಬಳಿಕ ಅನುಭವ ಮಂಟಪಕ್ಕೆ ಅವಕಾಶ ನೀಡಲಾಗುತ್ತಿತ್ತು. ಅಲ್ಲಿ ಜನೋಪಕಾರ್ಯಗಳನ್ನು ಮಾಡುತ್ತಿದ್ದರು. ಮನುವಾದಿಗಳು ಶರಣ ಚಳವಳಿಯನ್ನು ಎಷ್ಟು ತುಳಿಯಲು, ಗೌಣಗೊಳಿಸಲು ಪ್ರಯತ್ನ ಮಾಡುವರೋ ಅಷ್ಟೇ ಪ್ರಮಾಣದಲ್ಲಿ ರಾಜಕೀಯ ಹಿನ್ನಡೆಯಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಬಸವಣ್ಣನ ಆರ್ಥಿಕ ಸೂತ್ರ ಕಾಯಕ, ದಾಸೋಹದ ಮೂಲಕ ಕಲ್ಯಾಣದ ಅಭಿವೃದ್ಧಿ ಮಾಡಿದರು. ಅದರಲ್ಲಿ ಲಿಂಗಭೇದ ಒಡೆದುಹೋಯಿತು. ಇಷ್ಟ ಲಿಂಗ ಸ್ಥಾಪನೆ ಮಾಡಿದ ಮೇಲೆ ಮೊಟ್ಟ ಮೊದಲು ಸಹೋದರಿ ಅಕ್ಕನಿಗೆ ತೊಡಿಸುವನು. ಈ ಮೂಲಕ ಲಿಂಗ ಅಸಮಾನತೆಯನ್ನು ತೊಡೆದು ಹಾಕಲು ಪ್ರಯತ್ನಿಸಿದರು.” ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಮೀನಾಕ್ಷಿ ಬಾಳಿ ಮಾತನಾಡಿ, “ಕಾವಿಗಳಿಗೆ ವಚನಗಳಿಗೆ ಸಂಬಂಧ ಇಲ್ಲ. ಹನ್ನೆರಡನೇ ಶತಮಾನದಲ್ಲಿ ಯಾರೂ ಕೂಡ ಕಾವಿ ತೊಟ್ಟಿರಲಿಲ್ಲ. ಬಸವಣ್ಣ ಎಲ್ಲರಿಗೂ ಇಷ್ಟ ಲಿಂಗವನ್ನು ಕೊಟ್ಟು. ದೇವರ ಅಸ್ಥಿತ್ವನ್ನು ಪ್ರಶ್ನಿಸಿದ್ದರು” ಎಂದರು.
“ಎಲ್ಲರನ್ನೂ ಒಳಗೊಳ್ಳುವ ವಚನ ಸಾಹಿತ್ಯ, ಶರಣ ಸಾಹಿತ್ಯವೆಂದರೆ ವೈದಿಕರಿಗೆ ಭಯವಿದೆ. ಇವತ್ತು ವಚನ ಸಾಹಿತ್ಯ ಚಳವಳಿ ಮುಂದುವರೆಸಿಕೊಂಡು ಹೋಗುವಲ್ಲಿ ಎಷ್ಟು ಮಂದಿ ಲಿಂಗಾಯತರು ಬರುವರೋ ಗೊತ್ತಿಲ್ಲ. ಪ್ರಗತಿಪರರ ಮೇಲೆ ಜಾರಿತ್ರಿಕ ಜವಬ್ದಾರಿಯಿದೆ. ಇದನ್ನು ನಾವು ಮರೆಯುವಂತಿಲ್ಲ” ಎಂದು ಹೇಳಿದರು.
“ಸೆಂಟ್ರಲ್ ವಿ.ಸಿಯೊಬ್ಬ ಆರ್ಥಿಕತೆ ಸುಧಾರಣೆಗೆ ದೇವಾಲಯಗಳು ಅನುಕೂಲವಾಗಿವೆ. ದೇವಾಲಯಗಳನ್ನು ಕಟ್ಟಬೇಕೆಂದು ಹೇಳುವನು. ಇಂಥವರ ವಿರುದ್ದ ಹೇಗೆ ಹೋರಾಟ ಮಾಡಬೇಕು? ನಿಜಾವಾಗಿಯೂ ಇಂಥವರ ವಿರುದ್ದ ಹೋರಾಟ ಮಾಡಲೇಬೇಕು” ಎಂದರು.
“ಕಲ್ಬುರ್ಗಿ, ದಾಬೋಲ್ಕರ ಅಂಥವರನ್ನು ಕೊಲ್ಲುತ್ತ ಬಂದರು. ಇನ್ನೂ ಮುಂದೆ ಯಾರ್ಯಾರು ಈ ಸಾಲಿನಲ್ಲಿದ್ದಾರೋ, ಅಂಥವರ ವಿರುದ್ದ ಹೋರಾಟ ಮಾಡಬೇಕಿದೆ” ಎಂದರು.

“ಈ ವಚನಗಳನ್ನು ಎಲ್ಲರ ಬಾಯಲ್ಲೂ ಇರಬೇಕು. ಇರುವಂತೆ ನೋಡಿಕೊಳ್ಳಬೇಕು. ಇವತ್ತಿನ ಮಕ್ಕಳಿಗೆ ವಚನಗಳನ್ನು ಕಲಿಸಬೇಕು. ಈ ಮೂಲಕ ಕನ್ನಡ ಭಾಷೆಯನ್ನು ಉಳಿಸಬೇಕು. ಇಲ್ಲದಿದ್ದರೆ ಮಕ್ಕಳು ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ದೂರ ಉಳಿಯುವರು. ಹಾಗಾಗಿ ಮಕ್ಕಳಿಗೆ ವಚನಗಳನ್ನು ಕಲಿಸುವ ಅಗತ್ಯವಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಅಕ್ಕಮಹಾದೇವಿ ವಿವಿ: ಸ್ನಾತಕೋತ್ತರ ಪ್ರವೇಶಕ್ಕೆ ಸೆ.15 ಕೊನೆಯ ದಿನ
ಗೋಷ್ಟಿಯ ಉದ್ಘಾಟನೆ ಮಾಡಿದ ಪೂಜ್ಯ ಶ್ರೀ ಕೋರ್ಣೇಶ್ವರ ಸ್ವಾಮಿಗಳು ಮಾತನಾಡಿ, “ಲಿಂಗಾಯತ ವಿಚಾರಧಾರೆ, ಶರಣರ ವಿಚಾರಧಾರೆಯನ್ನು ಮುಗಿಸುವ ಹುನ್ನಾರ ಮಾಡುವ ಸಂವಿಧಾನದ ಮೂಲ ಆಶಯವನ್ನು ಬದಲಾಯಿಸುವ ಪ್ರಯತ್ನ ಮಾಡುತ್ತೇವೆ. ನಮ್ಮವರು ಹುಲಿಗಳೆಂದು ಕರೆದುಕೊಳ್ಳುವರು, ಆದರೆ ಆ ಹುಲಿಯ ಹಲ್ಲುಗಳು ನಮ್ಮ ಕಡೆಯೇ ಇವೆ. ಇದನ್ನು ಅರ್ಥ ಮಾಡಿಕೊಳ್ಳಬೇಕು. ತಮ್ಮ ತಮ್ಮ ಸ್ವಾರ್ಥಕ್ಕಾಗಿ ಲಿಂಗಾಯತವನ್ನು ಬಳಸಿಕೊಂಡರು. ನೀರು ತನ್ನನ್ನುತಾನು ತಿಳಿಗೊಳಿಸುತ್ತದೆ. ಆದರೆ ವಿಚಾರಧಾರೆಗೆ ತನ್ನನ್ನು ತಾನು ತಿಳಿಗೊಳಿಸುವುದಿಲ್ಲ. ಅದನ್ನು ಎಲ್ಲರೂ ತಿಳಿಗೊಳಿಸುವ ಪ್ರಯತ್ನ ಮಾಡಬೇಕು” ಎಂದು ಕರೆ ನೀಡಿದರು.
ಗೋಷ್ಟಿಯಲ್ಲಿ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಬಸವರಾಜ ಕೋರಿಮಠ, ಸವಿತಾ ನಡಕಟ್ಟಿ, ಎಂ. ವಿ ಗೊಂಗಡಸೆಟ್ಟಿ, ಸಿದ್ದರಾಮಪ್ಪ ನಡಕಟ್ಟಿ, ದಾಕ್ಷಾಯಿಣಿ ಶಂಕರ ಕೋಳಿವಾಡ, ಕುಮಾರಣ್ಣ ಪಾಟೀಲ್ ಇದ್ದರು. ಪ್ರೊ. ಶಶಿಧರ್ ತೋಡಕರ ಸ್ವಾಗತ ಮಾಡಿದರು. ರವೀಂದ್ರನಾಥ ಶಿರವಾರ ನಿರೂಪಿಸಿದರು.




