ಟಿಎಂಸಿ ವಿದ್ಯಾರ್ಥಿ ಘಟಕ ಛಾತ್ರ ಪರಿಷತ್ನ (TMCP) ಸಂಸ್ಥಾಪನಾ ದಿನಾಚರಣೆ ರ್ಯಾಲಿ ವೇಳೆ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆಗಸ್ಟ್ 28ರಂದು ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಮತಾ ವಿರುದ್ಧ ಉಪನಿರೀಕ್ಷಕ ಅಪು ಬೈದ್ಯ ಅವರು ಹಾಸ್ಟಿಂಗ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ದೂರಿನ ಆಧಾರದ ಮೇಲೆ ಮಮತಾ ಬ್ಯಾನರ್ಜಿ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಬಿಎನ್ಎಸ್ ಸೆಕ್ಷನ್ 61(2), 223, 125(a), 132 ಹಾಗೂ 285ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
TMCP ಸ್ಥಾಪನಾ ದಿನದ ಕಾರ್ಯಕ್ರಮವನ್ನು ಕ್ಯಾಥೆಡ್ರಲ್ ರಸ್ತೆಯ ಒಂದು ಬದಿಯಲ್ಲಿ ಮಾತ್ರ ನಡೆಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿತ್ತು. ಆದರೆ, ಕಾರ್ಯಕ್ರಮದ ವೇಳೆ ಟಿಎಂಸಿ ಕಾರ್ಯಕರ್ತರು ಮತ್ತು ಬೆಂಬಲಿಗರು ರಸ್ತೆಯ ಇನ್ನೊಂದು ಬದಿಯನ್ನೂ ಆಕ್ರಮಿಸಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಇದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಜನಸಮೂಹವು ಬ್ಯಾರಿಕೇಡ್ಗಳನ್ನು ತಳ್ಳಿಹಾಕಿ ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ತಳ್ಳಾಟ ನಡೆಸಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ನಿಯೋಜಿಸಲಾಗಿದ್ದ ಸಿಬ್ಬಂದಿಗಳ ಕರ್ತವ್ಯಕ್ಕೂ ಅಡ್ಡಿಪಡಿಸಲಾಗಿದೆ ಎಂದು ಪೊಲೀಸರು ಆರೋಪ ಮಾಡಿದ್ದಾರೆ.
“ಹೈಕೋರ್ಟ್ ನಿಗದಿಪಡಿಸಿದ್ದ ಸಮಯದ ಮಿತಿಯನ್ನು ಮೀರಿ ಕಾರ್ಯಕ್ರಮ ಮುಂದುವರಿಸಲಾಗಿದೆ. ಇದರಿಂದ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ. ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ” ಎಂದು ಪೊಲೀಸರು ಹೇಳಿದ್ದಾರೆ.
ಎಫ್ಐಆರ್ನಲ್ಲಿ ಮಮತಾ ಬ್ಯಾನರ್ಜಿ ಮತ್ತು ಕಾರ್ಯಕ್ರಮ ಆಯೋಜಕರು ‘ಅಪರಾಧಿ ಸಂಚು’ ನಡೆಸಿ ಬೆಂಬಲಿಗರನ್ನು ಪ್ರಚೋದಿಸಿದ್ದಾರೆ ಎಂದೂ ಆರೋಪಿಸಲಾಗಿದೆ.



