ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಕೊರಳಲ್ಲಿದ್ದ ₹5.50 ಲಕ್ಷ ಮೌಲ್ಯದ 3.5 ತೊಲ ಬಂಗಾರದ ಆಭರಣ ಕಳುವಾದ ಘಟನೆ ಬುಧವಾರ ನಡೆದಿದೆ.
ತಾಲೂಕಿನ ನನಗುಂಡಿಕೊಪ್ಪ ಗ್ರಾಮದ ಮಂಗಲಾ ಬಸಯ್ಯ ದೇಸಾಯಿ (35) ಆಭರಣ ಕಳೆದುಕೊಂಡವರು. ಅವರು ನನಗುಂಡಿಕೊಪ್ಪದಿಂದ ಬೈಲಹೊಂಗಲಕ್ಕೆ ಬಂದು, ಬಳಿಕ ಮರಕುಂಬಿ ದೇವಸ್ಥಾನಕ್ಕೆ ತೆರಳಲು ಯರಗಟ್ಟಿ ಬಸ್ ಹತ್ತಿದ್ದರು. ಬಸ್ ಹತ್ತಿದ ಕೆಲವೇ ಕ್ಷಣಗಳಲ್ಲಿ ಕೊರಳಲ್ಲಿದ್ದ ಚಿನ್ನಾಭರಣ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಆತಂಕಗೊಂಡ ಮಹಿಳೆ ಚೀರಾಡಿದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಬಸ್ನ್ನು ಪ್ರಯಾಣಿಕರ ಸಮೇತ ಠಾಣೆಗೆ ಕರೆದೊಯ್ದು ಪರಿಶೀಲಿಸಿದರು. ಬಸ್ನಲ್ಲಿದ್ದ 80ಕ್ಕೂ ಹೆಚ್ಚು ಪ್ರಯಾಣಿಕರನ್ನು ತಪಾಸಣೆ ನಡೆಸಿದರೂ ಆಭರಣ ಪತ್ತೆಯಾಗಲಿಲ್ಲ. ಬಳಿಕ ಬಸ್ನ್ನು ಕಳುಹಿಸಿಕೊಡಲಾಯಿತು.
ಘಟನೆ ಸಂಬಂಧ ಪೊಲೀಸರು ಬಸ್ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.



