ಸಮಾಜಕ್ಕೆ ಪ್ರಯೋಜನವಾಗುವ ಕೆಲಸ ಯಾವುದೇ ರೂಪದಲ್ಲಿ ಇದ್ದರೂ ಅದು ಜನರನ್ನು ತಲುಪುತ್ತದೆ ಎಂದು ಧಾರವಾಡ ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜನಮಠದ ಸಂಗಮೇಶ ಸ್ವಾಮೀಜಿ ಅಭಿಪ್ರಾಯಪಟ್ಟರು.
ತಾಲೂಕಿನ ನರೇಂದ್ರ ಗ್ರಾಮದ ಮಳೆಪ್ಪಜ್ಜನಮಠದಲ್ಲಿ ಜನಜಾಗೃತಿ ಸಂಘದ 2024 ಸ್ಟೆಪ್ಸ್ ದಿನದರ್ಶಿಕೆಗಳನ್ನು ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.
“ದಿನದರ್ಶಿಕೆಗಳು ನಮ್ಮ ಬದುಕಿಗೆ ಶಿಸ್ತು ಮತ್ತು ಸಮಯಪಾಲನೆ ಸೂಚಿಸುವ ಮಾರ್ಗದರ್ಶಿಗಳು. ನಿತ್ಯದ ಕಾಯಕಗಳಿಗೆ ಸೂಕ್ತ ದಿನ ಮತ್ತು ಸಮಯ ನಿರ್ಧರಿಸಿಕೊಳ್ಳಲು ಬಹು ಉಪಕೃತ ಸಾಧನಗಳು. ಜನಜಾಗೃತಿ ಸಂಘವು ಕಳೆದ ಕೆಲವು ವರ್ಷಗಳಿಂದ ಕ್ಯಾಲೆಂಡರ್‌ಗಳನ್ನು ಉಚಿತವಾಗಿ ವಿತರಿಸುತ್ತಿರುವುದು ಸ್ತುತ್ಯ ಕಾರ್ಯ” ಎಂದರು.
“ಸಂಘದ ಅಧ್ಯಕ್ಷ ಬಸವರಾಜ ಕೊರವರ ಅವರು ಸದಾ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜನೋಪಕಾರಿ ಎನಿಸಿದ್ದಾರೆ. ಅವರ ಸಮಾಜ ಸೇವೆ ನಿರಂತರವಾಗಲಿ” ಎಂದು ಸ್ವಾಮೀಜಿ ಹಾರೈಸಿದರು.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮಾತನಾಡಿ, “ಕ್ಯಾಲೆಂಡರ್‌ಗಳು
ಜನರು ಮಾರುಕಟ್ಟೆಯಲ್ಲಿ ಕೊಳ್ಳಲೇಬೇಕಾದ ಅವಶ್ಯಕ ವಸ್ತುವಾಗಿದೆ. ಕೆಲವರಿಗೆ ಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ನನ್ನ ದುಡಿಮೆಯಲ್ಲಿನ ಹಣವನ್ನು ವ್ಯಯಿಸಿ ಕ್ಯಾಲೆಂಡರ್ ವಿತರಿಸಲಾಗುತ್ತಿದೆ. ಜನರ ಪ್ರೀತಿ, ವಿಶ್ವಾಸವನ್ನು ಕಾಪಾಡಿಕೊಳ್ಳುವುದೇ ಕ್ಯಾಲೆಂಡರ್ ವಿತರಣೆಯ ಉದ್ದೇಶ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಇಕ್ಕಟ್ಟಾದ ರಸ್ತೆಗಳಿಂದ ಬೇಸತ್ತ ಸಾರ್ವಜನಿಕರು
ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಹಟ್ಟಿಹೊಳಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಬಸವಪ್ರಭು ಹುಂಬೇರಿ, ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಎಪಿಎಂಸಿ ಮಾಜಿ ಅಧ್ಯಕ್ಷ ಚೆನ್ನವೀರಗೌಡ ಪಾಟೀಲ, ಮಳೆಪ್ಪಜ್ಜನ ಮಠದ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಈಶ್ವರ ಗಾಣಿಗೇರ, ಭಾರತ ಸೇವಾದಳ ತಾಲೂಕ ಅಧ್ಯಕ್ಷ ಮಂಜುನಾಥ ತಿರ್ಲಾಪೂರ, ಕರೆಪ್ಪ ಬಳಿಗೇರ, ಸಿದ್ದಪ್ಪ ಜೈನರ್, ಗೌರಪ್ಪ ಹುಂಬೇರಿ, ವಿರೂಪಾಕ್ಷ ಹೊಸಕೇರಿ, ಶಂಕ್ರಪ್ಪ ದುಬ್ಬನಮರಡಿ, ಈರಪ್ಪ ತೇಗೂರ ಸೇರಿದಂತೆ ಇತರರು ಇದ್ದರು.