ಅನಂತಕುಮಾರ್ ಹೆಗಡೆ ಹಿಂದೆಲ್ಲ ಗೆದ್ದಿದ್ದು ಚಿತ್ತರಂಜನ್ ‘ಬಲಿದಾನ’, ಕಾಂಗ್ರೆಸ್ ನ ಮಾರ್ಗರೆಟ್ ಆಳ್ವ-ದೇಶಪಾಂಡೆ ಬಣಗಳ ಕಾಲೆಳೆದಾಟ, ಮೋದಿ ಮಂಕು ಬೂದಿಗಳಿಂದಾಗಿಯೇ ಹೊರತು ಸ್ವಂತ ಸಾಮರ್ಥ್ಯದಿಂದ ಅಲ್ಲ. ತಮಾಷೆ ಎಂದರೆ ಸತತ ಸಂಸದನಾಗಿ ಆಯ್ಕೆಯಾಗಿದ್ದರೂ, ಅನಂತ್‌ಗೆ ಕನಿಷ್ಠ ಹಿಂದುಗಳ ನಂಬಿಕಾರ್ಹ ನಾಯಕನೂ ಆಗಲಾಗಿಲ್ಲ.
ಇನ್ನೇನು ‘ಲೋಕ ಸಮರ’ ಬಂದೇಬಿಟ್ಟಿತು ಎಂಬಂತ ಕದನ ಕುತೂಹಲದ ಸಮಯವಿದು. ತಮ್ಮ ಮಾಮೂಲಿ ಗುಣ-ಸ್ವಭಾವದಂತೆ ಉತ್ತರ ಕನ್ನಡದ ಲೋಕಸಭಾ ಸದಸ್ಯ ಅನಂತ್‌ಕುಮಾರ್ ಹೆಗಡೆ ಹಠಾತ್ ಹಿಂದುತ್ವದ ಖಡ್ಗ ಹಿಡಿದು ಯುದ್ಧ ಸನ್ನದ್ಧರಾಗಿದ್ದಾರೆ. ನಾಲ್ಕೂವರೆ ವರ್ಷದಿಂದ ನಾಪತ್ತೆಯಾಗಿದ್ದ ಅನಂತ್ ಹೆಗಡೆಯ ಉದಾಸೀನತೆ-ಅನಾಸಕ್ತಿ ರಾಜಕೀಯದಿಂದ ಮರ್ಯಾದೆಯಿಂದ ನಿರ್ಗಮಿಸುವ ಯೋಚನೆಯಲ್ಲಿದ್ದಾರೆಂಬ ಭಾವನೆ ಜಿಲ್ಲೆಯಲ್ಲಿ ಮೂಡಿಸಿತ್ತು. ಕೆಲಸಕ್ಕೆ ಬಾರದ ಸಂಸದ ಇದ್ದರೆಷ್ಟು, ಬಿಟ್ಟರೆಷ್ಟು ಎಂಬಂತಿದ್ದ ಜಿಲ್ಲೆಯ ಜನರು ಮತ್ತು ಬಿಜೆಪಿ ಕಾರ್ಯಕರ್ತರು ಅನಂತ್ ‘ಅಘೋಷಿತ’ ನಿವೃತ್ತಿಯಿಂದ ಒಂಥರಾ ಖುಷಿಯಾಗಿದ್ದರು. ಆದರೆ ಹೋದೆಯಾ ಪಿಶಾಚಿ ಎಂದರೆ, ಇಲ್ಲ ಗವಾಕ್ಷಿಯಲ್ಲಿ ಬಂದೆ ಎಂಬಂತಾಗಿದೆ ಉತ್ತರ ಕನ್ನಡದ ಕತೆ! ಈಗ ಇದ್ದಕ್ಕಿದ್ದಂತೆ ಅನಂತ್ ಹೆಗಡೆ ಮತ್ತೆ ಬಿಟ್ಟಿ ಸಕಲ ಸೌಭಾಗ್ಯದ ಸಂಸದನಾಗುವ ಅವಸರಕ್ಕೆ ಬಿದ್ದಿದ್ದಾರೆ. ಆದರೆ ‘ಹುಸಿ ಫಾಯರ್ ಬ್ರ್ಯಾಂಡ್’ಗೆ ಈ ಬಾರಿ ಕೇಸರಿ ಟಿಕೆಟ್ ಇಲ್ಲ; ಗೇಟ್ ಪಾಸ್ ಗ್ಯಾರಂಟಿ ಎಂಬ ಮಾತು ಕೇಳಿಬರುತ್ತಿದೆ. ಆಚಾರ-ವಿಚಾರವಿಲ್ಲದೆ ಹಿಂದುತ್ವದ ಹೆಸರಲ್ಲಿ ನಾಲಗೆ ಹೊರಳಾಡಿಸುವುದಕ್ಕೆ ‘ಪ್ರಸಿದ್ಧ’ರಾಗಿರುವ ಅನಂತ್ ಹೆಗಡೆಯ ರಾಜಕೀಯ ಬದುಕು ಸಂದಿಗ್ಧಕ್ಕೆ ಸಿಲುಕಿರುವುದಂತೂ ಖರೆ. ಬಿಜೆಪಿ ಟಿಕೆಟ್ ಅನುಮಾನ; ಸಿಕ್ಕರೂ ಗೆಲುವು ಕಷ್ಟ ಎಂಬಂತ ಪರಿಸ್ಥಿತಿಯಲ್ಲಿ ಅನಂತ್ ಹೆಗಡೆ ಇದ್ದಾರೆ.
ವಿಭಜಕ ಚುನಾವಣಾ ರಾಜಕಾರಣದಿಂದಲೇ ಆರು ಬಾರಿ ಸಂಸದನಾಗಿರುವ ಅನಂತ್ ಹೆಗಡೆಯಿಂದ ಜಿಲ್ಲೆಗೆ ಮೂರು ಪೈಸೆ ಪ್ರಯೋಜನವಾಗಲಿಲ್ಲ ಎಂಬುದು ಸಾಮಾನ್ಯ ಅಭಿಪ್ರಾಯ. ಬೆಳಗಾವಿ ಜಿಲ್ಲೆಯ ಖಾನಾಪುರ ಮತ್ತು ಕಿತ್ತೂರು ಅಸೆಂಬ್ಲಿ ಕ್ಷೇತ್ರಗಳನ್ನು ಒಳಗೊಂಡಿರುವ ಉತ್ತರ ಕನ್ನಡ ಪಾರ್ಲಿಮೆಂಟ್ ಕ್ಷೇತ್ರದಲ್ಲಿ ಜನರಿಗೆ ಸದಾ ನಾಟ್ ರೀಚಬಲ್ ಆಗಿರುವ ಅನಂತ್ ಹೆಗಡೆ ಬಗ್ಗೆ ಅಸಮಾಧಾನವಿದೆ.
1990ರ ದಶಕದಲ್ಲಿ ಒಂದಿಡೀ ವರ್ಷ ಕೋಮು ಕಿಚ್ಚಲ್ಲಿ ಹೊತ್ತಿ ಉರಿದಿದ್ದ ಭಟ್ಕಳವನ್ನು ‘ಕರ್ಮ’ಭೂಮಿ ಮಾಡಿಕೊಂಡಿದ್ದ ಅನಂತ್ ಮತೀಯ ಮಸಲತ್ತಿನ ‘ಕ್ರಾಂತಿಕಾರಿ’ ಮುಂದಾಳಾಗಿ ಅವತರಿಸಿದ್ದು ಜಿಲ್ಲೆಯ ಕೋಮು ಕೌರ್ಯದ ಇತಿಹಾಸದಲ್ಲಿ ಅಚ್ಚಳಿಯದಂತೆ ದಾಖಲಾಗಿದೆ. ಪೊಲೀಸ್ ಸರ್ಪಗಾವಲು ಭೇದಿಸಿ ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ನುಗ್ಗಿ ಧ್ವಜ ಹಾರಿಸಿದನೆಂಬ ಪ್ರಖರ ಹಿಂದುತ್ವದ ಇಮೇಜ್ ಅನಂತ್‌ಗೆ ಅಂದಿತ್ತು; ಉತ್ತರ ಕನ್ನಡ ಸಂಘ ಪರಿವಾರದ ಪ್ರಶ್ನಾತೀತ ಸರದಾರರಾಗಿದ್ದ ಡಾ.ಚಿತ್ತರಂಜನ್‌ರ ಪಟ್ಟದ ಶಿಷ್ಯತ್ವವಿತ್ತು. ಸಂಘ ಪರಿವಾರದ ಶೂದ್ರರು ಈದ್ಗಾದಲ್ಲಿ ದ್ವಜ ಹಾರಿಸಿದ್ದು ಬಿಲ್ಲವ(ಈಡಿಗ)ರ ಸುರತ್ಕಲ್‌ನ ಸತ್ಯಜಿತ್ ಸುರತ್ಕಲ್ ಅಂತಾರೆ. ಅದೇನೇ ಇದ್ದರೂ, ಕೇಸರಿ ಎಂಪಿ ಟಿಕೆಟ್ ಪಡೆಯುವಷ್ಟರ ಮಟ್ಟಿನ ದೊಡ್ಡ ಕ್ರೆಡಿಟ್ ಅಂತೂ ಅನಂತ್ ಹೆಗಡೆಗೆ ದಕ್ಕಿತ್ತು. ಚಿತ್ತರಂಜನ್ ಸಂಗ ಸಹಕಾರದಿಂದ ಬಿಜೆಪಿಯಲ್ಲಿ ಅಂಥದೊಂದು ಪ್ರಭಾವಳಿ ಅನಂತ್‌ಗೆ ಸೃಷ್ಟಿಯಾಗಿತ್ತು.
ಸಂತೋಷ್-ಪ್ರಲ್ಹಾದ್ ಜೋಶಿ ಬಿಡಿ, ಮೋದಿಜೀಗಿಂತಲೂ ತಾನು ಬಿಜೆಪಿಯಲ್ಲಿ ಹಿರಿಯನೆಂಬ ಹಮ್ಮು ಅನಂತ್‌ಗಿದೆ ಎಂಬ ಮಾತು ಸ್ಥಳೀಯ ಬಿಜೆಪಿ ವಲಯದಲ್ಲಿದೆ. ಈ ‘ಉದ್ಧಟತನ’ದಿಂದಾಗಿಯೇ ಅನಂತ್‌ಗೆ ನಾಗಪುರದ ಕೇಶವ ಶಿಲ್ಪದ ಕೃಪಾಶೀರ್ವಾದವಿದ್ದರೂ ಬಿಜೆಪಿಯ ಕೇಂದ್ರ ನಾಯಕತ್ವದ ಹತ್ತಿರ ಸೇರಿಸಲಿಲ್ಲ. ಆದರೆ ದಿವಂಗತ ಅನಂತ್‌ಕುಮಾರ್ ಶಾಸ್ತ್ರಿಯವರ ಜುಬ್ಬದ ಚುಂಗು ಹಿಡಿದುಕೊಂಡು ದಿಲ್ಲಿಯ ಕೇಸರಿ ಕೋಟೆಯ ಅಧಿಕಾರ ಅಂತಃಪುರ ಪ್ರವೇಶಿಸಿದ್ದ ಪ್ರಲ್ಹಾದ್ ಜೋಶಿ ದೊಡ್ಡವರ ಗಾಢ ಸ್ನೇಹ-ಸಂಪರ್ಕ ಬೆಳೆಸಿಕೊಂಡರು; ‘ಗುರು’ ಅನಂತ್‌ಕುಮಾರ್ ಶಾಸ್ತ್ರಿಯ ನಿಧನದ ನಂತರ ಕರ್ನಾಟಕದ ಬ್ರಾಹ್ಮಣ ಕೋಟಾದಲ್ಲಿ ಏಕಮೇವಾದ್ವಿತೀಯರಾದರು! ಬಿ.ಎಲ್. ಸಂತೋಷ್ ಯುಗದಲ್ಲಂತೂ ಜೋಶಿ ವ್ಯವಸ್ಥಿತವಾಗಿ ಅನಂತ್ ಹೆಗಡೆಯನ್ನು ಮೂಲೆ ಗುಂಪು ಮಾಡಿದರೆಂಬ ಮಾತು ಕೇಳಿಬರುತ್ತಿದೆ. ಜೋಶಿ ಕೇಂದ್ರದ ಸಂಸದೀಯ ವ್ಯವಹಾರದಂಥ ಆಯಕಟ್ಟಿನ ಸಚಿವನಾಗಿ ಪ್ರಧಾನಿ ಮೋದಿಯ ಆಪ್ತ ಬಳಗ ಸೇರಿದ ಮೇಲಂತೂ ದಿಲ್ಲಿ ಮತ್ತು ಬೆಂಗಳೂರಿನ ಬಿಜೆಪಿ ಬಿಡಾರದಲ್ಲಿ ಅನಂತ್ ಹೆಗಡೆಯನ್ನು ಕ್ಯಾರೆ ಎನ್ನುವವರೇ ಇಲ್ಲದಾಯಿತು ಎಂದು ರಾಜಕೀಯ ವಿಶ್ಲೇಷಕರು ತರ್ಕಿಸುತ್ತಾರೆ.
ಉತ್ತರ ಕನ್ನಡದಲ್ಲೂ ಅನಂತ್ ಹೆಗಡೆಯ ವರ್ಚಸ್ಸು ಕುಗ್ಗಿಸುವ ತಂತ್ರಗಾರಿಕೆಯನ್ನು ಜೋಶಿ ನಾಜೂಕಾಗಿ ಹೆಣೆದಿದ್ದರು. ಲಾಗಾಯ್ತಿನಿಂದ ಅನಂತ್ ಹೆಗಡೆಗೆ ಟಾಂಗ್ ಕೊಡುತ್ತ ಬಂದಿದ್ದ ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಜೋಶಿಗೆ ಸಹಜವಾಗಿಯೇ ಹತ್ತಿರವಾದರು. ವೈದ್ಯರಿರಲಿ, ಅಧಿಕಾರಿಗಳಿರಲಿ, ಸ್ವಪಕ್ಷದ ಜಿಲ್ಲಾ ಅಧ್ಯಕ್ಷರು, ಶಾಸಕರೇ ಆಗಿರಲಿ ಯಾರೇ ಆಗಿದ್ದರೂ ಕಪಾಳಮೋಕ್ಷ ಮಾಡಿ ಅಥವಾ ಹಲ್ಲೆ ನಡೆಸಿ ದಕ್ಕಿಸಿಕೊಳ್ಳುವ ಅನಂತ್ ಹೆಗಡೆಯನ್ನು ಕಾಗೇರಿ ಆದಿಯಾಗಿ ಯಾರೂ ಎದುರು ಹಾಕಿಕೊಳ್ಳುವ ಧೈರ್ಯ ತೋರಿಸಿದ್ದಿಲ್ಲ. ಅನಂತ್-ಕಾಗೇರಿ ಮಧ್ಯೆ ಗುದುಮುರಿಗೆ ನಡೆದೇ ಇತ್ತು. ಈ ಕಾಗೇರಿ ಹಿಡಿದುಕೊಂಡೇ ಜೋಶಿ ಜಿಲ್ಲೆಯಲ್ಲಿ ‘ಆಟ’ ಆರಂಭಿಸಿದರು. 1 ಸೆಪ್ಟೆಂಬರ್ 2015ರಂದು ಕುಮಟಾದ ಬರ್ಗಿ ಬಳಿ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಉರುಳಿ ಹಲವು ಸಾವು-ನೋವಾಗಿತ್ತು. ಸಾವಿಗೀಡಾಗಿದ್ದವರಲ್ಲಿ ಬಿಜೆಪಿಯ ತಾಲೂಕು ಸಮಿತಿಯ ಮಹಿಳಾ ಪದಾಧಿಕಾರಿಯೂ ಒಬ್ಬರಿದ್ದರು. ಆದರೂ ಅನಂತ್ ದುರಂತದ ಸ್ಥಳಕ್ಕೆ ಬರಲಿಲ್ಲ. ನೊಂದವರಿಗೆ ಸ್ಫಂದಿಸಿ ಸಂಸದನ ಹೊಣೆಗಾರಿಕೆ ನಿಭಾಯಿಸಲಿಲ್ಲ. ಸದ್ರಿ ಸಂದರ್ಭವನ್ನು ಪ್ರಲ್ಹಾದ್ ಜೋಶಿ ಸ್ವಜಾತಿ ಶತ್ರುವನ್ನು ಹಣಿಯಲು ಬಳಸಿಕೊಂಡಿದ್ದರು. ಅಂದು ಸಂಸತ್‌ನ ಪೆಟ್ರೋಲಿಯಂ ಸಮಿತಿಯಲ್ಲಿದ್ದ ಜೋಶಿ ಬರ್ಗಿಗೆ ಬಂದಿದ್ದರು. ಸ್ಥಳೀಯ ಸಂಸದರ ಉದಾಸೀನತೆ-ಹೊಣೆಗೇಡಿತನವನ್ನು ಪರೋಕ್ಷವಾಗಿ ಎತ್ತಿ ಆಡಿ ಡ್ಯಾಮೇಜ್‌ಗೆ ಪ್ರಯತ್ನಿಸಿದ್ದರು.
ಬಹುಶಃ ಅಂದೇ ಜೋಶಿ ಮುಂದೊಂದು ದಿನ ಅನಂತಕುಮಾರ್ ಹೆಗಡೆಗೆ ಕೊಕ್ ಕೊಟ್ಟು ಉತ್ತರ ಕನ್ನಡದಿಂದ ಸಂಸದನಾಗುವ ದೂರಾಲೋಚನೆ ಹಾಕಿದ್ದರೇನೋ ಎಂಬ ಅನುಮಾನ ಬಿಜೆಪಿಗರನ್ನು ಈಗ ಕಾಡುತ್ತಿದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ‘ಲಿಂಗಾಯತ ಹಾರ್ಟ್ ಲ್ಯಾಂಡ್’ ಎನ್ನಲಾಗುವ ಧಾರವಾಡ ಮತ್ತು ಹಾವೇರಿಯಲ್ಲಿ ಬಿಜೆಪಿ ಮುಗ್ಗರಿಸಿದ ನಂತರ ಜೋಶಿ ನೆಲೆ ತಪ್ಪಿದಂತೆ ಚಡಪಡಿಕೆ ಹತ್ತಿತ್ತು. ಮಾಜಿ ಸಿಎಂ-ಲಿಂಗಾಯತ ಸಮುದಾಯದ ಪ್ರಬಲ ಮುಂದಾಳು ಜಗದೀಶ್ ಶೆಟ್ಟರ್‌ರನ್ನು ಎದುರು ಹಾಕಿಕೊಂಡಿರುವ ಜೋಶಿಗೆ ಧಾರವಾಡದಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆದ್ದುಬರುವ ಧೈರ್ಯವಿಲ್ಲದಾಗಿತ್ತು. ಬ್ರಾಹ್ಮಣರು ಜಾಸ್ತಿಯಿರುವ ಉತ್ತರ ಕನ್ನಡ ಮತ್ತು ಕೇಸರಿ ಸೆಳೆತದ ಮರಾಠರು ನಿರ್ಣಾಯಕರಾಗಿರುವ ಖಾನಾಪುರ, ಕಿತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿರುವುದರಿಂದ ಕೆನರಾ ಜೋಶಿಯಲ್ಲಿ ಆಸೆ-ಕನಸು ಮೂಡಿಸಿತ್ತು. ಅನಂತ್‌ಗೆ ಕೇಸರಿ ಟಿಕೆಟ್ ತಪ್ಪಿಸಲೇಬೇಕೆಂದರೆ ಜೋಶಿ-ಸಂತೋಷ್ ಕೂಟಕ್ಕೇನೂ ಕಷ್ಟದ ಕೆಲಸವಾಗಿರಲಿಲ್ಲವೆಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಇದ್ದಕ್ಕಿದ್ದಂತೆ ಈಗೊಂದು ತಿಂಗಳಿಂದ ಜೋಶಿ ಅನಂತ್ ಹೆಗಡೆಯನ್ನು ಎದುರು ಹಾಕಿಕೊಂಡು ಅಪರಿಚಿತ ಉತ್ತರ ಕನ್ನಡದಲ್ಲಿ ತಿಣುಕಾಡುವುದಕ್ಕಿಂತ ಲಿಂಗಾಯತರ ರಮಿಸಿದರೆ ಧಾರವಾಡವೇ ಸುರಕ್ಷಿತ ಕ್ಷೇತ್ರವೆಂಬ ನಿರ್ಧಾರಕ್ಕೆ ಬಂದಿದ್ದಾರೆ.
ಪ್ರಲ್ಹಾದ್ ಜೋಶಿ ಮನಸ್ಸು ಬದಲಾಗುತ್ತಿದ್ದಂತೆಯೇ ಮಾಜಿ ಸ್ಫೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ‘ಮೈದಾನ’ಕ್ಕೆ ಇಳಿದುಬಿಟ್ಟರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿರಸಿಯಲ್ಲಿ ಹೀನಾಯವಾಗಿ ಸೋತಿರುವ ಕಾಗೇರಿಗೆ ಆ ಕ್ಷಣದಿಂದಲೇ ದಿಲ್ಲಿ ಕನಸು ಬೀಳತೊಡಗಿತ್ತು. ಕಳೆದ ನಾಲ್ಕೂವರೆ ವರ್ಷದಿಂದ ಸಂಸದ ಅನಂತ್ ಹೆಗಡೆ ಎರಡು ದಶಕದಿಂದ ತನ್ನನ್ನು ಎಂಪಿ ಪೀಠದಲ್ಲಿ ಪ್ರತಿಷ್ಠಾಪಿಸುತ್ತ ಬಂದಿರುವ ಕ್ಷೇತ್ರದ ಜನರಿಗೆ ದ್ರೋಹಮಾಡಿ ಬಿಲ ಸೇರಿಕೊಂಡು ಸ್ವಹಿತಾಸಕ್ತಿಯ ಕೆಲಸ-ಕಾರ್ಯದಲ್ಲಿ ತಲ್ಲೀನರಾಗಿದ್ದು, ಬೆಂಬಿಡದ ಕೀಮೋಥೆರಫಿ ಮತ್ತು ಬಿಸಿಲಲ್ಲಿ ಓಡಾಡಲಾಗದಂತ ಕಾಯಿಲೆ ಬಾಧಿಸುತ್ತಿರುವುದರಿಂದ ರಾಜಕೀಯದಿಂದ ದೂರಾಗುತ್ತಾರೆಂಬ ವದಂತಿಗಳು, ಬಿಜೆಪಿ ಹೈಕಮಾಂಡಿಗೂ ಅನಂತ್ ಬೇಡಾಗಿದ್ದಾರೆಂಬ ಭಾವನೆ ಮತ್ತು ಎಲ್ಲಕಿಂತ ಹೆಚ್ಚಾಗಿ ತನಗೆ ಚುನಾವಣೆ ರಾಜಕಾರಣ ಸಾಕಾಗಿದೆ-ಬಿಜೆಪಿಯಲ್ಲಿನ ಬೆಳವಣಿಗೆಯಿಂದ ಸಿಟ್ಟುಬಂದಿದೆ ಎಂಬ ಒಂಥರಾ ‘ಸ್ಮಶಾನ ವೈರಾಗ್ಯ’ ಮೌನ ಸಂದೇಶದ ಖುದ್ದು ಅನಂತಕುಮಾರ್ ಹೆಗಡೆಯೇ ಹಬ್ಬಿಸಿಕೊಂಡಿದ್ದು ಕಾಗೇರಿಯನ್ನು ‘ಕ್ರಿಯಾಶೀಲ’ರನ್ನಾಗಿ ಮಾಡಿತ್ತು. ಕಾಗೇರಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಇಡೀ ಜಿಲ್ಲೆ ಸುತ್ತುಹಾಕಲಾರಂಭಿಸಿದರು. ತನ್ನ ಮೂರು ದಶಕದ ಅಧಿಕಾರ ರಾಜಕಾರಣದಲ್ಲಿ ಕಾಗೇರಿ ಇಷ್ಟು ಛಲದಿಂದ ಬಿಜೆಪಿಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲವೆಂದು ಕೇಸರಿ ಕಾರ್ಯಕರ್ತರೇ ಹೇಳುತ್ತಾರೆ.
ಇದನ್ನು ಓದಿದ್ದೀರಾ?: ರಾಮಮಂದಿರ- ರಾಹುಲ್ ಯಾತ್ರೆ: ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳು ಹೇಗೆ ವರದಿ ಮಾಡುತ್ತಿವೆ?
ಇದಕ್ಕೆ ಸಮಾನಾಂತರವಾಗಿ ಆರೆಸೆಸ್‌ನ ಹಿಂದುತ್ವದ ‘ಧ್ಯೇಯನಿಷ್ಠ’ ಪತ್ರಕರ್ತ-ವಿಸ್ತಾರ ಟಿವಿಯ ಮುಖ್ಯಸ್ಥ ಯಲ್ಲಾಪುರದ ಹರಿಪ್ರಕಾಶ್ ಕೋಣೆಮನೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗುವ ಪ್ರಯತ್ನ ಬಿರುಸಾಗಿಸಿಕೊಂಡಿದ್ದರು. ಹಿರಿಯ ಕಾಗೇರಿಗೆ ಜೂನಿಯರ್ ಕೋಣೆಮನೆ ಟಕ್ಕರ್ ಕೊಡುತ್ತಿದ್ದಾರೆ. ಕಾಗೇರಿ ಮತ್ತು ಕೋಣೆಮನೆ ಇಬ್ಬರೂ ಕೆನರಾ ಕ್ಷೇತ್ರದ ಕೇಸರಿ ಟಿಕೆಟ್ ಹಂಚಿಕೆಯಲ್ಲಿ ನಿರ್ಣಾಯಕ ಪಾತ್ರವಾಡುವ ಸಂತೋಷ್-ಜೋಶಿ ಬಳಗದವರೇ; ಇಬ್ಬರನ್ನೂ ಅನಂತ್ ವಿರುದ್ದ ಅಖಾಡಕ್ಕಿಳಿಸಿದ್ದೂ ಈ ಜೋಡಿಯೆ ಎಂಬುದು ಬಿಜೆಪಿಯಲ್ಲಿ ಬಹಿರಂಗ ರಹಸ್ಯ. ಕಾಗೇರಿ-ಕೋಣೆಮನೆಯ ಬಲಾಬಲ, ಗುಣಾವಗುಣವನ್ನು ಸಂತೋಷ್-ಕಾಗೇರಿ ಅಳೆದು-ತೂಗಿ ನೋಡುತ್ತಿದೆ ಎಂಬ ಮಾತು ಕೇಳಿಬರುತ್ತದೆ. ಕಾಗೇರಿ ಕಳೆದ ಮೂರು ದಶಕದಿಂದ ಸತತ ಶಾಸಕ, ರಾಜ್ಯ ಕ್ಯಾಬಿನೆಟ್ ದರ್ಜೆ ಮಂತ್ರಿ ಮತ್ತು ಪ್ರಮುಖ ವಿಧಾನಸಭಾ ಅಧ್ಯಕ್ಷತೆಗೇರಿದರೂ ತವರು ಶಿರಸಿ ಆಚೆಗೆ ವರ್ಚಸ್ಸು ಬೆಳೆಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬ ಭಾವನೆ ಹೈಕಮಾಂಡ್ ಮಟ್ಟದಲ್ಲಿದೆ. ಹೊಸಬರಿಗೆ ಅವಕಾಶ ಕೊಡುವ ಯೋಚನೆ ದೊಡ್ಡವರ ತಲೆಯಲ್ಲಿದೆ ಎನ್ನಲಾಗುತ್ತಿದೆ. ಹೀಗಾಗಿ ಕೇಶವ ಕೃಪಾದಿಂದ ಕೇಶವ ಶಿಲ್ಪದ ವರೆಗೆ ಪ್ರಬಲ ಸಂಪರ್ಕವಿರುವ ಕೋಣೆಮನೆ – ಕಾಗೇರಿಯನ್ನು ಹಿಮ್ಮೆಟ್ಟಿಸಿ ಕೇಸರಿ ಪಕ್ಷದ ಕ್ಯಾಂಡಿಡೇಟಾಗುವ ಸಾಧ್ಯತೆ ನಿಚ್ಚಳವಾಗುತ್ತಿದೆ. ರಾಷ್ಟ್ರೀಯ ಸಂಘಿ ಸಂಸ್ಥಾನದಲ್ಲಿ ಮೋಹನ ಭಾಗವತ್ ನಂತರದ ನಂಬರ್ ಟೂ ಸ್ಥಾನದಲ್ಲಿರುವ ಕರ್ನಾಟಕದ ಸೊರಬ ಮೂಲದ ದತ್ತಾತ್ರೇಯ ಹೊಸಬಾಳೆ ಪರಿವಾರಕ್ಕೆ ಅನಂತ್ ಅಂದರೆ ಅಷ್ಟಕ್ಕಷ್ಟೇ. ಈ ಹೊಸಬಾಳೆ ಅಭಯ ಕೋಣೆಮನೆಗಿದೆ ಎನ್ನಲಾಗಿದೆ.
ಈಚೆಗೆ ಕೋಣೆಮನೆಯನ್ನು ರಾಜ್ಯ ಬಿಜೆಪಿ ವಕ್ತಾರರನ್ನಾಗಿ ನೇಮಿಸಲಾಗಿದೆ. ಇದು ಕೋಣೆಮನೆ ಕೇಸರಿ ಟಿಕೆಟ್ ಪೈಪೋಟಿಯಲ್ಲಿ ಮುಂದಿದ್ದಾರೆಂಬುದನ್ನು ಬಿಂಬಿಸುವಂತಿದೆ ಎಂಬ ತರ್ಕಗಳು ಬಿಜೆಪಿ ಬಿಡಾರದಲ್ಲಿದೆ. ಹವ್ಯಕ ಬ್ರಾಹ್ಮಣ ಅನಂತ್ ಹೆಗಡೆಗೆ ಕೊಕ್ ಕೊಟ್ಟರೆ ಅದೇ ಸಮುದಾಯದ ಕಾಗೇರಿ ಇಲ್ಲವೇ ಕೋಣೆಮನೆಗೆ ಬಿಜೆಪಿ ಮಣೆ ಹಾಕುವುದರಲ್ಲಿ ಅನುಮಾನವಿಲ್ಲ. ಸಂಘ ಪರಿವಾರದ ಸಕಲ ‘ಸಿದ್ಧಾಂತ’ಕ್ಕೆ ಸದಾ ಬದ್ಧರಾಗಿರುವ ಕಾಗೇರಿ-ಕೋಣೆಮನೆ ಬಿಟ್ಟು ಬಿಜೆಪಿ ಟಿಕೆಟ್ ಕಮಿಟಿಯ ಸಂಘಿ ಶ್ರೇಷ್ಠರು ಸಂಘ ಮರ್ಮ ಅರ್ಥವಾಗದ ಶೂದ್ರಾದಿಗಳಿಗೆ ಅವಕಾಶ ಕೊಡುವ ಸಾಧ್ಯತೆಯಂತೂ ಸದ್ಯದ ಪರಿಸ್ಥಿತಿಯಲ್ಲಿ ಕಾಣಿಸುತ್ತಿಲ್ಲ. ಇದು ಗೊತ್ತಿದ್ದೂ ಮಾಜಿ ಶಾಸಕ ದೀವರು ಜಾತಿಯ ಸುನಿಲ್ ನಾಯ್ಕ್ ಮತ್ತು ಪಡ್ತಿ-ಕ್ರಿಶ್ಚಿಯನ್ ಹಾಗು ಕೊಂಕಣ ಮರಾಠ ಸಮುದಾಯದ ನಂಟಿರುವ ಕಾರವಾರದ ಮಾಜಿ ಶಾಸಕಿ ರೂಪಾಲಿ ನಾಯ್ಕ್, ಜಿಲ್ಲಾ ಬಿಜೆಪಿ ವಕ್ತಾರ ನಾಡವ ಸಮುದಾಯದ ವಕೀಲ ನಾಗರಾಜ್ ನಾಯಕ ಮುಂತಾದ ಬಿಜೆಪಿಯ ‘ಹಿಂದುಳಿದವರು’ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದಾರೆ ಎಂದು ಬಿಜೆಪಿಯ ಜನಿವಾರ ನೀತಿ ಬಲ್ಲವರು ತಮಾಷೆ ಮಾಡುತ್ತಾರೆ.
ಬಿಜೆಪಿಯಲ್ಲಿ ತನಗೆ ಟಿಕೆಟ್ ತಪ್ಪಿಸುವ ಯೋಜನಾಬದ್ಧ ತಂತ್ರಗಾರಿಕೆಗಳಾಗುತ್ತಿದೆ ಎಂಬುದು ಅರಿವಿಗೆ ಬರುತ್ತಿರುವಂತೆಯೇ ಸಂಸದ ಅನಂತ್ ಹೆಗಡೆ ಮೈ ಕೊಡವಿಕೊಂಡು ಎದ್ದು ನಿಂತಿದ್ದಾರೆ! ಬಿಜೆಪಿ ಟಿಕೆಟ್ ಆಕಾಂಕ್ಷಿಯಲ್ಲವೆಂದು ಎಲ್ಲಿಯೂ ಬಹಿರಂಗವಾಗಿ ಹೇಳದಿದ್ದರೂ ಮತ್ತೆ ಸ್ಪರ್ಧೆಯ ಆಸೆಯಿಲ್ಲವೆಂಬಂತೆ ತೋರಿಸಿಕೊಳ್ಳುತ್ತಿದ್ದ ಅನಂತ್ ಮೂರು ವಾರದಿಂದ ಅತಿಯಾದ ‘ಚಟುವಟಿಕೆ’ ಪ್ರದರ್ಶಿಸಲಾರಂಭಿಸಿದ್ದಾರೆ. ತನ್ನ ಹಿಂಬಾಲಕರ ತಂಡಗಳು ಮನೆಗೆ ಬಂದು ಸಕ್ರಿಯ ರಾಜಕಾರಣಕ್ಕೆ ಬರುವಂತೆ ಒತ್ತಾಯಿಸುವ ಪ್ರಹಸನ ಶುರುಹಚ್ಚಿಕೊಂಡಿದ್ದಾರೆ. ಊರೂರು ಸುತ್ತುತ್ತ ಇಷ್ಟು ದಿನ ಕಾರ್ಯಕರ್ತರನ್ನು ಕಡೆಗಣಿಸಿ ತಪ್ಪು ಮಾಡಿದ್ದೇನೆ; ಅನಾರೋಗ್ಯದಿಂದ ರಾಜಕೀಯ ನಿವೃತ್ತಿಗೆ ಯೋಚಿಸಿದ್ದ. ಆದರೆ ಅಭಿಮಾನಿಗಳು ರಾಜಕಾರಣದಲ್ಲಿದ್ದು ಮತ್ತೆ ಸಂಸದನಾಗುವಂತೆ ಒತ್ತಾಯಿಸುತ್ತಿದ್ದಾರೆ. ನಂಬಿದವರ ಕೋರಿಕೆ ಕಡೆಗಣಿಸಿದರೆ ಮೂರ್ಖತನವಾಗುತ್ತದೆ ಎನ್ನುತ್ತ ಅಧಿಕಾರ ರಾಜಕಾರಣ ವರಸೆ ಆರಂಭಿಸಿದ್ದಾರೆ. ಸ್ವಯಂ ಘೋಷಿತ ದೇಶ ಪ್ರೇಮಿಯ ಅಧಿಕಾರ ವ್ಯಾಮೋಹ ಕಟ್ಟರ್ ಹಿಂದತ್ವವಾದಿಗಳನ್ನೆ ನಿಬ್ಬೆರಗಾಗಿಸಿಬಿಟ್ಟಿದೆ. ಅಲ್ಲಿಗೆ ಅನಂತ್ ಹೆಗಡೆಯ ಅಸಲಿ ಹಿಂದುತ್ವವೂ ಅನಾವರಣವಾದಂತಾಗಿದೆ!
ಅನಂತಕುಮಾರ್ ಹೆಗಡೆಗೆ ಮತ್ತೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯದ ನಾಟಕೀಯ ಘಟನಾವಳಿಗಳು ನಡೆಯುತ್ತಿರುವುದು ಸ್ವತಃ ಅನಂತರದೆ ಪ್ರಾಯೋಜಿತ ಕಾರ್ಯಕ್ರಮ ಎಂಬುದು ಕೇಸರಿ ಕಮಾಂಡಿಗಷ್ಟೇ ಅಲ್ಲ, ಕ್ಷೇತ್ರದ ಜನಸಾಮಾನ್ಯರಿಗೂ ಪಕ್ಕಾ ಆಗಿಹೋಗಿದೆ. ಚುನಾವಣೆಯಲ್ಲಿ ಗೆದ್ದ ಮರು ಕ್ಷಣವೇ ಅದೃಶ್ಯವಾಗಿ ತನ್ನ ಲಾಭದಾಯಕ ‘ದಂಧೆ’ಗಳಲ್ಲಿ ತಲ್ಲೀನವಾಗುವ; ಮತ್ತೆ ಚುನಾವಣೆಗೆ ಮೂರ್ನಾಲ್ಕು ತಿಂಗಳಿರುವಾಗ ಪ್ರಚೋದಕ ಹಿಂದುತ್ವದ ಮಾತುಗಾರಿಕೆ, ಸೆಕ್ಯುಲರ್ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಮುಂದಾಳುಗಳನ್ನು ಮೂದಲಿಸುವ ಮೂರನೇ ದರ್ಜೆ ಹೇಳಿಕೆ ಬಿತ್ತರಿಸುತ್ತ ಗುಟುರು ಹಾಕುವುದು ಈ ಗೊರಕೆ ಎಂಪಿಯ ಚುನಾವಣಾ ತಂತ್ರಗಾರಿಕೆ. ಕಳೆದ ಮೂರು ಚುನಾವಣೆ ಸಂದರ್ಭದಲ್ಲಿ ಪ್ರದರ್ಶಿಸಿದ್ದ ‘ಚಾಳಿ’ ಈಗ ಮತ್ತೆ ಅನಂತ್ ಶುರುಹಚ್ಚಿಕೊಂಡಿದ್ದಾರೆ; ಸುದ್ದಿ ಸದ್ದಿಗಾಗಿ ಅಯೋಧ್ಯೆಯ ರಾಮ ಮಂದಿರದ ನೆಪದಲ್ಲಿ ಸಿಎಂ ಸಿದ್ದುರನ್ನು ಬಾಯಿಗೆ ಬಂದಂತೆ ಬೈಯುತ್ತಿರುವ ಅನಂತ್ ತನಗೆ ರಾಜಕೀಯ ದೀಕ್ಷೆ ಕೊಟ್ಟ ’ಗುರು’ ಮಾಜಿ ಶಾಸಕ ಚಿತ್ತರಂಜನ್ ಕೊಲೆ ಕೇಸಿಗೆ ಬಿಜೆಪಿ ಸರಕಾರವೇ ಸಿ-ರಿಪೋರ್ಟ್ ಜಡಿದರೂ ನ್ಯಾಯಕ್ಕಾಗಿ ಹೋರಾಡಬೇಕೆನಿಸಲಿಲ್ಲ; ಹೊನ್ನಾವರದ ಮೀನುಗಾರರ ಹುಡುಗ ಪರೇಶ್ ಮೇಸ್ತನ ಆಕಸ್ಮಿಕ ಸಾವನ್ನು ಮುಸ್ಲಿಮರಿಂದಾದ ಕಗ್ಗೊಲೆ ಎಂದು ಹುಯಿಲೆಬ್ಬಿಸಿ ಹಿಂದುತ್ವದ ‘ಹೀರೋ’ ಆಗಿದ್ದ ಅನಂತ್ ಮೋದಿ ಸರಕಾರದ ಸಿಬಿಐ ಸದ್ರಿ ಕೇಸಿಗೆ ಬಿ-ರಿಪೋರ್ಟ್ ಹಾಕಿದಾಗಲೂ ಚಕಾರ ಎತ್ತಲಿಲ್ಲ; ಈಗ ರಾಮಮಂದಿರವನ್ನು ಅನಂತ್ ಅಸ್ತ್ರ ಮಾಡಿಕೊಂಡಿದ್ದಾರೆ ಎಂದು ಬಿಜೆಪಿಗರೇ ಹೇಳುತ್ತಾರೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಅನಂತಕುಮಾರ್ ಎಂಬ ಬೆಂಕಿ ಬಾಲಕನೂ, ಜನಿವಾರದಾಟವೂ
ಅನಂತ್‌ಗೆ ಈ ಬಾರಿ ಹೈಕಮಾಂಡ್ ಕೇಸರಿ ಟಿಕೆಟ್ ಧಾರಾಳವಾಗಿ ದಯಪಾಲಿಸುವುದಿಲ್ಲವೆಂಬುದು ಖಾತ್ರಿಯಾಗಿದೆ. ಕರ್ಮಗೇಡಿ ಎಂಪಿ ಅನಂತ್‌ಗೆ ಪುನಃ ಅವಕಾಶ ಕೊಡಕೂಡದೆಂಬ ಆಗ್ರಹಗಳು ಸ್ಥಳೀಯವಾಗಿಯೂ ಕೇಳಿಬರುತ್ತಿದೆ. ಮೂರು ದಿನದ ಹಿಂದೆ ಬೆಂಗಳೂರಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಮೀಟಿಂಗ್‌ನಲ್ಲಿ ಅನಂತ್‌ಗೆ ಪ್ರಬಲ ವಿರೋಧ ವ್ಯಕ್ತವಾಗಿದೆ. ಇದರಿಂದ ಕಂಗಾಲಾಗಿರುವ ಅನಂತ್ ಹಿಂದುತ್ವದ ಕೀಳು ಭಾಷೆ ಬಿತ್ತರಿಸಿ ‘ತನ್ನತನ’ ಹೈಕಮಾಂಡಿಗೆ ತೋರಿಸಿಕೊಳ್ಳುವುದು ಅನಿವಾರ್ಯ ‘ಕರ್ಮ’ದಂತಾಗಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಹಿಂದುತ್ವದ ಹೆಸರಲ್ಲಿ ಅದೆಷ್ಟೇ ತಿಪ್ಪರಲಾಗ ಹಾಕಿದರೂ ಅನಂತ್‌ಗೆ ಈ ಬಾರಿ ಕೇಸರಿ ಅಭ್ಯರ್ಥಿಯಾಗುವುದು ಪ್ರಯಾಸದ ಕಸರತ್ತಾಗುತ್ತಿದೆ. ಪಕ್ಷಕ್ಕೆ ಡ್ಯಾಮೇಜು ಮಾಡುವ ಹುಚ್ಚು ಹಿಂದುತ್ವ, ಪಕ್ಷದ ಕಾರ್ಯಕ್ರಮಗಳಿಂದ ಬುದ್ದಿಪೂರ್ವಕವಾಗಿ ದೂರವಾಗಿದ್ದು, ಕ್ಷೇತ್ರದಲ್ಲಿರುವ ಪ್ರಬಲ ಆಡಳಿತ ವಿರೋಧಿ ಅಲೆ ಮತ್ತು ಕೇಂದ್ರದ ಕೇಸರಿ ನಾಯಕತ್ವದೊಂದಿಗಿನ ಸಂಘರ್ಷದಿಂದ ಕಳೆಗುಂದಿರುವ ಅನಂತಕುಮಾರ್ ಹೆಗಡೆಗೆ ಟಿಕೆಟ್ ಕೊಟ್ಟರೆ ಕಷ್ಟ ಎಂಬ ಆತಂಕವೂ ಹೈಕಮಾಂಡ್ ಮಟ್ಟದಲ್ಲಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ತಾನು ಹೇಳಿದವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಕೆರಳಿದ್ದ ಅನಂತ್ ಸಾಕ್ಷಾತ್ ಪ್ರಧಾನಿ ಮೋದಿಯಂಥ ಮೋದಿಯೇ ಜಿಲ್ಲೆಯ ಅಂಕೋಲೆಗೆ ಪ್ರಚಾರಕ್ಕೆಂದು ಬಂದರೂ ಬಹಿಷ್ಕಾರ ಹಾಕಿ ಸೆಡ್ಡುಹೊಡೆದು ಅಪಮಾನಿಸಿದ್ದು ಪಕ್ಷದ ಸುಪ್ರಿಮೋಗಳ ಕಣ್ಣು ಕೆಂಪಗಾಗಿಸಿದೆ. ಇದೆಲ್ಲದರಿಂದ ಅನಂತ್ ಪಕ್ಷಕ್ಕೆ ಬೇಡದ ಪೀಡೆಯಂತಾಗಿದ್ದಾರೆ ಎಂದು ಆತನ ವಿರೋಧಿಗಳು ಹೇಳುತ್ತಾರೆ.
ಚುನಾವಣಾ ಪಂದ್ಯದಲ್ಲಿ ನಿರ್ಣಾಯಕವಾದ ಜಿಲ್ಲೆಯ ಬಹುಸಂಖ್ಯಾತ ಸಮುದಾಯದಲ್ಲಿ ಒಂದಾದ ದೀವರಲ್ಲಿ ಅನಂತ್ ಹೆಗಡೆ ತಮ್ಮನ್ನು ಹಿಂದಿನಿಂದಲೂ ಯಾಮಾರಿಸುತ್ತಲೇ ಬಂದರೆಂಬ ಆಕ್ರೋಶ ಮಡುಗಟ್ಟಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ದೀವರು(ಈಡಿಗ) ಸಮುದಾಯವನ್ನು ಮರ್ಯಾದೆಯಿಂದ ನಡೆಸಿಕೊಂಡಿಲ್ಲವೆಂಬ ಅಸಮಾಧಾನವಿದೆ. ಈ ಆಕ್ರೋಶ ಶಿರಸಿಯಲ್ಲಿ ಕಾಗೇರಿಯ ಸಾಮ್ರಾಜ್ಯ ಪತನಕ್ಕೂ ಹೇತುವಾಯಿತು. ದೇವರಾಯ ನಾಯಕರ ಎಂಪಿಗಿರಿ ನಂತರ ಅಖಂಡವಾಗಿ ಬಿಜೆಪಿ ಬೆನ್ನಿಗೆ ನಿಂತಿದ್ದ ದೀವರಿಗೀಗ ಭ್ರಮನಿರಸನವಾಗಿದೆ. ಗೋ ರಕ್ಷಣೆ ನೆಪದಲ್ಲಿ ‘ಗಂಟಿ(ಜಾನುವಾರು) ಗೋಟಾವಳಿ’ಗೆ ಹಿಂದುಳಿದ ವರ್ಗದ ಹುಡುಗರಿಗೆ ಹಚ್ಚಿ ಮೇಲ್ವರ್ಗದ ಹುಡುಗರು ಇಂಜಿನಿಯರಿಂಗ್, ಮೆಡಿಕಲ್ ಮುಂತಾದ ಉನ್ನತ ಶಿಕ್ಷಣಕ್ಕೆ ಹೋಗುವಂತೆ ನೋಡಿಕೊಂಡ ಮೋಸಗಾರಿಕೆ ಬಗ್ಗೆ ಈಗೀಗ ಶೋಷಿತ ಸಮುದಾಯಕ್ಕೆ ಜ್ಞಾನೋದಯವಾಗುತ್ತಿದೆ. ಅನಂತಕುಮಾರ್ ಹೆಗಡೆಯನ್ನು ನಂಬಿ ಗಂಟಿ ತಂಟೆಗೆ ಹೋಗಿದ್ದ ಕುಮಟಾದ ಸೂರಜ್ ನಾಯ್ಕ್ ಸೋನಿ ತಿಂಗಳುಗಟ್ಟಲೆ ಜೈಲು ಪಾಲಾಗಬೇಕಾಗಿ ಬಂದಿತ್ತು. ಅನಂತ್ ಅಚ್ಚುಮೆಚ್ಚಿನ ಶಿಷ್ಯ ತಾನೆನ್ನುತ್ತಿದ್ದ ಸೋನಿ ರಕ್ಷಣೆಗೆ ಗುರು ಬರಲೇ ಇಲ್ಲ! ಧರ್ಮ ರಕ್ಷಣೆಯ ಉದ್ದುದ್ದ ‘ಪ್ರವಚನ’ ಬಿಗಿಯುವ ಅನಂತ್ ಹೆಗಡೆಯಿಂದ ಒಬ್ಬೇ ಒಬ್ಬ ಬ್ರಾಹ್ಮಣ ಮಾಣಿಯನ್ನು ಜೈಲಿಗೆ ಹೋಗುವಂಥ ಹಿಂದುತ್ವದ ಮಿಲಿಟೆಂಟ್ ಮಾಡಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಜ್ಞಾವಂತ ಶೂದ್ರರೀಗ ತಲೆ ಕೆಡಿಸಿಕೊಂಡಿದ್ದಾರೆ.
ಹೆಗಡೆ ಕ್ಷೇತ್ರದ ಅಭಿವೃದ್ಧಿ, ರೈತ-ತೋಟಿಗ-ಮೀನುಗಾರರ ಹಿತದ ಚಿಂತನೆ ಮಾಡಿದ ಕುರುಹುಗಳ್ಯಾವುದೂ ಕಾಣಿಸದು. ಅಗರ್‌ವುಡ್, ವೆನಿಲಾದಿಂದ ತೋಟಿಗರು ಅಭಿವೃದ್ಧಿ ಮಾಡುತ್ತೇನೆಂದರು; ಕರಾವಳಿಯಲ್ಲಿ ಬೃಹತ್ ವಾಣಿಜ್ಯ ಬಂದರುಗಳನ್ನು ಕಟ್ಟಿ ಪ್ರಗತಿ ಸಾಧಿಸದೆ ವಿಶ್ರಮಿಸುವುದಿಲ್ಲವೆಂದು ವೀರಾವೇಶ ತೋರಿಸಿದ್ದರು. ಆದರೆ, ಸ್ಥಳೀಯ ಸಮಸ್ಯೆಗಳ ಪರಿಹಾರ ಕೋರಿಬರುವ ಜನರಿಗೆ ‘ನಿಮ್ಮ ಎಮ್ಮೆಲ್ಲೆ ಸತ್ತಿದ್ದಾನಾ? ಇದು ಎಂಪಿ ಕೆಲಸವಲ್ಲ’ ಎಂದು ಬೈದು ಓಡಿಸುವ ಅನಂತ್ ಹೆಗಡೆ ‘ಮಾಳ ಮುಟ್ಟದ ಸೂಡಿ’ ತೋರಿಸಿದ್ದೇ ಹೆಚ್ಚೆಂಬ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ಬೇರೆಯವರ ‘ದೇಶ ದ್ರೋಹ’ದ ಬಗ್ಗೆ ಉದ್ದುದ್ದ ಮಾತನಾಡುವ ಅನಂತ್, ಶಿರಸಿಯ ಮತ್ತಿಘಟ್ಟದ ಬಳಿ ದೇಶದ ಸಂಪತ್ತಾದ ಅರಣ್ಯ ಕಬಳಿಸಿ ಜಬರ್ದಸ್ತ್ ಅಡಿಕೆ ತೋಟ ಮಾಡಿಕೊಂಡಿರುವುದು ಯಾವ ಸೀಮೆಯ ದೇಶ ಪ್ರೇಮ? ಇಸ್ಲಾಮ್ ಅಳಿಯದ ಹೊರತು ಭೂ ಮಂಡಲಕ್ಕೆ ನೆಮ್ಮದಿ ಸಿಗದೆಂದಿದ್ದ ಅನಂತ್, ಅರಬ್ ದೇಶಗಳಿಂದ ತನ್ನ ಹೆಂಡತಿಯ ಯಜಮಾನಿಕೆಯ ಕದಂಬ ಸಂಸ್ಥೆಗೆ ಆಸ್ಪಾಲ್ಟ್(ಡಾಂಬರು) ಆಮದು ಮಾಡಿಕೊಂಡು ಕಂಟ್ರಾಕ್ಟರ್‌ಗಳಿಗೆ ಮಾರುವುದು ಧರ್ಮ ರಕ್ಷಣೆಯಾ? ಶಿರಸಿಯ ರೌಡಿ ಶೀಟರ್ ಫಯ್ಯು ಉರುಫ್ ಫಯಾಜ್ ಚೌಟಿ ಜತೆ ವೇದಿಕೆ ಹಂಚಿಕೊಂಡಿದ್ದು- ಆತನೊಂದಿಗೆ ಸಂಸದರ ಸಂಗಾತಿಗಳು ವ್ಯಾವಹಾರಿಕ ಸಂಬಂಧ ಸಾಧಿಸಿದ್ದು ಬೂಟಾಟಿಕೆಯ ಹಿಂದುತ್ವವಲ್ಲವಾ ಎಂಬ ಜಿಜ್ಞಾಸೆ ಜಿಲ್ಲೆಯಲ್ಲಿದೆ.
ಅನಂತ್ ಹೆಗಡೆ ಕೇಸರಿ ಕ್ಯಾಂಡಿಡೇಟಾಗಲು ಸಫಲರಾದರೂ ಗೆಲವು ಮಾತ್ರ ಹಿಂದಿನಂತೆ ಸಲೀಸೇನಲ್ಲ. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಗ ಪ್ರಶಾಂತ್ ಏನಾದರೂ ಕಾಂಗ್ರೆಸ್ ಕ್ಯಾಂಡಿಡೇಟಾದರೆ ಹಣಾಹಣಿ ಕಾಳಗ ಏರ್ಪಡಲಿದೆ ಎಂದು ಜಿಲ್ಲೆಯ ಅಖಾಡದ ಸೂತ್ರ-ಸಮೀಕರಣ ಬಲ್ಲ ಚುನಾವಣಾ ವಿಶ್ಲೇಷಕರು ಹೇಳುತ್ತಾರೆ. ಅಷ್ಟಕ್ಕೂ ಅನಂತ್ ಹೆಗಡೆ ಹಿಂದೆಲ್ಲ ಗೆದ್ದಿದ್ದು ಚಿತ್ತರಂಜನ್ ‘ಬಲಿದಾನ’, ಕಾಂಗ್ರೆಸ್ ನ ಮಾರ್ಗರೆಟ್ ಆಳ್ವ-ದೇಶಪಾಂಡೆ ಬಣಗಳ ಕಾಲೆಳೆದಾಟ, ಮೋದಿ ಮಂಕು ಬೂದಿಗಳಿಂದಾಗಿಯೇ ಹೊರತು ಸ್ವಂತ ಸಾಮರ್ಥ್ಯದಿಂದ ಅಲ್ಲ. ತಮಾಷೆ ಎಂದರೆ ಸತತ ಆರು ಬಾರಿ ಸಂಸದನಾಗಿ ಆಯ್ಕೆಯಾಗಿದ್ದರೂ ಅನಂತ್‌ಗೆ ಕನಿಷ್ಠ ಹಿಂದುಗಳ ನಂಬಿಕಾರ್ಹ ನಾಯಕನೂ ಆಗಲಾಗಿಲ್ಲ. ಆರು ಸಲದ ಎಂಪಿ ನಿಧಿ ಜಿಲ್ಲೆಯ ಎಲ್ಲಿ ಹೇಗೆ ಬಳಕೆಯಾಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಅನಂತ್ ಹೆಗಡೆಯ ಇಪ್ಪತ್ತೆಂಟು ವರ್ಷಗಳ ಎಂಪಿ ಪರ್ವದಲ್ಲಿ ಕ್ಷೇತ್ರ ಯಾವ ರಂಗದಲ್ಲೂ ಅಭಿವೃದ್ಧಿ ಕಾಣದಿದ್ದರೂ ರಾಜಕಾರಣಕ್ಕೆ ಬರುವ ಮೊದಲು ಆರೆಸೆಸ್‌ನ ವಾರಾನ್ನದ ಮಾಣಿಯಾಗಿದ್ದ ಸಂಸದ ಸಾಹೇಬರು ಸಕಲ ಪ್ರಗತಿ ಸಾಧಿಸಿದ್ದಾರೆ. ದುಡಿವ ಕೈಗೆ ಕೆಲಸ ಕೊಡುವ ಒಂದೇ ಒಂದು ಕೈಗಾರಿಕೆ, ರೈತ-ಮೀನುಗಾರರ ಬದುಕು ಬದಲಾಯಿಸುವ ಯೋಜನೆ ಅನಂತ್‌ರಿಂದ ತರಲಾಗಿಲ್ಲ. ಹಿಂದುಳಿದ ವರ್ಗದ ಯುವ ಜನಾಂಗ ದುಡಿಮೆಗೆ ಹೋದರೆ ಅನಂತ್ ಹೆಗಡೆ ಹಿರಿತನದ ಹಿಂದುತ್ವದ ‘ಯುದ್ಧ’ದ ಕಾಲಾಳು ಆಗುವವರ್‍ಯಾರು, ಅಲ್ಲವೇ?!