ಮಕ್ಕಳ ಕಲಿಕಾ ಆಸಕ್ತಿಯನ್ನು ಗಮನಿಸಿ ಅವರ ಆಸಕ್ತಿಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು. ಹಾಗಾದಾಗ ಮಾತ್ರ ಮಕ್ಕಳಲ್ಲಿರುವ ಸೃಜನಶೀಲತೆಯು ಹೊರ ಬರಲು ಸಾಧ್ಯ ಎಂದು ಗದಗ ಜಿಲ್ಲೆ ರೋಣ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ರವಿ ಎ ಎನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 21 ರಿಂದ 24ರವರೆಗೆ 3 ದಿನಗಳ ಮಕ್ಕಳ ಸಾಹಿತ್ಯ ಸಂಭ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಚಿಕ್ಕಮಣ್ಣೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲು ತೀರ್ಮಾನಿಸಿದರು.
“ಉತ್ತಮ ಸಮಾಜ ಕಟ್ಟಬೇಕೆಂದರೆ ನಾವು ಮಕ್ಕಳಿಗೆ ಯೋಗ್ಯ ಶಿಕ್ಷಣ ನೀಡಬೇಕು. ಮಕ್ಕಳು ಚಿಕ್ಕವರಿದ್ದಾಗಲೇ ಅವರಲ್ಲಿರುವ ಪ್ರತಿಭೆ ಗುರುತಿಸಿ ಅದಕ್ಕೆ ತಕ್ಕಂತೆ ಶಿಕ್ಷಣ ಕೊಡುವುದು ನಮ್ಮ ಕರ್ತವ್ಯ. ಶಿಕ್ಷಣದ ಉದ್ದೇಶ ಸಾರ್ಥಕವಾಗಬೇಕಾದರೆ ಇಂತಹ ಕಾರ್ಯಕ್ರಮ ಅವಶ್ಯಕ. ಜತೆಗೆ ಮಕ್ಕಳಲ್ಲಿ ಅಡಗಿರುವ ಸಾಮರ್ಥ್ಯದ ಅಭಿವೃದ್ಧಿಯೂ ಆಗುತ್ತದೆ. ಮಕ್ಕಳಿಗೆ ಸೂಕ್ತವಾದ ವೇದಿಕೆ ಕಲ್ಪಿಸಿಕೊಡುವ ಕೆಲಸವಾಗಬೇಕು ಇಲ್ಲದೆ ಹೋದರೆ ಸಮಾಜಕ್ಕೆ, ರಾಷ್ಟ್ರಕ್ಕೆ ನಷ್ಟವಾಗುತ್ತದೆ” ಎಂದರು.
“ಮಕ್ಕಳ ಸರ್ವತೋಮುಖ ಕಲಿಕೆಗೆ ಪೂರಕವಾಗಿ ಕಥೆ ಕಟ್ಟೊಣ, ಕವಿತೆ ರಚಿಸೋಣ, ನಾಟಕ ರಚನೆ, ವರದಿ ಮಾಡುವಿಕೆ ಕುರಿತು ಮಕ್ಕಳಿಗೆ 3 ದಿನಗಳ ಕಾರ್ಯಾಗಾರ ಮಾಡಲಾಗುತ್ತದೆ. 100ಕ್ಕೂ ಹೆಚ್ಚು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮಕ್ಕಳಲ್ಲಿರುವ ಕ್ರಿಯಾಶೀಲತೆ ಸಂಪನ್ಮೂಲ ವ್ಯಕ್ತಿಗಳು ಮಾರ್ಗದರ್ಶನ ಮಾಡುತ್ತಾರೆ” ಎಂದು ಎಫ್ ಸಿ ಚೇಗರಡ್ಡಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಇತಿಹಾಸದಲ್ಲಿ ಎಂದು ದೊರೆಯದೇ ಇರುವಷ್ಟು ಅನುದಾನ ಜಿಲ್ಲೆಗೆ ಸಿಕ್ಕಿದೆ: ರವಿ ಬೋಸರಾಜ
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಶೀದ ಹುಣಸಿಮರದ, ಹಲವು ಶಾಲೆಗಳ ಮುಖ್ಯೋಪಾಧ್ಯಾಯರುಗಳಾದ ಎಸ್ ವಿ ಮಾಳವಾಡ, ಎಸ್ ಬಿ ಹಿರೇಮಠ, ಎನ್ ಆರ್ ಬೇವಿನಮರದ, ಎಸ್ ಜೆ ಹಿರೇಮಠ, ಎಲ್ ಸಿ ಮುಂಡೆವಾಡ, ಮಹೇಶಗೌಡ ಪಾಟೀಲ್, ಎಂ ಕೆ ಜಮಖಾನದ, ವಿಠ್ಠಲ ಅಬ್ಬಿಗೇರಿ, ಎಚ್ ಎನ್ ಭಜಂತ್ರಿ, ಸಿ ಎಸ್ ಪರಡ್ಡಿ ಸೇರಿದಂತೆ ಇತರರು ಇದ್ದರು.