ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಅರಬ್ಬಿ ಸಮುದ್ರಕ್ಕೆ ಎಸೆಯುವ ಬೆದರಿಕೆಗಳಿಗೆ ಕಾಂಗ್ರೆಸ್ಸಿಗರು ಹೆದರುವುದಿಲ್ಲ. ಬಿಜೆಪಿಯವರಿಗೆ ನಿಜವಾಗಿಯೂ ತಾಕತ್ತಿದ್ದರೆ ಕಾಂಗ್ರೆಸ್ ಕಾರ್ಯಕರ್ತರನ್ನು ಎದುರಿಸಿ ನೋಡಲಿ ಎಂದು ಉಡುಪಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಅವರು ಛಲವಾದಿ ನಾರಾಯಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಕಡಿದು ಅರಬ್ಬಿ ಸಮುದ್ರಕ್ಕೆ ಎಸೆಯುವುದಾಗಿ ಹೇಳಿಕೆ ನೀಡಿರುವ ನಿಮ್ಮ ಪಕ್ಷದವರಿಗೆ ಅಂತಹ ಧೈರ್ಯವಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಛಲವಾದಿ ನಾರಾಯಣ ಎಂಬ ಹೆಸರಿಟ್ಟುಕೊಂಡು ಬಿಲದಲ್ಲಿ ಕುಳಿತುಕೊಂಡು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನಿಮಗೆ ನೈತಿಕತೆ ಇದೆಯೇ? ದಿನನಿತ್ಯ ಕಾಂಗ್ರೆಸ್ ಪಕ್ಷವನ್ನು ದೂಷಿಸುವುದೇ ನಿಮ್ಮ ಕೆಲಸವಾಗಿದೆ ಎಂದು ಅವರು ಟೀಕಿಸಿದ್ದಾರೆ.
ಕೇಂದ್ರದ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದೇವೆ. ನಿಮಗೆ ತಾಕತ್ತಿದ್ದರೆ ನಿಮ್ಮ ಕಾರ್ಯಕರ್ತರನ್ನು ಕರೆದುಕೊಂಡು ಬಂದು ಕಾಂಗ್ರೆಸ್ ಕಾರ್ಯಕರ್ತರನ್ನು ಎದುರಿಸಿ. ಅವರನ್ನು ಅರಬ್ಬಿ ಸಮುದ್ರಕ್ಕೆ ಎಸೆಯಲು ಸಾಧ್ಯವೇ ಎಂಬುದನ್ನು ಯೋಚಿಸಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಕುಟುಂಬಗಳ ಸದಸ್ಯರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಇಂತಹ ಬೆದರಿಕೆಗಳಿಗೆ ಹೆದರಿ ಕುಳಿತುಕೊಳ್ಳುವುದು ಕಾಂಗ್ರೆಸ್ಸಿಗರ ಜಾಯಮಾನವಲ್ಲ. ನಿಮ್ಮಂತಹ ಬಿಲವಾದಿಗಳಿಗೆ ಹಾಗೂ ಮತಗಳ್ಳತನದ ಆರೋಪ ಎದುರಿಸುತ್ತಿರುವವರಿಗೆ ಕಾಂಗ್ರೆಸ್ ಕಾರ್ಯಕರ್ತರು ಎಂದಿಗೂ ಹೆದರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ದೇಶಾದ್ಯಂತ ಬಿಜೆಪಿಯನ್ನು ಎದುರಿಸುತ್ತೇವೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗೆ ಹೋರಾಟ ಮುಂದುವರಿಯಲಿದೆ. ಮತಗಳ್ಳತನದ ಆರೋಪಗಳ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ರಾಜೀನಾಮೆ ನೀಡಬೇಕೆಂಬ ನಮ್ಮ ಆಗ್ರಹ ಮುಂದಿನ ದಿನಗಳಲ್ಲಿಯೂ ಮುಂದುವರಿಯಲಿದೆ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







