ತೀವ್ರ ಬರ ಪರಿಸ್ಥಿತಿಯಿಂದ ಕಂಗೆಟ್ಟಿರುವ ರೈತರ ನೆರವಿಗೆ ಧಾವಿಸುವಂತೆ ಆಗ್ರಹಿಸಿ, ಎಕರೆಗೆ ₹50 ಸಾವಿರ ಬೆಳೆ ಪರಿಹಾರ ನೀಡಬೇಕು ಹಾಗೂ ನವೆಂಬರ್ 30ರವರೆಗೆ ಕಾಲುವೆಗಳಿಗೆ ನಿರಂತರ ನೀರು ಹರಿಸಬೇಕು ಎಂದು ಒತ್ತಾಯಿಸಿ ಸಾಮೂಹಿಕ ರೈತ ಸಂಘಟನೆಗಳ ವೇದಿಕೆ, ಹುಣಸಗಿ ತಾಲೂಕು ಘಟಕದ ವತಿಯಿಂದ ಗುರುವಾರ ಹುಣಸಗಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಹಸೀಲ್ದಾರ್ ಮುಖಾಂತರ ಮನವಿ ಸಲ್ಲಿಸಲಾಯಿತು.
ಕಳೆದ ಮೂರು-ನಾಲ್ಕು ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಹೊಡೆತಕ್ಕೆ ಸಿಲುಕಿರುವ ರೈತರು ಈ ವರ್ಷವೂ ಸಂಕಷ್ಟ ಎದುರಿಸುತ್ತಿದ್ದಾರೆ. ಸಕಾಲದಲ್ಲಿ ಮಳೆಯಾಗದ ಕಾರಣ ಶೇಂಗಾ, ಸಜ್ಜೆ, ಮೆಣಸಿನಕಾಯಿ, ಭತ್ತ ಸೇರಿದಂತೆ ಹಲವು ಬೆಳೆಗಳು ನೀರಿನ ಕೊರತೆಯಿಂದ ಒಣಗಿವೆ. ನೀರಾವರಿಯನ್ನು ನಂಬಿ ಸಾಲ ಮಾಡಿ ಕೃಷಿ ಮಾಡಿದ ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ಬೀಜ, ಗೊಬ್ಬರ, ಕೀಟನಾಶಕ, ಕೃಷಿ ಸಲಕರಣೆ, ಇಂಧನ ಹಾಗೂ ಕೂಲಿ ವೆಚ್ಚ ಹೆಚ್ಚಳದಿಂದ ಕೃಷಿ ನಿರ್ವಹಣೆ ದುಸ್ತರವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ರಾಜ್ಯ ಸರ್ಕಾರ ಘೋಷಿಸಿರುವ ಎಕರೆಗೆ ₹2,500 ಪರಿಹಾರ ರೈತರ ನಷ್ಟಕ್ಕೆ ಹೋಲಿಸಿದರೆ ಅತ್ಯಲ್ಪವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ನೆರವಿನಡಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಈಗಾಗಲೇ ಬೆಳೆ ವಿಮೆ ಮಾಡಿಸಿರುವ ರೈತರಿಗೆ ತಕ್ಷಣ ವಿಮಾ ಪರಿಹಾರ ಬಿಡುಗಡೆ ಮಾಡಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ನವೆಂಬರ್ 30ರವರೆಗೆ ಕಾಲುವೆಗೆ ನಿರಂತರ ನೀರು ಹರಿಸಲು ಆಗ್ರಹ
ಮುಂಗಾರು ಬೆಳೆಗಳು ಕೈಗೆ ಬರುವವರೆಗೆ, ಅಂದರೆ ನವೆಂಬರ್ 30ರವರೆಗೆ ನಾರಾಯಣಪುರ ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ನಿರಂತರ ನೀರು ಹರಿಸಬೇಕು. ವಾರಬಂಧಿ ಪದ್ಧತಿ ಕೈಬಿಟ್ಟು ನೀರು ಪೂರೈಸಿದರೆ ಮಾತ್ರ ಕಾಲುವೆಯ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ತಲುಪಲು ಸಾಧ್ಯ ಎಂದು ಆಗ್ರಹಿಸಲಾಗಿದೆ.
ನಿರಂತರ ನೀರು ಹರಿಸುವಂತೆ ಹಲವು ಕಡೆ ರೈತರು ಪ್ರತಿಭಟನೆ ಮತ್ತು ಧರಣಿ ನಡೆಸಿದ್ದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸಂಘಟನೆ ಆರೋಪಿಸಿದೆ.
ಕೃಷಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆ ವಿದ್ಯುತ್ ನೀಡಲು ಒತ್ತಾಯ
ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ ಏಳು ಗಂಟೆಗಳ ವಿದ್ಯುತ್ ಪೂರೈಕೆಯನ್ನು ಆರು ಗಂಟೆಗೆ ಕಡಿತಗೊಳಿಸಿರುವುದನ್ನು ಸಂಘಟನೆ ಖಂಡಿಸಿದೆ. ಕೃಷಿ ಚಟುವಟಿಕೆಗಳಿಗೆ ಸಮರ್ಪಕ ವಿದ್ಯುತ್ ಇಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದು, ಹಿಂದಿನಂತೆ ಏಳು ಗಂಟೆ ವಿದ್ಯುತ್ ಪೂರೈಕೆ ಮರುಸ್ಥಾಪಿಸಬೇಕು. ಗ್ರಾಮೀಣ ಪ್ರದೇಶಗಳಿಗೂ ನಿರಂತರ ವಿದ್ಯುತ್ ಒದಗಿಸಬೇಕು ಎಂದು ಒತ್ತಾಯಿಸಿದೆ.
ಗ್ರಾಮೀಣ ಉದ್ಯೋಗ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಆಗ್ರಹ
ವಿಬಿ ರಾಮ್‌ಜಿ ಯೋಜನೆಯಡಿ ಗ್ರಾಮಗಳಲ್ಲಿ ಜನರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸರ್ಕಾರಿ ಜಮೀನುಗಳಲ್ಲಿ ಕೆರೆಗಳನ್ನು ನಿರ್ಮಿಸುವುದರ ಜೊತೆಗೆ ರೈತರ ಹೊಲಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೂಲಿ ಕೆಲಸಗಳನ್ನು ಒದಗಿಸಬೇಕು. ಇದರಿಂದ ರೈತರು ಮತ್ತು ಜಾಬ್ ಕಾರ್ಡ್ ಹೊಂದಿರುವ ಕೂಲಿಕಾರರಿಗೆ ನೆರವಾಗಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ
ಬೆಳಗಾವಿಯಲ್ಲಿ ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ರೈತರು ಹಗಲು-ರಾತ್ರಿ ಹೋರಾಟ ನಡೆಸುತ್ತಿದ್ದರೂ ಸರ್ಕಾರ ಸೂಕ್ತ ಸ್ಪಂದನೆ ನೀಡುತ್ತಿಲ್ಲ ಎಂದು ಸಂಘಟನೆ ಆರೋಪಿಸಿದೆ. ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ಖಂಡಿಸಿದೆ.
ಬರ ಪರಿಹಾರ, ಬೆಳೆ ವಿಮೆ, ಕಾಲುವೆ ನೀರು, ವಿದ್ಯುತ್ ಪೂರೈಕೆ ಹಾಗೂ ಗ್ರಾಮೀಣ ಉದ್ಯೋಗದ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ ರೈತರ ಬದುಕಿಗೆ ಸರ್ಕಾರ ನೆರವಾಗಬೇಕು ಎಂದು ಸಾಮೂಹಿಕ ರೈತ ಸಂಘಟನೆಗಳ ವೇದಿಕೆ, ಹುಣಸಗಿ ತಾಲೂಕು ಘಟಕ ಆಗ್ರಹಿಸಿದೆ.
ಇದನ್ನು ಓದಿದ್ದೀರಾ? ಯಾದಗಿರಿ | ನಾಲ್ಕು ತಿಂಗಳಿಂದ ವೇತನವಿಲ್ಲದೆ ಅತಿಥಿ ಶಿಕ್ಷಕರ ಪರದಾಟ; ಕುಟುಂಬ ನಿರ್ವಹಣೆ ದುಸ್ತರ
ಪ್ರತಿಭಟನೆಯಲ್ಲಿ ಅಯ್ಯಣ್ಣ ಹಾಲಭಾವಿ, ಮಹಾದೇವಮ್ಮ ಬೇವಿನಾಳಮಠ, ವೆಂಕಟೇಶಗೌಡ ಕುಪಗಲ್, ದೊಡ್ಡಪ್ಪ ಎಸ್. ಕಕ್ಕೇರಾ, ವೆಂಕಟೇಶ ಕೊಡೇಕಲ್, ಎನ್.ಆರ್. ಬಡಿಗೇರ, ನಾಗಪ್ಪ ಕುಪಗಲ್, ಭೀಮರಾಯ ಒಕ್ಕಲಿಗ, ದೇವೇಗೌಡ ಮಾರಲಭಾವಿ, ಹೆಚ್.ಆರ್. ಬಡಿಗೇರ, ಮುದಕಪ್ಪ ವಜ್ಜಲ್, ಮಲ್ಲಣ್ಣ ಶಾಂತಪೂರ, ಕಾಮರಾಯ ಮದಲಿಂಗನಾಳ ಹಾಗೂ ಸಾಯಬಣ್ಣ ಗಿಂಡಿ ಭಾಗವಹಿಸಿದ್ದರು.






