ಗದಗ | ನೀರು, ಕರೆಂಟ್ ಕೇಳಿದ್ರ, ನಿಮ್ಜಾಗ ಎಲ್ಲೈತಿ ಅಂತ ಹೇಳ್ತಾರ; ಅಲೆಮಾರಿಗಳ ಗೋಳು ಕೇಳೋರಾರು?

Date:

“ಕೆರಿ ದಂಡಿಮ್ಯಾಗ ಗುಡಿಸ್ಲು ಹಾಕ್ಕೊಂಡು ಇದ್ವಿ. ಪ್ಲಾಟ್ ಬಂದೈತಿ, ಮನಿ ಬಂದೈತಿ, ಪ್ಲಾಟ್ ಕೊಡ್ತಿವಿ ಗುಡಿಸ್ಲು ಕೀಳ್ರಿ ಅಂದ್ರು…. ಬುಲ್ಡೋಜರ್ ಹಚ್ಚಿಸಿ ಗುಡಿಸ್ಲು ಕೀಳಿಸಿದ್ರು. ಕಿಳಿಸುತ್ಲೇ ಏನ್ ಮಾಡೊದ್ರಿ ಎಲ್ಲ ಗಂಟು ಮೂಟೆ ಕಟ್ಗೊಂಡು ಬಂದ್ವಿ. ಕೇಳಿದ್ರ ಪ್ಲಾಟು ಕೊಡ್ಲಿಲ್ರಿ, ಮನಿನೂ ಕೊಡ್ಲಿಲ್ರಿ. ಪ್ಲಾಟ್ ಕೊಡ್ಲಿದ್ದಕ್ಕ ಮಕ್ಳು ಮರಿ ಕಟ್ಗೊಂಡು ಇಲ್ಲಿಗ್ ಬಂದು, ಇಲ್ಲಿದ್ ಗಿಡ-ಗಂಟಿ ಎಲ್ಲ ಕಿತ್ತು ಬದ್ನಕ್ ಸುರು ಮಾಡಿವ್ರಿ. ಇಲ್ಲಿಗ್ ಬಂದ ಇಪ್ಪತೈದು ವರ್ಸ ಆಯ್ತು. ನೀರ್ ಕೇಳಿದ್ರ, ಕರೆಂಟ್ ಕೇಳಿದ್ರ; ನಿಮ್ಜಾಗ ಎಲ್ಲೈತಿ, ನೀವು ಇಲ್ಲಿಂದ ಕಿತ್ಗೊಂಡು ಹೋಗಬೇಕು ಅಂತ ಹೆದರಿಸ್ತಾರಿ. ಹಿಂಗ ಮಾಡಿದ್ರ ನಮ್ಮ ಮಕ್ಳು ಮರಿ ಕಟ್ಗೊಂಡು ಎಲ್ಲೆಂತ ಹೋಗ್ಬೇಕ್ರಿ” – ಇದು ಈದಿನ.ಕಾಮ್ ನೊಂದಿಗೆ ಮಾತನಾಡಿದ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಶಾಂತವ್ವ ಅವರ ಒಡಲಾಳದ ಮಾತುಗಳು.

ಈ ಅಲೆಮಾರಿ ಸಮುದಾಯಗಳಿಗೆ ಒಂದು ನಿರ್ದಿಷ್ಟ ನೆಲೆ ಇಲ್ಲದೆ, ಹೊಟ್ಟೆಪಾಡಿಗಾಗಿ ಸುಗ್ಗಿಕಾಲದಲ್ಲಿ ಸಮೃದ್ಧವಾಗಿ ಮಳೆ, ಬೆಳೆ ಆಗುವ ಕಡೆ ಗುಳೆ ಹೋದರೆ, ಇನ್ನುಳಿದ ಸಂದರ್ಭಗಳಲ್ಲಿ, ಎಲ್ಲಿ ಜಾತ್ರೆಗಳು, ಹಬ್ಬ-ಹರಿದಿನಗಳು ನಡೆಯುತ್ತವೋ ಅತ್ತ ಕಡೆ ಹೋಗಿ ಅಲ್ಲಿನ ದೇವಸ್ಥಾನಗಳ ಬಳಿಯೋ, ಊರಿನ ಹೊರಗೋ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಪುಟ್ಟ ಪುಟ್ಟ ಗುಡಿಸಲುಗಳನ್ನು ಹಾಕಿಕೊಂಡು ಬದುಕುತ್ತಿದ್ದಾರೆ. ಮೂಲಭೂತ ಸೌಕರ್ಯಗಳ ದೊರೆಯದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವುಗಳ ಜೊತೆಗೆ ಅಧಿಕಾರಿಗಳೋ ಅಥವಾ ಖಾಸಗಿ ಭೂ ಮಾಲಿಕರೋ ಇದು ನಿಮ್ದಲ್ಲ ಜಾಗ ಇಲ್ಲಿರಬ್ಯಾಡ್ರಿ, ಜಾಗ ಖಾಲಿ ಮಾಡಿ‌ ಅಂದಾಗ ದಿಕ್ಕೆ ತೋಚದಂತಾಗಿರುತ್ತದೆ ಅಲೆಮಾರಿ ಕುಟುಂಬಗಳಿಗೆ…..

ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣ ಹಾಗೂ ಪಟ್ಟಣದಿಂದ ಐದಾರು ಕಿ.ಮೀ. ದೂರದಲ್ಲಿರುವ ಶಿಗ್ಲಿ ಗ್ರಾಮದಲ್ಲಿ ಅಲೆಮಾರಿ, ಅರೇ ಅಲೆಮಾರಿ ಬುಡಕಟ್ಟು ಸಮುದಾಯಗಳು ವಾಸಮಾಡುತ್ತಿವೆ. ಪಟ್ಟಣದ ಉಮಾ ಮಹಾವಿದ್ಯಾಲಯದ ಹಿಂದೆ ದೊಡ್ಡೂರು ರಸ್ತೆಯ ಪಕ್ಕದಲ್ಲಿ ಅಲೆಮಾರಿ, ಅರೇ ಅಲೆಮಾರಿ ಸಮುದಾಯಗಳಾದ ಕೊರಮರು, ಶಿಂದೋಳ, ಬಗರಕಾರ, ಕರಕರೆ ಮಂಡರು ಹಾಗೂ ಮುಸ್ಲಿಂ ಅಲೆಮಾರಿ ಸಮುದಾಯದ ಸುಮಾರು ಅರವತ್ತೈದರಿಂದ ಎಪ್ಪತು ಕುಟುಬಗಳು ಏಳಂದು ದಶಕಗಳಿಂದ ವಾಸಿಸುತ್ತಿದ್ದಾರೆ. ಸ್ವಂತ ನಿವೇಶನಗಳಿಲ್ಲದೆ ಮೂಲಭೂತ ಸೌಕರ್ಯಗಳಿಲ್ಲದೆ ಬದುಕುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅವರೆಲ್ಲರೂ ವಾಸಿಸುತ್ತಿರುವ ಗುಡಿಸಲುಗಳ ಸುತ್ತ ಕಣ್ಣಾಡಿಸಿದರೆ, ಹರಿದು ಹೋದ ಪ್ಲಾಸ್ಟಿಕ್ ಹಾಳೆಯ ಹೊದಿಕೆಯ ಛಾವಣಿ, ಪಕ್ಕದಲ್ಲಿ ಕೊಳಚೆ ನೀರು, ವಿಷ ಪೂರಿತ ಹುಳ ಹುಪ್ಪಡಿ, ತೂತು ಬಿದ್ದ ಪಾತ್ರೆ, ಹರಿದು ಹೋದ ಬಟ್ಟೆ, ಮಾರಾಟಕ್ಕೆ ತಂದ ಪ್ಲಾಸ್ಟಿಕ್ನಲ್ಲಿ ತುಂಬಿದ ಬಾಟಲಿಗಳು, ಗುಡಿಸಲುಗಳ ಬಾಗಿಲು ಇನುಕಿದರೆ ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ಜೀವಗಳು, ಅಂಗಳದಲ್ಲಿ ಸಣ್ಣ ಮಕ್ಕಳ ಕೆದರಿದ ಕೂದಲುಗಳು, ಮೈಯಲ್ಲಿ ಬಟ್ಟೆ ಇಲ್ಲದೆ, ಮಣ್ಣ ಮೆತ್ತಿಕೊಂಡು, ಅವ್ವನ ಅಪ್ಪನ ಬರುವಿಕೆಯನ್ನೆ ನೋಡುತ್ತ, ಅಳುತ್ತ, ದುಃಖದ ಮಡುವಿನಲ್ಲಿ ಕಾಯುತ್ತಿರುವ ದೃಶ್ಯ ಅವರ ಬದುಕಿನ ಚಿತ್ರಣದ ತಲ್ಲನಗಳು ಒಂದೊಂದಾಗಿ ಎಳೆ ಎಳೆಯಾಗಿ ಬಿಚ್ಚುಕೊಳ್ಳುತ್ತವೆ.

ಲಕ್ಷ್ಮೇಶ್ವರ ಪಟ್ಟಣದಲ್ಲಿ ಎಂಬತ್ತು ವರ್ಷಗಳಿಂದ ವಾಸವಿದ್ದರೂ ನಿಲ್ಲದ ಪರದಾಟ

ಎಂಬತ್ತು ವರ್ಷಗಳಿಂದ ಈ ಅಲೆಮಾರಿ, ಅರೇ ಅಲೆಮಾರಿ ಬುಡಕಟ್ಟು ಸಮುದಾಯಗಳು ವಾಸವಿದ್ದಾರೆ. ಮೊದಲು ಪಟ್ಟಣದ ಇತಿಹಾಸ ಪ್ರಸಿದ್ದ ಸೋಮೇಶ್ವರ ದೇವಾಲಯ ಪಕ್ಕದಲ್ಲಿ ವಾಸಿಸುತ್ತಿದ್ದರು. ಪುರಸಭೆ ಅಧಿಕಾರಿಗಳು ಯಾವುದೇ ಮೂನ್ಸೂಚನೆ ತಿಳಿಸದೇ ಇದ್ದಕಿದ್ದಂತೆ ಒಕ್ಕಲೆಬಿಸಿದ್ದರು. ನಂತರ ಈಗಿನ ಹೊಸ ಬಸ್ ನಿಲ್ದಾಣದ (ಆಗ ಬಸ್ ನಿಲ್ದಾಣ ಇರಲಿಲ್ಲ) ಪಕ್ಕದಲ್ಲಿ ಸಿನೆಮಾ ಟೆಂಟ್ ಹತ್ತಿರ ಕೆಲವು ವರ್ಷಗಳವರೆಗೆ ಗುಡಿಸಲು ಹಾಕಿಕೊಂಡು ವಾಸವಿದ್ದರು. ಕೆಲ ವರ್ಷಗಳ ನಂತರ ಜಾಗದ ಮಾಲೀಕರು ಗುಡಿಸಲುಗಳನ್ನು ಕಿತ್ತೆಸೆದರು. ಅಲ್ಲಿಂದ ಪುರಸಭೆಯ ಖಾಲಿ ಜಾಗ ಶಿಗ್ಲಿ ನಾಖಾ ಸಮೀಪದಲ್ಲಿ ಹಾಗೂ ಕರೆಯ ಒಂಡಿಯ ಮೇಲೆ ಗುಡಿಸಲು ನಿರ್ಮಿಸಿಕೊಂಡಿದ್ದರು. ಅಕಾಲಿಕ ಮಳೆಯಿಂದ ಕೆರೆ ತುಂಬಿ ಗುಡಿಸಲುಗಳು ನೀರಲ್ಲಿ ಮುಳುಗಿದ್ದವು. ಪುರಸಭೆ ಜಾಗದಲ್ಲಿದ್ದ ಗುಡಿಸಲುಗಳುಮಳೆ ಗಾಳಿಗೆ ಕಿತ್ತುಕೊಂಡು ಹೋಗಿದ್ದವು. ಆಗ ಅಂದಿನ ಶಿರಹಟ್ಟಿ ಕ್ಷೇತ್ರದ ಶಾಸಕರು ಜಿ ಎಸ್ ಗಡ್ಡದೆರವರಮಠ ಅವರು ಈ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸದೇ ಇದ್ದರೂ ತಾತ್ಕಾಲಿಕವಾಗಿ ಉಮಾ ಮಹಾವಿದ್ಯಾಲಯದ ಹಿಂದೆ ರೈತರೊಬ್ಬರ ಖಾಲಿ ಜಾಗದಲ್ಲಿ ವಾಸಿಸಲು ಅವಕಾಶ ಮಾಡಿಕೊಟ್ಟಿದ್ದರು. ಅಂದಿನಿಂದ ಇಲ್ಲಿಯವರೆಗೆ ಅವರು ಅಲ್ಲೇ ನೆಲೆ ನಿಂತಿದ್ದಾರೆ. ಆದರೆ, ಇಂದಿಗೂ ಯಾವುಏ ಸೌಕರ್ಯಗಳನ್ನು ಪಡೆಯಲಾಗಿಲ್ಲ.

ಈ ಸಮುದಾಯದ ಹಲವರು ಇಂದಿಗೂ ಕೂಡ ಬಿಕ್ಷೆ ಬೇಡುವುದು, ಪ್ಲಾಸ್ಟಿಕ್, ಪಿನೆಲ್, ಕರಕುಶಲ, ಕಸಬರಗೆ ತಯಾರಿಸುವುದು, ಪಿನ್ನ ಮಾರುವುದು, ದೇವರನ್ನು ಹೊತ್ತುಕೊಂಡು‌ ಬಾರಕೊಲಿನಿಂದ ತಮ್ಮ ದೇಹವನ್ನೆ ದಂಡಿಸಿಕೊಂಡು ಒಂದಷ್ಟು ಸಂಪಾದಿಸಿ, ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದಾರೆ.

ಮೂಲಭೂತ ಸೌಕರ್ಯಗಳೇ ಇಲ್ಲ

ಅಲೆಮಾರಿ ಅರೇ ಅಲೆಮಾರಿ ಬುಡಕಟ್ಟು ಸಮುದಾಯಗಳು ವಾಸಿಸುವಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳಿಲ್ಲ. ಕಡಿಯುವ ನೀರು ಹದಿನೈದು ದಿನಕ್ಕೊ, ಇಪ್ಪತ್ತು ದಿನಕ್ಕೊ ಬರುತ್ತವೇ, ಇಲ್ದಿಂದ್ರೆ, ಹೆಚ್ಚು ಕಡಿಮೆ ಒಂದು ಕಿಲೋಮೀಟರ್ ದೂರದಲ್ಲಿರುವ ಪೋಲಿಸ್ ಸ್ಟೇಷನ್ ಹತ್ತಿರ ಹೋಗಿ ತರಬೇಕು. ಈ ಗುಡಿಸಲುಗಳಿಗೆ ವಿದ್ಯುತ್ ಅಂತೂ ಮರೀಚಿಕೆಯೇ ಆಗಿದೆ. ಕತ್ತಲಿನಲ್ಲಿಯೇ ನಡೆದಾಡುವ ಪರಿಸ್ಥಿತಿಯಲ್ಲಿ ಹಾವು, ಚೇಳು, ಕ್ರಿಮಿಕೀಟಗಳ ಭಯದಲ್ಲಿಯೆ ಬದುಕುತ್ತಿದ್ದಾರೆ.

ಅಲೆಮಾರಿ ಅರೇ ಅಲೆಮಾರಿ ಬುಡಕಟ್ಟು ಸಮುದಾಯಗಳು ಶಿಕ್ಷಣ ವಂಚಿತರು

ಇಲ್ಲಿ ವಾಸಿಸುವ ಅಲೆಮಾರಿ, ಅರೆ ಅಲೆಮಾರಿ ಬುಡಕಟ್ಟು ಸಮುದಾಯಗಳ ಜನರು ಬಹುತೇಕ ಶಿಕ್ಷಣದಿಂದ ವಂಚಿತರಾಗಿದ್ದಾರೆ. ತಮಗಾಗಿದ್ದು, ತಮ್ಮ ಮಕ್ಕಳಿಗೆ ಆಗಬಾರದು. ಸಾಕಪ್ಪ ಸಾಕು ಈ ಅಲೆಮಾರಿ ಬದುಕು, ತಮ್ಮ ಮಕ್ಕನ್ನ ಶಾಲೆಗೆ ಕಳಿಸಿ, ಚೆನ್ನಾಗಿ ಓದಿಸ್ಬೇಕು ಅಂತ ಅನ್ಕೊಂಡ್ರೆ, ಶನಿ ಬೆನ್ನು ಹತ್ತಿದಂಗ ಬಡತನ ಬೆನ್ನುಹತ್ತಿ ಅರ್ದಕ್ಕೆ ಶಾಲೆ ನಿಲ್ಲಿಸಿ ಮೂಲ ವೃತ್ತಿಗೆ ಮಕ್ಕಳನ್ನ ಕಳಿಸುವುದು ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಲಿಯುವ ಮಕ್ಕಳಿಗೆ ಯಾವುದೇ ರೀತಿಯ ಸವಲತ್ತುಗಳು ಇಲ್ಲದೇ ಶಿಕ್ಷಣದಿಂದ ದೂರವಾಗಿದ್ದಾರೆ.

ಈ ಕುರಿತು ನಮ್ಮ ಈದಿನ.ಕಾಮ್ ನೊಂದಿಗೆ ಹುಸೇನಮ್ಮ ಪುಜಾರ್ ಮಾತನಾಡಿ, ” ಇಲೆಕ್ಷಣ್ ಬಂದಾಗ, ತಾಯಿ ಮ್ಯಾಗ ದೇವರ ಮ್ಯಾಗ ಆನಿ ಮಾಡಿಸಿ, ಮನಿ ಕೊಡ್ತಿವಿ ಅಂತಾರ, ಆರಿಸಿ ಬಂದ್ಮ್ಯಾಗ ಇತ್ತಾಗ ಒಮ್ಮೆನೂ ಬಂದಿಲ್ಲರೀ. ನಮ್ಮನ್ನ ಕೇರ್ ಮಾಡಲ್ಲ. ನಮಗ ನೀರಿಲ್ಲರಿ, ಕರೆಂಟ್ ಇಲ್ಲರಿ, ಭೂಮಿ ಇಲ್ಲ, ಜಾಗ ಇಲ್ಲ ಇರಾಕ ಮನಿ ಇಲ್ಲ, ಗುಡಿಸ್ಲಾ ಹಾಕೊಂಡು ಅದಿವಿ. ಇದ್ದವರ್ ದುಡ್ ಕೊಟ್ಟು ಮನಿ ಪ್ಲಾಟ್ ಹಾಕಿಸಿಕೊಂಡ್ರು, ಇಲ್ಲದೌವ್ರು ಏನ್ ಮಾಡ್ಬೇಕ್ರಿ. ನೀರು ಕೇಳಿದ್ರ ನೀವು ಬಿಲ್ ಕಟ್ತಿರಾ? ನಿಮಗ್ಯಾಕ ನೀರ್ಬಿಡಬೇಕು ಅಂತ ಕೇಳ್ತಾರಿ, ಗ್ವಾಡಿ ಕಟ್ಗೊಬ್ಯಾಡ್ರಿ, ಕಟ್ಗೊಂಡ್ರ ಬುಲ್ಡೋಜರ್ ಹತ್ತಿಸಿ ಕೆಡವಿಸ್ತಿವಿ ಅಂತಾರಿ” ಎಂದು ನೋವಿನ ಮಾತುಗಳನ್ನಾಡಿದರು.

ರೈತ ಸಂಘದ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಕೇಶವ ಕಟ್ಟಿಮನಿ ಈದಿನ.ಕಾಮ್ ಜೊತೆ ಮಾತನಾಡಿ, “ಇಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಯಾವುದೇ ರೀತಿಯ ವ್ಯವಸಾಯ ಮಾಡೋಕೆ ಭೂಮಿ ಇಲ್ಲ, ಸ್ವಂತ ಜಾಗ ಇಲ್ಲ, ಮನೆಗಳಿಲ್ಲ, ಈ ಗುಡಿಸಲುಗಳಿಗೆ ಮೂಲಭೂತ ಸೌಕರ್ಯಗಳಿಲ್ಲ. ಇವರ ನೋವು ಸಂಕಷ್ಟಗಳಿಗೆ ಯಾಕೆ ಸ್ಪಂದಿಸುತ್ತಿಲ್ಲ. ಇಲ್ಲಿಯ ಶಾಸಕರು, ಪುರಸಭೆ ಅಧಿಕಾರಿಗಳು, ತಹಶಿಲ್ದಾರರು, ಜಿಲ್ಲಾಧಿಕಾರಿಗಳಿರಬಹುದು ಉಸ್ತುವಾರಿ ಸಚಿವರುಗಳಿಗೆ ಯಾಕೆ ಇವರ ನೊಇವುಗಳು ಗಮನಕ್ಕೆ ತಗೊಳ್ಳುತ್ತಿಲ್ಲ. ನೋಡಿದ್ರು ಈ ಮನಸ್ಸುಗಳಿ ಸ್ಪಂದಿಸುವ ಮನೋಭಾವ ಅವರಿಗೆ ಇಲ್ಲವೋ ಅನ್ನೊ ಪ್ರಶ್ನೆ ಕಾಡ್ತಿದೆ. ಈ ಕೂಡಲೇ ಸರಕಾರ ಎಚ್ಚೆತ್ತುಕೊಂಡು ಈ ಸಮುದಾಯಗಳಿಗೆ ಬಹುಬೇಗ ಸ್ಪಂದಿಸಿ, ಶಾಶ್ವತ ಪರಿಹಾರ ನೀಡಬೇಕು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ?: ಟೊಮೆಟೊ ದರ ಕುಸಿತ: ಗ್ರಾಹಕರಲ್ಲಿ ಖುಷಿ; ಬೆಳೆಗಾರರಲ್ಲಿ ಆತಂಕ

ಲಕ್ಷ್ಮೇಶ್ವರ ಪುರಸಭೆ ಮುಖ್ಯಾಧಿಕಾರಿ ಶಂಕರ್ ಹುಲ್ಲಮನವರ ಈದಿನ.ಕಾಮ್ ಜೊತೆ ಮಾತನಾಡಿ, “ನಾವು ಈ ಕೂಡಲೇ ಅಲ್ಲಿರುವ ಅಲೆಮಾರಿ ಸಮುದಾಯಗಳ ಗುಡಿಸಲುಗಳಿಗೆ ಹೋಗಿ ಸಮೀಕ್ಷೆ ಮಾಡಿ, ಸಮಾಜ ಕಲ್ಯಾಣ ಇಲಾಖೆಯ ಗಮನಕ್ಕೆ ತಂದು ಭೂಮಿ, ಮನೆಗಳನ್ನು ಕೊಡುವ ವ್ಯವಸ್ಥೆ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಈ ಕುರಿತು ಶಿರಹಟ್ಟಿ ಮತಕ್ಷೇತ್ರದ ಶಾಸಕರು ಚಂದ್ರು ಲಮಾಣಿ ಅವರನ್ನು ಪೋನ್ ಮೂಲಕ ಸಂಪರ್ಕಿಸಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ.

ಈ ಅಲೆಮಾರಿ, ಅರೇ ಅಲೆಮಾರಿ ಬುಡಕಟ್ಟು ಸಮುದಾಯಗ ಏಳ್ಗೆಗಾಗಿ ಸಮಾಜ ಕಲ್ಯಾಣ ಇಲಾಖೆ, ಅಲೆಮಾರಿ ಸಮುದಾಯಗಳ ನಿಗಮ ಇದ್ದು, ಇಲ್ಲದಂತೆ ಜಾಣ ಕುರುಡನಂತೆ ವರ್ತಿಸುತ್ತಿವೆ. ಯಾಕೆ ಇವುಗಳಿಗೆ ಈ ಸಮುದಾಯಗಳ ನೋವು ಕಾಣುತ್ತಿಲ್ಲ. ಸ್ಥಳೀಯ ಶಾಸಕರು, ಉಸ್ತುವಾರಿ ಸಚಿವರು, ಅಧಿಕಾರಿ ವರ್ಗದವರು ಈ ಸಮುದಾಯಗಳ ಸಂಕಷ್ಟಗಳು ನೋಡಿದರೂ ಅವರ ಕುರಿತು ಒಂದೆ ಒಂದು ಸೊಲ್ಲು ಎತ್ತದಿರುವುದು ದುರಂತ.

ಇಂತಹ ಅಲೆಮಾರಿ, ಅರೇ ಅಲೆಮಾರಿ ಬುಡಕಟ್ಟು ಸಮುದಾಯಗಳಿಗೆ ಸರಕಾರ ಶಾಶ್ವತ ಪರಿಹಾರ ಘೋಷನೆ ಮಾಡಿ ಅವರನ್ನು ಕೂಡ ರಾಜಕೀಯವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಸ್ಥಾನಮಾನ ನೀಡಿ, ಮುನ್ನೆಲೆಗೆ ತಂದು ಗೌರವಯುತವಾಗಿ ಬದುಕು ಕಟ್ಟಿಕೊಳ್ಳುವ ಹಾಗೆ ಸರಕಾರ ಮಾಡಬೇಕಿದೆ.

ಪೋಸ್ಟ್ ಹಂಚಿಕೊಳ್ಳಿ:

ಶರಣಪ್ಪ ಎಚ್ ಸಂಗನಾಳ
ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ ಪೆನ್‌ಡ್ರೈವ್‌ | ಬ್ಲಾಕ್‌ಮೇಲ್‌ಗಾಗಿ ವಿಡಿಯೋ ಮಾಡಿಕೊಂಡಿದ್ರಾ?; ನ್ಯಾಯಾಂಗ ತನಿಖೆಗೆ ಆಗ್ರಹ

ಹಾಸನ ಪೆನ್‌ಡ್ರೈವ್ ವಿಚಾರದಲ್ಲಿ ಸುಮೊಟೊ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಂಗ ತನಿಖೆ ನಡೆಸಬೇಕು....

ಶಿವಮೊಗ್ಗ | ಮುಂದಿನ ದಿನದಲ್ಲಿ ಕ್ಷೇತ್ರದ ರಕ್ಷಣೆ ನನ್ನದು: ಗೀತಾ ಶಿವರಾಜ್‌ಕುಮಾರ್

ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕಾರಣಿಗಳ ಬಳಿ ಅಧಿಕಾರವಿದ್ದು, ಪರಿಹರಿಸಬಹುದಾದ ಸಮಸ್ಯೆಗಳು ಸಾಕಷ್ಟಿವೆ. ಆದರೂ,...

ಫ್ರಿ ಬಸ್ | ತೀರ್ಥಯಾತ್ರೆ ನೆಪದಲ್ಲಿ ಮಹಿಳೆಯರು ಎಲ್ಲೆಲ್ಲೋ ಹೋಗ್ತಿದ್ದಾರೆ; ಬಿಜೆಪಿ ಪ್ರಚಾರಕಿ, ನಟಿ ಶೃತಿ ವಿವಾದಾತ್ಮಕ ಹೇಳಿಕೆ

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ...

ಚಾಮರಾಜನಗರ | ದೇಶದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಗೆ ಕಾಂಗ್ರೆಸ್‌ ಬೆಂಬಲಿಸಿ: ಮಾನವ ಬಂಧುತ್ವ ವೇದಿಕೆ

ದೇಶದ ಪ್ರಜಾಪ್ರಭುತ್ವ, ಸಂವಿಧಾನದ ರಕ್ಷಣೆಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಜನರು...