ಭೂಸ್ವಾಧೀನ ಪೂರ್ಣಗೊಂಡು ಅಗತ್ಯ ಜಾಗವನ್ನು ಗುತ್ತಿಗೆದಾರರಿಗೆ ಹಸ್ತಾಂತರಿಸಿದ ಬಳಿಕ ಕಾಮಗಾರಿ ಆರಂಭಿಸಲು ಅನುಕೂಲವಾಗಲಿದೆ. ಮೊದಲ ಹಂತದ ಪ್ಯಾಕೇಜ್ 1ರಲ್ಲಿ ಸುಮಾರು 271 ರೈತರಿಗೆ ಪರಿಹಾರ ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಯೋಜನೆಯ ಹೆಸರಿನಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಭೂಮಿ ಸ್ವಾಧೀನಪಡಿಸಿಕೊಂಡರೆ ವೆಚ್ಚ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಅಗತ್ಯವಿರುವಷ್ಟು ಭೂಮಿಯನ್ನು ಮಾತ್ರ ಸ್ವಾಧೀನಪಡಿಸಿಕೊಂಡು ಪರಿಷ್ಕೃತ ಅಂದಾಜು ಸಿದ್ಧಪಡಿಸಲಾಗಿದೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.
ಭೂಸ್ವಾಧೀನಕ್ಕೆ ಒಳಪಡುವ ರೈತರಿಗೆ ಮಾರುಕಟ್ಟೆ ಮೌಲ್ಯ ಹಾಗೂ ಆಯಾ ಸರ್ವೆ ನಂಬರ್ ಆಧಾರದ ಮೇಲೆ ಪರಿಹಾರ ನಿಗದಿಪಡಿಸಲಾಗಿದೆ. ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ಆಕ್ಷೇಪಿಸುವ ರೈತರ ಪ್ರಕರಣಗಳಲ್ಲಿ ಜಿಲ್ಲಾಧಿಕಾರಿ ಮೂಲಕ ನ್ಯಾಯಾಲಯದಲ್ಲಿ ಪರಿಹಾರ ಮೊತ್ತವನ್ನು ಠೇವಣಿ ಇರಿಸಿ ಕಾಮಗಾರಿ ಮುಂದುವರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಯಾವುದೇ ರೈತರಿಗೆ ಅನ್ಯಾಯವಾಗದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗುವುದು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | SIR ವಿರೋಧ: ಸಂವಿಧಾನ ಕೊಲೆ ಯತ್ನಕ್ಕೆ ಕಾರಣರಾದ ಜ್ಞಾನೇಶ್ ಕುಮಾರ್ ಗೆ ಶಿಕ್ಷೆ ಆಗಬೇಕು; ನಟ ಪ್ರಕಾಶ್ ರಾಜ್
ಪರಿಹಾರಕ್ಕೆ ಸಂಬಂಧಿಸಿದಂತೆ ರೈತರಲ್ಲಿ ಇರುವ ಗೊಂದಲಗಳನ್ನು ನಿವಾರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದರು ಹೇಳಿದರು. ಪರಿಹಾರ ಪಡೆಯಲು 19 ದಾಖಲೆಗಳನ್ನು ಸಲ್ಲಿಸಬೇಕು ಎಂಬ ಗೊಂದಲ ರೈತರಲ್ಲಿದೆ. ವಾಸ್ತವವಾಗಿ ಹಲವು ದಾಖಲೆಗಳು ಈಗಾಗಲೇ ಭೂಸ್ವಾಧೀನ ಅಧಿಕಾರಿಗಳ ಬಳಿಯೇ ಲಭ್ಯವಿವೆ. ರೈತರು ಆರ್‌ಟಿಸಿ ಮತ್ತು ಕುಟುಂಬ ವೃಕ್ಷ ನೀಡಿದರೆ ಸಾಕಾಗುತ್ತದೆ. ಉಳಿದ ದಾಖಲೆಗಳನ್ನು ತಹಸೀಲ್ದಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅರಣ್ಯ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ತ್ವರಿತವಾಗಿ ಒದಗಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ ಎಂದು ಸಂಸದ ಶ್ರೇಯಸ್ ಪಟೇಲ್ ತಿಳಿಸಿದರು.




