ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿಗೆ ಒತ್ತಾಯಿಸಿ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಕುರಿತು ಮುಂಬರುವ ವಿಧಾನ ಸಭಾ ಅಧಿವೇಶನದಲ್ಲಿ ಕಾರ್ಮಿಕರ ಪರವಾಗಿ ಧ್ವನಿ ಎತ್ತುವಂತೆ ಒತ್ತಾಯಿಸಿ ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಿ.ಎನ್ ಬಾಲಕೃಷ್ಣ ಅವರಿಗೆ ಚನ್ನರಾಯಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
CITU ರಾಜ್ಯ ಸಮಿತಿ ನೇತೃತ್ವದಲ್ಲಿ 4 ಕಾರ್ಮಿಕ ಸಂಹಿತೆಗಳ ರಾತಿಗಾಗಿ, ತಡೆ ಹಿಡಿದಿರುವ ಕನಿಷ್ಠ ವೇತನ ಜಾರಿಗಾಗಿ, ಗುತ್ತಿಗೆ ಹಾಗೂ ಸ್ಟೀಮ್ ನೌಕರರ ಖಾಯಂಮಾತಿಗಾಗಿ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಒತ್ತಾಯಿಸಿ ಸೆಪ್ಟೆಂಬರ್ 8ರಂದು ಸಿಐಟಿಯು ಸಂಯೋಜಿತ 184 ಸಂಘಗಳಿಂದ ಅಂಗನವಾಡಿ, ಬಿಸಿಯೂಟ, ಗ್ರಾಮಪಂಚಾಯ್ತಿ ನೌಕರರು, ಬೀಡಿ, ಪ್ಲಾಂಟೇಷನ್, ಟೈಲ್ಸ್ ಕಾರ್ಮಿಕರು, ಆಟೋ, ಟ್ಯಾಕ್ಸಿ, KSRTC, BMTC, ಚಾಲಕ ಸಿಬ್ಬಂದಿಗಳು, ಕಟ್ಟಡ, ಹಮಾಲಿ ಕಾರ್ಮಿಕರು, ಮನೆಗೆಲಸಗಾರರು, ಟೈಲರ್‌ಗಳು, ಬೀದಿಬದಿ ವ್ಯಾಪರಸ್ಥರು, ಹಾಸ್ಟೆಲ್ ನೌಕರರು, ವಿವಿಧ ಇಲಾಖೆಗಳಲ್ಲಿ ನಿಗಮ ಮಂಡಳಿಗಳಲ್ಲಿ ದುಡಿಯುವ ಗುತ್ತಿಗೆ ಕಾರ್ಮಿಕರು ಮುನ್ಸಿಪಲ್ ಕಾರ್ಮಿಕರು, ಕೈಗಾರಿಕಾ ಕಾರ್ಮಿಕರು ಸೇರಿದಂತೆ 25 ಸಾವಿರಕ್ಕು ಹೆಚ್ಚು ಕಾರ್ಮಿಕರು ಪ್ರತಿಭಟನೆಯಲ್ಲಿ ಸೇರಿದ್ದರು.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಚೇತನ್ ಗೊಡ್ಲುಮನೆ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ
ಈ ಪ್ರತಿಭಟನೆಗೆ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಬಂದಂತಹ ಮಾನ್ಯ ಕಾರ್ಮಿಕ ಸಚಿವರಾದ ಸಂತೋಷ ಲಾಡ್‌ರವರು ಮನವಿ ಸ್ವೀಕರಿಸಿದರು. ಪ್ರತಿಭಟನಾಕಾರರ ಒತ್ತಾಯದಂತೆ ಮಾನ್ಯ ಮುಖ್ಯಮಂತ್ರಿಗಳು 15 ಸೆಪ್ಟೆಂಬರ್ 2026 ರಂದು ಮಾತು ಕತೆ ನಡೆಸಲು ಒಪ್ಪಿಗೆ ಸೂಚಿಸಿದ ನಂತರ ಹೋರಾಟವನ್ನು ಹಿಂಪಡೆಯಲಾಗಿತ್ತು. ಆದರೆ, ಬಂಡವಾಳಗಾರರನ್ನು ಒಲೈಸಲು ಕಾರ್ಮಿಕರೊಂದಿಗಿನ ಸಭೆಯನ್ನು ನಡೆಸದೇ “ಕೊಟ್ಟ ಮಾತಿಗೆ ರಾಜ್ಯ ಸರ್ಕಾರ ತಪ್ಪಿದೆ” ಇದನ್ನು ಖಂಡಿಸಿ ಸೆಪ್ಟೆಂಬರ್ 25 ರಿಂದ ಎಲ್ಲಾ ಶಾಸಕರ/ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸಲು ಸಿಐಟಿಯು ರಾಜ್ಯ ಸಮಿತಿ ತೀರ್ಮಾನಿಸಿದೆ ಎಂದು ಸಿಐಟಿಯು ಮುಖಂಡ ಅರವಿಂದ್ ತಿಳಿಸಿದರು.




