“ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ವೈಯಕ್ತಿಕ ಕೊಡುಗೆದಾರರ (Individual CSR) ಸಭೆಯಲ್ಲಿ “ನಮ್ಮ ಶಾಲೆ, ನಮ್ಮ ಜವಾಬ್ದಾರಿ” ಹೆಸರಿನಲ್ಲಿ ಸರ್ಕಾರಿ ಕನ್ನಡ ಶಾಲೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಒಟ್ಟು 2000 ಸರ್ಕಾರಿ ಕನ್ನಡ ಶಾಲೆಗಳನ್ನು ₹8.800 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ದತ್ತು ನೀಡಲು ತಿರ್ಮಾನಿಸಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ಸಂಘಟನೆಯ ಮುಖಂಡರು ಮುಖಂಡರು ಖಂಡಿಸಿದರು.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಪ್ರತಿಕಾಗೋಷ್ಠಿಯಲ್ಲಿ ಎಸ್ಎಫ್ಐ ರಾಜ್ಯಾಧ್ಯಕ್ಷ ಗಣೇಶ ರಾಠೋಡ ಈ ಕುರಿತು ಮಾತನಾಡಿ, “ಸರ್ಕಾರವು ಕಾರ್ಪೊರೇಟ್ ಸಂಸ್ಥೆಗಳಿಂದ ಬರುವ ಸಿಎಸ್ಆರ್ ಫಂಡನ್ನು ಶಿಕ್ಷಣಕ್ಕೆ ಬಳಸಲು ತೀರ್ಮಾನಿಸಿರುವುದು ಸ್ವಾಗತಾರ್ಹ. ಆದರೆ ಸರ್ಕಾರಿ ಕನ್ನಡ ಶಾಲೆಗಳನ್ನು ಈ ಹೆಸರಿನಲ್ಲಿ ಕಾರ್ಪೊರೇಟ್ ವಲಯಕ್ಕೆ ದತ್ತು ನೀಡುವುದು, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ನಾಶ ಮಾಡುವ ಹುನ್ನಾರವಾಗಿದೆ” ಎಂದು ಕಿಡಿಕಾರಿಸದರು.
“ಸರ್ಕಾರವು ಗ್ರಾಮೀಣ ಪ್ರದೇಶದ ದಲಿತ, ರೈತ, ಕಾರ್ಮಿಕ, ಕೃಷಿ ಕೂಲಿಕಾರರ, ಮಹಿಳೆಯರ ಮಧ್ಯಮ ವರ್ಗದ ವಿದ್ಯಾರ್ಥಿಗಳ ಬದುಕನ್ನು ಮತ್ತು ಅವರ ಶಿಕ್ಷಣವನ್ನು ಕಸಿಯಲು ಹೊರಟಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಊರಲ್ಲಿ ಇರುವ ಸರಕಾರಿ ಕನ್ನಡ ಶಾಲೆಗಳಿಗೆ ಹೋಗಲು ಬಯಸುತ್ತಾರೆ. ಆದರೆ ಅವುಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಇವುಗಳಿಂದ ಶಾಲೆಗಳು ನರಳುತ್ತಿವೆ. ಹಾಗಾಗಿ ಇಂತಹ ಶಾಲೆಗಳನ್ನು ಸಂಸ್ಥೆಗಳೊಂದಿಗೆ ತಾರ್ಯ ತಮ್ಯ ಮಾಡಿರುವುದು ಅವೈಜ್ಞಾನಿಕ ನೀತಿಯಾಗಿದೆ” ಎಂದರು.
ಕೂಡಲೇ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಮಂತ್ರಿಗಳು ತಕ್ಷಣವೇ ಈಗ ಹೊರಡಿಸಿರುವ ನಮ್ಮ ಶಾಲೆ ನಮ್ಮ ಜವಾಬ್ದಾರಿಯ ಯೋಜನೆ ಅಡಿಯಲ್ಲಿ ದತ್ತು ನೀಡುತ್ತಿರುವ ಶಾಲೆಗಳ ಆದೇಶವನ್ನು ಹಿಂಪಳಿಯಬೇಕು” ಎಂದು ಒತ್ತಾಯಿಸಿದರು.
ಎಸ್ಎಫ್ಐ ಗದಗ ಜಿಲ್ಲಾ ಅಧ್ಯಕ್ಷ ಚಂದ್ರು ರಾಠೋಡ ಮಾತನಾಡಿ, “ಕರ್ನಾಟಕ ಸರ್ಕಾರ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಇವತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಾರಾಟ ಮಾಡಲು ಹೊರಟಿದೆ. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯ (CSR) ಹಣ ಸುಮಾರು 8.800 ಕೋಟಿ ರೂಪಾಯಿ ಹಣವನ್ನು ಬಳಸಿಕೊಂಡು 2000 ಸರ್ಕಾರಿ ಶಾಲೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸರ್ಕಾರಿ ಕನ್ನಡ ಶಾಲೆಗಳನ್ನು ಬಲವರ್ಧನೆ ಹಾಗೂ ಬೆಳವಣಿಗೆ ಮಾಡಬಹುದೆಂದು ಸರ್ಕಾರ ಹಾಸ್ಯಾಸ್ಪದ ಹೇಳಿಕೆಯನ್ನು ನೀಡುತ್ತಿದೆ. ಇದನ್ನು ಎಸ್ಎಫ್ಐ ಖಂಡಿಸುತ್ತದೆ” ಎಂದರು.
ಈಗಾಗಲೇ ಕರ್ನಾಟಕ ಪಬ್ಲಿಕ್ ಶಾಲೆಯ ಹೆಸರಿನಲ್ಲಿ ಗ್ರಾಮೀಣ ಭಾಗದ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚಿಹಾಕಿದೆ. ಅಂತರಾಷ್ಟ್ರೀಯ ಬ್ಯಾಂಕ್ ಮೂಲಕ 2000 ಕೋಟಿ ರೂಪಾಯಿ ಹಣವನ್ನು ಸಾಲದ ಮಾಡಿದೆ. ಈ ಮೂಲಕ ಹೂಡಿಕೆ ಮಾಡಿ ಗ್ರಾಮೀಣ ಪ್ರದೇಶದಲ್ಲಿ ಪಂಚಾಯಿತಿಗೊಂದು ಶಾಲೆ, ವಾರ್ಡ್ ಒಂದು ಶಾಲೆ ಅಂತ ಮಾರ್ಪಾಡು ಮಾಡಿ ಕರ್ನಾಟಕ ಪಬ್ಲಿಕ್ ಶಾಲೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ. ಇದರ ವಿರುದ್ಧ ಎಸ್ಎಫ್ಐ ಸಂಘಟನೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ ಮಾಡಲಾಗಿದೆ” ಎಂದರು.
“ಈಗ ಎರಡು ಸಾವಿರ ಸರ್ಕಾರಿ ಕನ್ನಡ ಶಾಲೆಗಳನ್ನು ಒಡಂಬಡಿಕೆ ಮಾಡಿರುವುದನ್ನು ಸರ್ಕಾರ ತಕ್ಷಣ ಕೈಬಿಡಬೇಕು ಇಲ್ಲವಾದರೆ ವಿದ್ಯಾರ್ಥಿ ಸಂಘಟನೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಎಸ್ಎಫ್ಐ ತಾಲೂಕು ಅಧ್ಯಕ್ಷ ಅನೀಲ್ ಆರ್, ಜಿಲ್ಲಾ ಉಪಾಧ್ಯಕ್ಷರು ಅಕ್ಕಮ್ಮ, ರೇಣುಕಾ, ಶರಣು ಮಾಟರಂಗಿ ಇದ್ದರು.




