“ಸಮಾಜದಲ್ಲಿ ದ್ವೇಷ ಭಾಷಣಗಳ ಮೂಲಕ ಅಶಾಂತಿ ಸೃಷ್ಟಿಸಿದವರು, ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸಿ ಕೋಮುವಾದಿ, ಸಂಘ ಪರಿವಾರದ ಗೂಂಡಾಗಳು ಅಲ್ಪಸಂಖ್ಯಾತರು ಹಾಗೂ ದಲಿತರ ಮೇಲೆ ನಿರಂತರವಾಗಿ ವಿಷಕಾರಿ ಭಾಷಣ ಮಾಡುವವರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಸರ್ಕಾರ ಹಿಂಪಡೆದಿರುವುದು ಕಾನೂನು ಸುವ್ಯವಸ್ಥೆಗೆ ಒಂದು ದೊಡ್ಡ ಸವಾಲಾಗಿದೆ. ಈ ಕೂಡಲೇ ತನ್ನ ನಿರ್ಧಾರವನ್ನು ರದ್ದುಪಡಿಸಿ ಸದರಿ ಪ್ರಕರಣಗಳಲ್ಲಿ ಕೋಮುವಾದಿ ಗೂಂಡಾಗಳಿಗೆ ಕಾನೂನಾತ್ಮಕ ಸೂಕ್ತ ಶಿಕ್ಷೆ ಆಗುವಂತೆ ಕ್ರಮ ಜರುಗಿಸಬೇಕು ಎಂದು” ಎಂದು ಎಸ್.ಡಿ.ಪಿ.ಐ ಪಕ್ಷದ ಮುಖಂಡರು ಪ್ರತಿಭಟಿಸಿದರು.
ಗದಗ ಪಟ್ಟಣದ ಹುಯಿಲಗೋಳ ನಾರಾಯಣ ವೃತ್ತ (ಟಾಂಗಾಕೂಟ)ದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ವತಿಯಿಂದ ರವಿವಾರದಂದು ಕೋಮುವಾದಿ ಸಂಘ ಪರಿವಾರದ ಗೂಂಡಾಗಳ ಮೇಲಿನ ಕೇಸ್ ವಾಪಸ್ ಪಡೆದಿ ನಿರ್ಧಾರ ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾಧ್ಯಕ್ಷ ಬಿಲಾಲ್ ಗೋಕಾವಿ ಮಾತನಾಡಿ, “ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂಘ ಪರಿವಾರವನ್ನು ಸಮಾಧಾನ ಪಡಿಸುವ ಉದ್ದೇಶದೊಂದಿಗೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಆಂದೋಲ ಸ್ವಾಮಿ ಸೇರಿದಂತೆ ಕೋಮು ದ್ವೇಷ ಹರಡಿ, ಗಲಭೆ ಸೃಷ್ಟಿಸುವವರ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ತೆಗೆದುಕೊಂಡಿರುವ ನಿರ್ಧಾರ ರಾಜ್ಯದ ಜನತಂತ್ರ, ಕಾನೂನು ಸುವ್ಯವಸ್ಥೆಯ ಮೂಲ ತತ್ವಗಳ ಮೇಲಿನ ನೇರ ದಾಳಿಯಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕಾನೂನು ಎಲ್ಲರಿಗೂ ಸಮಾನವಾಗಿದೆ ಎನ್ನುವ ನೆಪ್ಪವೊಡ್ಡಿಕೊಂಡು ಸಮಾಜ ಘಾತುಕ ಶಕ್ತಿಗಳನ್ನು ಪ್ರೋತ್ಸಾಹಿಸುವುದು ಅತ್ಯಂತ ಆಘಾತಕಾರಿ ಸಂಗತಿ. ಕೋಮು ಕ್ರಿಮಿಗಳಿಗೆ ವಿಶೇಷ ರಿಯಾಯಿತಿ ನೀಡುತ್ತಿರುವ ಸರ್ಕಾರದ ನಡೆ ಪ್ರಶ್ನಾರ್ಹವಾಗಿದೆ” ಎಂದು ಕಿಡಿಕಾರಿದರು.
“ಇಲ್ಲಿ ರಾಜ್ಯ ಸರಕಾರ ಅಮಾಯಕರ ಮೇಲಿನ ಕೇಸುಗಳನ್ನು ಹಿಂಪಡೆದದ್ದು ಅಥವಾ ಕನ್ನಡ ಪರ ಸಂಘ ಹೋರಾಟಗಾರರ ಕೇಸುಗಳನ್ನು ಹಿಂಪಡೆದದ್ದು, ರೈತರ ಹೋರಾಟ, ರೈತ ಪರ ಹೋರಾಟಗಾರರ ಕೇಸುಗಳನ್ನು ಹಿಂಪಡೆದದ್ದನ್ನು ನಾವು ಸ್ವಾಗತಿಸುತ್ತೇವೆ. ಅದೇ ಸಂದರ್ಭದಲ್ಲಿ ಪುನರಾವರ್ತಿತವಾಗಿ ನಿರಂತರವಾಗಿ ಕೋಮು ಪ್ರಚೋದನೆ ಮಾಡುವಂತಹ, ಕೋಮು ಘರ್ಷಣೆಗೆ, ಕೋಮು ಗಲಭೆಗಳಿಗೆ ಉತ್ತೇಜಿಸುವಂತಹ ರೀತಿಯಲ್ಲಿ ಅಥವಾ ದೇಶದ ವಿರುದ್ಧ ರೀತಿಯಲ್ಲಿ ಹೇಳಿಕೆ ಕೊಡುವಂತಹ ಬಿಜೆಪಿ ಸಂಘ ಪರಿವಾರದ ನಾಯಕರ ಮೇಲಿನ ಕೇಸುಗಳನ್ನು ಹಿಂಪಡೆದಿರುವುದನ್ನು ಒಪ್ಪಲಿಕ್ಕೆ ಸಾಧ್ಯವಿಲ್ಲ” ಎಂದರು.
ಎಸ್.ಡಿ.ಪಿ.ಐ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಫ್ಘಾನ್ ತರಫ್ತಾರ್ ಮಾತನಾಡಿ, “ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಮುಸ್ಲಿಮರು, ದಲಿತರು ಹಾಗೂ ಹಿಂದುಳಿದ ವರ್ಗಗಳ ವಿರುದ್ಧ ದಾಖಲಾಗಿರುವ ಅನೇಕ ಪ್ರಕರಣಗಳಲ್ಲಿ ‘ಕಾನೂನು ಅಡಚಣೆ’ ಎಂಬ ನೆಪ ಹೇಳಿ ನ್ಯಾಯ ಕಲ್ಪಿಸದೆ ಕಾಲಹರಣ ಮಾಡುತ್ತಿದೆ. ಸಮಾಜದಲ್ಲಿ ಬಹಿರಂಗವಾಗಿ ದ್ವೇಷ ಹರಡುವವರ ವಿರುದ್ಧ ಪ್ರಕರಣಗಳನ್ನು ಹಿಂಪಡೆಯುವಾಗ ಯಾವುದೇ ಕಾನೂನು ಅಡ್ಡಿ ಬರುವುದಿಲ್ಲ” ಆಕ್ರೋಶ ವ್ಯಕ್ತಪಡಿಸಿದರು.
“ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರ ಅಂತಹ ಕೋಮು ಕ್ರಿಮಿಗಳ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಸರ್ಕಾರ ಯಾವ “ಗುಪ್ತ ರಾಜಕೀಯ ಅಜೆಂಡಾ” ಜಾರಿಗೆ ತರುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲೇಬೇಕು. ಎಂದು ಎಸ್.ಡಿ.ಪಿ.ಐ ಆಗ್ರಹಿಸುತ್ತದೆ.
“ದ್ವೇಷ ರಾಜಕಾರಣಕ್ಕೆ ರಕ್ಷಣೆ ನೀಡಿ, ಅಮಾಯಕ ಅಲ್ಪಸಂಖ್ಯಾತರು ಮತ್ತು ದಲಿತರನ್ನು ಟಾರ್ಗೆಟ್ ಮಾಡುವ ನೀತಿಯನ್ನು ರಾಜ್ಯದ ಜನತೆ ಎಂದಿಗೂ ಒಪ್ಪುವುದಿಲ್ಲ. ಆದುದರಿಂದ ಸರ್ಕಾರ ತನ್ನ ಈ ಜನವಿರೋಧಿ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕು” ಎಂದು ಎಸ್‌ಡಿಪಿಐ ಆಗ್ರಹಿಸುತ್ತದೆ.
ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ ಮುಖಂಡರು ಹಿದಾಯತುಲ್ಲಾ ಕಾಗದಗಾರ, ವಿಮೆನ್ ಇಂಡಿಯಾ ಮೂವೈಂಟ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಗದಗ್ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರು ಮುಸ್ತಾಕ್ ಹೊಸಮನಿ, ಕಾರ್ಯದರ್ಶಿ ಸಮೀರ್ ಕೊಟ್ಟೂರ್, ಇಬ್ರಾಹಿಂ ಕುಂದರಪಿ, ಫಯಾಜ್ ಚಿನ್ನೂರ್, ರಶೀದ್ ಕಟ್ಟಿಮನಿ, ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.




