2023ರ ವೇಣುಗೋಪಾಲ ನಾಯಕ್ ಹತ್ಯೆಯಿಂದ 2026ರ ಗಣೇಶೋತ್ಸವ ವಿವಾದದವರೆಗೆ; ಪೊಲೀಸ್ ಎಚ್ಚರಿಕೆ, ವೈರಲ್ ವಿಡಿಯೊ, ರಾಜಕೀಯ ಪ್ರತಿಭಟನೆ ಮತ್ತು ‘ಭೀಮಯಾತ್ರೆ’ ನಡುವೆ ಪ್ರಶ್ನೆಯಾಗುತ್ತಿರುವುದು ಊರಿನ ಶಾಂತಿ.
ಕಪಿಲಾ, ಕಾವೇರಿ, ಸ್ಪಟಿಕ ನದಿಗಳ ನೆನಪುಗಳ ಜೊತೆಗೆ ಸಾಮಾಜಿಕ ಹೋರಾಟಗಳಿಗೂ, ದಲಿತ ಚಳವಳಿಗಳಿಗೂ ತನ್ನದೇ ಆದ ಇತಿಹಾಸ ಹೊಂದಿರುವ ಮೈಸೂರು ಜಿಲ್ಲೆಯ ತಿರುಮಕೂಡಲು ನರಸೀಪುರ ತಾಲ್ಲೂಕು ಇತ್ತೀಚಿನ ದಿನಗಳಲ್ಲಿ ಮತ್ತೊಂದು ಕಾರಣಕ್ಕೆ ರಾಜ್ಯದ ಗಮನ ಸೆಳೆದಿದೆ. ಆದರೆ, ಈ ಬಾರಿ ಚರ್ಚೆಯ ಕೇಂದ್ರದಲ್ಲಿ ಅಭಿವೃದ್ಧಿ, ಕೃಷಿ ಅಥವಾ ಸಾಮಾಜಿಕ ಹೋರಾಟವಲ್ಲ; ಗಣೇಶೋತ್ಸವ ಮೆರವಣಿಗೆಯ ಮಾರ್ಗ, ಪೊಲೀಸ್ ಸೂಚನೆ, ಸಾಮಾಜಿಕ ಜಾಲತಾಣದಲ್ಲಿ ಹರಿದ ವಿಡಿಯೊ ಮತ್ತು ಅದರ ಸುತ್ತ ಬೆಳೆದ ರಾಜಕೀಯ ಸಂಘರ್ಷ.
ಸೆಪ್ಟೆಂಬರ್ 7ರಂದು ಗಣೇಶೋತ್ಸವದ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಟಿ. ನರಸೀಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಧನಂಜಯ್ ಅವರು ಹಬ್ಬದ ಆಯೋಜಕರಿಗೆ ಮೆರವಣಿಗೆಯ ಮಾರ್ಗ, ಧ್ವನಿವರ್ಧಕ, ವಿಸರ್ಜನಾ ಮೆರವಣಿಗೆ ಮತ್ತು ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಸಂಬಂಧಿಸಿದಂತೆ ಹಲವು ಸೂಚನೆಗಳನ್ನು ನೀಡಿರುವುದು ವರದಿಯಾಗಿದೆ. ಮಸೀದಿ ಇರುವ ಲಿಂಕ್ ರಸ್ತೆಯ ಕಡೆ ಮೆರವಣಿಗೆ ಸಾಗಿಸುವುದು ಹಾಗೂ ಅಲ್ಲಿ ಪಟಾಕಿ ಸಿಡಿಸುವ ಕುರಿತು ಅವರು ಎಚ್ಚರಿಕೆ ನೀಡಿದ ಭಾಗದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದ ನಂತರ ವಿವಾದ ತೀವ್ರಗೊಂಡಿತು.
ಆದರೆ, ಇಲ್ಲಿ ಗಮನಿಸಬೇಕಾದ ಪ್ರಶ್ನೆಯೆಂದರೆ-ಪೊಲೀಸ್ ಅಧಿಕಾರಿ ಧನಂಜಯ ಅವರ ಮಾತಿನ ಸಂಪೂರ್ಣ ಸಂದರ್ಭ ಏನು? ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ತುಣುಕು ಆ ಸಂಪೂರ್ಣ ಸಭೆಯನ್ನೇ ಪ್ರತಿನಿಧಿಸುತ್ತದೆಯೇ?. ವರದಿಗಳ ಪ್ರಕಾರ ಸಭೆಯಲ್ಲಿ ಆಯೋಜಕರು ಪೊಲೀಸರು ಸೂಚಿಸಿದ ಮಾರ್ಗವನ್ನು ಅನುಸರಿಸುವುದು, ಧ್ವನಿವರ್ಧಕ ವ್ಯವಸ್ಥೆ, ಡಿಜೆ ವಾಹನ ಹಾಗೂ ವಿಸರ್ಜನಾ ಮೆರವಣಿಗೆಯ ನಿಯಮಗಳ ಕುರಿತೂ ಚರ್ಚೆ ನಡೆದಿತ್ತು. ಸಾಂಪ್ರದಾಯಿಕ ತಮಟೆ, ಡೊಳ್ಳು, ನಗಾರಿ ಮುಂತಾದ ವಾದ್ಯಗಳನ್ನು ಬಳಸುವಂತೆ ಸೂಚಿಸಲಾಗಿತ್ತು ಎಂಬ ವರದಿಯೂ ಇದೆ.
ಹೀಗಾಗಿ, ಈ ವಿವಾದದ ಕೇಂದ್ರಬಿಂದು ಕೇವಲ “ಗಣೇಶ ಮೆರವಣಿಗೆಗೆ ಅವಕಾಶ ಇದೆಯೇ ಇಲ್ಲವೇ?” ಎಂಬ ಪ್ರಶ್ನೆಯಲ್ಲ. ಬದಲಾಗಿ, ಪೊಲೀಸರು ಮೆರವಣಿಗೆಯನ್ನು ನಿಯಂತ್ರಿಸುವಾಗ ಎಷ್ಟು ಮಟ್ಟಿಗೆ ನಿಯಮ ರೂಪಿಸಬಹುದು? ಧಾರ್ಮಿಕ ಆಚರಣೆಯ ಹಕ್ಕು ಮತ್ತು ಸಾರ್ವಜನಿಕ ಶಾಂತಿ-ಸುವ್ಯವಸ್ಥೆಯ ನಡುವಿನ ಸಮತೋಲನವನ್ನು ಹೇಗೆ ಕಾಯಬೇಕು? ಎಂಬ ಪ್ರಶ್ನೆಯೂ ಇದರೊಳಗಿದೆ.
2023ರ ಘಟನೆ: ಇನ್ನೂ ಮರೆತಿಲ್ಲದ ಗಾಯ
ಟಿ. ನರಸೀಪುರದ ಇತ್ತೀಚಿನ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳಬೇಕಾದರೆ 2023ರ ಜುಲೈನಲ್ಲಿ ನಡೆದ ವೇಣುಗೋಪಾಲ ನಾಯಕ್ ಹತ್ಯೆಯನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಶ್ರೀರಾಂಪುರ ಕಾಲೊನಿ ನಿವಾಸಿ, 32 ವರ್ಷದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ್ ಅವರು ಹನುಮ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ಗಲಾಟೆಯ ನಂತರ ಹತ್ಯೆಯಾಗಿದ್ದರು. ಪೊಲೀಸ್ ಹಾಗೂ ಮಾಧ್ಯಮ ವರದಿಗಳ ಪ್ರಕಾರ, ದೇವಸ್ಥಾನದ ಆವರಣಕ್ಕೆ ಬೈಕ್ ತೆಗೆದುಕೊಂಡು ಹೋಗುವ ವಿಚಾರ ಮತ್ತು ನಟ ಪುನೀತ್ ರಾಜ್‌ಕುಮಾರ್ ಅವರ ಫ್ಲೆಕ್ಸ್ ಅಳವಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿತ್ತು. ನಂತರ ನಡೆದ ದಾಳಿಯಲ್ಲಿ ವೇಣುಗೋಪಾಲ ನಾಯಕ್ ಮೃತಪಟ್ಟಿದ್ದರು.
ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದಲ್ಲಿ ಕೊಲೆ ಸೇರಿದಂತೆ ಹಲವು ಗಂಭೀರ ಆರೋಪಗಳಡಿ ಪ್ರಕರಣ ದಾಖಲಾಗಿತ್ತು. ನಂತರದ ನ್ಯಾಯಾಂಗ ದಾಖಲೆಗಳಲ್ಲೂ ಟಿ. ನರಸೀಪುರ ಠಾಣೆಯ ಅಪರಾಧ ಸಂಖ್ಯೆ 173/2023ಕ್ಕೆ ಸಂಬಂಧಿಸಿದಂತೆ IPCಯ ಹಲವು ಸೆಕ್ಷನ್‌ಗಳು ಹಾಗೂ SC/ST (Prevention of Atrocities) Actನ ಸೆಕ್ಷನ್ 3(2)(v) ಉಲ್ಲೇಖಗೊಂಡಿವೆ. ಅತ್ಯಂತ ಗಮನಾರ್ಹ ಸಂಗತಿಯೆಂದರೆ, ಆ ಸಮಯದಲ್ಲಿ ಪೊಲೀಸ್ ಅಧಿಕಾರಿಗಳು ಪ್ರಕರಣಕ್ಕೆ ಕೋಮು ಆಯಾಮವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ವೈಯಕ್ತಿಕ ದ್ವೇಷ ಮತ್ತು ಎರಡು ಗುಂಪುಗಳ ನಡುವಿನ ಗಲಾಟೆಯ ಹಿನ್ನೆಲೆ ಎಂದು ತನಿಖಾಧಿಕಾರಿಗಳು ಹೇಳಿದ್ದರು.
ಅಂದರೆ, 2023ರ ಘಟನೆ ಸ್ವತಃ ಒಂದು ಎಚ್ಚರಿಕೆಯ ಪಾಠವಾಗಿತ್ತು: ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಆರಂಭವಾಗುವ ಸಣ್ಣ ಗಲಾಟೆಯೂ ನಿಯಂತ್ರಣ ತಪ್ಪಿದರೆ ಜೀವಹಾನಿಗೆ ಕಾರಣವಾಗಬಹುದು. ಇಂತಹ ಹಿನ್ನೆಲೆಯಲ್ಲೇ ಈಗಿನ ಗಣೇಶೋತ್ಸವ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಮುನ್ನೆಚ್ಚರಿಕೆಯ ಮಾತುಗಳನ್ನು ಆಡಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಪೊಲೀಸರ ಕರ್ತವ್ಯವೇನು?
ಧಾರ್ಮಿಕ ಮೆರವಣಿಗೆ ನಡೆಸುವ ಹಕ್ಕು ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಪೊಲೀಸರ ಕರ್ತವ್ಯ ಎರಡೂ ಒಂದೇ ಸಮಯದಲ್ಲಿ ಅಸ್ತಿತ್ವದಲ್ಲಿರುತ್ತವೆ. ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 39, ಧಾರ್ಮಿಕ ಅಥವಾ ಸಾಂಪ್ರದಾಯಿಕ ಮೆರವಣಿಗೆಯ ಸಂದರ್ಭದಲ್ಲಿ ವಿವಾದ ಅಥವಾ ಶಾಂತಿಭಂಗದ ಸಾಧ್ಯತೆ ಇದ್ದರೆ, ಸಾರ್ವಜನಿಕ ಶಾಂತಿಗಾಗಿ ಅಗತ್ಯ ಮತ್ತು ಸಮಂಜಸವಾದ ನಿಯಮಗಳನ್ನು ವಿಧಿಸಲು ಅಧಿಕಾರಿಗಳಿಗೆ ಅವಕಾಶ ನೀಡುತ್ತದೆ. ಕರ್ನಾಟಕ ಹೈಕೋರ್ಟ್ ಕೂಡ ಧಾರ್ಮಿಕ ಮೆರವಣಿಗೆಗಳನ್ನು ಪೊಲೀಸರು ನಿಯಂತ್ರಿಸಬಹುದು; ಆದರೆ, ನಿಯಂತ್ರಣವು ಕಾರಣಬದ್ಧವಾಗಿರಬೇಕು ಮತ್ತು ಅನಿಯಂತ್ರಿತವಾಗಿರಬಾರದು ಎಂದು ಹಲವು ಪ್ರಕರಣಗಳಲ್ಲಿ ಸ್ಪಷ್ಟಪಡಿಸಿದೆ.
ಅಂದರೆ, ಪೊಲೀಸರ ಕರ್ತವ್ಯ ಹಬ್ಬವನ್ನು ನಿಲ್ಲಿಸುವುದು ಅಲ್ಲ; ಹಬ್ಬ ಸುರಕ್ಷಿತವಾಗಿ ನಡೆಯುವಂತೆ ನೋಡಿಕೊಳ್ಳುವುದು. ಮೆರವಣಿಗೆಯ ಮಾರ್ಗ, ಸಮಯ, ಧ್ವನಿವರ್ಧಕ, ಸಂಚಾರ, ಜನಸಂದಣಿ, ಸೂಕ್ಷ್ಮ ಪ್ರದೇಶಗಳು, ಎರಡು ಸಮುದಾಯಗಳ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು-ಇವೆಲ್ಲವೂ ಕಾನೂನು ಸುವ್ಯವಸ್ಥೆಯ ಭಾಗ. ಇದಕ್ಕೆ ಸಂಬಂಧಿಸಿದ ನ್ಯಾಯಾಲಯದ ಆದೇಶಗಳಲ್ಲಿಯೂ ಮೆರವಣಿಗೆಗಳು ಅನುಮೋದಿತ ಮಾರ್ಗದಲ್ಲಿ ಸಾಗಬೇಕು, ಸಂಚಾರಕ್ಕೆ ಅಡ್ಡಿಯಾಗಬಾರದು, ಇತರ ಧರ್ಮಗಳ ಭಾವನೆಗಳಿಗೆ ಧಕ್ಕೆ ತರುವ ಘೋಷಣೆ ಅಥವಾ ವರ್ತನೆ ಇರಬಾರದು, ಆಯೋಜಕರು ಪೊಲೀಸರೊಂದಿಗೆ ಸಹಕರಿಸಬೇಕು ಎಂಬಂತಹ ಷರತ್ತುಗಳನ್ನು ವಿಧಿಸಿರುವ ಉದಾಹರಣೆಗಳಿವೆ.
ಹೀಗಾಗಿ, ಪೊಲೀಸರು ನಿಯಮ ಹೇಳುವುದೇ ಧಾರ್ಮಿಕ ಆಚರಣೆಗೆ ವಿರೋಧ ಎಂಬ ಸಮೀಕರಣವೂ ಸರಿಯಲ್ಲ; ಅದೇ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಧಾರ್ಮಿಕ ಸಮುದಾಯವೊಂದನ್ನು ಗುರಿಯಾಗಿಸಿಕೊಂಡಂತೆ ಕಾಣುವ ರೀತಿಯಲ್ಲಿ ಮಾತನಾಡಿದ್ದರೆ ಅದರ ಕುರಿತು ಪರಿಶೀಲನೆ ನಡೆಯಬೇಕೆಂಬ ಪ್ರಶ್ನೆಯೂ ಪ್ರತ್ಯೇಕವಾಗಿದೆ. ಇವೆರಡನ್ನು ಒಂದೇ ವಿಷಯವೆಂದು ನೋಡುವುದರಿಂದಲೇ ವಿವಾದ ಮತ್ತಷ್ಟು ರಾಜಕೀಯವಾಗುತ್ತದೆ.
ಒಂದು ವಿಡಿಯೊ… ಎರಡು ನಿರೂಪಣೆ
ಈ ಪ್ರಕರಣದ ಮತ್ತೊಂದು ಪ್ರಮುಖ ಆಯಾಮ ಸಾಮಾಜಿಕ ಜಾಲತಾಣ. ಸಭೆಯ ಸಂಪೂರ್ಣ ಮಾತುಕತೆಯ ಬದಲು ನಿರ್ದಿಷ್ಟ ಭಾಗದ ವಿಡಿಯೊ ತುಣುಕು ವೈರಲ್ ಆಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಅದರಲ್ಲಿ ಮಸೀದಿ ಮಾರ್ಗದಲ್ಲಿ ಮೆರವಣಿಗೆ ಹಾಗೂ ಪಟಾಕಿ ಸಿಡಿಸುವ ವಿಚಾರದ ಪೊಲೀಸ್ ಎಚ್ಚರಿಕೆ ಮುಖ್ಯವಾಗಿ ಕಾಣಿಸುತ್ತದೆ. ಇದನ್ನು ಬಿಜೆಪಿ ನಾಯಕರು ಗಣೇಶೋತ್ಸವದ ಮೇಲಿನ ನಿರ್ಬಂಧ ಎಂದು ವ್ಯಾಖ್ಯಾನಿಸಿದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಬಿಜೆಪಿ ನಾಯಕರು ಅಧಿಕಾರಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಕೂಡ ಟಿ. ನರಸೀಪುರಕ್ಕೆ ಭೇಟಿ ನೀಡಿ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಇನ್ನೊಂದೆಡೆ, ಸರ್ಕಾರದ ವಾದವೇ ಬೇರೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಪೊಲೀಸ್ ವರದಿ ಪಡೆಯಲಾಗುವುದು ಮತ್ತು ಹಾಲಿ ನಿಯಮಗಳಲ್ಲೇ ಪೊಲೀಸ್ ಅಧಿಕಾರಿಗಳು ಇಂತಹ ಶಾಂತಿ ಸಭೆಗಳನ್ನು ನಡೆಸುತ್ತಾರೆ ಎಂದು ಹೇಳಿದ್ದಾರೆ. ಪೊಲೀಸ್ ಠಾಣೆಗೆ ನುಗ್ಗುವ ಪ್ರತಾಪ್ ಸಿಂಹ ಹೇಳಿಕೆಗೆ ‘ಮೈಸೂರಿನ ಪೇಟೆ ರೌಡಿ’ಯನ್ನ ಪರಪ್ಪನ ಅಗ್ರಹಾರಕ್ಕೆ ಕಳಿಸುವುದು ಗೊತ್ತು ಎಂದು ಮಾರ್ಮಿಕವಾಗಿ ಹೇಳಿದ್ದಾರೆ, ಇದನ್ನ ಪತ್ರಿಕೆ, ಮಾಧ್ಯಮಗಳೂ ವರದಿ ಮಾಡಿವೆ. ಇದರ ನಡುವೆ ಒಂದು ಪ್ರಶ್ನೆ ಮಾತ್ರ ಸ್ಥಳೀಯವಾಗಿ ಉಳಿಯುತ್ತದೆ. ಪೂರ್ಣ ವಿಡಿಯೊ ನೋಡದೆ ಒಂದು ತುಣುಕಿನ ಆಧಾರದಲ್ಲಿ ಒಂದು ಪಟ್ಟಣದ ಸಾಮಾಜಿಕ ಸಂಬಂಧಗಳ ಬಗ್ಗೆ ತೀರ್ಪು ನೀಡಬಹುದೇ?.
ಪ್ರತಿಭಟನೆ ಟಿ. ನರಸೀಪುರದ ಗಡಿ ದಾಟಿದಾಗ
ಸೆಪ್ಟೆಂಬರ್ 13ರಂದು ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಟಿ. ನರಸೀಪುರದಲ್ಲಿ ಪ್ರತಿಭಟನೆ ನಡೆಸಿದರು. ಇನ್ಸ್‌ಪೆಕ್ಟರ್ ಧನಂಜಯ್ ಅಮಾನತಿಗೆ ಆಗ್ರಹಿಸಲಾಯಿತು. ಈ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರು ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ ನಡುವೆ ಮಾತಿನ ಚಕಮಕಿ ಮತ್ತು ನೂಕಾಟದ ದೃಶ್ಯಗಳು ವರದಿಯಾದವು. ಈ ಬೆಳವಣಿಗೆ ಪ್ರತಿಭಟನೆಯ ಮೂಲ ವಿಷಯಕ್ಕಿಂತಲೂ ಬಿಜೆಪಿಯ ಆಂತರಿಕ ರಾಜಕೀಯದ ಬಗ್ಗೆ ಚರ್ಚೆ ಹುಟ್ಟಿಸಿತು. ಇದರಿಂದ ಮತ್ತೊಂದು ಪ್ರಶ್ನೆ ಮುನ್ನೆಲೆಗೆ ಬಂದಿದೆ-ಟಿ. ನರಸೀಪುರದ ಗಣೇಶೋತ್ಸವದ ಸ್ಥಳೀಯ ವಿವಾದವು ಈಗ ಸ್ಥಳೀಯ ಸಾಮಾಜಿಕ ಪ್ರಶ್ನೆಯಾಗಿ ಉಳಿದಿದೆಯೇ, ಅಥವಾ ಮೈಸೂರು ಬಿಜೆಪಿಯ ಆಂತರಿಕ ರಾಜಕೀಯಕ್ಕೂ ವೇದಿಕೆಯಾಗಿದೆಯೇ? ಇದು ಆರೋಪವಲ್ಲ; ಇತ್ತೀಚಿನ ಸಾರ್ವಜನಿಕ ಬೆಳವಣಿಗೆಗಳನ್ನು ಗಮನಿಸಿದಾಗ ಚರ್ಚೆಯಾಗುತ್ತಿರುವ ರಾಜಕೀಯ ಆಯಾಮ.
‘ಗಣೇಶೋತ್ಸವವೇ ಸಮಸ್ಯೆಯಲ್ಲ; ಅದರ ಸುತ್ತಲಿನ ರಾಜಕೀಯವೇ ಸಮಸ್ಯೆ’ ಎನ್ನುತ್ತಿರುವ ಸ್ಥಳೀಯರ ಮಾತು
ಸ್ಥಳೀಯರ ಒಂದು ವರ್ಗದ ವಾದ ಸರಳವಾಗಿದೆ. ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಸಮುದಾಯದ ಜನರು ವರ್ಷಗಳಿಂದ ಒಟ್ಟಿಗೆ ಬದುಕುತ್ತಿದ್ದಾರೆ. ಹಬ್ಬಗಳು ನಡೆಯುತ್ತವೆ. ಮೆರವಣಿಗೆಗಳು ನಡೆಯುತ್ತವೆ. ಮಸೀದಿ, ದೇವಸ್ಥಾನ, ಮಾರುಕಟ್ಟೆ, ವಸತಿ ಪ್ರದೇಶ-ಎಲ್ಲವೂ ಒಂದೇ ಸಾರ್ವಜನಿಕ ಸ್ಥಳವನ್ನು ಹಂಚಿಕೊಳ್ಳುತ್ತವೆ. “ನಮಗೆ ಇದುವರೆಗೆ ಇಂತಹ ಕೋಮು ದ್ವೇಷದ ಅನುಭವ ಇರಲಿಲ್ಲ. ಹೊರಗಿನಿಂದ ಬಂದು ನಮ್ಮ ಊರಿನ ಸಾಮಾಜಿಕ ಸಂಬಂಧಗಳಿಗೆ ಹೊಸ ಬಣ್ಣ ಕೊಡುವ ಅಗತ್ಯವೇನು?” ಎಂಬ ಪ್ರಶ್ನೆ ಸ್ಥಳೀಯರಿಂದ ಕೇಳಿಬರುತ್ತಿದೆ. ಇದರ ವಿರುದ್ಧದ ವಾದವೂ ಇದೆ. ಗಣೇಶೋತ್ಸವದ ಧಾರ್ಮಿಕ ಆಚರಣೆಗೆ ಪೊಲೀಸರು ಅನಗತ್ಯವಾಗಿ ನಿರ್ಬಂಧ ಹೇರಬಾರದು; ಮೆರವಣಿಗೆಯ ಸಾಂಪ್ರದಾಯಿಕ ಮಾರ್ಗವನ್ನು ಕೇವಲ ಒಂದು ಧಾರ್ಮಿಕ ಸ್ಥಳವಿದೆ ಎಂಬ ಕಾರಣಕ್ಕೆ ಬದಲಾಯಿಸಬಾರದು ಎಂದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಹೇಳುತ್ತಿವೆ. ಹೀಗಾಗಿ, ಎರಡೂ ಬದಿಯ ಪ್ರಶ್ನೆಗಳನ್ನು ಕೇಳದೆ ಟಿ. ನರಸೀಪುರದ ವಾಸ್ತವವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
ನಾಳೆಯ ‘ಭೀಮಯಾತ್ರೆ’: ಮತ್ತೊಂದು ಪರೀಕ್ಷೆ
ಈ ಹಿನ್ನೆಲೆಯಲ್ಲೇ ದಲಿತ, ರೈತ ಹಾಗೂ ಪ್ರಗತಿಪರ ಸಂಘಟನೆಗಳು ನಾಳೆ ‘ಭೀಮಯಾತ್ರೆ’ ಹಾಗೂ ‘ಸೌಹಾರ್ದತೆ ಕಡೆಗೆ ಸಾಮರಸ್ಯದ ನಡಿಗೆ’ ಹೆಸರಿನಲ್ಲಿ ಮೆರವಣಿಗೆ ನಡೆಸಲು ಮುಂದಾಗಿರುವುದು ಹೊಸ ಅಧ್ಯಾಯಕ್ಕೆ ಕಾರಣವಾಗಿದೆ. ಈ ಸಂಘಟನೆಗಳ ನಿಲುವು ಸ್ಪಷ್ಟ-ಧಾರ್ಮಿಕ ಆಚರಣೆಗೆ ಅಡ್ಡಿಯಲ್ಲ; ಆದರೆ, ಧರ್ಮದ ಹೆಸರಿನಲ್ಲಿ ಕೋಮು ದ್ವೇಷದ ರಾಜಕೀಯಕ್ಕೆ ಅವಕಾಶ ನೀಡುವುದಿಲ್ಲ.
“ನಮಗೆ ದ್ವೇಷ ಬೇಡ, ಕೋಮುವಾದ ಬೇಡ; ಭೀಮವಾದ ಮತ್ತು ಸಂವಿಧಾನ ಬೇಕು” ಎಂಬ ಸಂದೇಶದೊಂದಿಗೆ ಅವರು ಪ್ರತಿರೋಧ ವ್ಯಕ್ತಪಡಿಸಲು ಸಜ್ಜಾಗಿದ್ದಾರೆ.
ಇದು ಟಿ. ನರಸೀಪುರದ ಪಾಲಿಗೆ ಮತ್ತೊಂದು ಪರೀಕ್ಷೆ. ಒಂದೆಡೆ ಗಣೇಶೋತ್ಸವದ ಮೆರವಣಿಗೆ. ಇನ್ನೊಂದೆಡೆ ಅದೇ ದಿನ ಸೌಹಾರ್ದತೆಯ ಸಂದೇಶ ಹೊತ್ತ ಮೆರವಣಿಗೆ. ಎರಡೂ ಕಾರ್ಯಕ್ರಮಗಳು ಮುಖಾಮುಖಿಯಾಗದಂತೆ, ಯಾವುದೇ ಘರ್ಷಣೆಗೆ ಅವಕಾಶವಾಗದಂತೆ ನೋಡಿಕೊಳ್ಳುವುದು ಈಗ ಆಡಳಿತದ ದೊಡ್ಡ ಜವಾಬ್ದಾರಿ.
ಇಲ್ಲಿ ಗೆಲ್ಲಬೇಕಿರುವುದು ಯಾರೂ ಅಲ್ಲ-ಊರು ಮಾತ್ರ
ಟಿ. ನರಸೀಪುರದ ಇಂದಿನ ಬೆಳವಣಿಗೆಗೆ ರಾಜಕೀಯ ಪಕ್ಷಗಳು ತಮ್ಮದೇ ಅರ್ಥ ನೀಡಬಹುದು. ಪೊಲೀಸ್ ಅಧಿಕಾರಿಯ ಮಾತನ್ನು ಒಂದು ಪಕ್ಷ ತನ್ನ ಪರವಾಗಿ, ಮತ್ತೊಂದು ಪಕ್ಷ ತನ್ನ ಪರವಾಗಿ ವ್ಯಾಖ್ಯಾನಿಸಬಹುದು. ಸಾಮಾಜಿಕ ಜಾಲತಾಣಗಳು ತಮ್ಮದೇ ತುಣುಕುಗಳನ್ನು ವೈರಲ್ ಮಾಡಬಹುದು. ಆದರೆ, ಈ ಎಲ್ಲದರ ನಡುವೆ ಒಂದು ಸಂಗತಿ ಮರೆಯಬಾರದು. 2023ರಲ್ಲಿ ಒಂದು ಸಣ್ಣ ವಿಚಾರ ದೊಡ್ಡ ಸಂಘರ್ಷವಾಗಿ, ಕೊನೆಗೆ ಒಬ್ಬ ಯುವಕನ ಜೀವವನ್ನೇ ಕಸಿದುಕೊಂಡಿತ್ತು. ಆ ಪ್ರಕರಣದಲ್ಲಿ ಪೊಲೀಸರು ಕೋಮು ಆಯಾಮವಿಲ್ಲ ಎಂದು ಹೇಳಿದ್ದರೂ, ಘಟನೆ ಒಂದು ಧಾರ್ಮಿಕ ಕಾರ್ಯಕ್ರಮದ ಸುತ್ತ ಸಂಭವಿಸಿದ್ದರಿಂದ ಅದರ ಸಾಮಾಜಿಕ ಪರಿಣಾಮವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.
2026ರಲ್ಲಿ ಅದೇ ಪಟ್ಟಣ ಮತ್ತೆ ಧಾರ್ಮಿಕ ಮೆರವಣಿಗೆ ಮತ್ತು ಪೊಲೀಸ್ ಎಚ್ಚರಿಕೆಯ ವಿಚಾರದಲ್ಲಿ ರಾಜ್ಯದ ಚರ್ಚೆಯ ಕೇಂದ್ರವಾಗಿದೆ. ಆದ್ದರಿಂದ, ಈಗ ಅಗತ್ಯವಿರುವುದು ಹೆಚ್ಚಿನ ಘೋಷಣೆಗಳಲ್ಲ; ಹೆಚ್ಚಿನ ಜವಾಬ್ದಾರಿ. ಪೊಲೀಸರು -ಕಾನೂನುಬದ್ಧವಾಗಿ, ಸಮಾನವಾಗಿ ಮತ್ತು ಪಾರದರ್ಶಕವಾಗಿ ನಡೆದುಕೊಳ್ಳಬೇಕು. ಆಯೋಜಕರು-ಅನುಮೋದಿತ ನಿಯಮಗಳನ್ನು ಪಾಲಿಸಬೇಕು. ರಾಜಕೀಯ ನಾಯಕರು-ಸ್ಥಳೀಯ ಸೂಕ್ಷ್ಮತೆಯನ್ನು ಪರಿಗಣಿಸಿ ಮಾತನಾಡಬೇಕು. ಸಾಮಾಜಿಕ ಜಾಲತಾಣ ಬಳಕೆದಾರರು-ಸಂಪೂರ್ಣ ಸಂದರ್ಭ ತಿಳಿಯದೆ ವಿಡಿಯೊ ತುಣುಕುಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ-ಸ್ಥಳೀಯ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ತಮ್ಮ ದಶಕಗಳ ಸಾಮಾಜಿಕ ಸಂಬಂಧಗಳನ್ನು ರಾಜಕೀಯ ಘೋಷಣೆಗಳಿಗಿಂತ ಮೇಲಿಟ್ಟುಕೊಳ್ಳಬೇಕು.
ಗಣೇಶೋತ್ಸವ ನಡೆಯಲಿ. ಭೀಮಯಾತ್ರೆಯೂ ನಡೆಯಲಿ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆಗೂ ಹಬ್ಬಕ್ಕೂ ಎರಡಕ್ಕೂ ಜಾಗವಿದೆ. ಆದರೆ, ಯಾವುದೇ ಕಾರ್ಯಕ್ರಮ ಇನ್ನೊಂದು ಸಮುದಾಯದ ವಿರುದ್ಧದ ಪ್ರದರ್ಶನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಟಿ. ನರಸೀಪುರದ ಪ್ರಶ್ನೆ ಹೀಗಾಗಿ “ಯಾರ ಮೆರವಣಿಗೆ ಗೆಲ್ಲುತ್ತದೆ?” ಎಂಬುದಲ್ಲ. ‘ಈ ಪಟ್ಟಣ ತನ್ನ ಸಹಬಾಳ್ವೆಯನ್ನು ಉಳಿಸಿಕೊಳ್ಳುತ್ತದೆಯೇ?’ ಎಂಬುದಾಗಿದೆ. ಹೋರಾಟದ ಇತಿಹಾಸವಿರುವ ಈ ನೆಲದಲ್ಲಿ ಮುಂದಿನ ಹೆಜ್ಜೆ ದ್ವೇಷದ ಕಡೆಗೋ, ಸಾಮರಸ್ಯದ ಕಡೆಗೋ ಎಂಬುದನ್ನು ನಿರ್ಧರಿಸುವ ಹೊಣೆಗಾರಿಕೆ ಈಗ ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಸ್ಥಳೀಯ ಸಮಾಜದ ಮೇಲಿದೆ.
ಈ ವಿಶೇಷ ಸುದ್ದಿ ಓದಿದ್ದೀರಾ? ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ ಅಮ್ಮ’
ಪೊಲೀಸ್ ಅಧಿಕಾರಿಗಳಿಗೆ ಮೆರವಣಿಗೆ ಮತ್ತು ಸಾರ್ವಜನಿಕ ಶಾಂತಿಯನ್ನು ನಿಯಂತ್ರಿಸುವ ಕಾನೂನುಬದ್ಧ ಅಧಿಕಾರವಿದೆ; ಆದರೆ, ನಿರ್ಬಂಧಗಳು ಕಾರಣಬದ್ಧವಾಗಿರಬೇಕು ಎಂದು ಕರ್ನಾಟಕ ಹೈಕೋರ್ಟ್ ತೀರ್ಪುಗಳಲ್ಲಿ ಹೇಳಲಾಗಿದೆ. ಇದನ್ನೆಲ್ಲಾ ಮಾಜಿ ಸಂಸದ ಪ್ರತಾಪ್ ಸಿಂಹ ಅರಿಯದೆ ವಯಕ್ತಿಕ ರಾಜಕೀಯ ಹಿತಾಸಕ್ತಿಗಾಗಿ, ತನ್ನತ್ತ ಗಮನ ಸೆಳೆಯುವ ನಿಟ್ಟಿನಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುವುದು, ಮಾತಾಡುವುದು, ಒಂದು ನಿಖರ ಸಮುದಾಯವನ್ನು ಪದೇ ಪದೇ ಗುರಿಯಾಗಿಸುವುದು ಸಮಂಜಸವಲ್ಲ. ಇದನ್ನ ನಾಗರಿಕ ಸಮಾಜ ಒಪ್ಪುವುದು ಇಲ್ಲ. ಎಲ್ಲರೂ ಒಟ್ಟುಗೂಡಿ ಸಹಬಾಳ್ವೆ ನಡೆಸುವಾಗ ರಾಜಕೀಯ ಮಧ್ಯಪ್ರವೇಶ ಮಾಡಬಾರದು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಸಂಚಿಕೆ ಮುಂದುವರೆಯುತ್ತದೆ…




