ಕಟ್ಟಡ ಪರವಾನಿಗೆ ನೀಡುವಲ್ಲಿ ವಿಳಂಬ ಹಾಗೂ ಪಂಚಾಯತ್ ಆಡಳಿತಕ್ಕೆ ಸಂಬಂಧಿಸಿದ ವಿವಿಧ ವಿಚಾರಗಳ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯಿತಿ ಕಚೇರಿಗೆ ಗುರುವಾರ ಧಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಡಿವೈಎಸ್‌ಪಿ ಹಾಲಮೂರ್ತಿ ರಾವ್ ಹಾಗೂ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಆಡಳಿತಾತ್ಮಕ ಮಾಹಿತಿಯನ್ನು ಪರಿಶೀಲಿಸಿತು. ಕಟ್ಟಡ ಪರವಾನಿಗೆ ನೀಡುವ ಪ್ರಕ್ರಿಯೆ, ಅರ್ಜಿಗಳ ವಿಲೇವಾರಿ ಹಾಗೂ ಸಾರ್ವಜನಿಕರಿಗೆ ಸೇವೆ ಒದಗಿಸುವಲ್ಲಿ ನಡೆದಿರುವ ಕ್ರಮಗಳ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕಿದರು.

ಚುನಾವಣೆಯ ಸಂದರ್ಭ ಮನೆ ನಿವೇಶನ ನೀಡುವುದಾಗಿ ಭರವಸೆ ನೀಡಿ ಗ್ರಾಮಸ್ಥರಿಂದ ಸುಮಾರು 400 ಅರ್ಜಿಗಳನ್ನು ಪಡೆಯಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅರ್ಜಿಗಳ ಸ್ವರೂಪ, ಅವುಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ ಪಂಚಾಯಿತಿಯಲ್ಲಿ ನಡೆದಿರುವ ಪ್ರಕ್ರಿಯೆಗಳ ಬಗ್ಗೆಯೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಲ್ಲುಕೋರೆಗಳಿಗೂ ಲೋಕಾಯುಕ್ತ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು. ಕಲ್ಲುಕೋರೆಗಳಿಗೆ ಸಂಬಂಧಿಸಿದ ಅನುಮತಿ, ದಾಖಲೆಗಳು ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.
This video cannot be played in your browser. Open the video directly
ಸಾರ್ವಜನಿಕ ದೂರಿನ ಆಧಾರದ ಮೇಲೆ ನಡೆದಿರುವ ಈ ಪರಿಶೀಲನೆಯಲ್ಲಿ ಪಂಚಾಯಿತಿ ಕಚೇರಿಯ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕುತ್ತಿದ್ದಾರೆ. ಪರಿಶೀಲನೆ ಪೂರ್ಣಗೊಂಡ ಬಳಿಕ ದೂರಿನಲ್ಲಿ ಮಾಡಲಾಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮುಂದಿನ ಕ್ರಮದ ಬಗ್ಗೆ ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.






