ಹಾಸನ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿರುವ (WhatsApp) ಸಂಭಾಷಣೆಗಳು ಸಾರ್ವಜನಿಕವಾಗಿ ಹರಿದಾಡುತ್ತಿದ್ದು, ಕೋಟ್ಯಂತರ ರೂಪಾಯಿಗಳ ಹಣಕಾಸು ವ್ಯವಹಾರ ಹಣದ ಹಂಚಿಕೆ ಹಾಗೂ ಸರ್ಕಾರಿ ಕಡತಗಳ ವಿಲೇವಾರಿಗೆ ಸಂಬಂಧಿಸಿದಂತೆ ಗಂಭೀರ ಅನುಮಾನಗಳು ಕೇಳಿಬರುತ್ತಿವೆ.
ಈ ಕುರಿತು ಜಿಲ್ಲಾಧಿಕಾರಿ (DC), ಉಪವಿಭಾಗಾಧಿಕಾರಿ (AC), ಅಪರ ಜಿಲ್ಲಾಧಿಕಾರಿ (ADC), ತಹಶೀಲ್ದಾರ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳ ಪಾತ್ರದ ಬಗ್ಗೆ ಸ್ವತಂತ್ರ ತನಿಖೆ ನಡೆಸುವಂತೆ ಕರ್ನಾಟಕ ಲೋಕಾಯುಕ್ತಕ್ಕೆ ಸಾರ್ವಜನಿಕ ದೂರು ಸಲ್ಲಿಸಲಾಗಿದೆ. ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕರ್ನಾಟಕ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದು, ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988ರ ಅಡಿಯಲ್ಲಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಸಾರ್ವಜನಿಕವಾಗಿ ಪ್ರಸಾರಗೊಂಡಿರುವ WhatsApp ಸಂಭಾಷಣೆಗಳ ಸ್ಕ್ರೀನ್‌ಶಾಟ್‌ಗಳಲ್ಲಿ ಜಿಲ್ಲಾಧಿಕಾರಿ (DC) ಹೆಸರಿನೊಂದಿಗೆ ₹50 ಲಕ್ಷ, ₹60 ಲಕ್ಷ ಹಾಗೂ ₹75 ಲಕ್ಷದಂತಹ ದೊಡ್ಡ ಮೊತ್ತಗಳ ಉಲ್ಲೇಖಗಳಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಣದ ಹೊಂದಾಣಿಕೆ, ಪಾವತಿ ಮತ್ತು ಹಂಚಿಕೆ ಕುರಿತು ಸಂಭಾಷಣೆಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಈ ಹಣವನ್ನು ಯಾರು ಪಾವತಿಸಿದ್ದಾರೆ? ಯಾರಿಗೆ ತಲುಪಿಸಲಾಗಿದೆ? ಸರ್ಕಾರಿ ಕಡತಗಳ ವಿಲೇವಾರಿ ಅಥವಾ ಅಧಿಕಾರಿಗಳ ಅಧಿಕೃತ ಕರ್ತವ್ಯಗಳೊಂದಿಗೆ ಈ ವ್ಯವಹಾರಗಳಿಗೆ ಸಂಬಂಧವಿದೆಯೇ? ಎಂಬುದನ್ನು ತನಿಖೆಯಿಂದ ಪತ್ತೆಹಚ್ಚಬೇಕಿದೆ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
AC, ADC, ತಹಶೀಲ್ದಾರ್ ಹೆಸರಿನಲ್ಲೂ ಹಣದ ಪ್ರಸ್ತಾಪ ಉಪವಿಭಾಗಾಧಿಕಾರಿ (AC) ಅವರಿಗೆ ಸಂಬಂಧಿಸಿದಂತೆ ಸುಮಾರು ₹3 ಲಕ್ಷ ಹಾಗೂ ₹20 ಲಕ್ಷದ ಮೊತ್ತಗಳ ಉಲ್ಲೇಖಗಳಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ, ಅಪರ ಜಿಲ್ಲಾಧಿಕಾರಿ (ADC), ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳ ಹೆಸರುಗಳಲ್ಲಿಯೂ ಹಣದ ಹಂಚಿಕೆ ಮತ್ತು ಪಾವತಿಗಳ ಕುರಿತು ಚರ್ಚೆ ನಡೆದಿರುವುದಾಗಿ ತಿಳಿಸಲಾಗಿದೆ. ಈ ವ್ಯವಹಾರಗಳು ಖಾಸಗಿ ಹಣಕಾಸಿನ ವ್ಯವಹಾರಗಳೇ ಅಥವಾ ಸರ್ಕಾರಿ ಅಧಿಕಾರಿಗಳ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ನಡೆದಿವೆಯೇ ಎಂಬುದನ್ನು ಪರಿಶೀಲಿಸುವಂತೆ ಮನವಿ ಮಾಡಲಾಗಿದೆ. ಈ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ (DC PA) ಎಂದು ಉಲ್ಲೇಖಿಸಿರುವ ವ್ಯಕ್ತಿ ಸೇರಿದಂತೆ ಕೆಲವು ಮಧ್ಯವರ್ತಿಗಳ ಪಾತ್ರದ ಬಗ್ಗೆಯೂ ದೂರುದಾರರು ತನಿಖೆಗೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ದೇವಿರಮ್ಮ ದರ್ಶನಕ್ಕೆ ಜನ ಸಾಗರ
ಅಧಿಕಾರಿಗಳ ಹೆಸರಿನಲ್ಲಿ ಹಣ ಸಂಗ್ರಹಿಸುವುದು, ಪಾವತಿಸುವುದು, ಹೊಂದಾಣಿಕೆ ಮಾಡುವುದು ಅಥವಾ ಸಂಬಂಧಪಟ್ಟವರಿಗೆ ತಲುಪಿಸುವ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳು ಭಾಗಿಯಾಗಿದ್ದಾರೆಯೇ ಎಂಬುದನ್ನು ಪತ್ತೆಹಚ್ಚಬೇಕು. ಇದಕ್ಕಾಗಿ ಸಂಬಂಧಪಟ್ಟವರ ದೂರವಾಣಿ ಸಂಪರ್ಕಗಳು, ಬ್ಯಾಂಕ್ ವಹಿವಾಟುಗಳು ಹಾಗೂ ಅಧಿಕಾರಿಗಳೊಂದಿಗಿನ ಸಂಪರ್ಕದ ಸ್ವರೂಪವನ್ನು ಪರಿಶೀಲಿಸಬೇಕೆಂದು ಕೋರಲಾಗಿದೆ. ಈ ದೂರಿನಲ್ಲಿ ಪ್ರಮುಖವಾಗಿ ಸಕಲೇಶಪುರ ಪ್ರದೇಶದ ಮೂರು ಕ್ರಷರ್‌ಗಳಿಗೆ ಸಂಬಂಧಿಸಿದ ಕಡತಗಳ ಅನುಮೋದನೆ ಮತ್ತು ವಿಲೇವಾರಿ ವಿಚಾರವನ್ನೂ ಪ್ರಸ್ತಾಪಿಸಲಾಗಿದೆ. ಕ್ರಷರ್‌ಗಳಿಗೆ ಸಂಬಂಧಿಸಿದ ಅನುಮತಿ, ಪರವಾನಗಿ, ಶಿಫಾರಸು ಹಾಗೂ ಆಡಳಿತಾತ್ಮಕ ಅನುಮೋದನೆಗಳ ಪ್ರಕ್ರಿಯೆಯಲ್ಲಿ ಹಣದ ಹೊಂದಾಣಿಕೆ ಅಥವಾ ಮಧ್ಯವರ್ತಿಗಳ ಪ್ರಭಾವ ಬಳಕೆಯಾಗಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿರುವ ದೂರುದಾರರು, ಮೂರು ಕ್ರಷರ್ ಕಡತಗಳ ಸಂಪೂರ್ಣ ಆಡಳಿತಾತ್ಮಕ ಪ್ರಕ್ರಿಯೆಯನ್ನು ತನಿಖೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ. ಸಾರ್ವಜನಿಕವಾಗಿ ಹರಿದಾಡುತ್ತಿರುವ WhatsApp ಸಂಭಾಷಣೆಗಳ ಸತ್ಯಾಸತ್ಯತೆ, ಅವುಗಳ ಮೂಲ, ಸಂಬಂಧಪಟ್ಟ ವ್ಯಕ್ತಿಗಳ ಗುರುತು ಹಾಗೂ ಹಣಕಾಸಿನ ವಹಿವಾಟುಗಳ ನೈಜ ಸ್ವರೂಪವನ್ನು ತಾಂತ್ರಿಕ ಮತ್ತು ದಾಖಲೆ ಆಧಾರಿತವಾಗಿ ಪರಿಶೀಲಿಸಬೇಕು. ಆರೋಪಗಳಲ್ಲಿ ಸತ್ಯಾಂಶ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಅಗ್ರಹಿಸಿದ್ದಾರೆ.




