ಹಾಸನ ತಾಲೂಕಿನ ವಿದ್ಯಾನಗರದಲ್ಲಿರುವ ನಟ ಯಶ್ ತಾಯಿ ಪುಷ್ಪಾ ಮಾಲೀಕತ್ವದ ಶೆಡ್ ಕಾಂಪೌಂಡ್ ಧ್ವಂಸ ಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಪುಷ್ಪಾ ಅವರು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರನ್ನು ಭೇಟಿ ಮಾಡಿದರು.
ಈ ಪ್ರಕರಣ ಸಂಬಂಧ ಮೂರು ದಿನಗಳ ಹಿಂದೆ ಅವರು ಪೊಲೀಸ್ ಮಹಾನಿರ್ದೇಶಕರನ್ನು ಸಹ ಭೇಟಿ ಮಾಡಿದ್ದರು. ಘಟನೆಯಿಂದ ಸುಮಾರು 24 ಲಕ್ಷ ಮೌಲ್ಯದ ಹಾನಿಯಾಗಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ದೇವರಾಜ್, ಧರ್ಮ ಸೇರಿದಂತೆ ಹಲವರ ವಿರುದ್ಧ ದೂರು ನೀಡಲಾಗಿದ್ದರೂ, ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವ ಬದಲು ಕೇವಲ ಎನ್ಸಿಆರ್ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿದ್ದೀರಾ?ಹಾಸನ | ಜೂಜಾಟ:12 ಜನರನ್ನು ಬಂಧಿಸಿದ ಪೊಲೀಸರು
ಈ ಹಿನ್ನೆಲೆಯಲ್ಲಿ ಪುಷ್ಪಾ ಅವರ ಸಂಬಂಧಿ ದುರ್ಗಾ ಪ್ರಸಾದ್ ಅವರು -ಡಿಜಿಟಲ್ ಸಾಕ್ಷ್ಯಗಳೊಂದಿಗೆ ಹಾಸನ ಜೆಎಂಎಫ್ಸಿ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ಪ್ರಕರಣದ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿ ಎಸ್ಪಿಯನ್ನು ಭೇಟಿ ಮಾಡುವಂತೆ ನಿರ್ದೇಶನ ನೀಡಿತ್ತು. ನ್ಯಾಯಾಲಯದ ಆದೇಶದ ಅನ್ವಯ ಇಂದು ಪುಷ್ಪಾ ಅವರು ಎಸ್ಪಿ ಅವರನ್ನು ಭೇಟಿ ಮಾಡಿ ಪ್ರಕರಣದ ಕುರಿತು ಮನವಿ ಸಲ್ಲಿಸಿದರು.




