ಹಾಸನ ನಗರದ ಖಾಸಗಿ ವಸತಿ ಗೃಹದಲ್ಲಿ ನೇಣು ಬಿಗಿದುಕೊಂಡು ಉಪತಹಶೀಲ್ದಾರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಹಾಸನ ನಗರದ ಮುಖ್ಯ ರಸ್ತೆಯಲ್ಲಿರುವ ವಸತಿ ಗೃಹದಲ್ಲಿ ಮೈಸೂರು ಜಿಲ್ಲೆಯ ಸಾಲಿಗ್ರಾಮದ ಉಪತಹಶೀಲ್ದಾರ್ ತಿಮ್ಮಯ್ಯ (52) 4 ಪುಟಗಳ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೂಲತಃ ಕೊಡಗು ಜಿಲ್ಲೆಯವರಾದ ತಿಮ್ಮಯ್ಯ ಹಾಸನ ನಗರದ ಚನ್ನಪಟ್ಟಣದ ದ್ಯಾವಮ್ಮ ಬಡಾವಣೆಯಲ್ಲಿ ಕುಟುಂಬಸ್ಥರೊಂದಿಗೆ ವಾಸವಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೂರು ವರ್ಷಗಳ ಹಿಂದೆ ಹಾಸನದಲ್ಲಿ ಕರ್ತವ್ಯ ನಿರ್ವಹಿಸಿದ್ದರು ಎಂಬ ಮಾಹಿತಿ ತಿಳಿದು ಬಂದಿದ್ದು, ಸದ್ಯ ಮೈಸೂರಿನ ಸಾಲಿಗ್ರಾಮದಲ್ಲಿ ಹಿರಿಯ ಕಂದಾಯ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಶನಿವಾರ ಕೆಲಸದ ನಿಮಿತ್ತ ಹಾಸನಕ್ಕೆ ಬಂದು ತಂಗಿದ್ದ ತಿಮ್ಮಯ್ಯ ರಾತ್ರಿಯಾದರೂ ಕೊಠಡಿಯ ಹೊರಗೆ ಬರದಿದ್ದಾಗ ಸಂಶಯಗೊಂಡ ವಸತಿ ಗೃಹದ ಸಿಬ್ಬಂದಿ ಹಾಸನ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ಉಪತಹಶೀಲ್ದಾರ್ ಕರಿಯಪ್ಪ ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಹಾಸನ ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, “ಘಟನೆ ನಡೆದ ಸ್ಥಳದಲ್ಲಿ 4 ಪುಟಗಳ ಸುದೀರ್ಘ ಡೆತ್ ನೋಟ್ ದೊರೆತಿದ್ದು , ಡೆತ್ ನೋಟ್ ಪರಿಶೀಲಿಸಿ ಶೀಘ್ರವೇ ಆತ್ಮಹತ್ಯೆಯ ಹಿಂದಿರುವ ನಿಖರ ಕಾರಣ ಪತ್ತೆ ಹಚ್ಚಲಾಗುವುದು” ಎಂದು ತಿಳಿಸಿದ್ದಾರೆ.
ಹಾಸನ | ಡೆತ್ ನೋಟ್ ಬರೆದಿಟ್ಟು ಉಪತಹಶೀಲ್ದಾರ್ ನೇಣಿಗೆ ಶರಣು
ಪೋಸ್ಟ್ ಹಂಚಿಕೊಳ್ಳಿ:




