ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕುರಿ/ಮೇಕೆ ಮಾಂಸದ ಬದಲಾಗಿ ದನದ ಮಾಂಸವನ್ನು ಆಹಾರದಲ್ಲಿ ನೀಡುತ್ತಿದ್ದ ಖಾತ ರೆಸ್ಟೋರೆಂಟ್ವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರೆಸ್ಟೋರೆಂಟ್ಅನ್ನು ಸೀಲ್ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಬ್ಬಂದಿಗಳನ್ನು ಬಂಧಿಸಿದ್ದಾರೆ. ಮತ್ತೋರ್ವ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.
ಬೆಂಗಳೂರು ಹೊರವಲಯದ ಬೊಮ್ಮನಹಳ್ಳಿಯಲ್ಲಿರುವ ‘ಇಸಿರಿ ಹಬ್’ ಸಂಕೀರ್ಣದಲ್ಲಿನ ‘ಕಾಯಲೋರಂ ರೆಸ್ಟೋರೆಂಟ್’ನಲ್ಲಿ ಈ ಘಟನೆ ನಡೆದಿದೆ. ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಈ ಹೋಟೆಲ್, ಕಳೆದ ಸುಮಾರು 18 ತಿಂಗಳುಗಳಿಂದ ಕಾರ್ಯಾಚರಣೆ ನಡೆಸುತ್ತಿತ್ತು.
ಇತ್ತೀಚೆಗೆ, ಹೋಟೆಲ್ಗೆ ಭೇಟಿ ನೀಡಿದ್ದ ಗ್ರಾಹಕರ ಗುಂಪೊಂದು ಮಟನ್ ಊಟವನ್ನು ಆರ್ಡರ್ ಮಾಡಿತ್ತು. ಆದರೆ, ತಮಗೆ ಬಡಿಸಲಾದ ಮಾಂಸದ ರುಚಿ ಮತ್ತು ವಿನ್ಯಾಸವನ್ನು ಗಮನಿಸಿದ ಗ್ರಾಹಕರಿಗೆ ಅದು ಕುರಿ/ಮೇಕೆ ಮಾಂಸ ಅಲ್ಲ ಎಂಬ ಸಂಶಯ ಮೂಡಿದೆ. ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಆದರೆ, ಸಿಬ್ಬಂದಿಯಿಂದ ಸೂಕ್ತ ಉತ್ತರ ಬರದಿದ್ದಾಗ, ಆವಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ತಪಾಸಣೆ ನಡೆಸಿದ್ದಾರೆ.
ಪೊಲೀಸರು ಹೋಟೆಲ್ನ ಅಡುಗೆ ಮನೆ ಹಾಗೂ ದಾಸ್ತಾನು ಮಳಿಗೆಗಳನ್ನು ಪರಿಶೀಲಿಸಿದಾಗ, ಗ್ರಾಹಕರಿಗೆ ಮಟನ್ ಹೆಸರಿನಲ್ಲಿ ದನದ ಮಾಂಸವನ್ನು ಉಣಬಡಿಸುತ್ತಿರುವುದು ಸಾಬೀತಾಗಿದೆ. ರೆಸ್ಟೋರೆಂಟ್ನಲ್ಲಿದ್ದ ಮಾಂಸವನ್ನು ಪೊಲೀಸರು ಜಪ್ತಿ ಮಾಡಿದ್ದು, ಹೋಟೆಲ್ಗೆ ಬೀಗ ಮುದ್ರೆ ಹಾಕಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಜಿಜು ಮತ್ತು ಶಿಂಬು ಎಂಬ ಇಬ್ಬರು ಹೋಟೆಲ್ ಸಿಬ್ಬಂದಿಗಳನ್ನು ಬಂಧಿಸಿದ್ದಾರೆ. ಅಭಿಲಾಷ್ ಎಂಬಾತ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಜಪ್ತಿ ಮಾಡಲಾದ ಮಾಂಸದ ಮಾದರಿಗಳನ್ನು ಅದರ ನಿಖರವಾದ ಮೂಲವನ್ನು ಪತ್ತೆಹಚ್ಚಲು ಮತ್ತು ತಾಂತ್ರಿಕವಾಗಿ ದೃಢೀಕರಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಸಂಬಂಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕೃತ ವರದಿ ಬಂದ ಬಳಿಕ, ಆರೋಪಿಗಳ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ಕಲಬೆರಕೆ ಮತ್ತು ಮಾಂಸದ ಮಾರಾಟದಲ್ಲಿ ಇಂತಹ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ಮತ್ತು ಗ್ರಾಹಕರು ಮಾಂಸಾಹಾರವನ್ನು ಖರೀದಿಸುವಾಗ ಅಥವಾ ಸೇವಿಸುವಾಗ ಹೆಚ್ಚಿನ ಜಾಗರೂಕತೆ ವಹಿಸಬೇಕು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.



