“ಸಾವಿರಾರು ಸಂಖ್ಯೆಯಲ್ಲಿ ಮೆಕ್ಕೆಜೋಳ, ಶೇಂಗಾ, ಸೋಯಾಬೀನ್ ಇತರೆ ಕಾಳು ಮಾಡುವ ಯಂತ್ರಗಳು ಇವೆ. ಈ ಯಂತ್ರದ ಮೂಲಕ ಬದುಕು ಕಟ್ಟಿಕೊಂಡವರು ಸಹಸ್ರ ಸಂಖ್ಯೆಯಲ್ಲಿ ಇದ್ದಾರೆ. ಕಾಳು ಮಾಡುವ ಯಂತ್ರದಲ್ಲಿ ರೈತ ಕಾರ್ಮಿಕರು ಹಲವು ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಟ್ರ್ಯಾಕ್ಟರ್ ಟ್ರ್ಯಾಲಿಗೆ ಚೆಸ್ಸಿ ನಂಬರ್ ಕೊಡುವಂತೆ, ಕಾಳು ಮಾಡುವ ಯಂತ್ರಗಳಿಗೆ ಚೆಸ್ಸಿ ನಂಬರ್ ಕೊಡಬೇಕು. ಮೆಕ್ಕೆಜೋಳದ ಬೆಲೆ ಈಗ ರೂ.1500 ಮಾರಾಟವಾಗುತ್ತಿದ್ದು, ಎಂ.ಎಸ್.ಪಿ. ಬೆಂಬಲ ಬೆಲೆ ರೂ.2450/- ಗಳಿಗೆ ಖರೀದಿಸುವ ಖರೀದಿ ಕೇಂದ್ರಗಳನ್ನು ಹೋಬಳಿ ಮಟ್ಟದಲ್ಲಿ ತೆರೆಯುವಂತೆ” ರೈತ ಸಂಘದ ರಾಜ್ಯಾಧ್ಯಕ್ಷರು ಚಂದ್ರಶೇಖರ ಕೋಡಿಹಳ್ಳಿ ಆಗ್ರಹಿಸಿದರು.
ಹಾವೇರಿ ಪಟ್ಟಣದ ಜಿಲ್ಲಾಡಳಿತ ಭವನದ ಎದುರು ಮೆಕ್ಕೆಜೋಳ ದರ ನಿಗದಿ ಮಾಡುವಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷರು ಕೋಡಿಹಳ್ಳಿ ಚಂದ್ರಶೇಖರ ಅವರ ನೇತೃತ್ವದಲ್ಲಿ ಟ್ರ್ಯಾಕ್ಟರ್ ಹಾಗೂ ಮೆಕ್ಕೆಜೋಳ ಯಂತ್ರ ಸೇರಿದಂತೆ ಕಾಳು ಮಾಡುವ ಎಲ್ಲ ಯಂತ್ರದ ಸಮೇತ ಮುರುಘರಾಜೇಂದ್ರ ಮಠದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಿದರು.
“ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿದ್ದು ಎಲ್ಲ ಬೆಳೆಗಳು ಹಾಳಾಗಿದ್ದು ಅತಿ ಶೀಘ್ರ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ರೈತರ ಖಾತೆಗೆ ಜಮೆಗೊಳಿಸಬೇಕು ಹಾಗೂ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕರ್ನಾಟಕ ಬ್ಯಾಂಕಿನವರು ಕೃಷಿ ಸಾಲ ಕೊಡುವಾಗ ಜಾಮೀನುದಾರರನ್ನು ತೆಗೆದುಕೊಳ್ಳುತ್ತಿದ್ದಾರೆ. ಇತರೆ ಬ್ಯಾಂಕಿನವರಂತೆ ಜಾಮೀನುದಾರರನ್ನು ತೆಗೆದುಕೊಳ್ಳದೆ ರೈತರಿಗೆ ಕೃಷಿ ಸಾಲ ಒದಗಿಸಬೇಕು” ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹಣಮಂತಪ್ಪ ಟಿ ಎಚ್ ಮಾತನಾಡಿ, “ರೈತ ಕೃಷಿಗೆ ಬಳಸುವ ಎಲ್ಲಾ ವಾಹನಗಳಿಗೆ ಆರ್.ಟಿ.ಓ. ಕಛೇರಿಯಲ್ಲಿ ಸರ್ಕಾರದ ನಿಗದಿತ ಫೀ ತೆಗೆದುಕೊಂಡು ಶೀಘ್ರ ಲೈಸೆನ್ಸ್ ಮಾಡಿಕೊಡಬೇಕೆಂದು ಆದೇಶಿಸಬೇಕು. ರೈತನ ಪೂರ್ವಿಕರ ಕಾಲದ ಜಮೀನಿಗೆ ವಕ್ಸ್ ಜಮೀನು ಎಂದು ಆರ್.ಟಿ.ಸಿ. ಯಲ್ಲಿ ಸೇರಿಸಿ ಅನಧಿಕೃತ ಮೊಕಾಶಿ ಟ್ರಸ್ಟ್‌ಗೆ ಆ ಜಮೀನುಗಳನ್ನು ವರ್ಗಾಯಿಸಿರುವ ಕ್ರಮವನ್ನು ರೈತ ಸಂಘ ಗಂಭೀರವಾಗಿ ವಿರೋಧಿಸುತ್ತದೆ. ಅಂತಹ ಜಮೀನನ್ನು ಮೂಲ ರೈತರಿಗೆ ಕಬ್ಬಾ ಮತ್ತು ಮಾಲೀಕತ್ವವನ್ನು ಮರಳಿ ಕೊಡಬೇಕು” ಎಂದು ಆಗ್ರಹಿಸಿದರು.
This video cannot be played in your browser. Open the video directly
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು. ವಿವಿಧ ಗ್ರಾಮದ ರೈತರು ಉಪಸ್ಥಿತರಿದ್ದರು.





