ವ್ಯಾವಹಾರಿಕ ಸತ್ಯ ಹೇಳುವವರ ನಡುವೆ ನೈಜ ಸತ್ಯವನ್ನು ಪ್ರತಿಪಾದಿಸುವ ಪತ್ರಕರ್ತರ ಅಗತ್ಯವಿದೆ. ಪತ್ರಿಕಾ ಧರ್ಮವು ಬಂಡವಾಳದ ದಂಧೆಯಾಗದೆ ಸಮಾಜದ ಒಳಿತಿಗೆ ಕೆಲಸ ಮಾಡುವಂತಾಗಬೇಕು ಎಂದು ಹಿರಿಯ ಪತ್ರಕರ್ತ ಡಾ. ರಾಘವ ನಂಬಿಯಾರ್ ಹೇಳಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದಲ್ಲಿ ಮೈಸೂರಿನ ಗಣೇಶ್ ಅಮೀನಗಡ ರಚಿಸಿರುವ ‘ಪತ್ರಕರ್ತನ ಅನುಭವಗಳು’ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಬರವಣಿಗೆಯಲ್ಲಿ ಭಾಷೆಯ ಬಳಕೆ ಹಾಗೂ ಕೌತುಕದ ನಿರೂಪಣೆ ಓದುಗರನ್ನು ಸೆಳೆಯುವುದರ ಜತೆಗೆ ಅವರ ಮನಮುಟ್ಟಲು ಸಹಕಾರಿಯಾಗುತ್ತದೆ. ಬರಹಗಾರರು ವಿವಿಧ ವಿಷಯಗಳ ಕುರಿತು ವಿಸ್ತೃತವಾಗಿ ಅಧ್ಯಯನ ಮತ್ತು ಅವಲೋಕನ ನಡೆಸಬೇಕು. ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಜವಾಹರಲಾಲ್ ನೆಹರೂ ಅವರ ಕಾಲದಲ್ಲಿ ಕಾಪಾಡಿಕೊಂಡು ಬಂದ ಪತ್ರಿಕಾ ಧರ್ಮ ಇಂದು ಬಂಡವಾಳ ಹೂಡಿ ಲಾಭ ಗಳಿಸುವ ವ್ಯವಹಾರವಾಗಿ ಬದಲಾಗುತ್ತಿರುವುದು ಆತಂಕಕಾರಿ ಎಂದರು.
ನಾವು ಗಳಿಸಿದ ಜ್ಞಾನವನ್ನು ವ್ಯಕ್ತಿ ಮತ್ತು ಸಮಾಜದ ಒಳಿತಿಗಾಗಿ ವಿನಿಯೋಗಿಸಬೇಕು. ನ್ಯಾಯಾಂಗ, ಕಾರ್ಯಾಂಗ ಹಾಗೂ ಶಾಸಕಾಂಗದ ಬಳಿಕ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿರುವ ಪತ್ರಿಕಾ ರಂಗವು ಸಮಾನತೆ ಮತ್ತು ಸಂಸ್ಕೃತಿಯ ಉನ್ನತಿ ಹಾಗೂ ವಿಸ್ತರಣೆಗೆ ಕೊಡುಗೆ ನೀಡಬೇಕು. ಉತ್ಪಾದನೆಯ ಪಾಲು ಮತ್ತು ಲಾಭ ದುಡಿಯುವ ವರ್ಗಕ್ಕೂ ದೊರೆಯುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಕೃತಿಕಾರ ಗಣೇಶ್ ಅಮೀನಗಡ ಅವರು ಕೃತಿಯ ರಚನೆಯ ಹಿನ್ನೆಲೆ ಹಾಗೂ ಅದರ ಆಶಯಗಳ ಕುರಿತು ಮಾತನಾಡಿದರು.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್, ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ಹಾಗೂ ಸಂಘದ ಕೋಶಾಧಿಕಾರಿ ಹರೀಶ್ ಕುಂದರ್ ಉಪಸ್ಥಿತರಿದ್ದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.






