“ಜೀವನದಲ್ಲಿ ಮಾನವೀಯತೆ, ಪರೋಪಕಾರಿ ಗುಣ ಬೆಳಿಸಿಕೊಂಡರೆ ಬದುಕು ಸಾರ್ಥಕವಾಗಲಿದೆ” ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯಾಧ್ಯಕ್ಷರು ಸಂಜೀವಕುಮಾರ ನೀರಲಗಿ ಹೇಳಿದರು.
ಹಾವೇರಿ ಪಟ್ಟಣದ ನೀಲನಗೌಡ್ರ ನಗರದಲ್ಲಿರುವ ಎಸ್‌ಜಿಎಸ್‌ಎಲ್‌ಪಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ, ಎಸ್‌ಜಿಎಸ್‌ಎಲ್‌ಪಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು-ವೈಆರ್‌ಸಿ ಘಟಕ ಇವರ ಸಹಯೋಗದೊಂದಿಗೆ ಆಯೋಜಿಸಿದ ಅಗಸ್ಟ್-12 ಜಿನೀವಾ ಕನ್ವೇಷನ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಸಮಾಜದಲ್ಲಿ ಸಮಾಜಿಕ ಕಳಕಳಿ ಕೆಲಸ ಮಾಡುವ ಹಂಬಲವನ್ನು ವಿದ್ಯಾರ್ಥಿಗಳು,ಯುವ ಜನರು ಹೊಂದಬೇಕು. ರೆಡ್ ಕ್ರಾಸ್ ಸಂಸ್ಥೆ ವಿಶ್ವ ಮಟ್ಟದಲ್ಲಿ ಇದ್ದು, ವಿಶ್ವಶಾಂತಿಗಾಗಿ ಹಾಗೂ ಮಾನವೀಯತೆಗಾಗಿ ಹೆಚ್ಚು ಕೆಲಸ ಮಾಡುತ್ತಿದೆ. ಈ ದಿನದ ಕಾರ್ಯಕ್ರಮವಾದ ಜಿನೀವಾ ಒಪ್ಪಂದ ವಿಶ್ವಶಾಂತಿಗೆ ಹೆಚ್ಚು ಮಹತ್ವ ನೀಡುತ್ತದೆ. ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಕಾಲೇಜುಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚು ಅನುದಾನ ತರುವ ಕೆಲಸ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡಬೇಕು” ಎಂದು ಹೇಳಿದರು.
“ಮುಂದಿನ ದಿನಮಾನದಲ್ಲಿ ಮಹಿಳೆಯರಿಗೆ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಮೀಸಲಾತಿ ಜಾರಿಯಾಗಲಿದೆ. ವಿದ್ಯಾರ್ಥಿಗಳು ನಾಯಕತ್ವ ಹಾಗೂ ಮಾನವೀಯ ಗುಣ ಬೆಳೆಸಿಕೊಂಡು ರೆಡ್ ಕ್ರಾಸ್ ಸಂಸ್ಥೆಯೊಂದಿಗೆ ಎಲ್ಲರೂ ಸೇರಿರಿ” ಕರೆ ನೀಡಿದರು.
“ಸಾಹಿತಿಗಳು ಹಾಗೂ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಪದಾಧಿಕಾರಿ ಹನುಮಂತಗೌಡ ಗೊಲ್ಲರ, ಜಿನೇವಾ ಕನ್ವೇಷನ್ ಬಗ್ಗೆ ಮಾತನಾಡಿ, “ರೆಡ್ ಕ್ರಾಸ್ ಮಾನವೀಯತೆಯಿಂದ ಸೇವೆ ಹಾಗೂ ಕೆಲಸ ಮಾಡುವ ಉದ್ದೇಶ ಹೊಂದಿದೆ. ಜಿನೇವಾ ಒಪ್ಪಂದ ದಿನಾಚಾರಣೆ ಮಾನವೀಯ ಮೌಲ್ಯಗಳ ಮೂಲಕ ವಿಶ್ವಶಾಂತಿ ಬಗ್ಗೆ ಜನತೆಗೆ ಜಾಗೃತಿ ಮೂಡಿಸುವುದಾಗಿರುತ್ತದೆ. ವಿದ್ಯಾರ್ಥಿಗಳು ಯುವಕರು ವಿದ್ಯೆಯ ಜೊತೆಗೆ ವಿನಯ,ಸಹಾಯ, ಸಹಕಾರ ಗುಣಗಳನ್ನು ಬೆಳಿಸಿಕೊಳ್ಳಬೇಕಾಗಿದೆ” ಎಂದು ಜಿನೇವಾ ಒಪ್ಪಂದದ ಬಗ್ಗೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಕಾಲೇಜಿನ ಪ್ರಾಚಾರ್ಯರು ಪ್ರೋ.ಇಂದಿರಾ ಬಾಗಲಕೋಟೆ ಮಾತನಾಡಿ, “ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಸಮಾಜ ಸೇವಾ ಮಾನವೀಯ ಕೆಲಸ ಮಾಡಬೇಕು. ಪರೋಪಕಾರಿ ಗುಣ ಬೆಳಿಸಿಕೊಳ್ಳಬೇಕು. ರೆಡ್ ಕ್ರಾಸ್ ಉತ್ತಮ ಮಾನವೀಯತೆಯ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಸೇವಾ ಮಾಡಲು ಮುಂದಾಗಿರಿ” ಎಂದರು.
ವೈಆರ್‌ಸಿ ಕಾರ್ಯಕ್ರಮ ಅಧಿಕಾರಿಗಳಾದ ವೀರೇಶ ಹಿತ್ತಲಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಡಿಆರ್‌ಸಿಯ ಡಾ.ಅಂಕಿತ ಆನಂದ ಅವರು ಯುವ ರೆಡ್ ಕ್ರಾಸ್ ಘಟಕದ ಕ್ರಿಯಾಶೀಲತೆಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ನಿಂಗಪ್ಪ ಆರೇರ, ಜಿಲ್ಲಾ ಖಜಾಂಚಿ ಪ್ರಭು ಹಿಟ್ನಳ್ಳಿ, ಜಿಲ್ಲಾ ಸಮಿತಿ ಸದಸ್ಯು ನಾಗರಾಜ ಇಚ್ಚಂಗಿ, ಉಡಚಪ್ಪ ಮಾಳಗಿ, ವಿಜಯಕುಮಾರ ಚಿನ್ನಿಕಟ್ಟಿ, ಉಜ್ವಲ ಹಿರೇಗೌಡ್ರ, ಅಲೆಮಾರಿ ಸಮಾಜದ ಅಧ್ಯಕ್ಷರು ವಿಬೂತಿ ಶೆಟ್ಟಿ, ಡಿಡಿಆರ್‌ಸಿ ನೋಡಲ್ ಅಧಿಕಾರಿ ಪೂರ್ಣಿಮಾ ಮಠದ, ಉಪನ್ಯಾಸಕರು ಕರಬಸಪ್ಪ ನಂದಿಹಳ್ಳಿ, ಸುಜಾತಾ ಕಡ್ಲಿ, ರಾಮಚಂದ್ರಪ್ಪ ಬಿ.ಎನ್, ಕಾಂತೇಶ ಅಂಬಿಗೇರ, ಮೆಹಬೂಬಸಾಬ ಸುಭಾನಿ, ಇರ್ಶಾದಲಿ ದುಂಡಸಿ, ಜಗದೀಶ ಬೇಟಗೇರಿ, ನವೀನ ಮುಗದೂರ, ಫಕ್ಕೀರೇಶ ಬಾರಕೇರ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.




