“ಹಾವೇರಿ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಬೆದರಿಕೆ ನಿರಂತರವಾಗಿ ಬರುತ್ತಿರುವುದು ಜನತೆಯನ್ನು ಭೀತಿಗೆ ತಳ್ಳುತ್ತಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಬಾಂಬ್ ಬೆದರಿಕೆ ಕರೆ ಹಾಗೂ ಇಮೇಲ್ ಹಿನ್ನಲೆಯನ್ನು ಕೂಡಲೇ ಪತ್ತೆ ಹಚ್ಚಿ, ಸಮಾಜದಲ್ಲಿ ಭಯ ಭೀತಿಯನ್ನು ಹುಟ್ಟು ಹಾಕಿ, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು” ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದ್ದಾರೆ.
ಹಾವೇರಿ ಪಟ್ಟಣದಲ್ಲಿ ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, “ಇವತ್ತಿನದು ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಮೂರನೇ ಬಾಂಬ್ ಬೆದರಿಕೆ ಕರೆ/ಇಮೇಲ್ ಬಂದಿದೆ. ಇದರ ಹಿಂದಿನ ದುಷ್ಠ ಶಕ್ತಿಯನ್ನು ತನಿಖೆಯ ಮೂಲಕ ಬಯಲು ಮಾಡಬೇಕಿದೆ” ಎಂದು ತಿಳಿಸಿದ್ದಾರೆ.
“ನಮ್ಮ ಜಿಲ್ಲೆ ಹಾವೇರಿ, ಧಾರವಾಡ, ಉಡುಪಿ, ಚಿಕ್ಕಮಗಳೂರು ಸೇರಿದಂತೆ ಹಲವು ನ್ಯಾಯಾಲಯಕ್ಕೆ ಇತ್ತೀಚಿನ ದಿನಗಳಲ್ಲಿ ಹಲವಾರು ಬಾರಿ ಬಾಂಬ್ ಬೆದರಿಕೆ ಸಂದೇಶಗಳು ನಿರಂತರವಾಗಿ ಬರುತ್ತಲೆ ಇವೆ. ಇ-ಮೇಲ್ ಹಾಗೂ ಕರೆಗಳ ಸಂದೇಶ ಬಂದಾಗೊಮ್ಮೆ ಪೊಲೀಸರು ತಪಾಸಣೆ ನಡೆಸುತ್ತಿದ್ದು, ಯಾವುದೇ ಬಾಂಬ್ ಪತ್ತೆಯಾಗುತ್ತಿಲ್ಲ. ಆದರೆ ಇದರ ಹಿಂದಿನ ಸಂಚು ರೂಪಿಸುವ ವಿದ್ವಂಸಕ, ವಿಘ್ನ ಸಂತೋಷಿ ಶಕ್ತಿಗಳನ್ನು ಬಯಲಿಗೆಳೆಯದಿರುವುದು ನೋವಿನ ಸಂಗತಿ” ಎಂದು ತಿಳಿಸಿದ್ದಾರೆ.
“ಈ ಬೆದರಿಕೆ ಸಂದೇಶಗಳ ಹಿನ್ನೆಲೆಯನ್ನ ಗಂಭೀರವಾಗಿ ಪರಿಗಣಸಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳ ಗೃಹ ಇಲಾಖೆಗಳು ಕೂಡಲೇ ದುಷ್ಠ ಶಕ್ತಿಗಳನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೊಳಪಡಿಸಬೇಕು. ಹಾಗೂ ಸಮಾಜದಲ್ಲಿ ಸಹಜ ನಿರ್ಭೀತ ಹಾಗೂ ನೆಮ್ಮದಿಯ ವಾತಾವರಣ ನಿರ್ಮಿಸಬೇಕು” ಎಂದು ಒತ್ತಾಯಿಸಿದ್ದಾರೆ.




