“ಮಹಿಳೆಯರ ಮೇಲಿನ ಶೋಷಣೆ, ದೌರ್ಜನ್ಯ, ತಾರತಮ್ಯ ಹಾಗೂ ಲಿಂಗಾಧಾರಿತ ಅಸಮಾನತೆಗಳನ್ನು ಕೊನೆಗೊಳಿಸಿ, ಮಹಿಳೆಯರಿಗೆ ಘನತೆಯ ಬದುಕು, ಸಮಾನ ಅವಕಾಶ ಮತ್ತು ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸುವುದು ಸರಕಾರದ ಹಾಗೂ ಸಮಾಜದ ಪ್ರಮುಖ ಜವಾಬ್ದಾರಿಯಾಗಿದೆ” ಎಂದು ಹಿರಿಯ ಸಾಹಿತಿ ಸಂಕಮ್ಮ ಸಂಕಣ್ಣನವರ ಅಭಿಪ್ರಾಯಪಟ್ಟರು.
ಹಾವೇರಿ ನಗರದ ಮಹಿಳಾ ಸಾಂತ್ವನ ಕೇಂದ್ರದ ಸಭಾಂಗಣದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯು ಇಡಾರಿ ಸಂಸ್ಥೆಯ ಆಶ್ರಯದಲ್ಲಿ ಆಯೋಜಿಸಿದ್ದ ಸೌಜನ್ಯ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪನ್ನು ಹಿರಿಯ ಪತ್ರಕರ್ತರಾದ ನವೀನ ಸೂರಿಂಜೆ ಅವರು ಕನ್ನಡಕ್ಕೆ ಅನುವಾದಿಸಿರುವ “ಸೌಜನ್ಯ ತೀರ್ಪು” Reportable ಪುಸ್ತಕವನ್ನು ಜನಾರ್ಪಣೆಗೊಳಿಸಿ ಮಾತನಾಡಿದರು.
“ಸೌಜನ್ಯ ಎಂಬ ಬೆಳ್ತಂಗಡಿ ತಾಲೂಕಿನ ಪಾಂಗಳ ಗ್ರಾಮದ ವಿದ್ಯಾರ್ಥಿನಿ ಅತ್ಯಚಾರಕ್ಕೊಳಗಾಗಿ ಕೊಲೆಯಾಗಿ ಹದಿನಾಲ್ಕು ವರ್ಷ ಗತಿಸಿದರೂ ಅತ್ಯಾಚಾರಿ ಕೊಲೆಗಾರರನ್ನು ಬಂಧಿಸುವಲ್ಲಿ ಇಡೀ ವ್ಯವಸ್ಥೆಯೇ ವಿಫಲವಾಗಿದೆ. ಇದು ಹೆಣ್ಣು ಮಕ್ಕಳಿಗೆ ತಮ್ಮ ಸುರಕ್ಷತೆ ಕುರಿತು ಯಾವ ಭಾವನೆಯನ್ನು ಮೂಡಿಸಬಹುದು” ಎಂದು ಪ್ರಶ್ನಿಸಿದರು.
“ಮಹಿಳೆಯರು ಸಮಾಜದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿದ್ದರೂ, ಕುಟುಂಬ, ಶಿಕ್ಷಣ, ಉದ್ಯೋಗ, ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಹಲವು ರೀತಿಯ ತಾರತಮ್ಯಗಳನ್ನು ಎದುರಿಸುತ್ತಿದ್ದಾರೆ. ವರದಕ್ಷಿಣೆ ಕಿರುಕುಳ, ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸೆ, ವೇತನ ತಾರತಮ್ಯ ಹಾಗೂ ಮಹಿಳೆಯರ ಸ್ವಾತಂತ್ರ್ಯಕ್ಕೆ ನಿರ್ಬಂಧ ಹೇರುವ ಪಿತೃಪ್ರಧಾನ ಮನೋಭಾವಗಳು ಮಹಿಳೆಯರ ಘನತೆ ಮತ್ತು ಸ್ವಾವಲಂಬನೆಗೆ ಅಡ್ಡಿಯಾಗಿವೆ” ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜೆಎಂಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, “ಸೌಜನ್ಯ ಸೇರಿದಂತೆ ಈ ಮೊದಲು ಆ ಪ್ರದೇಶದಲ್ಲಿ ಅಸಹಜವಾಗಿ ಸಾವಿಗೀಡಾದ ಪದ್ಮಲತಾ, ವೇದವಲ್ಲಿ, ಆನೆ ಮಾವುತ ನಾರಾಯಣ ಒಳಗೊಂಡು ಹಲವು ಕುಟುಂಬಗಳು ನ್ಯಾಯದಿಂದ ವಂಚಿತಗೊಂಡಿವೆ. ಜೆಎಂಎಸ್, ಡಿವೈಎಫ್ಐ, ಎಸ್ಎಫ್ಐ ಸೇರಿದಂತೆ ಜನಪರ ಸಂಘಟನೆಗಳು ಮತ್ತು ವ್ಯಕ್ತಿಗಳು ಈ ಸಾವುಗಳ ನ್ಯಾಯಕ್ಕಾಗಿ ಬಹುದೊಡ್ಡ ಚಳುವಳಿಗಳನ್ನು ನಡೆಸುತ್ತಿದ್ದಾರೆ” ಎಂದರು.
“ಇದೀಗ ಸುಪ್ರೀಂಕೋರ್ಟ್ ಸೌಜನ್ಯ ಪ್ರಕರಣವನ್ನು ಮರು ತನಿಖೆಕೈಗೊಳ್ಳಲು ನಿರ್ದೇಶನ ನೀಡಿರುವುದು ಸೌಜನ್ಯ ಕುಟುಂಬಕ್ಕೆ ನ್ಯಾಯಕ್ಕಾಗಿ ಹೋರಾಡುತ್ತಿರುವವರಿಗೆ ಭರವಸೆ ಮೂಡಿಸಿದೆ. ಸೌಜನ್ಯ ಕುಟುಂಬದ ನ್ಯಾಯಕ್ಕಾಗಿ ಮತ್ತೆ ಐಕ್ಯ ಆಂದೋಲನವನ್ನು ನಡೆಸುವ ಅಗತ್ಯವಿದೆ” ಎಂದರು.
ಡಿವೈಎಫ್ಐ ಕೇಂದ್ರ ಸಮಿತಿ ಸದಸ್ಯರಾದ ಬಸವರಾಜ ಪೂಜಾರ ಮಾತನಾಡಿ, “ಹಲವಾರು ಕಾನೂನಿನ ರಕ್ಷಣೆ ಇದ್ದಾಗಲೂ ವಿದ್ಯಾರ್ಥಿನಿಯರು ಹಾಗೂ ಸ್ತ್ರೀಯರ ಮೇಲಿನ ಶೋಷಣೆ, ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವುದು ಆತಂಕಕಾರಿಯಾದಯದು. ಸಮಾಜದಲ್ಲಿ ಆಳವಾಗಿ ಬೇರೂರಿರುವ ಪುರುಷ ಪ್ರಾಧಾನ್ಯತೆಯನ್ನು ನಾಶಗೊಳಿಸದೇ ಮಹಿಳೆಯರಿಗೆ ಸಮಾನತೆ ಸಿಗಲು ಸಾಧ್ಯವಿಲ್ಲ. ಲಿಂಗ ತಾರತಮ್ಯ ಹಾಗೂ ಶೋಷಣೆ ವಿರುದ್ಧ ಜೆಎಂಎಸ್ ಮಹಿಳಾ ಚಳುವಳಿಯು ಬಲಗೊಳ್ಳುವ ಅಗತ್ಯವಿದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪರಿಮಳ ಜೈನ್ ಮಾತನಾಡಿ, “ಮಹಿಳೆಯರನ್ನು ಕೇವಲ ಗೌರವದ ಹೆಸರಿನಲ್ಲಿ ಸೀಮಿತಗೊಳಿಸುವುದಲ್ಲ; ಅವರ ಸ್ವಾತಂತ್ರ್ಯ, ಸ್ವಾಭಿಮಾನ, ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮತ್ತು ವ್ಯಕ್ತಿತ್ವವನ್ನು ಗೌರವಿಸುವುದು ಅತ್ಯಗತ್ಯ. ಮಹಿಳೆಯರ ಮೇಲಿನ ಶೋಷಣೆಗೆ ಕಾರಣವಾಗಿರುವ ಸಾಮಾಜಿಕ ಮನೋಭಾವಗಳನ್ನು ಬದಲಾಯಿಸುವುದರ ಜೊತೆಗೆ, ಕಾನೂನುಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಸಂತ್ರಸ್ತರಿಗೆ ತ್ವರಿತ ನ್ಯಾಯ ದೊರಕಿಸುವ ವ್ಯವಸ್ಥೆ ಬಲಗೊಳ್ಳಬೇಕು” ಎಂದರು.
ಇದೇ ವೇಳೆಮಹಿಳಾ ಚಳುವಳಿಯಾದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಎಸ್ಎಫ್ಐ-ಡಿವೈಎಫ್ಐ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಎಸ್, ಪ್ರಖ್ಯಾತ ಶಿಲ್ಪ ಕಲಾವಿದರಾದ ಹರೀಶ್ ಮಾಳಪ್ಪನವರ, ವಕೀಲರಾದ ಬೀರಪ್ಪ ಗುಬ್ಬೇರ, ಶಿವನಗೌಡ ಪಾಟೀಲ, ಸಹಮತ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀಮತಿ ಲಕ್ಷ್ಮೀಪ್ರಭ ಹುಲ್ಲೂರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು. ಪ್ರಾಸ್ತಾವಿಕವಾಗಿ ಡಿವೈಎಫ್ಐ ಜಿಲ್ಲಾ ಖಜಾಂಚಿ ರೇಣುಕಾ ಕಹಾರ ಮಾತನಾಡಿದರು. ಕಲಾವಿದರೂ ಹಾಗೂ ಡಿವೈಎಫ್ಐ ಜಿಲ್ಲಾ ಮುಖಂಡರಾದ ತಸ್ಲೀಮ್ ಕೆ.ಸಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಡಿಎಚ್ಎಸ್ ಜಿಲ್ಲಾ ಸಂಚಾಲಕರಾದ ವೀರಣ್ಣ ಗಡ್ಡಿಯವರ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಖಲಂದರ್ ಅಲ್ಲಿಗೌಡ್ರ, ಅಲೆಮಾರಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶೆಟ್ಟಿ ನಾಯಕ ವಿಭೂತಿ, ಬಿಜಿವಿಎಸ್ ರಾಜ್ಯ ಮುಖಂಡರಾದ ಶ್ರೀಮತಿ ರೇಣುಕಾ ಗುಡಿಮನಿ, ಅತಿಥಿ ಉಪನ್ಯಾಸಕರಾದ ಶ್ರೀಮತಿ ನಂದಿನಿ ಮಾಳದಕರ, ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಂಘಟನೆ ಜಿಲ್ಲಾಧ್ಯಕ್ಷರಾದ ಶಾಂತಕ್ಕ ಗಡ್ಡಿಯವರ, ಸಹಮತ ಸಂಸ್ಥೆ ಸದಸ್ಯರಾದ ಶ್ರೀಮತಿ ಸವಿತಾ ಗುಬ್ಬೇರ, ಡಿವೈಎಫ್ಐ ಮುಖಂಡರಾದ ಮಂಜುಳಾ ಹಾನಗಲ್, ಕಸ್ತೂರಿ ವಡ್ಡರ, ಅನಿತಾ ಸೂರಣಗಿ, ನಾಗಮ್ಮ ಮಲ್ಲೂರಮಠ, ದಿವ್ಯ ಪ್ರಶಾಂತ, ನಿಂಗರಾಜ ಪೂಜಾರ ಸೇರಿದಂತೆ ಹಲವಾರು ಮಹಿಳೆಯರು ಉಪಸ್ಥಿತರಿದ್ದರು.




