ಲೋಕಶಾಹಿರ ಡಾ. ಅಣ್ಣಾಭಾವು ಸಾಠೆ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಬೇಕು. ಕರ್ನಾಟಕ ಸರ್ಕಾರದ ವತಿಯಿಂದ ಅಧಿಕೃತವಾಗಿ ಜಯಂತಿ ಆಚರಿಸಬೇಕು ಹಾಗೂ ಅವರ ಸಮಗ್ರ ಮರಾಠಿ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಬೇಕು ಎಂದು ಆಗ್ರಹಿಸಿ ಲೋಕಶಾಹಿರ ಅಣ್ಣಾಭಾವು ಸಾಠೆ ಸಂಘಟನಾ ಸಮಿತಿ ವಿಜಯಪುರ ವತಿಯಿಂದ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.
ವಿಜಯಪುರ ನಗರದ ಡಾ. ಅಣ್ಣಾಭಾವು ಸಾಠೆ ವೃತ್ತದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಬಳಿಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಸಂಘಟನೆ ಜಿಲ್ಲಾ ಅಧ್ಯಕ್ಷ ಸೋಮಲಿಂಗ ರಣದೇವಿ ಮಾತನಾಡಿ,ಸಮಾಜದ ಶೋಷಿತರು, ದಲಿತರು ಹಾಗೂ ದುರ್ಬಲ ವರ್ಗಗಳ ಧ್ವನಿಯಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ನೀಡಿರುವ ಡಾ. ಅಣ್ಣಾಭಾವು ಸಾಠೆ ಅವರ ಸಾಧನೆ ಹಾಗೂ ಸಾಹಿತ್ಯವನ್ನು ದೇಶಾದ್ಯಂತ ಪರಿಚಯಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು. ಕರ್ನಾಟಕ ಸರ್ಕಾರ ಅವರ ಜಯಂತಿಯನ್ನು ಅಧಿಕೃತವಾಗಿ ಆಚರಿಸುವ ಮೂಲಕ ಅವರ ವಿಚಾರಧಾರೆ ಮತ್ತು ಸಾಹಿತ್ಯಿಕ ಕೊಡುಗೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಅಲ್ಲದೆ, ಮರಾಠಿ ಭಾಷೆಯಲ್ಲಿರುವ ಅವರ ಸಮಗ್ರ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡಿಗರಿಗೂ ತಲುಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸೋಮು ರಣದೇವಿ, ಸುರೇಶ ಬಿಜಾಪೂರ, ವಿಠ್ಠಲ ವಡ್ಡರ, ವಾಯ್.ಎಸ್. ಗುಣಕಿ, ಸುಖದೇವ ಚಲವಾದಿ, ರಮೇಶ ಕವಲಗಿ, ಭರತ ದೇವಕುಳೆ, ಶಿವಾ ಮಾಡಿಗ್ಯಾಳಕರ, ಲಖನ ದೇವಕುಳೆ, ಕುಮಾರ ವಾಗ್ಮೋರೆ, ನಾಗೇಂದ್ರ ದೇವಕುಳೆ, ಮಧುಕರ ಕಸಭ ಸೇರಿದಂತೆ ವಿವಿಧ ದಲಿತಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




