ಕಬ್ಬು ಬೆಳೆಗಾರರಿಗೆ ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ₹6,000 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿಪಡಿಸುವುದು ಸೇರಿದಂತೆ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ 12 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಒತ್ತಾಯಿಸಿದ್ದಾರೆ.
ನವದೆಹಲಿಯ ಕಬ್ಬು ಎಂಎಸ್‌ಪಿ ಸಮಿತಿಯ ಅಧ್ಯಕ್ಷ ರಮೇಶ್ ಚಂದ್, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಸಹಕಾರ ಸಚಿವ ಲಕ್ಷ್ಮಣ ಸವದಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ, ಕಬ್ಬು ಬೆಳೆಗಾರರ ಹಕ್ಕು ಮತ್ತು ಬೇಡಿಕೆಗಳ ಕುರಿತು ಮನವಿ ಸಲ್ಲಿಸಿದರು.
ದೇಶದಲ್ಲಿ ಆರು ಕೋಟಿಗೂ ಹೆಚ್ಚು ಕಬ್ಬು ಬೆಳೆಗಾರರು ಕೃಷಿ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಹಲವು ರಾಜ್ಯಗಳ ಆರ್ಥಿಕ ಅಭಿವೃದ್ಧಿಯಲ್ಲಿ ಕಬ್ಬು ಮತ್ತು ಸಕ್ಕರೆ ಉದ್ಯಮ ಪ್ರಮುಖ ಪಾತ್ರ ವಹಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕಬ್ಬು ಬೆಳೆಗಾರರ ಹಿತಾಸಕ್ತಿ ಕಾಪಾಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ರೈತರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟ ನಿವಾರಿಸಲು ನ್ಯಾಯಯುತ ಬೆಲೆ ಹಾಗೂ ಸೂಕ್ತ ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕಬ್ಬು ಬೆಳೆಗಾರರ ಪ್ರಮುಖ 12 ಬೇಡಿಕೆಗಳು:
- ಪ್ರಸಕ್ತ ಸಾಲಿಗೆ ಕಬ್ಬಿನ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಟನ್‌ಗೆ ₹6,000 ನಿಗದಿಪಡಿಸಬೇಕು.
- ಕಬ್ಬಿನ ಬೆಲೆ ನಿಗದಿಗೆ ಪ್ರಸ್ತುತ ಇರುವ ಇಳುವರಿ ಮಾನದಂಡವನ್ನು ಶೇ.9.25ಕ್ಕೆ ನಿಗದಿಪಡಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕು.
- ವಾಣಿಜ್ಯ ಉದ್ದೇಶಗಳಿಗೆ ಬಳಕೆಯಾಗುವ ಸಕ್ಕರೆಯ ಬೆಲೆಯನ್ನು ಹೆಚ್ಚಿಸಿ, ಸಕ್ಕರೆ ಕಾರ್ಖಾನೆಗಳ ಆದಾಯ ಹೆಚ್ಚಳದ ಪ್ರಯೋಜನ ರೈತರಿಗೂ ದೊರೆಯುವಂತೆ ಮಾಡಬೇಕು.
- ಎಥೆನಾಲ್ ಉತ್ಪಾದನೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ರೈತರಿಗೆ ಎಥೆನಾಲ್ ಉತ್ಪಾದನೆಗೆ ಅವಕಾಶ ಕಲ್ಪಿಸುವುದರ ಜೊತೆಗೆ ಉತ್ಪಾದನೆಯಾಗುವ ಎಥೆನಾಲ್ ನ್ನು ಸರ್ಕಾರವೇ ಖರೀದಿಸುವ ವ್ಯವಸ್ಥೆ ಮಾಡಬೇಕು.
- ಕಬ್ಬಿನ ಕಟಾವು ಮತ್ತು ಸಾಗಣೆ ವೆಚ್ಚವನ್ನು ಸಕ್ಕರೆ ಕಾರ್ಖಾನೆಗಳ ಮಾಲೀಕರೇ ಭರಿಸಬೇಕು.
- ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ದ್ವಿಪಕ್ಷೀಯ ಒಪ್ಪಂದ ಪತ್ರವನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು.
- ಕಬ್ಬಿನ ಬಾಕಿ ಹಣ ಹಾಗೂ ಲಾಭಾಂಶ ಹಂಚಿಕೆಯ ಮೊತ್ತವನ್ನು ಪಾವತಿಸದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಕಬ್ಬು ಖರೀದಿಸಿದ 14 ದಿನಗಳೊಳಗೆ ರೈತರಿಗೆ ಹಣ ಪಾವತಿಸುವುದನ್ನು ಕಡ್ಡಾಯಗೊಳಿಸಬೇಕು.
- ಎಲ್ಲಾ ಸಕ್ಕರೆ ಕಾರ್ಖಾನೆಗಳ ಮುಂದೆ ಸರ್ಕಾರದ ವತಿಯಿಂದ ಅಧಿಕೃತ ತೂಕದ ಯಂತ್ರಗಳನ್ನು ಅಳವಡಿಸಿ, ರೈತರಿಗೆ ಆಗುವ ತೂಕದ ವಂಚನೆ ತಡೆಯಬೇಕು.
- ಕಬ್ಬಿನ ಇಳುವರಿ ಲೆಕ್ಕಾಚಾರದಲ್ಲಿ ನಡೆಯುವ ಮೋಸ ತಡೆಯಲು ಸ್ಥಳೀಯ ತಜ್ಞರ ಸಮಿತಿಯನ್ನು ನೇಮಿಸಬೇಕು.
- ಹೊಸ ಸಕ್ಕರೆ ಕಾರ್ಖಾನೆಗಳ ಆರಂಭ ಹಾಗೂ ಕಬ್ಬು ಮೀಸಲು ಪ್ರದೇಶಕ್ಕೆ ಸಂಬಂಧಿಸಿದ ನಿರ್ಬಂಧಾತ್ಮಕ ನಿಯಮಗಳನ್ನು ತೆಗೆದುಹಾಕಬೇಕು.
- ಕಬ್ಬು ಬೆಳೆಯನ್ನು ಬೆಳೆ ವಿಮೆ ಯೋಜನೆಯ ವ್ಯಾಪ್ತಿಗೆ ವಿಸ್ತರಿಸಬೇಕು.
- ಕಬ್ಬು ಬೆಳೆಗಾರರ ಜೀವ ಮತ್ತು ಕುಟುಂಬದ ಭದ್ರತೆಯ ದೃಷ್ಟಿಯಿಂದ ಪ್ರತ್ಯೇಕ ಜೀವ ವಿಮಾ ಯೋಜನೆಯನ್ನು ಜಾರಿಗೊಳಿಸಬೇಕು.
ಈ ವಿಶೇಷ ವರದಿ ಓದಿದ್ದೀರಾ? ಕಳೆಗುಂದಿದ ದರಿಯಾ ದೌಲತ್: ಟಿಪ್ಪು ಅರಮನೆಯ ಮೂಲ ಸೌಂದರ್ಯ ಉಳಿಸುವ ಹೊಣೆ ಯಾರದ್ದು?
ಈ ಎಲ್ಲ ಬೇಡಿಕೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ಪರಿಗಣಿಸಿ, ಕಬ್ಬು ಬೆಳೆಗಾರರ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸಬೇಕು. ರೈತರ ಶ್ರಮಕ್ಕೆ ನ್ಯಾಯಯುತ ಪ್ರತಿಫಲ ದೊರೆಯುವಂತೆ ಸೂಕ್ತ ನೀತಿ ರೂಪಿಸಿ, ಸಕ್ಕರೆ ಉದ್ಯಮದ ಬೆಳವಣಿಗೆಯ ಜೊತೆಗೆ ಕಬ್ಬು ಬೆಳೆಗಾರರ ಹಿತವನ್ನೂ ರಕ್ಷಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.




