ರಾಣಿಬೆನ್ನೂರ ತಾಲೂಕಿನ ಕವಲೆತ್ತು ಗ್ರಾಮದ ರಾಷ್ಟ್ರೀಯ ಹೆದ್ದಾರಿ-48 ಸರ್ವೀಸ್ ರಸ್ತೆಯ ತುಂಗಭದ್ರಾ ನದಿ ಬ್ರಿಡ್ಜ್ ಕೆಳಭಾಗದಲ್ಲಿ ನದಿಯ ಜಾಗದಲ್ಲಿ ಸಾರ್ವಜನಿಕರು ಹಾಗೂ ಜಾನುವಾರುಗಳು ನೀರಿಗಾಗಿ ಸುಗಮವಾಗಿ ಇಳಿದು ಹತ್ತಲು ಮೆಟ್ಟಿಲುಗಳನ್ನು ನಿರ್ಮಿಸಿಕೊಡಬೇಕು” ಎಂದು ಗ್ರಾಮಸ್ಥರು ಬುಧವಾರ ಹಾವೇರಿ ಪಟ್ಟಣದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
“ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬ್ರಿಡ್ಜ್ ಪಕ್ಕದಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿದ ಪರಿಣಾಮ ನದಿಯ ಪಕ್ಕದಲ್ಲಿ ಕಂದಕ ಏರ್ಪಟ್ಟಿದೆ. ಇದರಿಂದಾಗಿ ಜಾನುವಾರುಗಳಿಗೆ ನೀರು ಕುಡಿಸಲು ಹಾಗೂ ಸಾರ್ವಜನಿಕರು ನದಿಗಿಳಿಯಲು ತೀವ್ರ ತೊಂದರೆಯಾಗುತ್ತಿದೆ. ಅಪಾಯಕಾರಿ ಸನ್ನಿವೇಶ ನಿರ್ಮಾಣವಾಗಿದೆ” ಎಂದು ಗ್ರಾಮಸ್ಥರು ಮನವಿ ಮಾಡಿದರು.
“ಚಿತ್ರದುರ್ಗದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಪತ್ರದ ಮೂಲಕ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಕಾಮಗಾರಿ ನಡೆದಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ನದಿ ತಟದಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕೆ ಹಾಗೂ ದನ ಕರುಗಳಿಗೆ ನೀರು ಕುಡಿಸಲು ಮೆಟ್ಟಿಲುಗಳನ್ನು ನಿರ್ಮಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮಸ್ಥರು ಕೋರಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸಿ ಆದಷ್ಟು ಬೇಗ ಶೀಘ್ರದಲ್ಲಿ ಕಾಮಗಾರಿ ಆರಂಭಿಸಲು ರಾಷ್ಟ್ರೀಯ ಹೆದ್ದಾರಿ ಅಧಿಕಾರದ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಹನುಮಂತಪ್ಪ ಸಿ.ಎಸ್.ಕೆ, ಮಂಜುನಾಥ್ ವೈ.ಡಿ.ಹೆಚ್, ಎಲ್ಲಪ್ಪ ವೈ.ಎಸ್.ಬಿ, ಹೊನ್ನಪ್ಪ ಜೆ.ಎಸ್.ಹೆಚ್, ಕುಮಾರ್ ಗೌಡ ಪಾಟೀಲ್, ಪುನೀತ್ ಎಂ.ಬಿ.ಹೆಚ್, ಕುಬೇರಪ್ಪ ಆರ್.ಬಿ.ಎಸ್, ಮಾರುತಿ ಎಂ.ಡಿ.ಕೆ, ಕುಬೇರಪ್ಪ ಬಿ.ಕೆ.ಕೆ, ಹನುಮಂತಪ್ಪ ದೊಣಗರ, ಪ್ರವೀಣ್ ಪಿ.ಎಸ್.ಕೆ, ರಮೇಶ್ ಜೋಕನಾಳ, ಮಂಜುನಾಥ್ ಎಂ.ಹೆಚ್.ಹೆಚ್ ಹಾಗೂ ಹನುಮಂತಪ್ಪ ಕಬ್ಬಾರ ಉಪಸ್ಥಿತರಿದ್ದರು.




