- ಅಣ್ಣನ ವಿಚಾರ ತಮ್ಮನಿಗೆ ಗೊತ್ತಿರುವುದಿಲ್ಲವೇ?
- ಆರೋಪದ ಬಗ್ಗೆ ದಾಖಲೆ ಇದ್ದರೆ ಬಹಿರಂಗಪಡಿಸಲಿ
ಎಚ್ ಡಿ ಕುಮಾರಸ್ವಾಮಿ ಕೈ ಕೆಳಗೆ ನಾನೂ ಕೆಲಸ ಮಾಡಿದ್ದೇನೆ. ಅಣ್ಣನ ವಿಚಾರ ತಮ್ಮನಿಗೆ ಗೊತ್ತಿರುವುದಿಲ್ಲವೇ? ಹೀಗಾಗಿ ಕುಮಾರಣ್ಣನ ಕುರಿತು ನನಗೂ ಒಂದಿಷ್ಟು ಮಾಹಿತಿ ಗೊತ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು.
ಕಲಬುರಗಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ನಾನು ಯಾವ ಕೇಂದ್ರ ಅಧಿಕಾರಿಗೂ, ಸಂಸ್ಥೆಗೂ ಹಣ ಕೊಡಬೇಕಿಲ್ಲ. ಅದಕ್ಕಾಗಿ ಬಿಡಿಎ ಅಧಿಕಾರಿಗಳಿಗೆ ನಾನು ಹಣ ಕೇಳಿಲ್ಲ. ಅಂತಹ ದಾಖಲೆಗಳು ಕುಮಾರಸ್ವಾಮಿ ಅವರ ಬಳಿ ಇದ್ದರೆ ಬಹಿರಂಗಪಡಿಸಲಿ” ಎಂದರು.
“ರಾಜ್ಯದಲ್ಲಿ ಯಾರು ಏನಂದಿದ್ದಾರೆ. ಅವರು ಏನು ಮಾಡಿದ್ದಾರೆ ಎಲ್ಲವೂ ನನಗೆ ಗೊತ್ತಿದೆ. ಆದರೆ, ನಾನು ಬಾಯಿ ಬಿಟ್ಟು ಏನೂ ಹೇಳುವುದಿಲ್ಲ. ಬೇರೆಯವರ ತರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾನು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿಲ್ಲ” ಎಂದು ಪರೋಕ್ಷವಾಗಿ ಕುಮಾರಸ್ವಾಮಿಗೆ ತಿವಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪೋಕ್ಸೊ ಕಾಯ್ದೆ ಬಂದರೂ ತಗ್ಗದ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ
“ಕುಮಾರಣ್ಣ ಏನೇ ದೂರಿದರೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಲ್ಲಿ ದಾಖಲೆಗಳು ಇದ್ದರೆ ಲೋಕಾಯುಕ್ತಕ್ಕೆ ದೂರು ಕೊಡಲಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕೊಟ್ಟಿರುವ ಭರವಸೆ ಈಡೇರಿಸಲು ಎಲ್ಲ ತಯಾರಿ ಸಮೇತ ಸಜ್ಜಾಗಿದ್ದೇವೆ. ಅದು ನಮ್ಮ ವಿರೋಧಿಗಳಿಗೆ ಹಿಡಿಸುತ್ತಿಲ್ಲ. ನಾವೇನು ಮಾಡೋಣ” ಎಂದು ಪ್ರಶ್ನಿಸಿದರು.