ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ವಿರೋಧಿಸಿ, ಸಂವಿಧಾನದ ಆಶಯಗಳ ರಕ್ಷಣೆಗಾಗಿ ಮೈಸೂರಿನ ಮಾನಸಗಂಗೋತ್ರಿಯಲ್ಲಿ ಪ್ರತಿಭಟನಾ ಜಾಥಾ ನಡೆಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯಿಂದ ಕುವೆಂಪು ಅವರ ಪುತ್ಥಳಿವರೆಗೆ ಜಾಥಾ ನಡೆಸಿದ ಪ್ರತಿಭಟನಾಕಾರರು, SIR ಪ್ರಕ್ರಿಯೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ (ರಿ.) ಅಧ್ಯಕ್ಷ ಮಹೇಶ್ ಪಿ. ಮರಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, SIR ಪ್ರಕ್ರಿಯೆಯು ಸಂವಿಧಾನ ವಿರೋಧಿಯಾಗಿದ್ದು, ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ಪ್ರಜೆ ಎಂಬುದನ್ನು ದಾಖಲೆಗಳ ಮೂಲಕ ಸಾಬೀತುಪಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಅಸಂವಿಧಾನಿಕ. ದೇಶದಲ್ಲಿ 18 ವರ್ಷ ವಯಸ್ಸು ಪೂರ್ಣಗೊಂಡ ಪ್ರತಿಯೊಬ್ಬರೂ ಮತದಾನದ ಹಕ್ಕು ಪಡೆಯಲು ಅರ್ಹರಾಗುತ್ತಾರೆ. ಆದರೆ, ಈಗಿನ SIR ಪ್ರಕ್ರಿಯೆಯಲ್ಲಿ ನಾಗರಿಕರು ತಮ್ಮ ಅಸ್ತಿತ್ವವನ್ನು ದಾಖಲೆಗಳನ್ನು ನೀಡಿ ಸಾಬೀತುಪಡಿಸಬೇಕಾದ ಸ್ಥಿತಿ ಎದುರಾಗಿದೆ ಎಂದು ಹೇಳಿದರು.
ಈಗಾಗಲೇ ಕೋಟ್ಯಂತರ ಜನರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಪ್ರಕ್ರಿಯೆ ನಡೆದಿದೆ ಎಂಬ ಆತಂಕವಿದ್ದು, ಇದರಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂದು ಟೀಕಿಸಿದರು. ವಿಶೇಷವಾಗಿ ದಲಿತರು, ಶೋಷಿತರು ಹಾಗೂ ಅಲ್ಪಸಂಖ್ಯಾತರ ಮತಗಳನ್ನು ಗುರಿಯಾಗಿಸಿಕೊಂಡು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ವ್ಯವಸ್ಥೆ ಇದಾಗಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಇಂತಹ ಷಡ್ಯಂತ್ರದ ವಿರುದ್ಧ ವಿದ್ಯಾರ್ಥಿಗಳು ಜಾಥಾ ನಡೆಸುವ ಮೂಲಕ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವದ ಮೂಲ ಆಶಯಗಳನ್ನು ಕಾಪಾಡಲು ಜನರು ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಹೇಳಿದರು.
ಮತದಾನದ ಹಕ್ಕು ಪ್ರತಿಯೊಬ್ಬರ ಅಸ್ತಿತ್ವದ ಪ್ರಶ್ನೆ: ಕೆ. ದೀಪಕ್
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಮಾತನಾಡಿ, ಇಂದಿನ ಹೋರಾಟ ಕೇವಲ ಮತದಾರರ ಪಟ್ಟಿಯ ವಿಚಾರಕ್ಕೆ ಸೀಮಿತವಾಗಿಲ್ಲ; ಇದು ಸಂವಿಧಾನ ಮತ್ತು ದೇಶದ ಉಳಿವಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ ಎಂದು ಹೇಳಿದರು. ತಮ್ಮ ಕುಟುಂಬದ ಸದಸ್ಯರೇ SIR ಪ್ರಕ್ರಿಯೆಯಿಂದ ಎದುರಿಸುತ್ತಿರುವ ಸಮಸ್ಯೆಯನ್ನು ಪ್ರಸ್ತಾಪಿಸಿದ ಅವರು, ತಮ್ಮ ತಂದೆ-ತಾಯಿ ವಯಸ್ಸು ಸರಿ ಸುಮಾರು 70ರಿಂದ 80 ವರ್ಷಗಳಾಗಿದ್ದು, ಕುಟುಂಬದ ಎಲ್ಲರ ಮಾಹಿತಿಯನ್ನು ಎನ್ಯುಮರೇಷನ್ ಫಾರಂನಲ್ಲಿ ಭರ್ತಿ ಮಾಡಿ, ಬೂತ್ ಮಟ್ಟದ ಅಧಿಕಾರಿ (BLO) ಅವರಿಗೆ ಸಲ್ಲಿಸಿ ಸ್ವೀಕೃತಿಯನ್ನೂ ಪಡೆದಿದ್ದೇನೆ. ಆದರೂ ಕುಟುಂಬದ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆರೋಪಿಸಿದರು.

ಈ ಕುರಿತು ನೀಡಲಾದ ನೋಟಿಸ್ನಲ್ಲಿ ‘ಡೋರ್ ಕ್ಲೋಸ್’ ಎಂಬ ಕಾರಣವನ್ನು ಉಲ್ಲೇಖಿಸಲಾಗಿದೆ. ಮನೆಯಲ್ಲಿ ಸದಾ ವಯಸ್ಸಾದ ತಂದೆ-ತಾಯಿ ಇದ್ದರೂ, ತಾವೇ ಅಗತ್ಯ ಮಾಹಿತಿಯನ್ನು ಒದಗಿಸಿದ್ದರೂ ಈ ರೀತಿಯ ಕ್ರಮ ಕೈಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಇದು ಕೇವಲ ಒಬ್ಬ ವ್ಯಕ್ತಿಯ ಮತದಾನದ ಹಕ್ಕಿನ ಪ್ರಶ್ನೆಯಲ್ಲ. ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕು, ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಶ್ನೆಯಾಗಿದೆ. ಮತದಾನದ ಹಕ್ಕನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಮತದಾರರ ಪಟ್ಟಿಯಿಂದ ಜನರ ಹೆಸರುಗಳನ್ನು ಕೈಬಿಡುವುದು ಕೋಟ್ಯಂತರ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಸಿದುಕೊಂಡಂತೆ. ಇದು ಜನರ ರಾಜಕೀಯ ಪ್ರಾತಿನಿಧ್ಯಕ್ಕೆ ಧಕ್ಕೆ ತರುವುದರ ಜೊತೆಗೆ ಸಂವಿಧಾನದ ಆಶಯಗಳಿಗೂ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡನೀಯ
ದೇಶದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದ ಕೆ. ದೀಪಕ್, ಯುವಜನರ ಶಕ್ತಿಯಿಂದ ಅಧಿಕಾರಕ್ಕೆ ಬರುವವರು ಅದೇ ಯುವಜನರ ಮೇಲೆ ಪ್ರಹಾರ ನಡೆಸುತ್ತಿರುವುದು ಶೋಚನೀಯ ಸಂಗತಿ ಎಂದು ಟೀಕಿಸಿ, ದೇಶದ ಆಡಳಿತವನ್ನು ಇಬ್ಬರು ವ್ಯಕ್ತಿಗಳ ಕೈಗೆ ಒಪ್ಪಿಸಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಹೋರಾಟ ನಡೆಸುವ ವಿದ್ಯಾರ್ಥಿಗಳ ಮೇಲೆ ನಕಲಿ ಪೊಲೀಸರ ಮೂಲಕ ಹಲ್ಲೆ ನಡೆಸುವಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದು ಮತ್ತು ಸರ್ಕಾರದ ನೀತಿಗಳನ್ನು ಪ್ರಶ್ನಿಸುವುದು ನಾಗರಿಕರ ಹಕ್ಕಾಗಿದೆ. ವಿದ್ಯಾರ್ಥಿಗಳ ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಬದಲು, ಅವರ ಪ್ರಶ್ನೆಗಳಿಗೆ ಉತ್ತರ ನೀಡುವ ಜವಾಬ್ದಾರಿ ಆಡಳಿತ ವ್ಯವಸ್ಥೆಯ ಮೇಲಿದೆ ಎಂದು ಅಭಿಪ್ರಾಯಪಟ್ಟರು. ಮೈಸೂರಿನಲ್ಲಿ ಇದೀಗ SIR ವಿರುದ್ಧ ಧ್ವನಿ ಎತ್ತುವ ಕೆಲಸ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಈ ಹೋರಾಟ ಮತ್ತಷ್ಟು ಗಟ್ಟಿಗೊಳ್ಳಲಿದ್ದು, ಸಂವಿಧಾನ ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ಜನಾಂದೋಲನ ರೂಪುಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯುವಜನರನ್ನು ರಾಜಕೀಯದಿಂದ ದೂರವಿಡುವ ವ್ಯವಸ್ಥೆ ಬದಲಾಗಬೇಕು: ಅಭಯ ದಿವಾಕರ್
AIDSO ಸಂಘಟನೆಯ ಅಭಯ ದಿವಾಕರ್ ಮಾತನಾಡಿ, ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಿದರೆ, ಅದರಿಂದ ಹೋರಾಟದ ಕಿಚ್ಚು ಆರಿಹೋಗುವುದಿಲ್ಲ. ಬದಲಿಗೆ ಮತ್ತಷ್ಟು ದೊಡ್ಡ ಹೋರಾಟಕ್ಕೆ ಅದು ನಾಂದಿಯಾಗಲಿದೆ ಎಂದು ಎಚ್ಚರಿಸಿದರು. ದೇಶದ ಯುವಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುವ ಅಗತ್ಯವಿದೆ. ಆದರೆ, ಯುವಜನರನ್ನು ಉದ್ದೇಶಪೂರ್ವಕವಾಗಿ ರಾಜಕೀಯದಿಂದ ದೂರವಿಡಲಾಗುತ್ತಿದೆ. ಯುವಜನರು ರಾಜಕೀಯವಾಗಿ ಅಧಿಕಾರ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಮಾಡುವ ವ್ಯವಸ್ಥೆ ಬೆಳೆದುಬಂದಿದೆ ಎಂದು ಟೀಕಿಸಿದರು.
ಭಗತ್ ಸಿಂಗ್ ಅವರ ಕಾಲದಿಂದಲೂ ಯುವಜನರ ರಾಜಕೀಯ ಪಾಲ್ಗೊಳ್ಳುವಿಕೆ ಮತ್ತು ಹೋರಾಟದ ಪರಂಪರೆಯನ್ನು ಮರೆಮಾಚುವ ಪ್ರಯತ್ನಗಳು ನಡೆದಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಯುವಜನರು ದೇಶದ ರಾಜಕೀಯ ವ್ಯವಸ್ಥೆಯನ್ನು ಅರ್ಥಮಾಡಿಕೊಂಡು ಅದರ ಭಾಗವಾಗಬೇಕು ಎಂದು ಹೇಳಿದರು. ಹೋರಾಟಗಾರರ ಮೇಲೆ ಲಾಠಿ ಪ್ರಹಾರ ನಡೆಸಿದರೂ ವಿದ್ಯಾರ್ಥಿಗಳ ಹೋರಾಟದ ಮನೋಭಾವವನ್ನು ಕುಗ್ಗಿಸಲು ಸಾಧ್ಯವಾಗಿಲ್ಲ. ಕಳೆದ ಐದು ತಿಂಗಳಿಂದ ನಡೆಯುತ್ತಿರುವ ಹೋರಾಟದ ಮೂಲಕ ಕೇಂದ್ರ ಸರ್ಕಾರಕ್ಕೆ ಸವಾಲು ಎದುರಾಗಿದೆ ಎಂದು ಹೇಳಿದರು.

ಇಂದಿನ ವ್ಯವಸ್ಥೆ ಬಂಡವಾಳಶಾಹಿಗಳ ಹಿಡಿತದಲ್ಲಿದೆ. ರಾಜಕೀಯ, ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಳ್ಳವರ ಪ್ರಭಾವ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯನ್ನು ಬದಲಾಯಿಸಲು ಸ್ಪಷ್ಟವಾದ ವೈಚಾರಿಕತೆ ಮತ್ತು ಸಾಮಾಜಿಕ ಬದ್ಧತೆ ಅಗತ್ಯವಿದೆ. ಎಡಪಂಥೀಯ ವಿಚಾರಧಾರೆ ಹಾಗೂ ಶೋಷಿತರ ಪರವಾದ ರಾಜಕೀಯ ನಿಲುವುಗಳು ದೇಶವನ್ನು ಮುನ್ನಡೆಸಲು ಸೂಕ್ತವಾಗಿವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಪ್ರಜಾಪ್ರಭುತ್ವದ ಮೂಲ ಆಶಯದ ಪ್ರಕಾರ ಮತದಾರರು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ಆದರೆ, ಈಗ ಯಾರು ಮತದಾರರ ಪಟ್ಟಿಯಲ್ಲಿ ಇರಬೇಕು, ಯಾರು ಇರಬಾರದು ಎಂಬುದನ್ನು ರಾಜಕೀಯ ವ್ಯವಸ್ಥೆಯೇ ನಿರ್ಧರಿಸುವ ಹಂತಕ್ಕೆ ಪರಿಸ್ಥಿತಿ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವಿಶೇಷ ವರದಿ ಓದಿದ್ದೀರಾ? ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?
ಮತದಾರರೇ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆಯ ಬದಲಿಗೆ, ಮತದಾರರ ಪಟ್ಟಿಯಲ್ಲಿರುವವರನ್ನೇ ಆಯ್ದು ಉಳಿಸುವ ಪ್ರವೃತ್ತಿ ಬೆಳೆದರೆ ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಯುವಜನರು ರಾಜಕೀಯವಾಗಿ ಜಾಗೃತರಾಗಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಹೋರಾಡಬೇಕು ಎಂದು ಕರೆ ನೀಡಿದರು.




