“ಜಿಲ್ಲಾ ಮಟ್ಟದ ಮಾದರಿ ಯುವ ಸಂಸತ್ತು ಪೂರ್ವಭ್ಯಾಸ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ವ್ಯವಸ್ಥಿತವಾಗಿ ಆಯೋಜಿಸಬೇಕು” ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.
ಗದಗ ನಗರದ ಜಿಲ್ಲಾಡಳಿತ ಭವನದ ಕೋರ್ಟ್ ಹಾಲ್ನಲ್ಲಿ ಅಕ್ಟೋಬರ್ 15ರ ಗುರುವಾರ ನಡೆದ ಜಿಲ್ಲಾ ಮಟ್ಟದ ಮಾದರಿ ಯುವ ಸಂಸತ್ತು ಪೂರ್ವಭ್ಯಾಸ ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಜಿಲ್ಲೆಯ ಎಲ್ಲ ತಾಲೂಕುಗಳ ವಿದ್ಯಾರ್ಥಿಗಳಿಗೆ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಪೂರ್ವಸಿದ್ಧತಾ ಸಭೆಗಳನ್ನು ನಡೆಸಬೇಕು. ಪ್ರತಿ ತಾಲೂಕಿನಿಂದ ಸುಮಾರು 35ರಿಂದ 40 ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ, ವಿದ್ಯಾರ್ಥಿಗಳ ಆಯ್ಕೆ ಹಾಗೂ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಬೇಕು” ಎಂದು ಸೂಚಿಸಿದರು.
“ತಾಲೂಕು ಮಟ್ಟದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟದಲ್ಲಿ ಒಗ್ಗೂಡಿಸಿ, ಅಂತಿಮ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ಆಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕಾರ್ಯಕ್ರಮದ ದಿನಾಂಕ ನಿಗದಿಪಡಿಸುವುದು, ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಕಾರ್ಯಕ್ರಮದ ಸುಗಮ ನಿರ್ವಹಣೆಗೆ ಅಗತ್ಯವಿರುವ ಎಲ್ಲ ಪೂರ್ವಸಿದ್ಧತೆಗಳನ್ನು ಪೂರ್ಣಗೊಳಿಸಬೇಕು” ಎಂದು ತಿಳಿಸಿದರು.
“ಯುವ ಸಂಸತ್ತು ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ಸಂಸದೀಯ ವ್ಯವಸ್ಥೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದರ ಜೊತೆಗೆ, ಸಾರ್ವಜನಿಕ ಸಮಸ್ಯೆಗಳ ಕುರಿತು ಚರ್ಚಿಸುವ ಸಾಮರ್ಥ್ಯವನ್ನು ವೃದ್ಧಿಸಲು ಸಹಕಾರಿಯಾಗಲಿದೆ. ಅಲ್ಲದೆ, ಜನಪ್ರತಿನಿಧಿಗಳ ಜವಾಬ್ದಾರಿಗಳು, ಸದನದ ಕಲಾಪಗಳು ಹಾಗೂ ಪ್ರಜಾಪ್ರಭುತ್ವದ ಕಾರ್ಯವೈಖರಿಯನ್ನು ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಅರಿತುಕೊಳ್ಳಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಲಿದೆ” ಎಂದರು.
“ಆದ್ದರಿಂದ, ಸಂಬಂಧಪಟ್ಟ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಜಿಲ್ಲಾ ಮಟ್ಟದ ಮಾದರಿ ಯುವ ಸಂಸತ್ತು ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.




