‘ವಿಶೇಷ ಸಮಗ್ರ ಪರಿಷ್ಕರಣೆ’ (SIR- Special Intensive Revision) ಪ್ರಕ್ರಿಯೆ ಪೂರ್ಣಗೊಂಡಿರುವ 13 ರಾಜ್ಯಗಳು ಹಾಗೂ ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರ್ಷಿಕ ‘ವಿಶೇಷ ಸಂಕ್ಷಿಪ್ತ ಪರಿಷ್ಕರಣೆ’ (SSR – Special Summary Revision) ಪ್ರಕ್ರಿಯೆಯನ್ನು ನಡೆಸುವುದಾಗಿ ಕೇಂದ್ರ ಚುನಾವಣಾ ಆಯೋಗ ಗುರುವಾರ ಪ್ರಕಟಿಸಿದೆ. ಎಸ್ಐಆರ್ ಕೈಗೊಳ್ಳದಿರಲು ನಿರ್ಧರಿಸಲಾಗಿದ್ದ ಅಸ್ಸಾಂನಲ್ಲೂ ಈ ಎಸ್ಎಸ್ಆರ್ ನಡೆಯಲಿದೆ.
ನವೆಂಬರ್ 12ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು. ಆನಂತರ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಡಿಸೆಂಬರ್ 11ರವರೆಗೆ ಕಾಲಾವಕಾಶ ನೀಡಲಾಗುವುದು ಹಾಗೂ 2027ರ ಜನವರಿ 4ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಆಯೋಗ ತನ್ನ ವೇಳಾಪಟ್ಟಿಯಲ್ಲಿ ತಿಳಿಸಿದೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಗೋವಾ, ಗುಜರಾತ್, ಕೇರಳ, ಲಕ್ಷದ್ವೀಪ, ಮಧ್ಯಪ್ರದೇಶ, ಮಣಿಪುರ, ಪುದುಚೇರಿ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿಗಳಿಗೆ (CEO) ಆಯೋಗವು ಈ ಕುರಿತು ಪತ್ರ ಬರೆದು ನಿರ್ದೇಶನ ನೀಡಿದೆ. ಜನಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 21ರ ಅಡಿಯಲ್ಲಿ ಹಾಲಿ ಮತದಾರರ ಪಟ್ಟಿಗಳನ್ನು ಪರಿಷ್ಕರಿಸುವಂತೆ ಸೂಚಿಸಲಾಗಿದೆ. 2027ರ ಜನವರಿ 1ರ ಅರ್ಹತಾ ದಿನಾಂಕವನ್ನು ಮುಂದಿಟ್ಟುಕೊಂಡು ಈ ಪ್ರಕ್ರಿಯೆ ನಡೆಯಲಿದ್ದು, 2027ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ರ ಅರ್ಹತಾ ದಿನಾಂಕಗಳಿಗೆ ಸಂಬಂಧಿಸಿದಂತೆಯೂ ಮುಂಗಡ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ಕಳೆದ ಎರಡು ದಶಕಗಳಿಂದ ಅನುಸರಿಸಿಕೊಂಡು ಬರುತ್ತಿದ್ದ ವಾರ್ಷಿಕ ಎಸ್ಎಸ್ಆರ್ ಪದ್ಧತಿಯಿಂದ ಹೊರಬಂದಿದ್ದ ಆಯೋಗ, ಮತದಾರರ ಪಟ್ಟಿಗಳನ್ನು ಕೇವಲ ನವೀಕರಿಸುವ ಬದಲು ಸಂಪೂರ್ಣವಾಗಿ ಹೊಸದಾಗಿ ಸಿದ್ಧಪಡಿಸುವ ‘ಎಸ್ಐಆರ್’ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಇದೀಗ ಆ ಪ್ರಕ್ರಿಯೆ ಮುಗಿದ ಕಡೆ ಮರಳಿ ಎಸ್ಎಸ್ಆರ್ ನಡೆಯುತ್ತಿದೆ.
”ಕರ್ನಾಟಕ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಚಂಡೀಗಢ, ದೆಹಲಿ, ಹರಿಯಾಣ, ಜಾರ್ಖಂಡ್, ಮಹಾರಾಷ್ಟ್ರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತ್ರಿಪುರ ಮತ್ತು ತೆಲಂಗಾಣ ಸೇರಿದಂತೆ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿರುವ ಅಥವಾ ಈಚೆಗಷ್ಟೇ ಪೂರ್ಣಗೊಂಡಿರುವ ರಾಜ್ಯಗಳಲ್ಲಿ ಎಸ್ಎಸ್ಆರ್ ವೇಳಾಪಟ್ಟಿಯನ್ನು ನಂತರ ಪ್ರಕಟಿಸಲಾಗುವುದು. ಇನ್ನುಳಿದಂತೆ ಎಸ್ಐಆರ್ ಆರಂಭವಾಗದ ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಲಡಾಖ್ನಲ್ಲಿ ಅಲ್ಲಿನ ಹವಾಮಾನ ಪರಿಸ್ಥಿತಿಯನ್ನು ನೋಡಿಕೊಂಡು ಪರಿಷ್ಕರಣೆ ದಿನಾಂಕಗಳನ್ನು ಘೋಷಿಸಲಾಗುವುದು,” ಎಂದು ಆಯೋಗ ತಿಳಿಸಿದೆ.
ಹಳೆಯ ಸಾಫ್ಟ್ವೇರ್ ಬಳಕೆ ಸಾಧ್ಯತೆ:
ಎಸ್ಐಆರ್ ಪ್ರಕ್ರಿಯೆಯಲ್ಲಿನ ‘ತಾರ್ಕಿಕ ದೋಷ’ಗಳನ್ನು ಪತ್ತೆಹಚ್ಚುವ ಆಯೋಗದ ಕೇಂದ್ರೀಕೃತ ಸಾಫ್ಟ್ವೇರ್ ಬಗ್ಗೆ ಆಕ್ಷೇಪಣೆಗಳು ಕೇಳಿಬಂದಿದ್ದವು. ಇದೀಗ ಎಸ್ಎಸ್ಆರ್ ಪ್ರಕ್ರಿಯೆಗೆ ಆಯೋಗವು ತನ್ನ ಹಳೆಯ ಸಾಫ್ಟ್ವೇರ್ ಮೊರೆಹೋಗುವ ಸಾಧ್ಯತೆಯಿದೆ. ಇದು ಜನಸಂಖ್ಯಾಶಾಸ್ತ್ರೀಯ ಮತ್ತು ಭಾವಚಿತ್ರಗಳ ಆಧಾರದ ಮೇಲೆ ಒಂದೇ ರೀತಿಯಿರುವ ನಮೂದುಗಳನ್ನು (DSE/PSE) ಪತ್ತೆಹಚ್ಚುತ್ತದೆ. ಎಸ್ಐಆರ್ನಲ್ಲಿ ಇದನ್ನು ಬಳಸಲಾಗಿರಲಿಲ್ಲ. “ಮತದಾರರು ಅಥವಾ ಅವರ ಸಮೀಪದ ಕುಟುಂಬ ಸದಸ್ಯರಿಂದ (ಮರಣ ಹೊಂದಿದವರ ಪ್ರಕರಣದಲ್ಲಿ) ಅಧಿಕೃತವಾಗಿ ‘ನಮೂನೆ 7’ ಸ್ವೀಕರಿಸಿದ ನಂತರವಷ್ಟೇ ಖಚಿತಪಟ್ಟ ನಕಲಿ ನಮೂದುಗಳನ್ನು (DSE/PSE), ಖಾಯಂ ಆಗಿ ಸ್ಥಳಾಂತರಗೊಂಡವರ ಅಥವಾ ಮೃತಪಟ್ಟ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಬೇಕು” ಎಂದು ಚುನಾವಣಾಧಿಕಾರಿಗಳಿಗೆ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.




